True Love:“ನಿಜವಾದ ಪ್ರೀತಿ ಎಂದರೆ ಹತ್ತಿರದಲ್ಲಿರುವುದು ಅಲ್ಲ, ಹೃದಯದಲ್ಲಿ ಶಾಶ್ವತವಾಗಿ ಉಳಿಯುವುದು. ನಾನಿರಲಿ ಇರದಿರಲಿ, ನಗುವಿರಲಿ ಆ ಮೊಗದಲಿ—ಈ ಕಥೆ ಆ ಪ್ರತಿಜ್ಞೆಯ ಸ್ಮರಣೆ
ಅವಳ ಬದುಕಿಗೆ ಅವನು ಬಂದದ್ದು ವಸಂತದ ಗಾಳಿ ಬಂದು ಹೂವುಗಳನ್ನು ಮುಟ್ಟಿದಂತೆ. ದಿನನಿತ್ಯದ ಸಾಮಾನ್ಯ ಹಾದಿಯಲ್ಲಿ ನಡೆಯುತ್ತಿದ್ದ ಅವಳ ಮನಸ್ಸು, ಅವನ ನಗುವನ್ನು ಕಂಡ ಕ್ಷಣದಲ್ಲಿ ನಿಂತು ಹೋಗಿತ್ತು. ಆ ನಗು ಸಾಮಾನ್ಯ ನಗುವಲ್ಲ; ಅದು ಹೃದಯವನ್ನು ಜೋಡಿಸುವ ಶಕ್ತಿ, ಕತ್ತಲೆಯನ್ನೇ ಬೆಳಗಿಸುವ ದೀಪ, ಅಳುವ ಕಣ್ಣಿಗೂ ಮೃದು ಧೈರ್ಯ ನೀಡುವ ಸಂಗೀತ. ಅವಳು ತನ್ನೊಳಗೇ ನುಡಿದಳು—“ಇಂತಹ ನಗುವನ್ನು ಕಳೆದುಕೊಳ್ಳಬಾರದು, ಈ ನಗು ನನ್ನ ಜೀವನದ ನಿತ್ಯದ ಹಬ್ಬವಾಗಲಿ.”
ಇದನ್ನೂ ಓದಿ: Teachers Day Special: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಅವರ ಪರಿಚಯ ಹಾಸ್ಯದಿಂದ ಆರಂಭವಾಯಿತು. ತರಗತಿಯ ಕಿಟಕಿಯಿಂದ ಮಳೆಯ ಹನಿಗಳತ್ತ ನೋಡುತ್ತಿದ್ದಾಗ, ಅವನು ಹೇಳಿದ ಒಂದು ಚುಟುಕು ವಾಕ್ಯ, ಅವಳ ತುಟಿಗಳಲ್ಲಿ ನಗು ತಂದಿತು. ಅದೇ ಕ್ಷಣದಿಂದ, ಇಬ್ಬರ ಕಣ್ಣುಗಳು ಮೌನದಲ್ಲಿ ಮಾತಾಡಲು ಕಲಿತು. ದಿನಗಳು ಬದಲಾಗಿದವು, ಆದರೆ ಅವರಿಬ್ಬರ ನಡುವೆ ಬೆಳೆದ ಆತ್ಮೀಯತೆ ಮಾತ್ರ ಬದಲಾಗಲಿಲ್ಲ.
ಒಂದು ಸಂಜೆ, ಅಸ್ತಮಾನದ ಹೊಳಪಿನಲ್ಲಿ ತೋಟದ ಕುರ್ಚಿಯ ಮೇಲೆ ಅವನು ಹೇಳಿದ ಮಾತು ಅವಳ ಬದುಕಿನ ಪ್ರತಿಜ್ಞೆಯಾಯಿತು. ಅವನು ತಲೆಯನ್ನು ಅವಳತ್ತ ತಿರುಗಿಸಿ ನಿಧಾನವಾಗಿ ನುಡಿದ— “ಜೀವನ ನಮಗೆ ಏನು ಕೊಡಬಹುದು ಗೊತ್ತಿಲ್ಲ. ಆದರೆ ಒಂದು ಮಾತು ಮಾತ್ರ ನೆನಪಿಟ್ಟುಕೋ. ನಾನಿರಲಿ ಇರದಿರಲಿ, ನಗುವಿರಲಿ ಆ ಮೊಗದಲಿ, ನಾ ಕಂಡ ಹಾಗೆ, ಕಡೆಯವರೆಗೆ…”
ಅವಳು ಆ ಮಾತುಗಳನ್ನು ಕೇಳಿ ಬೆಚ್ಚಿಬಿದ್ದಳು. ಕಣ್ಣೀರು ತುಟಿಗಳವರೆಗೆ ಬಂದರೂ, ಅವನು ಬಯಸಿದಂತೆ ನಗುವುದನ್ನು ಮರೆಯಲಿಲ್ಲ. ಆ ನಗುವಿನೊಳಗೆ ಕಣ್ಣೀರು ಕರಗಿತು, ಹೃದಯದಲ್ಲಿ ಅವನ ಮಾತು ಶಿಲಾಶಾಸನದಂತೆ ಬರೆದಾಯಿತು.
ಇದನ್ನೂ ಓದಿ: Inspirational Teacher: “ಜ್ಞಾನ ದೀಪದ ಜೊತೆಯಲ್ಲಿ ನಡೆದ ಹಾದಿ”
ವಿಧಿಯ ಹಾದಿಗಳು ಇಬ್ಬರನ್ನು ದೂರ ಮಾಡಿದವು. ಅವನು ಕನಸುಗಳ ಬೆನ್ನಟ್ಟಲು ದೂರದ ನಗರಕ್ಕೆ ಹೋದನು. ಅವಳು ನೆನಪುಗಳ ಹೊಲದಲ್ಲಿ ತಾನೇ ಉಳಿದಳು. ಪತ್ರಗಳು ಮೊದಲಿಗೆ ಹರಿದುಬಂದರೂ, ನಿಧಾನವಾಗಿ ಕಡಿಮೆಯಾದವು. ಕೊನೆಗೆ ಮೌನವೇ ಅವಳ ಸಂಗಾತಿಯಾಯಿತು. ಆದರೂ ಅವಳ ಮುಖದಲ್ಲಿ ನಗು ಮಸುಕಾಗಲಿಲ್ಲ. ಏಕೆಂದರೆ ಅವನ ಮಾತು ಅವಳ ಪ್ರತಿದಿನದ ಜಪಮಾಲೆಯಂತಿತ್ತು. ಕನ್ನಡಿಯ ಮುಂದೆ ನಿಂತು ಪ್ರತಿದಿನ ನಗುವಾಗ, ಅವಳು ತಾನೇ ತಾನಿಗೆ ಹೇಳುತ್ತಿದ್ದಳು—“ಅವನು ನೋಡಿದ ಹಾಗೆ, ನಾನು ನಗುತ್ತಲೇ ಇರುತ್ತೇನೆ(True Love).”
ವರ್ಷಗಳು ಹೋದವು. ಆಕೆಯ ಕಣ್ಣುಗಳಲ್ಲಿ ಅನುಭವದ ನೆರಳು ಮೂಡಿತು, ಕೂದಲಲ್ಲಿ ಬೆಳ್ಳಿ ಹರಡಿತು. ಆದರೆ ಅವಳ ನಗು ಎಂದಿಗೂ ಬಾಡಲಿಲ್ಲ. ಮದುವೆಯ ಒತ್ತಾಯಗಳು ಬಂದಾಗ ಅವಳು ಸ್ಪಷ್ಟವಾಗಿ ಹೇಳಿದಳು—“ನನಗೆ ಬೇಕಾದವನು ನನ್ನ ನಗುವಿನಲ್ಲೇ ಬದುಕುತ್ತಿದ್ದಾನೆ. ನಾನು ಇನ್ನೊಬ್ಬರನ್ನು ಹುಡುಕುವ ಅಗತ್ಯವಿಲ್ಲ.” ಹಳ್ಳಿಯ ಜನರು ಅವಳ ನಗುವನ್ನು ನೋಡಿ ಆಶ್ಚರ್ಯಪಟ್ಟರು. ಅವರ ಮಾತು ಹೀಗಿತ್ತು—“ಅವಳೊಳಗಿನ ನೋವು ಆ ನಗುವಿನಲ್ಲಿ ಮುಚ್ಚಿದೆ, ಆದರೆ ಆ ನಗುವೇ ನಮಗೆ ಧೈರ್ಯ ಕೊಡುತ್ತಿದೆ.”
ಇದನ್ನೂ ಓದಿ: ಅಕ್ಷರ ಮಾಂತ್ರಿಕ ರವಿ ಬೆಳಗೆರೆ: ಬರಹವೇ ಬದುಕು, ಬದುಕೇ ಬರಹ
ಒಂದು ದಿನ, ಕಾಲೇಜಿನ ಹಳೆಯ ಮೈದಾನ ಮತ್ತೆ ಅವರಿಬ್ಬರ ಭೇಟಿ ಸ್ಥಳವಾಯಿತು. ವರ್ಷಗಳ ಬಳಿಕವೂ ಅವನ ಮುಖದಲ್ಲಿ ಅದೇ ನಗು ಹೊಳೆಯುತ್ತಿತ್ತು. ಅವಳು ಕ್ಷಣಕಾಲ ಮೌನವಾಗಿ ಅವನನ್ನು ನೋಡಿದಳು, ನಂತರ ತುಟಿಗಳಲ್ಲಿ ಮೃದುವಾದ ನಗು ತಂದು ಹೇಳಿದಳು “ನಿನ್ನ ಮಾತು ಇನ್ನೂ ನನ್ನ ಹೃದಯದಲ್ಲಿ ಜೀವಂತವಾಗಿದೆ. ನೀನಿರಲಿ ಇರದಿರಲಿ, ನಗುವಿರಲಿ ನನ್ನ ಮುಖದಲಿ, ನೀನು ಕಂಡ ಹಾಗೆ, ಕಡೆಯವರೆಗೆ…”
ಅವನು ಕಣ್ಣೀರು ಮಸುಕಾದ ಕಣ್ಣುಗಳಿಂದ ಅವಳ ನಗುವನ್ನು ನೋಡಿದನು. ಆ ಕ್ಷಣದಲ್ಲಿ ಅವನಿಗೂ ಅರಿವಾಯಿತು—ಅವನು ಕೊಟ್ಟ ನಗುವಿನ ಪ್ರತಿಜ್ಞೆ ಕೇವಲ ಮಾತಲ್ಲ, ಅದು ಅವಳ ಬದುಕಿನ ದಾರಿದೀಪವಾಗಿತ್ತು. ಸೂರ್ಯ ಅಸ್ತಮಿಸುತ್ತಿದ್ದರೂ, ಅವರ ಹೃದಯಗಳಲ್ಲಿ ಹೊಸ ಬೆಳಕು ಹೊಳೆಯುತ್ತಿತ್ತು
-ಲಿಖಿತ್ ಹೊನ್ನಾಪುರ
