Heli Hogu Kaarana: ಈ ಪುಸ್ತಕದ ಶೀರ್ಷಿಕೆಯೇ ನನ್ನನ್ನು ಹಲವಾರು ಪ್ರಶ್ನೆಗಳಿಗೆ ಈಡು ಮಾಡಿತು. ನಾವು ಪ್ರೀತಿಸುವುದಕ್ಕೂ ಹಲವಾರು ಕಾರಣಗಳಿರುತ್ತವೆ ಹಾಗೆ ನಿರಾಕರಿಸುವುದಕ್ಕೂ ಕಾರಣಗಳಿರುತ್ತವೆ , ದ್ವೇಷಿಸುವುದಕ್ಕೂ ಕಾರಣಗಳಿರುತ್ತವೆ. ಈ ಪುಸ್ತಕವನ್ನು ಒಂದು ಸಲ ಕೈಲಿ ಹಿಡಿದರೆ ಅದು ಮುಗಿಯುವವರೆಗೂ ನಮ್ಮನ್ನು ಅಲುಗಾಡುವುದಕ್ಕೂ ಬಿಡೋದಿಲ್ಲ. ಅಷ್ಟು ಭಾವನಾತ್ಮಕ ಸಂಬಂಧವನ್ನು ,ಮನುಷ್ಯ ಸಹಜ ಪ್ರೀತಿಯ ಮುಖವಾಡಗಳನ್ನು, ಹೆಣ್ಣಿನ ಮಾನಸಿಕ ತೊಳಲಾಟವನ್ನು ,ವರ್ಣ ವ್ಯವಸ್ಥೆಯನ್ನು,ಗಂಡಿನ ನಿಷ್ಕಲ್ಮಶ ಪ್ರೀತಿಯ ಹಿಂದೆಯೂ ಇರುವ ಪುರುಷಹಂಕಾರದ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ.
ಇಲ್ಲಿ ಕಾಣಸಿಗುವ ಒಂದೊಂದು ಪಾತ್ರಗಳು ಬದುಕಿನ ಒಂದೊಂದು ಆಯಾಮಗಳನ್ನು ಪರಿಚಯಿಸುತ್ತಾ ಹೋಗುತ್ತವೆ. ಮನುಷ್ಯ ಸಹಜವೆನ್ನುವ ಮಾನಸಿಕ ಭಾವನೆಗಳು ಗಂಡು ಮತ್ತು ಹೆಣ್ಣಿನಲ್ಲಿ ಇಷ್ಟೆಲ್ಲಾ ವಿಭಿನ್ನವಾಗಿರುತ್ತವಾ ಎಂದು ನಮಗೆ ಈ ಪಾತ್ರಗಳ ಮುಖೇನ ಅರಿವಾಗುತ್ತದೆ. ಹಿಮವಂತ ಮತ್ತು ಪ್ರಾರ್ಥನಾ ಇವರಿಬ್ಬರ ಚನ್ನರಾಯಪಟ್ಟಣದಿಂದ ಶಿವಮೊಗ್ಗಕ್ಕೆ ಕಾಲ್ನನಡಿಗೆಯಿಂದ ಶುರುವಾಗುವ ಕತೆ ಮುಂದೆ ಯಾರು ಊಹಿಸಲಾರದಂತ ತಿರುವನ್ನು ಪಡೆಯುತ್ತದೆ .
ಇದನ್ನೂ ಓದಿ: Letters to Daughter: ಸ್ಪಷ್ಟ ಕನ್ನಡವನ್ನು ಕಲಿಯುವುದಕ್ಕೆ ತಾಳಮದ್ದಳೆಗಳ ಶ್ರವಣಕ್ಕಿಂತ ದೊಡ್ಡ ಸಂಪನ್ಮೂಲ ಇರಲಾರದು
ಒಂದು ಹೆಣ್ಣಿನ ಮಾನಸಿಕ ತೊಳಲಾಟವನ್ನು ಪ್ರಾರ್ಥನಾಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುವ ರವಿ ಬೆಳಗೆರೆ ರವರು ಊರ್ಮಿಳೆಯ ಆಲೋಚನೆಗಳ ಮೂಲಕ ಸ್ತ್ರೀ ಸ್ವಾತಂತ್ರ್ಯದ ಅರಿವನ್ನೂ ಬಿತ್ತುತ್ತಾರೆ. ಪ್ರಾರ್ಥನಾ ತನ್ನ ಕುಟುಂಬದಿಂದ ಹೊರಬರುವ ಬಿಡುಗಡೆಯನ್ನು ಆಕೆ ಬಯಸುತ್ತಾಳೆ.ಕಾರಣ ತನ್ನ ಕೌಟುಂಬಿಕ ಜೀವನದಲ್ಲಿ ತನ್ನ ತಂದೆ ಮತ್ತು ಅತ್ತಿಗೆಯ ಲೈಂಗಿಕ ಸಂಬಂಧವನ್ನು ಕಣ್ಣಾರೆ ಕಂಡ ಆಕೆಗೆ ತಂದೆಯ ಮೇಲೆ ಅಸಹ್ಯ ಭಾವನೆ ಉಂಟಾಗಿರುತ್ತದೆ ಇದರಿಂದ ಮಾನಸಿಕವಾಗಿ ನೊಂದು ಕುಗ್ಗಿ ಹೋಗಿರುತ್ತಾಳೆ. ಅಲ್ಲಿಂದ ಹೊರ ಬರಬೇಕು ಎಂಬ ಮಾನಸಿಕ ಸ್ಥಿತಿಯಲ್ಲಿ ಆಕೆ ಇರುವಂತಹದ್ದು.
ಅದೇ ಸಮಯಕ್ಕೆ ಹಿಮವಂತ ಪ್ರಾರ್ಥನಾಳ ಸಾತ್ವಿಕ ಚೆಲುವಿಗೆ ಸೋತು ಹೊಸ ಬದುಕು ಕಟ್ಟಿಕೊಳ್ಳೋಕೆ ಆಹ್ವಾನಿಸುತ್ತಾನೆ. ಆಕೆ ತನ್ನ ಕೌಟುಂಬಿಕ ಜೀವನದಿಂದ ಹೊರಬರುತ್ತಾಳೆ. ತನ್ನ ಡಾಕ್ಟರ್ ಆಗುವ ಆಸೆಯನ್ನು ಹಿಮವಂತನಲ್ಲಿ ಹೇಳಿಕೊಳ್ಳುತ್ತಾಳೆ. ಹಿಮವಂತ ಅಂದಿನಿಂದ ಪ್ರಾರ್ಥನಾಳಿಗೋಸ್ಕರ ತನ್ನ ಬದುಕನ್ನು ಸೀಮಿತಗೊಳಿಸಿಕೊಳ್ಳುತ್ತಾನೆ. ಡಾಕ್ಟರ್ ಮಾಡಲು ಇಷ್ಟೆಲ್ಲಾ ಕಷ್ಟಪಡುತ್ತಿರುವ ಹಿಮವಂತ ಪ್ರಾರ್ಥನಾಳಿಗೆ ನಿಜವಾಗ್ಲೂ ದೇವರು ಎಂದು ಅನಿಸಿಬಿಡುತ್ತಾನೆ. ಮನುಷ್ಯ ದೇವರು ಆಗಲಿಕ್ಕೆ ಸಾಧ್ಯವಾ? ಇಲ್ಲಿ ಅಲ್ಲಮಪ್ರಭುಗಳ ಒಂದು ವಚನ ನೆನಪಾಗುತ್ತದೆ.
ನಾ ದೇವನಲ್ಲದೆ ನೀ ದೇವನೇ ?
ನೀ ದೇವನಾದರೆ ಎನ್ನನೇಕೆ ಸಲಹೆ ?
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನ್ನಿಕ್ಕುವೆ
ಈ ಮೇಲಿನ ವಚನದಂತೆ ಅನ್ನ ಕೊಡುವವನೇ ಪ್ರತ್ಯಕ್ಷ ದೈವ ಎಂಬಂತೆ ನಿಸ್ಸಾಹಾಯಕ ಹಾಗೂ ನಿರಾಶ್ರಿತಾಳಾದ ಆಕೆಗೆ ಆ ಕ್ಷಣದಲ್ಲಿ ಹಿಮವಂತ ದೇವರು ಎಂದು ಅನಿಸಿರಬಹುದು. ಇನ್ನು ಹದಿಹರೆಯದ ವಯಸ್ಸು ಒಮ್ಮೊಮ್ಮೆ ಲೈಂಗಿಕ ಆಕರ್ಷಣೆ ಆಗಿ ಆಕೆ ತನ್ನ ಸಂಯಮ ಮೀರಿದ್ದು ಉಂಟು ಮೊದಲ ಭೇಟಿಯ ದಿನಗಳಲ್ಲಿ ಆಕೆ ಅವನಿಗೆ ನನಗೊಂದು ಬದುಕು ಕೊಡ್ತೀಯ ಹಿಮವಂತ ಎಂದು ಪ್ರಶ್ನೆ ಕೇಳಿರುತ್ತಾಳೆ .
ಪ್ರಾರ್ಥನಾ ಸಂಪೂರ್ಣ ಹಿಮವಂತನ ಮೇಲೆ ಅವಲಂಬಿತಳಾಗಿರುತ್ತಾಳೆ.ನಿಸರ್ಗ ಸಹಜವಾದಂತ ಈ ಸೃಷ್ಟಿಯಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರೆ , ಇಬ್ಬರಿಗೂ ಸಮಾನ ಶಕ್ತಿ ಇದೆ. ಹಿಮವಂತ ಅಷ್ಟು ಓದಿದವನಲ್ಲ ಆದರೆ ಪ್ರಾರ್ಥನಾ ಡಾಕ್ಟರ್ ಓದುತ್ತಿದ್ದವಳು. ಸಾಮಾನ್ಯ ಒಂದು ಪುಟ್ಟ ಹಳ್ಳಿಯಲ್ಲಿ ಮಿಠಾಯಿ ಮಾರುತಿದ್ದ ಹಿಮವಂತ ಒಂದು ಕನಸಿನ ಬೆನ್ನಟ್ಟಿ ಹೋಗಿ ಅವನ ಕನಸನ್ನ ಅವನ ಶ್ರೀಮಂತಿಕೆಯನ್ನು ಗಳಿಸಿಕೊಳ್ಳುತ್ತಾನೆ. ಅನ್ನೋದಾದ್ರೆ ಪ್ರಾರ್ಥನಾ ಎಷ್ಟೆಲ್ಲಾ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ಅವಕಾಶಗಳು ಮುಂದೆ ಇದ್ದವು.ಪ್ರಾರ್ಥನಾ ಪುರುಷಅಧೀನ ಮನಸ್ಥಿತಿ.
ಈ ಸಮಕಾಲಿನ ಯುಗದಲ್ಲಿ ಹಲವಾರು ಹೆಣ್ಣು ಮಕ್ಕಳು ತಾವು ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲೇ ಹಲವಾರು ಅವಕಾಶಗಳನ್ನು ಬಳಸಿಕೊಂಡು ತನ್ನ ಕುಟುಂಬವನ್ನ, ತನ್ನ ಶಿಕ್ಷಣವನ್ನ ನಿರ್ವಹಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸುತ್ತಾ ಇದ್ದಾರೆ. ಇಲ್ಲಿ ಪ್ರಾರ್ಥನಾಳ ಮನಸ್ಥಿತಿ ಸ್ತ್ರೀ ಅಸ್ಮಿತೆಯ ಮತ್ತು ಅಸ್ತಿತ್ವದ ಪ್ರಶ್ನೆಯನ್ನ ಹುಟ್ಟು ಹಾಕುತ್ತದೆ. ಸ್ತ್ರೀ ಇಷ್ಟು ದಿವಸಗಳ ಕಾಲ ತನ್ನ ಅಸ್ತಿತ್ವಕ್ಕಾಗಿ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮಾಡುತ್ತಾ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪ್ರವೇಶ ಪಡೆದುಕೊಂಡಿದ್ದಾಳೆ, ಗಂಡಿನ ದಾಸ್ಯದಿಂದ ವಿಮೋಚನೆ ಗೊಳ್ಳುತ್ತಿದ್ದಾಳೆ ಇಲ್ಲಿ ಪ್ರಾರ್ಥನಾ ಇದಕ್ಕೆ ತದ್ವಿರುದ್ಧವಾಗಿ ಕಾಣುತ್ತಾಳೆ.
ಈಕೆ ಇಲ್ಲಿ ಎಷ್ಟು ಅಸಹಾಯಕಳಾಗಿ ಕಾಣುತ್ತಾಳೆ ಎಂದರೆ ದೇಬ್ ಅರ್ಥ ಮಾಡಿಕೊಳ್ಳದ ಸಂದರ್ಭದಲ್ಲಿ ಹಿಮವಂತನ ಬಳಿ ಹೋಗುವ ಆಸೆ ಹಿಮವಂತನ ಸನಿಹದಲ್ಲಿದ್ದಾಗ ದೇಬ್ ಬಳಿ ಹೋಗುವ ಆಸೆ. ದೇಬ್ ನ ನೋಡಿದ ನಂತರ ಹಿಮವಂಥನ ಮೇಲೆ ಪ್ರೀತಿ ಹೋಗಿ ಆರಾಧನೆಯ ಭಾವನೆ ಮೂಡುತ್ತದೆ. ಇಲ್ಲಿ ಹೆಣ್ಣು ಕಂಫರ್ಟ್ ಬಯಸುತ್ತಿದ್ದಾಳ ಅಥವಾ ಸ್ವಾರ್ಥಿಯ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆಕೆಗೆ ಹಿಮವಂಥನ ರೂಪಾ ಲಾವಣ್ಯ ತುಂಬ ಮೋಹಕ ಅಂತಾನೂ ಅನ್ನಿಸುತ್ತದೆ ಅದು ಎಲ್ಲಿಯವರೆಗೆ ಎಂದರೆ ದೇಬ್ ನ ಪ್ರವೇಶ ಆಗುವವರೆಗೆ ದೇಬ್ ನ ಭೇಟಿಯಾದ ಮೇಲೆ ಹಿಮವಂತನ ಮೇಲಿನ ಪ್ರೀತಿ ಆರಾಧನೆಯ ದೇವರ ಭಾವನೆಯಾಗಿ ಬದಲಾಗುತ್ತದೆ. ದೇವರಿಗೆ ಮೋಸ ಮಾಡಲು ಸಾಧ್ಯವಾ ಎಂಬ ಅವಳ ಮಾತಿನಂತೆ ದೇವರ ಮೇಲೆ ಪ್ರೀತಿ ಆಗೋದು ಸಾಧ್ಯ ಅದಕ್ಕೆ ಉತ್ತಮ ಉದಾಹರಣೆ ನಮ್ಮ ವಚನಗಾರ್ತಿ ಅಕ್ಕಮಹಾದೇವಿ
ಸಾವಿಲ್ಲದ ಕೇಡಿಲ್ಲದ ಚೆಲುವಾಂಗನಿಗೆ ಒಲಿದೆನವ್ವ
ಈ ಸಾವಕೆಡುವ ಗಂಡರನೋಯ್ದು ಒಲೆಯೊಳಗಿಕ್ಕು ಎಂಬಂತೆ ಆಕೆ ಪ್ರೀತಿಸಿದ್ದು ದೇವರನ್ನೇ ಮತ್ತು ಕೃಷ್ಣನ ಆರಾಧಕಿ ಮೀರಾಬಾಯಿ ಆಕೆ ಪ್ರೀತಿಸಿದ್ದು ದೇವರನ್ನು ಇವರು ದೇವರನ್ನು ಆಧ್ಯಾತ್ಮಿಕ ನೆಲೆಯಿಂದ ಪ್ರೀತಿಸಿದ್ದರೂ ಸಹ ಅಲ್ಲಿ ಚಿಗುರು ಹೊಡೆದದ್ದು ಪ್ರೇಮವೆ. ಇವರಿಬ್ಬರೂ ತಮ್ಮ ಆತ್ಮವನ್ನು ಪರಮಾತ್ಮನಲ್ಲಿ ಲೀನವಾಗಿಸಿ ಭಕ್ತಿಯ ಜೊತೆಗೆ ಪ್ರೀತಿಯನ್ನು ಉಣಬಡಿಸಿದರು.
ಆದರೆ ಪ್ರಾರ್ಥನಾ ಹಿಮವಂತನಲ್ಲಿ ದೇವರು ಎಂಬ ಭಾವನೆಯ ಮೂಲಕ ವಿಧೇಯತೆಯನ್ನ ವ್ಯಕ್ತಪಡಿಸುತ್ತಾಳೆ ವಿನಃ ಆಕೆ ಸ್ಥಿರ ಚಾಂಚಲ್ಯರಹಿತ ಮನಸ್ಥಿತಿಯನ್ನು ಹೊಂದಿರುವುದಿಲ್ಲ ಹಾಗಾಗಿ ಆಕೆಗೆ ದೇವರ ಭಾವನೆಯು ಪ್ರೀತಿಯ ಭಾವನೆ ಆಗಿ ಪರಿವರ್ತನೆಯಾಗಲು ಸಾಧ್ಯವಾಗಲಿಲ್ಲ ಎಂದು ಅನಿಸುತ್ತದೆ. ಹಿಮವಂಥನ ಬಡತನವನ್ನು ದೇಬ್ ನ ಶ್ರೀಮಂತಿಕೆಯನ್ನೂ ಲೆಕ್ಕ ಹಾಕಿ ಹೋಲಿಕೆ ಮಾಡುತ್ತಾಳೆ .
ಇದು ಆಕೆಯ ಸ್ವಾರ್ಥ ಅಂತ ಅನಿಸಿದರೆ ಒಂದು ಕಡೆ ತನ್ನ ಸುಖಮಯ ಭವಿಷ್ಯಕ್ಕೆ ಗಂಡಿನ ಆಸರೆಯನ್ನ ಬೇಡಿದಂತಿದೆ ಎಂದು ಭಾಸವಾಗುತ್ತದೆ. ಪ್ರಾರ್ಥನಾಳ ಹದಿಹರೆಯದ ವಯಸ್ಸಿನ ಚಂಚಲ ಮನಸ್ಸು ಸರಿಯಾದ ಪ್ರೀತಿಯ ನಿಲುವಿಗೆ ಬಂದಿರುವುದಿಲ್ಲ. ಇದು ಇಂದಿನ ಯುವ ಪೀಳಿಗೆ ಎದುರಿಸುತ್ತಿರುವ ಸಮಸ್ಯೆಯು ಹೌದು. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ಅವಲೋಕನೆ ಮಾಡದೆ ನಿರ್ಧಾರವನ್ನು ತೆಗೆದುಕೊಳ್ಳುವುದು ನಂತರ ವ್ಯಥೆ ಪಡುವಂತಹದ್ದು.
ಪ್ರಾರ್ಥನಾ ನಿರಾಶ್ರಿತ ಹುಡುಗಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳೋಕೆ ಪ್ರೀತಿಯೆಂಬ ಅಸ್ತ್ರದ ಮೇಲೆ ಅವಲಂಬನೆಯ ದಾರಿ ಹಿಡಿದಿದ್ದಾಳ ಪ್ರಾರ್ಥನಾಳಿಗೆ ಸ್ವಂತ ಅಸ್ತಿತ್ವ ಮತ್ತು ಅಸ್ಮಿತೆ ಎಂಬ ಆಲೋಚನೆ ಇರೋದಿಲ್ಲ ಯಾಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.ಆಕೆ ಸ್ವತಂತ್ರ ನಿರಾವಲಂಬನೆಯ ಬದುಕನ್ನ ಬಯಸೋದೆ ಇಲ್ಲ ಪುರುಷನ ಅಧೀನದಲ್ಲಿ ತನ್ನ ಜೀವನ ಸುಖಮಯ ಎಂದು ಭಾವಿಸಿಕೊಂಡಿರುತ್ತಾಳೆ. ಸಮಕಾಲೀನ ಸಮಾಜದಲ್ಲಿ ಹೆಣ್ಣು ಸ್ವತಂತ್ರವಾಗಿ ಬದುಕೋದು ಅನಿವಾರ್ಯವೂ ಹೌದು, ಅಗತ್ಯವೂ ಹೌದು ಆದರೆ ಇಲ್ಲಿ ಪ್ರಾರ್ಥನಾ ಸ್ವತಂತ್ರ ಬದುಕಿನ ಆಲೋಚನೆಗೆ ತದ್ವಿರುದ್ಧವಾಗಿ ಬದುಕ ಕಟ್ಟಿಕೊಳ್ಳೋಕೆ ಮುಂದಾಗುತ್ತಾಳೆ.
ಪ್ರಾರ್ಥನಾಳ ಆಲೋಚನೆಗೆ ತದ್ವಿರುದ್ಧವಾಗಿ ದೃಢ ನಿಲುವಿನ, ಗಾಂಭೀರ್ಯವಂತ ಹಾಗೂ ಪ್ರಬುದ್ಧಮಾನವಾದ ಪ್ರಜ್ಞಾವಂತ ಹೆಣ್ಣು ಮಗಳಾಗಿ ಆಲೋಚನೆ ಮಾಡುವಂತವಳು ಊರ್ಮಿಳಾ. ಬಹುಶಃ ಈಗಿನ ಪ್ರಸ್ತುತ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹೇಗೆ ಸ್ವತಂತ್ರವಾಗಿ ತನ್ನ ಸ್ವಂತ ಬದುಕಿನ ತೀರ್ಮಾನವನ್ನ ತೆಗೆದುಕೊಳ್ಳಬೇಕು ಹಾಗೆ ಪುರುಷ ಪ್ರಧಾನ ವ್ಯವಸ್ಥೆಯ ಅಡಿಯಾಳಾಗಿ ಬದುಕದೆ ತನ್ನದೇ ಆದ ಅಸ್ತಿತ್ವವನ್ನು ಬಯಸಬೇಕು ಎಂಬುದನ್ನು ಉರ್ಮಿಳಾ ತನ್ನ ಆಲೋಚನೆ, ಮಾತುಗಳ ಮೂಲಕವೇ ವ್ಯಕ್ತಪಡಿಸುತ್ತಾಳೆ.
ಪ್ರೀತಿಯಲ್ಲಿ ಮೋಸ ಹೋದವಳು ಊರ್ಮಿಳ ಜೊತೆಗೆ ಪುರುಷರಿಗೆ ಸರಿ ಸಮಾನವಾಗಿ ಬದುಕಬೇಕೆಂಬ ಹಠ ಹೊಂದಿದವಳು. ಕುಡಿಯುವ ,ತಿರುಗಾಡುವ, ಸಿಗರೇಟ್ ಸೇದುವ ಹಾಗೂ ಹೆಣ್ಣಿನ ಚಾರಿತ್ರ್ಯವನ್ನ ಪ್ರಶ್ನೆ ಮಾಡುತ್ತಾ ಹೆಣ್ಣನ್ನು ಬರಿ ಚಾರಿತ್ರ್ಯದ ಮೂಲಕವೇ ನೋಡುವ ಸಮಾಜದಲ್ಲಿ ಧೈರ್ಯವಾಗಿ ಪುರುಷ ಸಮಾನವಾಗಿ ಸೂಳೆ ಮನೆಯಲ್ಲಿ ಇದ್ದು ಹೊರ ಬರುವ ಆಕಾಂಕ್ಷೆಯನ್ನು ಹೊಂದಿದ್ದವಳು. ಕೆಲವು ದಿನಗಳ ಹಿಂದೆ ನಡೆದಂತ ಘಟನೆ ತಾನು ಪ್ರೀತಿಸಿದ ಹುಡುಗ ತನಗೆ ಮೋಸ ಮಾಡಿದ ಎಂಬ ಕಾರಣಕ್ಕೆ ನೇಣಿಗೆ ಶರಣಾದಂತಹ ಹುಡುಗಿ ಇದು ಬರೀ ಕೆಲವೇ ದಿನಗಳ ಹಿಂದೆ ನಡೆದ ಒಂದೇ ಒಂದು ಘಟನೆ ಅಲ್ಲ ಇಂತಹ ಹಲವಾರು ಘಟನೆಗಳು ಪ್ರಸ್ತುತ ಸಂದರ್ಭದಲ್ಲಿ ಸಂಭವಿಸುತ್ತಲೇ ಇವೆ . ಇದಕ್ಕೆ ಕಾರಣ ಮಹಿಳೆಯರಲ್ಲಿ ಸ್ವತಂತ್ರ ಆಲೋಚನೆ, ಮಾನಸಿಕ ಸ್ಥಿಮಿತತೆ, ಆತ್ಮಸ್ಥೈರ್ಯ, ಭವಿಷತ್ವದ ಕನಸುಗಳು ಕುಂದಿರುವಂತದ್ದು. ಆದರೆ ಇಲ್ಲಿ ಊರ್ಮಿಳಾ ತಳೆದ ಈ ನಿಲುವಿನ ದಿಟ್ಟ ಹೆಜ್ಜೆ
ಈಗ ಬಿಂಬವಿಲ್ಲ ಪ್ರತಿಬಿಂಬವಿಲ್ಲ
ಕಳವಳವಿಲ್ಲ ಕನ್ನಡಿಯೂ ಇಲ್ಲ
ಕಳುವಾಗುವ ಭಯವಿಲ್ಲ
ಬೇಲಿ ಇಲ್ಲ ಬಾಗಿಲೂ ಇಲ್ಲ
ಇದ್ದೇನೆ ನಾನು ಅಸೀಮ ಅನಂತ
ನಿನ್ನ ನಿರಾಕರಣೆಯೇ ನನ್ನ ಸಾಕ್ಷಾತ್ಕಾರದ ದಿವ್ಯ ಘಳಿಗೆ (ಪ್ರಾಣಪಕ್ಷಿಯ ರೆಕ್ಕೆ – ಡಾ. ಗೀತಾ ವಸಂತ ) ಎಂದು ಪ್ರಭುದ್ಧಮಾನಳಾಗಿ ಯೋಚಿಸಿದ್ದಾಳೆ.
ಬಹುಶಃ ಊರ್ಮಿಳಾ ಪುರುಷನಲ್ಲಿ ಯಾವ ವ್ಯಕ್ತಿತ್ವವನ್ನು ಬಯಸಿದ್ದಳೋ ಅದನ್ನು ಹಿಮವಂತನ ಮೂಲಕ ಅರಿತುಕೊಳ್ಳುತ್ತಾಳೆ. ಮತ್ತೆ ಆಕೆಯಲ್ಲಿ ಪ್ರೀತಿ ಚಿಗುರು ಹೊಡೆಯುತ್ತದೆ. ಹಿಮವಂತನನ್ನ ಅರಿತುಕೊಳ್ಳುವ ರೀತಿಯಲ್ಲಿ ಆಕೆ ಪ್ರಜ್ಞಾವಂತ ಹೆಣ್ಣು ಮಗಳಾಗಿ ಕಾಣುತ್ತಾಳೆ.ಜೊತೆಗೆ ಹೆಣ್ಣಿಗಿಂತ ಗಂಡು ನೈತಿಕವಾಗಿ ಉನ್ನತವಾಗಬಹುದಾದ ಹಾಗೂ ಅಂತಹ ಗಂಡಿನ ಸಹವಾಸದಿಂದಲೇ ಹೆಣ್ಣೊಬ್ಬಳು ನೈತಿಕವಾಗಿ ಉನ್ನತವಾಗಬಹುದು ಎಂಬ ಧೋರಣೆ ಇಲ್ಲಿದೆ.
ಹಿಮವಂತನ(Himavanta) ಬಗ್ಗೆ ಬಂದಾಗ ಆತ ತನ್ನ ಅಸ್ತಿತ್ವವನ್ನ ಪ್ರಾರ್ಥನಾಳ(Prarthana) ಡಾಕ್ಟರ್ ಕನಸಿನಲ್ಲಿ ಕಾಣಲು ಹೊರಟವನು. ಪ್ರೀತಿ ಕೊಡುವುದು ಅಪೇಕ್ಷಿಸುವುದಲ್ಲ ಎಂಬ ಅವನ ಮಾತಿಗೆ ವಿರುದ್ಧವಾಗಿ ನಡೆದು ಕೊಳ್ಳುತ್ತಾನೆ. ಒಬ್ಬ ಮಿಠಾಯಿ ಮಾರುವ ಹುಡುಗ ಭವಿಷ್ಯದ ಯಾವ ಕನಸನ್ನು ಕಂಡಿರಲಿಲ್ಲ ಪ್ರಾರ್ಥನಾ ಬಂದ ಮೇಲೆ ಶುರುವಾದ ಪ್ರಾರ್ಥನಾ ಹಾಸ್ಪಿಟಲ್ ನ ಕನಸು, ಪ್ರಾರ್ಥನಾ ಲೇ ಔಟ್ ನ ಕನಸು. ಹಾಗಾದರೆ ಆತನಿಗೆ ಪ್ರಾರ್ಥನಾ ಬರದೇ ಇರೋದಕ್ಕೆ ಮುಂಚೆ ಭವಿಷ್ಯದ ಕನಸೇ ಇರ್ಲಿಲ್ವಾ ? ಎಂಬ ಪ್ರಶ್ನೆ ಉದ್ಭವಿಸುತ್ತೆ.
ಅವಳು ಕೇಳಿದಂತಹ ಪ್ರಶ್ನೆಗೆ ಅವಳನ್ನು ಡಾಕ್ಟರ್ ಮಾಡುವಂತಹ ಯೋಜನೆಗೆ ಇಷ್ಟೊಂದು ಶ್ರಮವನ್ನು ಪಡುತ್ತಾನೆ ತನ್ನ ಹಸಿವೆಯನ್ನು ಲೆಕ್ಕ ಹಾಕುವುದಿಲ್ಲ, ಚಿಕ್ಕ ಮಗುವಿನ ರೀತಿಯಲ್ಲಿ ಪ್ರಾರ್ಥನಾಳನ್ನು ನೋಡಿಕೊಳ್ಳುತ್ತಾನೆ.ಅವಳೊಂದಿಗೆ ಬದುಕಿನ ಕೊನೆಯವರೆಗೂ ಯಾವ ಯಾವ ರೀತಿ ಹೇಗೆ ಬದುಕಬೇಕು ಅನ್ನುವುದನ್ನು ಒಂದೊಂದೇ ಕನಸನ್ನ ಕಟ್ಟಿಕೊಳ್ಳುತ್ತಾ ನನಸು ಮಾಡಿಕೊಳ್ಳುತ್ತಾ ಹೋಗುತ್ತಾನೆ. ಇನ್ನು ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಒಬ್ಬ ವಿದ್ಯಾವಂತನಿಂದ ಮಾತ್ರ ಸಾಧ್ಯ ಎಂಬ ಮಾತನ್ನು ಹಿಮವಂತ ಹುಸಿ ಮಾಡುತ್ತಾನೆ. ಮಾನಸಿಕ ಸ್ಥೈರ್ಯ, ದೈಹಿಕ ಧೈರ್ಯ,ಸತತ ಪರಿಶ್ರಮ ಮುಖ್ಯ ಎಂದು ನಿರೂಪಿಸುತ್ತಾನೆ. ಇನ್ನು ಇದು ಇಂದಿನ ಯುವ ಪೀಳಿಗೆಗೆ ಹಾಗೂ ನಿರುದ್ಯೋಗದ ಸಮಸ್ಯೆ ಇನ್ದ ಬಳಲಿರುವ ಮನಸ್ಥಿತಿಗಳಿಗೆ ಮಾದರಿ ಆಗಿದೆ. ಇವನಿಗೆ ಪ್ರಾರ್ಥನ ಬಿಟ್ಟು ಬೇರೆ ಪ್ರಪಂಚವೇ ಇಲ್ಲದಂತೆ ಬದುಕಿರುತ್ತಾನೆ.
ಆಕೆಯ ಕನಸಿನ ಹಿರಿಮೆಯಲ್ಲಿ ತನ್ನ ಗೌರವವನ್ನು ಕಾಣಬಯಸುತ್ತಾನೆ. ತನ್ನ ಸ್ವಂತ ಅಸ್ತಿತ್ವವನ್ನು ಪ್ರಾರ್ಥನಾಳ ಅಸ್ತಿತ್ವದ ಮೇಲೆ ನಿರ್ಧರಿಸಲು ಮುಂದಾಗುತ್ತಾನೆ.ಪ್ರಾರ್ಥನಾ ಗೆಲುವಿನಲ್ಲಿ ತನ್ನ ಹಿರಿಮೆಯನ್ನು ಕಾಣುವುದಕ್ಕೆ ಬಯಸಿದ ,ಜೊತೆಗೆ ಪ್ರಾರ್ಥನಾ ಕೊನೆಯವರೆಗೂ ನನ್ನನ್ನ ನೆನೆಸಿಕೊಳ್ಳುತ್ತಾಳೆ ನನಗೆ ವಿಧೇಯಳಾಗೆ ಇರುತ್ತಾಳೆ, ನನ್ನ ಬಗ್ಗೆ ಹೆಮ್ಮೆ ಪಡುತ್ತಾಳೆ ಎಂಬ ಪುರುಷ ಅಹಂಕಾರವೂ ಸಹ ಆತನಲ್ಲಿ ಮೊಳಕೆ ಹೊಡೆಯಿತು. ಪ್ರಾರ್ಥನಾ ಒಮ್ಮೊಮ್ಮೆ ಲೈಂಗಿಕ ಆಸಕ್ತಿಯನ್ನು ತೋರುವ ಸಂದರ್ಭದಲ್ಲೂ ಹಿಮವಂತ ಅದನ್ನು ನಿರ್ಲಕ್ಷ ಮಾಡಿ ಕೇವಲ ಪ್ರೇಮವನ್ನು ಸದ್ಯಕ್ಕೆ ಮಾನಸಿಕ ವ್ಯವಹಾರ ಎಂಬಂತೆ ಅತೀಂದ್ರಿಯ ನಿಗ್ರಹ ದಂತೆ ದೂರವಿಡುತ್ತಾನೆ. ಇಲ್ಲಿ ಹಿಮವಂತನ ಪ್ರೀತಿ ಪುರುಷಾಧಿಕಾರದ ತಣ್ಣನೆಯ ಕ್ರೌರ್ಯವಾಗಿ ಬಿಡುತ್ತದೆ.
ಇಲ್ಲಿ ದೇಬ್ ನ ಮೂಲಕ ಪುರುಷ ಪ್ರಧಾನತೆಯ ಇನ್ನೊಂದು ಒಸರನ್ನೂ ನೋಡಬಹುದು. ದೇಬ್ ಸ್ವತಃ ಕಾವೇರಮ್ಮನ ವೇಶ್ಯಾಗೃಹದಲ್ಲಿ ರಾಜ ರೋಷವಾಗಿ ಹೋಗಿ ಬರುವವನು, ಲೆಕ್ಕವೇ ಇಲ್ಲದ ಹುಡುಗಿಯರ ಸಹವಾಸ ಇದ್ದವನು ಆದರೆ ಪ್ರಾರ್ಥನಾ ಸುಜಯ್ ನಿಂದ ತಪ್ಪಿಸಿಕೊಂಡು ಬಂದಾಗ ಆಕೆಯ ದೇಹದ ಮೇಲಿನ ಗೆರೆಗಳು ಈತನಲ್ಲಿ ಅನುಮಾನದ ಜೊತೆಗೆ ಅಸಹ್ಯವನ್ನು ಮೂಡಿಸುತ್ತದೆ.
ಇಲ್ಲಿ ಗಂಡು ಮಾತ್ರ ಗಡಿ ದಾಟಬಹುದು ಹೆಣ್ಣು ಮಾತ್ರ ಗಡಿ ದಾಟಬಾರದೇ ?ಇನ್ನೂ ಈ ಸಮಾಜೋ ಚಿಂತನೆಗಳು ಪುರುಷ ಹೇಗಿರಬೇಕು ಅನ್ನೋದನ್ನ ಹೇಳುವುದಿಲ್ಲ ಒಬ್ಬ ಮಹಿಳೆ ಹೇಗಿರಬೇಕು ಅನ್ನೋದನ್ನ ಕಟ್ಟು ನಿಟ್ಟಿನ ನಿರ್ಬಂಧದ ಮೂಲಕ ಹೇಳುತ್ತವೆ. ಹೆಣ್ಣಿನ ಚಾರಿತ್ರ್ಯ ಅನ್ನೋದನ್ನ ಆಕೆಯ ದೇಹದ ಮೇಲೆ ನಿರ್ಧಾರ ಮಾಡುವುದಕ್ಕೆ ಆಗುತ್ತದೆಯಾ? ಹಾಗಾದರೆ ಆಕೆಯ ಮನಸ್ಸಿಗೆ ಸಂಬಂದ ಪಡುವುದು ಯಾವುದು? ಹೆಣ್ಣಿಗೆ ಮಾತ್ರ ಶೀಲಾ ಉಂಟಾ ಗಂಡಿಗೆ ಶೀಲಾ ಇಲ್ವಾ? ಇಲ್ಲಿ ಒಂದು ಮಾತು ನೆನಪಾಗುತ್ತತ್ತದೆ ( ಮಹಿಳೆ ಹೆಣ್ಣಾಗಿರುವುದೇ ಅವಳ ಶೋಷಣೆಯ ಮೂಲ; ಮಹಿಳೆಯರೆಲ್ಲ ಹೀಗೆ ಜೈವಿಕ ವಿಭಿನ್ನತೆಯ ನೆಲೆಯಿಂದ ಶೋಷಿತರಾಗಿರುವ ಒಂದು ಪ್ರತ್ಯೇಕ ಮಾನವ ಸಮುದಾಯವಾಗಿದ್ದಾರೆ.)(ಸ್ತ್ರೀ ವಾದ ಒಂದು ಅವಲೋಕನ – ಬಿ ಎನ್ ಸುಮಿತ್ರಾಬಾಯಿ)*
ಗಂಡು ಹೆಣ್ಣು ಪ್ರಕೃತಿ ಸಹಜ ಸೃಷ್ಟಿ ಇಬ್ಬರಲ್ಲೂ ಅರಿಷಡ್ವರ್ಗಗಳು ಸಮನಾಗಿ ಜನ್ಮ ತಾಳಿರುತ್ತವೆ ಅಂತ ಸಮಾನವಾದ ಅಬಿಲಾಷೆಗಳನ್ನ ಸಮಾಜವು ಸಮಾನವಾಗಿ ಕಾಣಬೇಕು ಆದರೆ ಇಲ್ಲಿ ಪುರುಷ ಯಾಜಮಾನ್ಯ ವ್ಯವಸ್ಥೆ ಅವುಗಳನ್ನ ಗಂಡಿಗಷ್ಟೇ ಪರಿಭಾವಿಸಿಕೊಂಡು ನೋಡುತ್ತಾ ಬಂದಿದೆ. ಅದನ್ನು ಪ್ರತಿಪಾದಿಸುವ ಪಾತ್ರವಾಗಿ ಮತ್ತು ಪ್ರಬುದ್ಧತೆಯ ಹೆಣ್ಣು ಮಗಳಾಗಿ ಊರ್ಮಿಳ ಕಾಣುತ್ತಾಳೆ. ಇಂದಿನ ಪ್ರಸ್ತುತ ಸಮಾಜದಲ್ಲಿ ಸ್ತ್ರೀ ಸ್ವಾತಂತ್ರ್ಯದ ದ್ಯೋತಕವಾಗಿ ಹಾಗೂ ಪುರುಷ ಮತ್ತು ಸ್ತ್ರೀಯ ನಡುವಿನ ಅ ಸಮಾನತೆಯ ಕೊಂಡಿಯನ್ನು ಕಳಚುವ ಪ್ರಗತಿಪರಳಾಗಿ ಊರ್ಮಿಳಾ ಕಾಣುತ್ತಾಳೆ.
ಹಿಮವಂತ(Himavanta) ಪುರುಷಾಧಿಕಾರದಿಂದ ನುಸುಳಿಕೊಂಡು ಪ್ರಾರ್ಥನಾಳಿಗೆ ನಿಷ್ಕಲ್ಮಶ ಪ್ರೀತಿ, ಕಾಳಜಿ, ಕಂಫರ್ಟ್ ನ್ನು ನೀಡುತ್ತಾನೆ. ಇಲ್ಲಿ ನಾವು ಅವನ ಶ್ರಮವನ್ನು ಕಡೆಗಣಿಸುವಂತಿಲ್ಲ .ಇಂತ ನಿಷ್ಕಲ್ಮಶ ಪ್ರೀತಿ ತಿರಸ್ಕಾರಕ್ಕೆ ಒಳಗಾದಾಗ ವ್ಯಕ್ತಿ ಸಾವನ್ನೇ ಕೊನೆಯ ಆಯ್ಕೆ ಮಾಡಿಕೊಳ್ಳುತ್ತಾನೆ ಅಥವಾ ಕ್ರೌರ್ಯ ರೂಪಕ್ಕೆ ಬದಲಾಗುತ್ತಾನೆ. ಇಲ್ಲಿ ಹಿಮವಂತ ಕ್ರೌರ್ಯಕ್ಕೆ ಬದಲಾದರೂ ಸಹಿತ ಪ್ರಾರ್ಥನಾಳ ಒಂದು ಧ್ವನಿಗೆ ಸೋತು ಮತ್ತೆ ಮನುಷ್ಯನಾಗುವಂತದ್ದು. ಕೊನೆಗೆ ಅವಳು ಯಾರನ್ನ ದೇವರು ಎಂದು ಪರಿಭಾವಿಸಿಕೊಂಡಿದ್ದಳೋ ಅವನೇ ಅವಳನ್ನು ಮತ್ತೆ ದೇಬ್ ನ ಒಂದು ಮಾಡಿ ಅವರ ಪಾಲಿಗೆ ದೇವರಾಗೆ ಉಳಿದುಕೊಳ್ಳುವಂತಹದ್ದು.
ಇನ್ನು ಇಲ್ಲಿ ಜಾತಿ ಎಂಬ ಪಿಡುಗು ಸಹ ಸಣ್ಣ ಜ್ವಾಲೆಯಂತೆ ಸುಳಿದು ಹೋಗುತ್ತೆ. ಅದರಲ್ಲಿ ಬೆಂದವರು ನರಸಿಂಹಯ್ಯ ಮಕ್ಕಳಿಗೆ ಜಾತಿಭೇದ ನಿರ್ಮೂಲನೆಯ ಬಗ್ಗೆ ಪಾಠ ಮಾಡುವ ಶಿಕ್ಷಕರು ತಾನೇ ಈ ಜಾತಿಭೇದದ ಸುಳಿಯ ಸಿಕ್ಕಿ ಸಂಕಟದಲ್ಲಿ ತೊಳಲಾಡುವ ಸನ್ನಿವೇಶ ಇಲ್ಲಿ ಮನುಷ್ಯ ಜನಿಸುವಾಗ ಮನುಷ್ಯನಾಗಿ ಇರ್ತಾನೆ ನಂತರ ಈ ಸಮಾಜ ಜಾತಿ,ಧರ್ಮ,ವರ್ಣ, ಮೇಲು-ಕೀಳು, ಬಡವ – ಬಲ್ಲಿದ ,ಆಳು – ಅರಸ ,ಉಚ್ಚ – ನೀಚ ಎಂದು ವಿಭಜಿಸುತ್ತಾ ಹೋಗುತ್ತೆ. ಆದರೆ ಮನುಷ್ಯನಿಗಿರುವುದು ಎರಡೇ ಜಾತಿ ಒಂದು ಗಂಡು ಒಂದು ಹೆಣ್ಣು. ಇದನ್ನು ಅರ್ಥೈಸಿಕೊಳ್ಳದ ಸಮಾಜ ಮನುಷ್ಯನನ್ನು ಇಂತಹ ಬಂಧನಗಳಲ್ಲಿ ಸಿಲುಕಿಸಿದೆ ಇದು ಅರ್ಥವಾಗಬೇಕಾದರೆ ಮನುಷ್ಯ ಮೊದಲು ಮನುಷ್ಯನಾಗಿ ಯೋಚಿಸಬೇಕು ಎಂದೆನಿಸುತ್ತದೆ.
ರವಿ ಬೆಳಗೆರೆ(Ravi Belagere) ರವರು ಚಿತ್ರಿಸುವ ಹೆಣ್ಣಿನ ಪಾತ್ರಗಳು ಪುರುಷಾಧಿಕಾರದ ಅಧೀನವಾಗಿದ್ದರೂ ಸಹ ಅವು ಹೆಣ್ಣು ಮಕ್ಕಳಿಗೆ ತೀರ ಹತ್ತಿರವಾಗುವಷ್ಟು , ಆ ಪಾತ್ರಗಳು ನಾವೇ ಎಂಬ ಭಾವನೆಯನ್ನು ಬೆಳೆಸುತ್ತಾ ಹೋಗುತ್ತವೆ. ಕಾರಣ ಆ ಹೆಣ್ಣು ಮಕ್ಕಳ ತಳಮಳಗಳನ್ನು ಅಷ್ಟು ಮನ ಮುಟ್ಟುವಂತೆ ಚಿತ್ರಿಸುತ್ತಾರೆ. ಒಬ್ಬ ಸ್ತ್ರೀ ಹೆಣ್ಣು ಮಕ್ಕಳ ತಳಮಳಗಳನ್ನು ಬರವಣಿಗೆಯ ರೂಪಕ್ಕೆ ತರಬೇಕಾದರೆ ತನ್ನ ಅನುಭವ ನೆಲೆಗಳಿಂದ ಕಟ್ಟಿಕೊಡುತ್ತಾಳೆ. ಆದರೆ ಹೆಣ್ಣಿನ ತಳಮಳಗಳನ್ನು ತಾ ಕಂಡಂತೆ ಇಷ್ಟು ಸೊಗಸಾಗಿ ಚಿತ್ರಿಸುವುದು ಗಂಡಿನಲ್ಲಿರುವ ತಾಯ್ತನವನ್ನು ಪ್ರತಿಬಿಂಬಿಸುತ್ತದೆ(ಹೇಳಿ ಹೋಗು ಕಾರಣ) Heli Hogu Kaarana.
–ಮಾನಸ ಪ್ರಜ್ವಲ್
ಉಪನ್ಯಾಸಕರು, ತುಮಕೂರು
