(ಪತ್ರ ಇಪ್ಪತ್ತು) ಮಗಳೇ,
Letters to Daughter: ಮಗಳೇ, ದಣಿದಾಗ ಸಿಗುವ ಕುಚ್ಚಿಲಕ್ಕಿ ಗಂಜಿ, ಕುಡಿಯುವುದಕ್ಕೆ ನೀರು ಮಜ್ಜಿಗೆಯ ಮುಂದೆ ಯಾವುದೂ ಇಲ್ಲಕೆಲವು ದಿನಗಳ ಹಿಂದೆ ತರಗತಿಯಲ್ಲಿ ಸಹಪಾಠಿಗಳು ಯಾರೋ ನೀನು ತೆಗೆದುಕೊಂಡು ಹೋಗಿದ್ದ ಬಿಸ್ಕೆಟ್ ಪಾಕೆಟ್ ತೆಗೆದುಕೊಂಡು ಖಾಲಿಮಾಡಿದರೆಂದು ಮನೆಯಲ್ಲಿ ಸಿಡಿಮಿಡಿಗುಟ್ಟುತ್ತಿದ್ದೆಯಲ್ಲ.. ಎಳೆಯ ವಯಸ್ಸಿನಲ್ಲಿ ಸ್ನೇಹಿತರ ನಡುವೆ ಈ ಬಗೆಯ ತುಂಟಾಟಗಳು ಸಾಮಾನ್ಯ. ಎಳೆಯ ವಯಸ್ಸಿನಲ್ಲಿ ಅಂತೇನು? ಕೆಲವೊಮ್ಮೆ ದೊಡ್ಡವರೂ ಕೂಡಾ ಬೇರೆಯವರ ಲಂಚ್ಬಾಕ್ಸ್ ತೆಗೆದುಕೊಂಡು ಖಾಲಿ ಮಾಡುವುದಿದೆ. ಅದೆಲ್ಲವೂ ಸಣ್ಣಪುಟ್ಟ ಚೇಷ್ಟೆಗಳಷ್ಟೇ(Letters to Daughter)
ನಾವು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಿಮ್ಮಂತೆ ಸ್ನಾಕ್ಸ್ ಬ್ರೇಕ್ ಎಂಬ ವಿಷಯವೇ ಇರಲಿಲ್ಲ. ಬೆಳಗ್ಗೆ ಮನೆಯಲ್ಲಿ ತಿಂಡಿ ತಿಂದು ಹೋದರೆ ಮಧ್ಯಾಹ್ನ ಹನ್ನೆರಡೂವರೆಗೆ ಊಟದ ವಿರಾಮದಲ್ಲಷ್ಟೇ ಬುತ್ತಿಯೂಟ ಉಣ್ಣುವುದು. ಕೆಲವೊಮ್ಮೆ ನೆಲ್ಲಿಕಾಯಿ, ಮಾವಿನಕಾಯಿ ಇತ್ಯಾದಿಗಳನ್ನು ಯಾರಾದರೂ ತರುವುದಿತ್ತು. ಆದರೆ ಅಂಥದ್ದೆಲ್ಲ ತಂದುತಿAದದ್ದು ಮೇಷ್ಟ್ರಿಗೆ ಗೊತ್ತಾದರೆ ಪೆಟ್ಟು ಬೀಳುತ್ತಿತ್ತು. ಇನ್ನು ಚಾಕ್ಲೇಟು ಬಿಸ್ಕೆಟುಗಳೆಲ್ಲ ದೂರದ ಮಾತು. ಅದನ್ನು ಕೊಂಡುಕೊಳ್ಳುವಷ್ಟು ದುಡ್ಡು ಬಹುತೇಕ ಯಾರಲ್ಲೂ ಇರುತ್ತಿರಲಿಲ್ಲ.(Letters to Daughter)
ಅಂಗಡಿಯಿAದ ಹೋಟೆಲ್ಲಿನಿಂದ ಅಂತ ಪದೇಪದೇ ತಿನ್ನುವ ಅಭ್ಯಾಸವೂ ಇರಲಿಲ್ಲ. ಅಪರೂಪಕ್ಕೊಮ್ಮೆ ಮಧ್ಯಾಹ್ನದ ಊಟಕ್ಕೆ ಶಾಲೆಯೆದುರಿನ ಹೋಟೆಲ್ಲಿಗೆ ಹೋಗುವುದಿತ್ತು. ಬಹುಶಃ ನನ್ನಮ್ಮನಿಗೇನಾದರೂ ಸಣ್ಣ ಅನಾರೋಗ್ಯ ಇದ್ದಾಗ ಇರಬಹುದು, ನೆನಪಾಗುತ್ತಿಲ್ಲ. ಐದು ರೂಪಾಯಿಗೆ ಊಟ. ಅದಕ್ಕಿದ್ದಂಥ ರುಚಿ ಈಗ ಅದಾವುದೋ ದೊಡ್ಡ ಹೋಟೆಲ್ಲುಗಳಿಗೆ ಹೋಗಿ ರೋಟಿಕರಿ ತಿನ್ನುವುದರಲ್ಲಿ ಇರುವುದಿಲ್ಲ. ನಮ್ಮ ಜನರೇಷನ್ನ ಸಮಸ್ಯೆ ಅಂದುಕೊಳ್ಳಬೇಡ. ಹೋಟೆಲ್ಲೆಂಬುದು ನಮ್ಮ ಪಾಲಿಗೆ ಎಂದೂ ಶೋಕಿಯಾಗದು ಮಗೂ.
ತೀರಾ ಅಡುಗೆ ಮಾಡಲು ಸಾಧ್ಯವಿಲ್ಲದೇ ಇದ್ದಾಗ, ಸಮಯ ತುಂಬ ಕಡಿಮೆಯಿದ್ದಾಗಷ್ಟೇ ಹೋಟೆಲ್ನತ್ತ ಮುಖಮಾಡುವುದು ನಮಗೆ ಸಾಧ್ಯ. ಇಲ್ಲವಾದಲ್ಲಿ ಮನೆಯಲ್ಲಿ ಮಾಡಿಕೊಂಡು ತಿಂದರೇ ಸಮಾಧಾನ. ಲಾಕ್ ಡೌನ್ ಸಮಯದಲ್ಲಿ ಅದೆಷ್ಟು ಸಂತೋಷದಿAದ ಮನೆಯಲ್ಲಿ ತರಹೇವಾರಿ ಅಡುಗೆ ಮಾಡಿಕೊಂಡು ಕಳೆದೆವಲ್ಲ.. ಅದರಲ್ಲಿ ಒದಗುವ ಖುಷಿ ಕೇವಲ ನಾಲ್ಕುಮಂದಿ ಹೋಗಿ ಒಂದೂವರೆ ಸಾವಿರ ರೂಪಾಯಿ ಖರ್ಚು ಮಾಡಿ ಉಣ್ಣುವ ಉಣಿಸಿನಲ್ಲಿ ದೊರೆಯುವುದಿಲ್ಲ. ಇದು ಜಿಪುಣತನ ಅಂದುಕೊಳ್ಳಬೇಕಿಲ್ಲ ಮಗೂ. ನಮ್ಮ ಇಲ್ಲಿಯವರೆಗಿನ ಬದುಕು ನಮಗೆ ಕಲಿಸಿದ ರೀತಿ ಅದು ಅಷ್ಟೇ.
ಮಗಳೇ, ಮೊನ್ನೆ ನೀನು ಊರಿಗೆ ಹೋಗಿದ್ದಾಗ ಮನೆಯಿಂದ ತಮ್ಮ ನನಗೆ ಕಾಲ್ ಮಾಡಿದ. ನಾನು ಕಾಲೇಜಿನಲ್ಲಿದ್ದೆ. ‘ಅಮ್ಮ ಮನೆಯಲ್ಲಿ ತಿನ್ನುವುದಕ್ಕೆ ಏನೂ ಇಲ್ಲ’ ಅವನು ಅಳುವುದೊಂದು ಬಾಕಿ. ಒಮ್ಮೆ ಧಸಕ್ಕೆಂದಿತು ನನಗೆ, ಮಧ್ಯಾಹ್ನಕ್ಕೆ ಅಡುಗೆ ಮಾಡದೇ ಕಾಲೇಜಿಗೆ ಓಡಿ ಬಂದೆನೋ ಏನು ಕತೆ..
ನಿಧಾನಕ್ಕೆ ನೆನಪಿಸಿಕೊಂಡರೆ ಅಂದು ಚಪಾತಿ ಪಲ್ಯ ಮಾಡಿದ್ದೆ. ಮಧ್ಯಾಹ್ನಕ್ಕೂ ಅನ್ನ ಸಾರು ಬೇಡ, ಚಪಾತಿಯೇ ಆದೀತು ಎಂದು ಬೆಳಗ್ಗೆಯೇ ನಿರ್ಧಾರವಾಗಿತ್ತು. ಮತ್ತೀಗ ಏನೂ ಇಲ್ಲ ಎಂದರೆ ಎಂತ ಕತೆ? ಮತ್ತೆ ನೋಡಿದರೆ ವಿಷಯವೇ ಬೇರೆ, ಮನೆಯಲ್ಲಿ ತಂದಿಟ್ಟಿದ್ದ ಬಿಸ್ಕೆಟ್ಸ್, ಚಿಪ್ಸ್, ಚಾಕ್ಲೇಟು ಎಲ್ಲ ಮುಗಿದಿತ್ತು. ಹನ್ನೊಂದೂವರೆಯ ಹೊತ್ತಿಗೆ ಸಣ್ಣಗೆ ಹಸಿವಾದರೆ, ಟಿವಿ ನೋಡುವಾಗ ಬೋರಾದರೆ ಏನಾದರೂ ತಿನ್ನಬೇಕು ಅನಿಸುತ್ತದಲ್ಲ? ಹಾಗೆ ತಿನ್ನುವುದಕ್ಕೆ ಏನೂ ಇಲ್ಲ ಅಂತ ಅಳುಧ್ವನಿಯಲ್ಲಿ ಕರೆ ಮಾಡಿದ್ದ. ಸರಿ, ಖರ್ಜೂರ, ಗೋಡಂಬಿ, ದ್ರಾಕ್ಷೆ ಇತ್ಯಾದಿ ಇದೆ ಫ್ರಿಜ್ಜಲ್ಲಿ.. ಮತ್ತೇನಾದರೂ ಸಂಜೆ ತರುತ್ತೇನೆ ಅಂತ ಸಮಾಧಾನ ಮಾಡಿದ್ದಾಯಿತು.
ನನಗೆ ಯೋಚನೆ ಹತ್ತಿತು. ನಾವು ಚಿಕ್ಕವರಿದ್ದಾಗ ಮನೆಯಲ್ಲಿ ಏನು ತಿನ್ನುತ್ತಿದ್ದೆವು? ಅಮ್ಮ ಅಪರೂಪಕ್ಕೆ ಖಾರದ ಕಡ್ಡಿ ಮಾಡುವುದಿತ್ತು. ನಾನು ಅಮ್ಮನಿಗೆ ಸಹಾಯ ಮಾಡುತ್ತಿದ್ದೆ. ಆದರೆ ಪ್ರತೀಬಾರಿ ಅದನ್ನು ಮಾಡಿದಾಗ ನನಗೆ ಶೀತ ಗಂಟಲುನೋವು ಬಂದೇ ಬರುತ್ತಿತ್ತು. ನನಗೆ ಗುಣವಾಗುವಷ್ಟರಲ್ಲಿ ಖಾರದ ಕಡ್ಡಿ ಮುಗಿದಿರುತ್ತಿತ್ತು.
ಮಳೆಗಾಲದಲ್ಲಿ ಉಂಡ್ಲಕ ಮಾಡುತ್ತಿದ್ದೆವು. ಅದರ ಹೊರತಾಗಿ ಬೇರಿನ್ನೇನು? ಮನೆಯಲ್ಲಿಯೇ ಆದರೂ ಸುಮ್ಮಸುಮ್ಮನೇ ವಿಶೇಷ ತಿಂಡಿಗಳನ್ನು ಮಾಡುವ ಕ್ರಮವಿರಲಿಲ್ಲ. ಅಷ್ಟೆಲ್ಲಾ ವ್ಯವಸ್ಥೆ ಬೇಕಲ್ಲ ಮಗೂ? ಹಣ್ಣುಗಳನ್ನು ತರುವುದೂ ಅಪರೂಪವೇ. ಆದರೆ ಮನೆಯ ಸುತ್ತ ಕಾಡಿತ್ತಲ್ಲ. ಅಲ್ಲಿ ಬಗೆಬಗೆಯ ಹಣ್ಣುಗಳು ಸಿಗುತ್ತಿದ್ದವು. ಪೇರಳೆಮರ ಮನೆಮುಂದೆಯೇ ಇತ್ತು. ಬಾಳೆಹಣ್ಣು ಕೂಡಾ ಅಪರೂಪವೇ. ಈಗ ಚಿತ್ರ ಎಷ್ಟು ಬದಲಾಗಿದೆ ಅಂದುಕೊಳ್ಳುವೆ.
ನಿಧಾನಕ್ಕೆ ನಮ್ಮೆದುರಿನ ಹಳ್ಳಿಯ ಚಿತ್ರ ಸರಿದು ಪಟ್ಟಣ ಆವರಿಸಿಕೊಂಡಾಗ ಭೇಲ್ಪುರಿ, ಚುರುಮುರಿ, ಮಸಾಲೆಪುರಿಗಳ ರುಚಿ ಹತ್ತುವುದಕ್ಕೆ ಪ್ರಾರಂಭವಾಯ್ತು. ಹಳ್ಳಿಯ ಹೋಟೆಲ್ಲಿನ ಬನ್ಸು ಗೋಳಿಬಜೆಗಿಂತ ಗೋಭಿಮಂಚೂರಿ ರುಚಿ ಎನ್ನಿಸಿತು. ಈಗ ಪಟ್ಟಣವೂ ಅಲ್ಲ. ನಗರದಲ್ಲಿ ಬಾಳುತ್ತಿದ್ದೇವೆ. ಬದುಕು ಬದಲುವುದೋ ನಾವೋ ಗೊತ್ತಾಗದ ಸಂದಿಗ್ಧದಲ್ಲಿ ನಾವಿದ್ದೇವೆ. ಆದರೆ ನೀನೇನೇ ಹೇಳು, ದಣಿದಾಗ ಸಿಗುವ ಕುಚ್ಚಿಲಕ್ಕಿ ಗಂಜಿ, ಮಾವಿನಮಿಡಿ ಉಪ್ಪಿನಕಾಯಿ, ಒಂದಿಷ್ಟು ತುಪ್ಪ, ಕುಡಿಯುವುದಕ್ಕೆ ನೀರು ಮಜ್ಜಿಗೆಯ ಮುಂದೆ ಯಾವುದೂ ಇಲ್ಲ. ಬಾಯಿಚಪಲಕ್ಕೆ ತಿನ್ನುವುದಿದ್ದರೂ ಬನ್ಸು, ಗೋಳಿಬಜೆಯ ರುಚಿಯ ಮುಂದೆ ಈಗ ಗೋಭಿಮಂಚೂರಿ ನಿಲ್ಲುವುದಿಲ್ಲ. ಹಳೆಯ ಕಾಲದ ತಿಂಡಿ ಅಂತ ಬೈದುಕೊಳ್ಳಬೇಡ!
ನಮಗೆ ಹೆಸರು ಹೇಳುವುದಕ್ಕೂ ಕಷ್ಟವೆನಿಸುವ ಪಿಜ್ಜಾ ಬರ್ಗರುಗಳ ನಮೂನೆಗಳು ನಮಗೆ ದೂರವೇ. ನಮಗದು ಹಿಡಿಸುವುದಿಲ್ಲ ಎನ್ನುವುದಕ್ಕಿಂತಲೂ ಕರಗಿಸಿಕೊಳ್ಳುವುದೇ ಕಷ್ಟ ಎನಿಸುತ್ತದೆ. ನಿಮ್ಮಂತೆ ನಮ್ಮ ಶಾಲಾದಿನಗಳಲ್ಲೂ ಸ್ನಾಕ್ಸ್ ಬ್ರೇಕ್ ಎಂಬುದಿದ್ದರೆ ಯಾರ್ಯಾರು ಏನೇನು ತರುತ್ತಿದ್ದರೋ ಎನಿಸಿಕೊಂಡು ಕೆಲವೊಮ್ಮೆ ನಗು ಬರುತ್ತದೆ.
ಹಣ್ಣುಗಳಾದರೆ ಗೇರುಹಣ್ಣು, ಕಾಡುಮಾವಿನ ಹಣ್ಣು, ಹಲಸಿನ ಹಣ್ಣು, ಅಪರೂಪಕ್ಕೆ ಬಾಳೆಹಣ್ಣು.. ಇನ್ನುಳಿದಂತೆ ಸರೋಳಿ, ಚೂರಿಹಣ್ಣು, ನೇರಳೆಹಣ್ಣು! ಸುಟ್ಟ ಹಲಸಿನ ಬೀಜ, ಹುಣಸೇಬೀಜ, ಕರಿದ ಸಿಹಿಗುಂಬಳ ಬೀಜ..ಮಜಾ ಇರುತ್ತಿತ್ತು ಅಂದುಕೊಳ್ಳುವೆ.ನಿಮ್ಮ ತರಗತಿಯಂತೆ ನಮ್ಮಲ್ಲಿ ಮಾತ್ರ ಹುಡುಗಿಯರ ಬುತ್ತಿಯನ್ನು ಹುಡುಗರು ಅಥವಾ ಹುಡುಗರ ಬುತ್ತಿಯನ್ನು ಹುಡುಗಿಯರು ಲಪಟಾಯಿಸುವ ಸಾಧ್ಯತೆ ಮಾತ್ರ ಇರಲಿಲ್ಲ.
ಯಾಕೆಂದು ಕೇಳುತ್ತೀಯಾ? ಮುಂದಿನ ಪತ್ರದಲ್ಲಿ ಹೇಳುವೆ.
ಇಂತೀ ಆಶೀರ್ವಾದಗಳೊಂದಿಗೆ
ಅಮ್ಮ
