(ಪತ್ರ ಇಪ್ಪತ್ತೊಂದು) ಮಗಳೇ,
Letters to Daughter: ಬುತ್ತಿಯನ್ನು ಲಪಟಾಯಿಸುವ, ಹಂಚುವ ಪ್ರಮೇಯ ನಾವು ಮಕ್ಕಳಿದ್ದಾಗ ಇರಲಿಲ್ಲ ಎಂಬಲ್ಲಿಗೆ ಕಳೆದ ಪತ್ರವನ್ನು ನಿಲ್ಲಿಸಿದ್ದೆ. ಯಾಕೆ ಎಂದರೆ ನಮ್ಮ ಶಾಲೆಗಳಲ್ಲಿ ಹುಡುಗರು ಹುಡುಗಿಯರು ಪರಸ್ಪರ ಮಾತನಾಡಿಕೊಳ್ಳುವ ಅವಕಾಶಗಳು ಅಷ್ಟಾಗಿ ಇರಲಿಲ್ಲ.ಇಲ್ಲವೇ ಇಲ್ಲವೆಂದಲ್ಲ. ತರಗತಿಗೆ ಅಗತ್ಯವಾದ ವಿಷಯವನ್ನು ಹೇಳುವುದಿದ್ದರೆ, ಶಿಕ್ಷಕಿಯವರು ಏನಾದರೂ ಹೇಳಿ ಕಳುಹಿಸಿದರೆ ಅದನ್ನು ತರಗತಿಯವರಿಗೆ ತಿಳಿಸುವುದಕ್ಕೆ ಎಷ್ಟು ಬೇಕೋ ಅಷ್ಟೇ.
ನಿಜ ಹೇಳಬೇಕೆಂದರೆ ನನ್ನ ಪಿಯುಸಿ ತರಗತಿಯ ಹುಡುಗರ ಪೈಕಿಯೂ ಇಬ್ಬರ ಹೆಸರು ಮಾತ್ರ ಗೊತ್ತು, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ತರಗತಿ ಪ್ರತಿನಿಧಿಯಾಗಿದ್ದವರು. ಉಳಿದ ಯಾರನ್ನೂ ಗೊತ್ತಿಲ್ಲ. ಅದರಲ್ಲಿ ಅಚ್ಚರಿಯೇನಿಲ್ಲ. ಅಂದಿನ ದಿನಗಳೇ ಇದ್ದುದು ಹಾಗೆ. ಪದವಿಗೆ ಬಂದ ಬಳಿಕ ಎನ್ಎಸ್ಎಸ್ ಎಂದೋ ಯಕ್ಷಗಾನ ಎಂದೋ ನಮ್ಮ ತಂಡದಲ್ಲಿರುವವರೊAದಿಗೆ ಗೆಳೆತನವಿದ್ದುದು ಹೌದು.
ಬರುಬರುತ್ತಾ ಕಾಲ ಬದಲಾಗಿದೆ. ಶಾಲೆಗಳಲ್ಲೂ ಬಹುತೇಕ ಪ್ರಾಥಮಿಕ ಹಂತ ಮುಗಿಯುವಲ್ಲಿಯವರೆಗೂ ಒಂದು ಬೆಂಚಿನಲ್ಲಿ ಹುಡುಗ ಹುಡುಗಿ ಅಕ್ಕಪಕ್ಕವೇ ಕುಳಿತುಕೊಳ್ಳಬೇಕು ಎಂಬ ನಿಯಮವೂ ಇದೆ. ಇದು ಮುಂದುವರಿದು ಕಾಲೇಜಿನಲ್ಲೂ ಹೀಗೇ ಇರುತ್ತೇವೆ, ಇರಗೊಡಬೇಕು ಎಂಬ ಮಕ್ಕಳೂ ಇದ್ದಾರೆ. ಅದು ಸಾಧ್ಯವಾಗದ ಮಾತೆಂದೋ ಸಾಧ್ಯವಾಗಬಾರದ ಮಾತೆಂದೋ ನಮ್ಮ ತಲೆಮಾರಿನ ಶಿಕ್ಷಕರು ಭಾವಿಸುತ್ತೇವೆ. ಅದಕ್ಕೆ ನಾವು ಔಟ್ಡೇಟೆಡ್ ಡೆವಿಲ್ಸ್ ಅನ್ನಿಸಿಕೊಂಡರೂ ಪರವಾಗಿಲ್ಲ.
ಈ ವಿಷಯದಲ್ಲಿ ಕೊಂಚ ಎಚ್ಚರ ಇರಬೇಕೆಂಬುದು ಸತ್ಯ ಮಗೂ. ಯಾಕೆ ಗೊತ್ತಾ? ಬದುಕೆಂಬುದೊAದು ವಿಸ್ಮಯ. ಬದುಕಿನ ಕುರಿತಾದ ಕೆಲವು ಸಹಜ ವಿಸ್ಮಯಗಳು ಕೆಲವು ವರ್ಷಗಳ ಕಾಲವಾದರೂ ಇದ್ದೇ ಇರಬೇಕು. ಇತ್ತೀಚಿಗೆ ಕೆಲವು ವರ್ಷಗಳಲ್ಲಿ ಶಾಲಾ ಬಸ್ಸಿನಲ್ಲಿ ಈಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು ಅನುಚಿತವಾಗಿ ವರ್ತಿಸಿದರೆಂಬ ಸುದ್ದಿ ಆಗೀಗ ಕೇಳಿ ಬಂದಿತ್ತು. ಅಷ್ಟು ಮಾತ್ರವಲ್ಲ, ಈಗ ಕೆಲವು ದಿನಗಳ ಹಿಂದೆ ಶಾಲಾ ಶಿಕ್ಷಕನೋರ್ವ ಟ್ಯೂಷನ್ ಕೊಡುವುದಾಗಿ ಕರೆಸಿಕೊಂಡು ವಿದ್ಯಾರ್ಥಿನಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡ ಬಗೆಗೆ, ಅವಳಲ್ಲಿ ಫೋನ್ಕರೆ ಮೂಲಕ ಅಸಭ್ಯವಾಗಿ ಮಾತನಾಡಿದ ಬಗ್ಗೆ ಆಡಿಯೋ ವೈರಲ್ ಆಗಿತ್ತು(Letters to Daughter).
ಇದನ್ನೆಲ್ಲ ನಿನಗೆ ಹೇಳುತ್ತಿರುವ ಔಚಿತ್ಯವೇನು ಎಂದು ನಿನಗನ್ನಿಸಬಹುದು ಕಂದಾ. ನಿನ್ನ ವಯಸ್ಸಿನ ಮಗಳಂದಿರಿರುವ ಎಲ್ಲ ತಾಯಂದಿರೂ ತಮ್ಮ ಮಕ್ಕಳು ಕ್ಷೇಮವಾಗಿರಲಿ, ಅವರ ಬದುಕು ಬಂಗಾರವಾಗಲಿ ಅಂತ ದೇವರಿಗೆ ದಿನವೂ ಕೈಮುಗಿಯುತ್ತೇವೆ. ಈ ಭಯ ಯಾಕೆ ಗೊತ್ತಾ? ಸಹಜವಾಗಿ ಇತರರೆಡೆಗೆ ಸಣ್ಣದೊಂದು ಆಕರ್ಷಣೆ ಮೂಡುವ ವಯಸ್ಸಿದು. ಅಪ್ಪ ಅಮ್ಮ ಬ್ಯುಸಿ ಇದ್ದರೆಂಬುದು ನೆಪವಾಗಿ ಮಕ್ಕಳು ತಮಗೆ ಕೊಂಚ ಪ್ರೀತಿ ತೋರುವ (ಅಥವಾ ಅಂತೆ ನಟಿಸುವ) ಮಂದಿಯೆಡೆಗೆ ಸುಲಭವಾಗಿ ಸೆಳೆಯಲ್ಪಡುತ್ತಾರೆ(Letters to Daughter).
.
ಮಗಳೇ, ಅಪ್ಪ ಅಮ್ಮ ಯಂತ್ರಗಳಾಗಿ ದುಡಿಯುವ ಅನಿವಾರ್ಯತೆಯಿರುವುದೂ ಇಂದಿನ ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸ ಕೊಡಿಸಲೆಂದೇ. ಜತೆಗೆ ತಮ್ಮ ಎಳೆಯ ವಯಸ್ಸಿನಲ್ಲಿದ್ದ ಆರ್ಥಿಕ ಸಂಕಷ್ಟ ತಮ್ಮ ಮಕ್ಕಳಿಗೆ ಇರಬಾರದು ಎಂಬುದಕ್ಕಾಗಿ. ಆದರೆ ಮಗೂ.. ವಯಸ್ಸಿಗೆ ಬಂದ ಮಕ್ಕಳು ತಮ್ಮ ತಂದೆತಾಯಿಯ ಕಷ್ಟವನ್ನೂ ಅರ್ಥಮಾಡಿಕೊಳ್ಳಬೇಕಲ್ಲ? ಅದರ ಬದಲು ಯಾರೋ ಮೂರನೆಯವರು ಕೊಂಚ ಕಾಳಜಿ ಮಾಡಿದರೆಂದು ಅತ್ತ ವಾಲಿದರೆ ಬದುಕೇ ವಾಲುವ ಸಾಧ್ಯತೆಗಳೂ ಇರುತ್ತವೆ.
ಮಗಳೇ, ನವಿರಾದ ಮಾತುಗಳಿಂದ, ಸಣ್ಣಪುಟ್ಟ ಉಡುಗೊರೆಗಳಿಂದ ಹೆಣ್ಣುಮಕ್ಕಳನ್ನು ತಮ್ಮೆಡೆಗೆ ಸೆಳೆಯುವಂತೆ ಮಾಡುವ ಮಂದಿ ಅನೇಕರು ಇರುತ್ತಾರೆ. ಜಗತ್ತಿನಲ್ಲಿ ಮೋಸ ಹೋಗುವವರು ಇರುವಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ ಎಂಬುದು ಯಾವುದೋ ಸಿನೆಮಾದ ಭರತವಾಕ್ಯ. ಹಾಗಾಗಿ ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಬಹಳ ಜತನದಿಂದಲೇ ಇಡಬೇಕು. ಸಹಪಾಠಿಗಳೆಂಬ ಕಾರಣಕ್ಕೆ ಪರಸ್ಪರ ಫೋಟೋಗಳನ್ನು ಕಳುಹಿಸುವಂತೆಯೂ ಈಗ ಪರಿಸ್ಥಿತಿ ಇಲ್ಲ. ಹತ್ತು ಹಲವು ಬಗೆಯ ಆಪ್ಗಳು ಬಂದಿವೆ. ಯಾರದೇ ಚಿತ್ರವನ್ನೇ ಆಗಲೀ ಬೇಕುಬೇಕಾದಂತೆ ಎಡಿಟ್ ಮಾಡಲು ಬರುತ್ತದೆ. ಹಾಗಿರುವಾಗ ನಮ್ಮ ಚಿತ್ರಗಳ ಕುರಿತು ಬಹಳ ಎಚ್ಚರವಿರಬೇಕು.
ಮಗಳೇ, ಇನ್ನು ಈ ವಯಸ್ಸಿನ ಆಕರ್ಷಣೆಗಳನ್ನು ಪ್ರೀತಿಯೆಂದು ನಂಬಿ ಸೋಲುವಂತವರು ಅದೆಷ್ಟೋ ಜನ. ತೀರಾ ಇತ್ತೀಚೆಗೆ ಹದಿವಯಸ್ಸಿನ ಹುಡುಗ ಹುಡುಗಿ ನದಿಗೆ ಹಾರಿಗೆ ಬದುಕು ಮುಗಿಸಿಕೊಂಡ ಸುದ್ದಿ ಓದಿದೆ. ಬದುಕಿ ಒಂದಾಗುವುದಿದೆ ಮಗೂ..ಸಾವಿನಲ್ಲಿ ಒಂದಾಗುತ್ತೇವೆ ಎಂದು ಬದುಕನ್ನೇ ನೋಡದೇ ನೇಣಿಗೆ ಶರಣಾಗುವವರು ಶತಮೂರ್ಖರು. ನಾನು ತರಗತಿಯಲ್ಲಿ ರೋಮಿಯೋ ಜ್ಯೂಲಿಯೆಟ್ ಪಾಠ ಮಾಡುವಾಗಲೂ ಇದನ್ನೇ ಮೊದಲು ಹೇಳುವುದು. ಅದೊಂದು ಕಥೆಯಾಗಿ, ನಾಟಕವಾಗಿ ಚಂದ ಹೊರತು ಅದು ಬದುಕಿಗಾಗುವ ಆದರ್ಶವಲ್ಲ.
ಬಂಗಾರಿ, ಮೆಸೇಜುಗಳ ಮೂಲಕ ಸ್ವಲ್ಪಸ್ವಲ್ಪವೇ ಹತ್ತಿರವಾಗಿ ಮತ್ತೆ ಎಂಥೆAಥದೋ ವಿಡಿಯೋಗಳನ್ನೋ ಫೋಟೋಗಳನ್ನೋ ಕಳುಹಿಸುವ ಸ್ನೇಹಿತರ ಸೋಗಿನ ಜನರು ಇರುತ್ತಾರೆ. ಅವರು ಕಳುಹಿಸಿದಾಗ ಪ್ರತಿಕ್ರಿಯೆ ಕೊಡದೇ ಇದ್ದರಾಯಿತು ಎಂಬAತಿಲ್ಲ. ಅಂಥದ್ದನ್ನು ಕಳುಹಿಸುವುದು ನಿನಗೆ ಇಷ್ಟವಾಗುವುದಿಲ್ಲ ಎಂಬುದನ್ನು ನೇರವಾಗಿ ಹೇಳಿಬಿಡಬೇಕು.
ನೀನು ಮೌನವಾಗಿದ್ದರೆ ಅದೇ ಸಮ್ಮತಿಯೆಂದುಕೊAಡು ಅಂಥವರು ಕಳುಹಿಸುತ್ತಲೇ ಇರುತ್ತಾರೆ. ನೀನು ನಿನ್ನ ವ್ಯಕ್ತಿತ್ವವನ್ನು ಇತರರು ಗೌರವಿಸುವಂತೆ ಖಡಕ್ಕಾಗಿ ಇರಬೇಕು. ಸ್ವಲ್ಪ ಸದರ, ಸಲುಗೆ ಕೊಟ್ಟರೂ ಅದು ಕಡೆಗೆ ನಿನ್ನ ದೌರ್ಬಲ್ಯವೆನಿಸೀತು. ಇದು ಈ ವಯಸ್ಸಿನಲ್ಲಿ ಅಂತಲ್ಲ, ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳನ್ನೂ ಕಾಡುವ ತೊಂದರೆ. ಇದರ ಬಗ್ಗೆ ತುಂಬ ವಿವರ ಈಗ ಹೇಳುವುದಿಲ್ಲ ಮಗೂ. ಅದೇ ಒಂದು ಬೇರೆಯೇ ಪತ್ರವಾದೀತು.
ಒಟ್ಟಿನಲ್ಲಿ ಇತರರು ನಿನಗೆ ಕಳುಹಿಸುವ ಸಂದೇಶಗಳು ಅವರ ವ್ಯಕ್ತಿತ್ವವನ್ನು ಸೂಚಿಸುತ್ತವೆ ಮತ್ತು ನಿನ್ನನ್ನು ಅವರು ನೋಡುವ ದೃಷ್ಟಿಕೋನವೇನೆಂಬುದನ್ನೂ ಹೇಳುತ್ತವೆ. ಇದನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಹೆಣ್ಣುಮಕ್ಕಳಿಗಿದ್ದರೆ ಎಲ್ಲಾ ತಂದೆತಾಯಿಯರಿಗೂ ನೆಮ್ಮದಿ. ಮಗಳೇ, ನಿಮ್ಮ ವಯಸ್ಸಿಗೆ ಸಾಮಾಜಿಕ ಜಾಲತಾಣಗಳು ಅಗತ್ಯವೇ ಇಲ್ಲ. ಒಂದೊಮ್ಮೆ ಬಳಸುವುದಿದ್ದರೆ ಹಿರಿಯರ ಸಮ್ಮುಖದಲ್ಲಿ ಮಾತ್ರ ಬಳಸಬೇಕು. ಅದರಲ್ಲಿ ನಿಮ್ಮದಾದ ಫೋಟೋಗಳನ್ನೋ ವಿಡಿಯೋಗಳನ್ನೋ ಶೇರ್ ಮಾಡುವುದಿದ್ದರೆ ಔಪಚಾರಿಕವಾದದ್ದನ್ನು ಮಾತ್ರ ಮಾಡಿದರೆ ಸಾಕು.
ಖಾಸಗಿಯಾಗಿ ಇರಿಸಬೇಕಾದ ಸಂಗತಿಗಳು ಸಾರ್ವಜನಿಕವಾಗಬಾರದು. ಸ್ನಾಪ್ ಚಾಟ್ ಇತ್ಯಾದಿಗಳು ನಿಮ್ಮಂಥ ಮಕ್ಕಳನ್ನು ಸುಮ್ಮನೇ ಮೊಬೈಲ್ ವ್ಯಸನಿಗಳನ್ನಾಗಿ ಮಾಡಬಹುದು. ಸಹಪಾಠಿಗಳಿಗೇ ಆದರೂ ನಿನ್ನ ಫೋಟೋ ಕಳಿಸುವ ಕೆಲಸ ಬೇಡ. ಯಾರು ಎಷ್ಟೇ ಒಳ್ಳೆಯವರೆಂಬ ನಂಬಿಕೆ ನಿನಗಿದ್ದರೂ ಫೋಟೋ ವಿಡಿಯೋಗಳನ್ನು ಕಳುಹಿಸುವುದು ಕ್ಷೇಮವಲ್ಲ. ಅದರಿಂದ ಕೆಡುಕುಗಳು ಘಟಿಸಿರುವುದೇ ಜಾಸ್ತಿ. ನೀನು ಅರ್ಥ ಮಾಡಿಕೊಳ್ಳುತ್ತೀ ಎಂಬುದು ನನ್ನ ಭರವಸೆ.
ಆಶೀರ್ವಾದಗಳೊಂದಿಗೆ ಅಮ್ಮ
