ಬೆಂಗಳೂರು: ‘ಉದಯವಾಣಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ರವಿಶಂಕರ್ ಕೆ. ಭಟ್ ಅವರ ತಂದೆ, ಕಾಸರಗೋಡು ಮೂಲದ ಹಿರಿಯ ಉದ್ಯಮಿ ಕೆ. ಸುಬ್ರಹ್ಮಣ್ಯ ಭಟ್ (83)(K. Subrahmanya Bhat) ಅವರು ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು. ಕಾಸರಗೋಡು ಜಿಲ್ಲೆಯ ಕುಂಬ್ಳೆಯವರಾದ ಸುಬ್ರಹ್ಮಣ್ಯ ಭಟ್ ಅವರು ಕೇರಳದ ಕೊಲ್ಲಂನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಮೆಕಾನಿಕಲ್ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮ ಸ್ಥಾಪಿಸುವ ಮೂಲಕ ಅನೇಕರಿಗೆ ಉದ್ಯೋಗ ನೀಡಿ ಆಸರೆಯಾಗಿದ್ದ ಇವರು, ಉದ್ಯಮಕ್ಕೆ ವಿದಾಯ ಹೇಳಿದ ನಂತರ ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಪುತ್ರ ರವಿಶಂಕರ್ ಕೆ. ಭಟ್ ಅವರೊಂದಿಗೆ ವಾಸವಿದ್ದರು. ವಯೋಸಹಜ ಅನಾರೋಗ್ಯದ ಕಾರಣ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಕೆ. ಸುಬ್ರಹ್ಮಣ್ಯ ಭಟ್ (K. Subrahmanya Bhat) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರು ಪತ್ನಿ ಸರಸ್ಕೃತಿ ಕೆ.ಎಸ್., ಸೊಸೆ ನಾಗಚಂದ್ರಿಕಾ ಭಟ್ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.
