Bevara Hanate: ಮಕ್ಕಳಿಂದ ‘ಬೆವರ ಹಣತೆ’ – ತಂದೆ ತಾಯಿಯರ ಬದುಕಿನ ಕಥೆಗಳು ಪುಸ್ತಕವಾಗಿ ಮಾಗಡಿ ತಾಲ್ಲೂಕಿನ ಕುದೂರಿನ ಗುರುಕುಲ ವಿದ್ಯಾ ಮಂದಿರ ಶಾಲೆಯ ಮಕ್ಕಳು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮದೇ ತಂದೆ–ತಾಯಿಯರ ಜೀವನ ಪಯಣವನ್ನು ಕಥೆಯ ರೂಪದಲ್ಲಿ ಬರೆದು, ಅವುಗಳನ್ನು “ಬೆವರ ಹಣತೆ” ಎಂಬ ಕಥಾ ಸಂಕಲನದ ರೂಪದಲ್ಲಿ ಪ್ರಕಟಿಸಲು ಸಜ್ಜಾಗಿದ್ದಾರೆ.
ಈ ವಿಶೇಷ ಪ್ರಯತ್ನದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು ಹಾಗೂ ಕುಟುಂಬದ ಶ್ರಮ ಮತ್ತು ತ್ಯಾಗದ ಮಹತ್ವವನ್ನು ಅರಿಯುವಂತೆ ಮಾಡುವುದು ಎಂಬ ಉದ್ದೇಶವನ್ನು ಶಾಲೆ ಹೊಂದಿದೆ. ಮಕ್ಕಳು ತಮ್ಮ ತಂದೆ–ತಾಯಿಯರ ಜೀವನದ ಅನುಭವಗಳು, ಕಷ್ಟಸಾಧನೆ ಮತ್ತು ಪರಿಶ್ರಮದ ಕಥೆಗಳನ್ನು ಮನದಾಳದಿಂದ ಬರೆಯುವ ಮೂಲಕ ವಿಶಿಷ್ಟವಾದ ಸಾಹಿತ್ಯ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಆರ್. ಕೇಶವಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಮಕ್ಕಳಿಗೆ ಬರವಣಿಗೆಯ ಅಭ್ಯಾಸ ಬೆಳೆಸಿ, ಅವರಲ್ಲಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಅವರೇ ಬರೆದ ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಕ್ಷೇತ್ರದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಶಾಲೆಯ ಗಣಿತ ಹಾಗೂ ವಿಜ್ಞಾನ ಶಿಕ್ಷಕರಾದ ಅರವಿಂದ್ ಅವರು ಮಾತನಾಡಿ, ಈ ಪ್ರಯತ್ನವು ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದ ಹಿನ್ನೆಲೆಯನ್ನು ಅರಿಯುವ ಜೊತೆಗೆ ಸಾಹಿತ್ಯದ ಕಡೆಗೆ ಒಲವು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕನ್ನಡ ಶಿಕ್ಷಕರಾದ ಹನುಮಂತರಾಜು ಅವರು ಮಾತನಾಡಿ, ಮಕ್ಕಳು ತಮ್ಮ ತಂದೆ–ತಾಯಿಯರ ಪರಿಶ್ರಮವನ್ನು ಮನಸಾರೆ ಗ್ರಹಿಸಿ ಅದನ್ನು ಕಥೆಗಳಾಗಿ ಬರೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ. ಈ ಪುಸ್ತಕವು ಮಕ್ಕಳ ಸಾಹಿತ್ಯದಲ್ಲಿ ವಿಶಿಷ್ಟ ಪ್ರಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಕಥಾಸಂಕಲನವನ್ನು ಯುವಕವಿ ಲಿಖಿತ್ ಹೊನ್ನಾಪುರ. ಸಂಪಾದನೆ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಆರಂಭವಾಗುತ್ತಿರುವ “ಕನ್ನಡಮ್ಮ ಪ್ರಕಾಶನ” ಮೂಲಕ ಈ ಪುಸ್ತಕ ಹೊರಬರುತ್ತಿದ್ದು, ಇದೇ ಪ್ರಕಾಶನದ ಮೊದಲ ಕೃತಿ ಆಗಿದೆ.
“ಬೆವರ ಹಣತೆ” ಪುಸ್ತಕಕ್ಕಾಗಿ ಕಥೆಗಳನ್ನು ಬರೆದಿರುವ ವಿದ್ಯಾರ್ಥಿಗಳಲ್ಲಿ ಮೌಲ್ಯ, ವಿಶ್ವಮಿತಾ, ಶಿಲ್ಪಾ, ಅದಿತಿ, ಭಾವನಾ, ಹರಿಪ್ರಿಯಾ, ಹಿಫ್ಜಾ, ದೀಕ್ಷಿತಾ, ಯಶ್ಮಿತಾ, ಸಯ್ಯದಾ ಸಭಾ, ಸುಚಿತ್ರಾ, ಹೇಮಂತ್, ನಯನಾ ಕೆ. ಯಕ್ಷ, ಪ್ರಣಿತಾ, ಉಷಾ, ಅನಿತಾ, ಹರ್ಷಿತಾ, ಯುಕ್ತಾ, ಬೃಂದಾ ಹಾಗೂ ಸುಮಿತ್ರಾ ಸೇರಿದ್ದಾರೆ.
ಮಕ್ಕಳಿಂದಲೇ ಬರೆಯಲ್ಪಟ್ಟ ತಂದೆ–ತಾಯಿಯರ ಜೀವನ ಕಥೆಗಳ ಈ ಸಂಕಲನ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಪ್ರಯೋಗವಾಗಿ ಮೂಡಿ ಬರಲಿದ್ದು, ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಶಾಲೆಯ ಎಲ್ಲಾ ಶಿಕ್ಷಕರು ಈ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿದ ಮಕ್ಕಳನ್ನು ಅಭಿನಂದಿಸಿದ್ದಾರೆ.

