ಬೆಂಗಳೂರು: ನ್ಯಾಯಾಲಯದಲ್ಲಿ ಖುಲಾಸೆಗೊಂಡು ಬಹುತೇಕ ಮುಗಿದೇ ಹೋಯಿತು ಎಂದು ಭಾವಿಸಲಾಗಿದ್ದ ಹೋರಾಟಗಾರ ಗಿರೀಶ್ ಮಟ್ಟಣ್ಣವರ್(Mattannavar Bomb Case) ಅವರಿಗೆ ಸಂಬಂಧಿಸಿದ ಹದಿನೇಳು ವರ್ಷಗಳ ಹಿಂದಿನ ಬಾಂಬ್ ಪ್ರಕರಣವು ಇದೀಗ ಭಾರಿ ತಿರುವು ಪಡೆದುಕೊಂಡಿದೆ. ಶಾಸಕರ ಭವನದ ಸಮೀಪ ಬಾಂಬ್ ಇಟ್ಟಿದ್ದ ಆರೋಪದಿಂದ ನ್ಯಾಯಾಲಯದಲ್ಲಿ ಮುಕ್ತರಾಗಿದ್ದ ಮಟ್ಟಣ್ಣವರ್ ವಿರುದ್ಧ ಆ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ದಾಖಲೆಗಳ ಸಮೇತ ದೂರು ದಾಖಲಿಸಿದ್ದಾರೆ.
ಹೊಸ ಸಾಕ್ಷ್ಯವೇ ಮಟ್ಟಣ್ಣವರ್ಗೆ ಕಂಟಕ
2005ರ ಈ ಹಳೇ ಕೇಸನ್ನು (ಕ್ರೈಂ ನಂ 243/2005) ಮರುತನಿಖೆ ಮಾಡಲೇಬೇಕು ಎಂದು ಸಂಬರಗಿ ಅವರು ಗೃಹ ಕಾರ್ಯದರ್ಶಿ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಮೂಲ ಆಧಾರವೇ ಗಿರೀಶ್ ಮಟ್ಟಣ್ಣವರ್(Mattannavar Bomb Case) ಅವರು ನೀಡಿರುವ ಸ್ವತಃ ಹೇಳಿಕೆಗಳಾಗಿವೆ.
“ನಾನೇ ಬಾಂಬ್ ತಯಾರಿಸಿ ಇಟ್ಟಿದ್ದು” ಎಂದು ಸ್ವತಃ ಗಿರೀಶ್ ಮಟ್ಟಣ್ಣವರ್ ಹಲವು ವಿಡಿಯೋಗಳಲ್ಲಿ ಒಪ್ಪಿಕೊಂಡಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಹದಿನೈದು ವಿಡಿಯೋಗಳನ್ನೇ ಸಾಕ್ಷ್ಯಗಳನ್ನಾಗಿ ದೂರಿನ ಜೊತೆ ಲಗತ್ತಿಸಲಾಗಿದೆ. ನ್ಯಾಯಾಲಯದಿಂದ ಪ್ರಕರಣ ಖುಲಾಸೆಯಾಗಿದ್ದರೂ, ಆರೋಪಿಯೇ ಈ ರೀತಿ ಸ್ಪಷ್ಟ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಕೇಸ್ ಅನ್ನು ಪುನಃ ತೆರೆದು ತನಿಖೆ ಮಾಡುವುದು ಅನಿವಾರ್ಯ ಎಂದು ಸಂಬರಗಿ ತಮ್ಮ ದೂರಿನಲ್ಲಿ ಬಲವಾಗಿ ಪ್ರತಿವಾದಿಸಿದ್ದಾರೆ.
ಧರ್ಮಸ್ಥಳ ಮತ್ತು ರಾಷ್ಟ್ರೀಯ ಭದ್ರತೆಯ ಲಿಂಕ್?
ಸದ್ಯ ಈ ಪ್ರಕರಣಕ್ಕೆ ಒಂದು ಗಂಭೀರವಾದ ರಾಷ್ಟ್ರೀಯ ಆಯಾಮವನ್ನೂ ನೀಡಲಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ತನಿಖೆ ವೇಳೆ ದಾಳಿಕೋರರ ಮೂಲ ಗುರಿ ಧರ್ಮಸ್ಥಳ ಆಗಿತ್ತು ಎಂಬ ಮಾಹಿತಿ ಹೊರಬಿದ್ದಿತ್ತು. ಇದೀಗ ಗಿರೀಶ್ ಮಟ್ಟಣ್ಣವರ್(Mattannavar Bomb Case) ಕೂಡ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಹದಿನೇಳು ವರ್ಷಗಳ ಹಿಂದಿನ ಬಾಂಬ್ ಪ್ರಕರಣಕ್ಕೂ ಹಾಗೂ ಇತ್ತೀಚಿನ ಈ ಚಟುವಟಿಕೆಗಳಿಗೂ ಏನಾದರೂ ಲಿಂಕ್ ಇದೆಯೇ ಎಂಬುದರ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕು ಎಂಬುದು ದೂರಿನ ಮುಖ್ಯ ಬೇಡಿಕೆಯಾಗಿದೆ.
ಬಾಂಬ್ ತಯಾರಿಕೆಯ ಕುರಿತು ಮಾತನಾಡಿರುವ ಮಟ್ಟಣ್ಣವರ್ ಜಿಲೆಟಿನ್ ಮತ್ತು ಇತರ ಸ್ಪೋಟಕ ವಸ್ತುಗಳನ್ನು ಬಳಸಿ ಬಾಂಬ್ ಮಾಡುವುದು ಸುಲಭ ಎಂದು ತಾವೇ ಹೇಳಿಕೊಂಡಿದ್ದಾರೆ ಎಂದು ಸಂಬರಗಿ ಉಲ್ಲೇಖಿಸಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಕೂಡಲೇ ಎನ್ಐಎ (NIA) ತನಿಖೆಗೆ ಒಪ್ಪಿಸಬೇಕು ಎಂದು ಪ್ರಶಾಂತ್ ಸಂಬರಗಿ(Prashant Sambargi) ಆಗ್ರಹಿಸಿದ್ದಾರೆ.
ನ್ಯಾಯಾಲಯದಲ್ಲಿ ಮುಕ್ತಾಯವಾಗಿದ್ದ ಪ್ರಕರಣವೊಂದು ಇದೀಗ ಹಳೆಯ ವಿಡಿಯೋ ಸಾಕ್ಷ್ಯಗಳಿಂದಾಗಿ ಮತ್ತೆ ಜೀವ ಪಡೆದುಕೊಂಡಿದ್ದು ಗಿರೀಶ್ ಮಟ್ಟಣ್ಣವರ್(Mattannavar Bomb Case) ಅವರ ಕಾನೂನು ಹೋರಾಟವನ್ನು ಮತ್ತೊಮ್ಮೆ ಕಗ್ಗಂಟಿನತ್ತ ಕೊಂಡೊಯ್ದಿದೆ.
