(ಪತ್ರ ಇಪ್ಪತ್ತಾರು) ಮಗಳೇ,
Letters to Daughter: ಕಂದಾ, ಎಲ್ಲದರಲ್ಲೂ ನೂರಕ್ಕೆ ನೂರು ಅಂಕಗಳನ್ನು ಗಳಿಸಿಕೊಳ್ಳುವ ಮಕ್ಕಳು, ನಿನ್ನನ್ನೂ ಸೇರಿದಂತೆ, ಕನ್ನಡ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಕಡಿಮೆ ಅಂಕಗಳು ಬರುತ್ತವೆ ಎಂದುಕೊಳ್ಳುತ್ತೀರಿ ಅಲ್ಲವೇ? ಅದು ಕೊರಗಬೇಕಾದ ವಿಷಯವೇ ಅಲ್ಲ ಮಗೂ. ಎಲ್ಲದಕ್ಕಿಂತ ಮೊದಲು ಈ ನೂರಕ್ಕೆ ನೂರು ಎಂಬ ಭ್ರಮೆಯಿಂದ ಹೊರಗೆ ಬರಬೇಕು ಎನ್ನುತ್ತೇನೆ ನಾನು. ಯಾಕೆ ಗೊತ್ತೇ? ಭಾಷೆ ಮತ್ತು ಕಲೆಗಳಲ್ಲಿ ಪರಿಪೂರ್ಣತೆಯೆಂಬುದು ಇರುವುದಿಲ್ಲ.
ಎಷ್ಟೇ ಬರೆದರೂ ಹೇಗೆ ಬರೆದರೂ ಮಿಸ್ಸು ಮಾರ್ಕ್ ಕೊಡುವುದಿಲ್ಲ ಅನ್ನುವುದು ನನ್ನಂಥ ಭಾಷಾ ಉಪನ್ಯಾಸಕರ ಮೇಲೆ ಇರುವ ಸಾಮಾನ್ಯ ಆರೋಪ. ಇವರೇನು ಇವರ ಜೇಬಿನಿಂದ ಕೊಡುತ್ತಾರಾ? ಜುಗ್ಗು, ಜಿಪುಣಿ ಅಂತೆಲ್ಲ ಭಾವಿಸುವ ಮಕ್ಕಳಿರುತ್ತಾರೆ! ಆದರೆ ಮಗಳೇ.. ಭಾಷೆಯ ಸೊಗಸಿರುವುದೇ ಹಾಗೆ. ನೀನು ಉತ್ತರಗಳನ್ನು ಹೇಗೆಯೇ ಬರೆದರೂ ಅದಕ್ಕಿಂತ ಭಿನ್ನವಾಗಿ ಬರೆಯುವ ಸಾಧ್ಯತೆ ಇದ್ದೇ ಇರುತ್ತದೆ(Letters to Daughter).
ಭಾಷೆಯೆಂಬುದು ನಮ್ಮೊಳಗಿನ ಅಭಿವ್ಯಕ್ತಿ. ನಾವೇನು, ನಮ್ಮ ವ್ಯಕ್ತಿತ್ವವೇನು ಎಂಬುದನ್ನು ನಾವು ಬಳಸುವ ಭಾಷೆ ನಿರ್ಧರಿಸುತ್ತದೆ. ಒಟ್ಟಿನಲ್ಲಿ ಭಾಷೆಯೆಂಬುದು ನಮ್ಮ ಸಂಸ್ಕೃತಿಯನ್ನು, ನಮ್ಮ ಹಿನ್ನೆಲೆಯನ್ನು ಜಗತ್ತಿಗೆ ಪ್ರಚುರ ಪಡಿಸುತ್ತದೆ. ನಾವು ಭಾಷೆಯನ್ನು ಅತ್ಯಂತ ಮುಚ್ಚಟೆಯಿಂದ, ಮನವಿಟ್ಟು ಕಲಿಯಬೇಕಾದುದು ಅದು ನಮ್ಮ ಬದುಕಿನ ಭಾಗವೇ ಆಗುತ್ತದೆ ಎಂಬ ಕಾರಣಕ್ಕೆ ಹೊರತು ಪರೀಕ್ಷೆಯಲ್ಲಿನ ಅಂಕಗಳಿಗಾಗಿ ಮಾತ್ರವೇ ಅಲ್ಲ.
ಮಗಳೇ, ನಮ್ಮ ಬರೆವಣಿಗೆಯಲ್ಲಿ ನಾವು ಬಳಸುವ ಎಲ್ಲ ಬಗೆಯ ಲೇಖನ ಚಿಹ್ನೆಗಳು ಮುಖ್ಯ. ಅತ್ಯಂತ ಸಣ್ಣ ಚುಕ್ಕೆಯಾದ ಪೂರ್ಣವಿರಾಮವೂ ಒಂದು ವಾಕ್ಯದಲ್ಲಿ ಮುಖ್ಯ. ಗಣಿತದಲ್ಲಾದರೂ ಒಂದು ಚುಕ್ಕೆಗೆ, ಒಂದು ಅರ್ಧವಿರಾಮಕ್ಕೆ ಎಷ್ಟೊಂದು ಬೆಲೆಯಿದೆ ನೋಡು.
10 ಸಾವಿರ ಎನ್ನುವುದನ್ನು ನೀನು ಹತ್ತುಸಾವಿರವೆಂದು ಓದುತ್ತಿ. ಅದನ್ನೇ ಸ್ವಲ್ಪ ಬದಲಿಸಿ 10,000 ಎಂದು ಬರೆದರೆ ಮೌಲ್ಯದಲ್ಲಿ ಎಷ್ಟು ವ್ಯತ್ಯಾಸವಾಯಿತು ನೋಡು.. ಇಲ್ಲಿ ಇವುಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವ ಮಕ್ಕಳು ಭಾಷೆಯಲ್ಲಿ ಅಕ್ಷರತಪ್ಪುಗಳಿಗೆ, ಕ್ಯಾಪಿಟಲ್ ಅಕ್ಷರ ಬೇಕಾದಲ್ಲಿಗೆ ಸಣ್ಣ ಅಕ್ಷರ ಬರೆದರೆ ಅಂಕಗಳನ್ನು ಕಡಿಮೆ ಮಾಡಿದರೆ ಬಹುವಾಗಿ ಸಿಟ್ಟು ಮಾಡಿಕೊಳ್ಳುತ್ತಾರೆ, ತಪ್ಪಲ್ಲವೇ ಮಗೂ?(Letters to Daughter)
ಹಾಗಿದ್ದರೆ ಚೆನ್ನಾಗಿ ಭಾಷೆಯನ್ನು ಕಲಿಯುವ ಬಗೆ ಹೇಗೆ? ಕೇಳು, ನುಡಿ, ಓದು, ಬರೆ. ಇವಿಷ್ಟೇ ನೀನು ಮಾಡಬೇಕಾದುದು. ಕನ್ನಡವಿರಲಿ ಇತರ ಯಾವುದೇ ಭಾಷೆಯಿರಲಿ, ಉತ್ತಮವಾದ ಕನ್ನಡವನ್ನು ಮತ್ತೆಮತ್ತೆ ಕೇಳು. ಯಕ್ಷಗಾನ ತಾಳಮದ್ದಳೆಗಳನ್ನು ನಿರಂತರವಾಗಿ ಕೇಳುತ್ತಿದ್ದರೆ ನಮಗೆ ಗೊತ್ತಿಲ್ಲದೆಯೇ ನಮ್ಮ ಕನ್ನಡ ಚೆಂದವಾಗುತ್ತಾ ಹೋಗುತ್ತದೆ. ನೀನು ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡಿದಂತೆ ನಿಧಾನವಾಗಿ ತಾಳಮದ್ದಳೆಗಳಲ್ಲೂ ಅರ್ಥಗಾರಿಕೆ ಮಾಡುವುದರತ್ತ ಆಸಕ್ತಿ ಬೆಳೆಸಿಕೊ.
ಸ್ಪಷ್ಟವಾದ, ಹಿತವಾದ ಕನ್ನಡವನ್ನು ಕಲಿಯುವುದಕ್ಕೆ ತಾಳಮದ್ದಳೆಗಳ ಶ್ರವಣಕ್ಕಿಂತ ದೊಡ್ಡ ಸಂಪನ್ಮೂಲ ಇನ್ನೇನೂ ಇರಲಾರದು. ನೀನು ಕೆಲವು ದಿನ ಅಭ್ಯಾಸ ಮಾಡಿ ನೋಡು. ನಿನ್ನಲ್ಲಿನ ಬದಲಾವಣೆ ನಿನಗೆ ಖಂಡಿತವಾಗಿಯೂ ಗೊತ್ತಾಗುತ್ತದೆ.
ನಿನ್ನ ವಯಸ್ಸಿನ ಮಕ್ಕಳು ಅಷ್ಟು ಮುದ್ದಾದ ಕನ್ನಡ ಮಾತಾಡುವುದನ್ನು ಕೇಳುವುದಕ್ಕೆ ನಮಗೆಷ್ಟು ಸಂತೋಷವಾಗುತ್ತದೆ ಗೊತ್ತಾ? ಅಲ್ಲಿಗೆ ಕೇಳುವ, ನುಡಿಯುವ ಹಂತವಾಯ್ತು. ಇನ್ನಿರುವುದು ಓದು. ನಿರಂತರವಾಗಿ ಓದುತ್ತಿರಬೇಕು ಅಷ್ಟೇ. ನೀನು ಎಷ್ಟು ಓದುತ್ತೀಯೋ ಅಷ್ಟು ನಿನ್ನ ಭಾಷೆ ಪ್ರಬುದ್ಧವಾಗುತ್ತಾ ಹೋಗುತ್ತದೆ. ಹತ್ತಾರು ಪುಸ್ತಕಗಳನ್ನು ಓದಿದಂತೆ ನಿನ್ನಲ್ಲೂ ನೂರಾರು ಕಲ್ಪನೆಗಳು ರೂಪುಗೊಳ್ಳುತ್ತವೆ. ನಿನಗೂ ಬರೆಯಬೇಕೆನಿಸುತ್ತದೆ. ತೊಡಗಿಸಿಕೋ ಮಗೂ.
ಭಾಷೆಯಲ್ಲಿ ಬರೆವಣಿಗೆಯೇ ಕಷ್ಟ ಎನ್ನುವ ಮಕ್ಕಳಿಗೆಲ್ಲ ಸರಳವಾದ ಪರಿಹಾರವೆಂದರೆ ದಿನಕ್ಕೊಂದು ಪುಟ ಬರೆಯುವುದು. ನಿಮಗಿರುವ ಪಠ್ಯವನ್ನೇ ಆದರೂ ಒಂದೊAದೇ ಪ್ಯಾರಾ ಬರೆಯುತ್ತಾ ಇದ್ದರೆ ಒಂದು ನೋಟ್ ಬುಕ್ ಮುಗಿಯುವಷ್ಟರಲ್ಲಿ ಅಕ್ಷರತಪ್ಪುಗಳು ಕಡಿಮೆಯಾಗುತ್ತಾ ಬಂದು ಬಳಿಕ ಒಂದೇ ಒಂದು ತಪ್ಪಿಲ್ಲದಂತೆ ಬರೆಯುವುದು ರೂಢಿಯಾಗುತ್ತದೆ. ಅಪ್ಪನ ವಿದ್ಯಾರ್ಥಿಯೊಬ್ಬ ಪದವಿಯ ಹಂತದಲ್ಲಿ ಈ ರೀತಿ ಅಭ್ಯಾಸ ಮಾಡಿ ತಪ್ಪಿಲ್ಲದಂತೆ ಬರೆಯುವುದನ್ನು ಕಲಿತ ಬಗೆ ನಿಜಕ್ಕೂ ಶಿಕ್ಷಕರಾದವರಿಗೆ ಸಂತೃಪ್ತಿಯ ಭಾವವನ್ನು ತಂದುಕೊಡಬಲ್ಲುದು.
ನೀನು ನಿನ್ನ ತರಗತಿಯಲ್ಲಿರುವ ಇತರೆ ಮಕ್ಕಳಿಗೂ ಈ ವಿಧಾನವನ್ನು ಮನವರಿಕೆ ಮಾಡಿಕೊಡು. ಈ ಬಾರಿ ನಮ್ಮ ಕಾಲೇಜಿನಲ್ಲಿಯೂ ಓರ್ವ ವಿದ್ಯಾರ್ಥಿನಿಗೆ ನಾನು ಇದೇ ರೀತಿ ಬರೆಯುವುದಕ್ಕೆ ಹೇಳಿದ್ದೆ. ಅವಳ ಅಕ್ಷರ ಬಹಳ ಮುದ್ದಾಗಿತ್ತು. ಆದರೆ ಒಂದು ಪುಟದಲ್ಲಿ ಹತ್ತಾರು ತಪ್ಪುಗಳನ್ನು ಬರೆಯುತ್ತಿದ್ದಳು. ದಿನಕ್ಕೊಂದು ಪುಟ ಬರೆಯುತ್ತಾ ಬರೆಯುತ್ತಾ ಅಕ್ಷರ ತಪ್ಪಿಲ್ಲದಂತೆ ಬರೆಯುವುದನ್ನು ಅಭ್ಯಾಸ ಮಾಡಿದ್ದಲ್ಲದೇ ವಾರ್ಷಿಕ ಪರೀಕ್ಷೆಯಲ್ಲಿ 98 ಅಂಕಗಳನ್ನು ಪಡೆದಳು. ಅಂಥ ಮಕ್ಕಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಅಂಕ ಪಡೆದುದಕ್ಕಾಗಿ ಅಂತಲ್ಲ, ನಮ್ಮ ಮಾತುಗಳಿಗೆ ಬೆಲೆಕೊಟ್ಟು ಅಭ್ಯಾಸ ಮಾಡಿ ಗೆದ್ದಳು ಎಂಬುದಕ್ಕಾಗಿ. ಸುಲಭ, ಸರಳವಾಗಿ ಭಾಷೆಯನ್ನು ಗಿಟ್ಟಿಸಬಹುದು ಮಗೂ ಯಾಕೆಂದರೆ ಭಾಷೆಯೆಂದರೆ ಬದುಕು.
ಆದರೆ ಒಟ್ಟಾರೆಯಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಭಾಷೆಯನ್ನು ನಿರ್ಲಕ್ಷಿಸುವುದನ್ನು ಕಲಿಸುತ್ತದೆ. ಕೋರ್ ಸಬ್ಜೆಕ್ಟ್ ಗಳು ಮಾತ್ರವೇ ಮುಖ್ಯವೆಂದು ಬಿಂಬಿಸುತ್ತದೆ. ಅದಕ್ಕಿಂತ ದೊಡ್ಡ ಅನ್ಯಾಯವಿಲ್ಲ ಮಗೂ. ಇತರೆ ವಿಷಯಗಳನ್ನೇ ಆದರೂ ಅಕ್ಷರ ತಪ್ಪಿಲ್ಲದಂತೆ ಬರೆಯುವುದಕ್ಕೆ ಕಲಿಯುವುದು ಒಳ್ಳೆಯದು ಮಾತ್ರವಲ್ಲ, ಮುಖ್ಯ ಕೂಡಾ. ಅಂಕಗಳ ಹಿಂದೆ ಓಡುತ್ತಾ ಓಡುತ್ತಾ ಭಾಷೆಯನ್ನು, ಸಂಸ್ಕೃತಿಯನ್ನು ಮರೆಯುತ್ತಾ ಸಾಗಿದರೆ ಮುಂದಿನ ತಲೆಮಾರಿಗೆ ಉಳಿಯುವುದು ದೊಡ್ಡದೊಂದು ಶೂನ್ಯ ಮಾತ್ರ. ಅದನ್ನು ತಪ್ಪಿಸಬೇಕೆಂದರೆ ಭಾಷೆಯನ್ನು ಪ್ರೀತಿಸು. ನಿನ್ನ ಗೆಳತಿಯರಿಗೂ ಭಾಷೆಯನ್ನು ಪ್ರೀತಿಸಲು ಕಲಿಸಿಕೊಡು.
ಇಂತೀ ಪ್ರೀತಿಯಿಂದ
ಅಮ್ಮ
