Bhishma’s Pledge: ಕಥೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಪೌರಾಣಿಕ ಕಥೆಗಳೆಂದರೆ ಎಲ್ಲರಿಗೂ ಇಷ್ಟವೇ. ಪೌರಾಣಿಕ ಕಥೆಗಳಿಗೂ ಮತ್ತು ಸಾಮಾನ್ಯ ಕಥೆಗಳಿಗೂ ಒಂದು ವ್ಯತ್ಯಾಸವಿದೆ. ಸಾಮಾನ್ಯ ಕಥೆಗಳಲ್ಲಿ ನೀತಿಯು ಸರಳವಾಗಿರುತ್ತದೆ, ಆದರೆ ಪೌರಾಣಿಕ ಕಥೆಗಳಲ್ಲಿ ನೀತಿಯ ಜೊತೆಗೆ ವೇದಾಂತವು, ಅದರ ಜೊತೆಗೆ ಒಂದು ಸುಂದರವಾದ ಪುಳಕವನ್ನು ನೀಡುವಂತಹ ತಾತ್ಪರ್ಯವೂ ಇರುತ್ತದೆ. ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿ ಬರುವ ಎಷ್ಟೋ ಸಣ್ಣಪುಟ್ಟ ಕಥೆಗಳು ನಮಗೆ ಗೊತ್ತೇ ಇರುವುದಿಲ್ಲ. ಅಂತಹ ಒಂದು ಮಹಾಭಾರತದ ಕಥೆ ಇದು.
ಪಾಂಡವರ ಹನ್ನೆರಡು ವರ್ಷಗಳ ವನವಾಸ ಒಂದು ವರ್ಷದ ಅಜ್ಞಾತವಾಸ ಅಂತ್ಯವಾಗಿ ತಮಗೆ ನ್ಯಾಯಯುತವಾಗಿ ದಕ್ಕಬೇಕಾದ ಇಂದ್ರಪ್ರಸ್ಥ ವನ್ನು ಪುನಃ ಕೇಳಲು ಹಸ್ತಿನಾವತಿಯಲ್ಲಿರುವ ದುರ್ಯೋಧನನಿಗೆ ಹೇಳಿಕಳುಹಿಸುತ್ತಾರೆ. ಆದರೆ ಇದನ್ನು ನಿರಾಕರಿಸಿದ ದುರ್ಯೋಧನ, ಯುದ್ಧವೇ ಬೇಕೆಂದು ಹಠ ಹಿಡಿಯುತ್ತಾನೆ. ಶ್ರೀಕೃಷ್ಣನು ಸಂಧಾನಕ್ಕಾಗಿ ಹೋಗುತ್ತಾನೆ, ಆ ಸಂಧಾನ ಫಲಪ್ರದವಾಗದೆ, ದುರ್ಯೋಧನನ ದುಷ್ಟಾಲೋಚನೆಗೆ ಜಯವಾಗುತ್ತದೆ.
ನಂತರ ಯುದ್ಧಕ್ಕೆ ಎಲ್ಲರೂ ಸನ್ನದ್ಧರಾಗಬೇಕಾಗುತ್ತದೆ. ಆಗ ದುರ್ಯೋಧನ ಮತ್ತು ಅರ್ಜುನ ಯುದ್ಧಕ್ಕೆ ಸಹಾಯ ಹಸ್ತಚಾಚಿ ಶ್ರೀಕೃಷ್ಣನ ಕಾಣಲು ದ್ವಾರಕೆಗೆ ಹೋಗುತ್ತಾರೆ.ಶ್ರೀಕೃಷ್ಣನು ಅರ್ಜುನ ಮತ್ತು ದುರ್ಯೋಧನರಿಗೆ ಎರಡು ಆಯ್ಕೆ ಇಡುತ್ತಾನೆ. ತನ್ನ ಬೃಹತ್ ಯಾದವೀ ಸೈನ್ಯವನ್ನು ಒಂದು ಕಡೆಯಾದರೆ, ಇನ್ನೊಂದು ಕಡೆ ಸ್ವತಃ ತನ್ನನ್ನು , ಅಂದರೆ ನಿಶಸ್ತ್ರಧಾರಿಯಾಗಿ (ಯಾವುದೇ ಅಸ್ತ್ರ, ಆಯುಧ, ಶಸ್ತ್ರಗಳನ್ನು ಮುಟ್ಟದೆ) ಯುದ್ಧದಲ್ಲಿ ಯೋಧನಾಗದೆ ಉಳಿಯುತ್ತೇನೆ ಎಂದು ಹೇಳುತ್ತಾನೆ.
ನಿಶಸ್ತ್ರಧಾರಿಯಾದ ಕೃಷ್ಣನನ್ನು ತಮ್ಮ ಬಳಿ ತೆಗೆದುಕೊಂಡು ಮಾಡುವುದೇನು? ಅವನು ಯಾವುದಕ್ಕೆ ಉಪಯೋಗವಾಗಬಲ್ಲ ? ಎಂದು ಯೋಚಿಸಿದ ದುರ್ಯೋಧನ, ಶ್ರೀಕೃಷ್ಣನ ಅಕ್ಷೋಹಿಣಿ ಸೈನ್ಯವನ್ನೇ ಕೇಳುತ್ತಾನೆ. ಅರ್ಜುನ, ಸೈನ್ಯ ಇಲ್ಲದಿದ್ದರೆ ಬೇಡ ಕೃಷ್ಣ, ನೀನು ಬೇಕು ನಮಗೆ ಎಂದು ಶ್ರೀಕೃಷ್ಣನನ್ನ ಯಾಚಿಸುತ್ತಾನೆ.
ದುರ್ಯೋಧನ ಶ್ರೀಕೃಷ್ಣನ ಅಕ್ಷೋಹಿಣಿ ಸೈನ್ಯವನ್ನ ತೆಗೆದುಕೊಂಡು ಹೋದ ಮೇಲೆ, ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: “ಅರ್ಜುನ, ನೀನು ತಿಳಿದೋ ತಿಳಿಯದೆಯೋ ಸೈನ್ಯವನ್ನು ಬಿಟ್ಟು ನಿಶಸ್ತ್ರ ಧಾರಿಯಾದ ನನ್ನನ್ನು ಆಯ್ಕೆ ಮಾಡಿಕೊಂಡಿರುವೆ. ಆದರೆ ನಾನು ಯುದ್ಧದ ಯಾವುದೇ ಸಂದರ್ಭದಲ್ಲಿ ಕೂಡ ಆಯುಧವನ್ನು ಕೈಗೆ ಎತ್ತಿಕೊಳ್ಳಲಾರೆ” ಎಂದು ಸ್ಪಷ್ಟವಾಗಿ ಹೇಳುತ್ತಾನೆ.
ಆದರೂ ಧರ್ಮರಾಯನ ಆಜ್ಞೆಯಂತೆ ಅರ್ಜುನ, “ನೀನು ಶಸ್ತ್ರವನ್ನು ಮುಟ್ಟದೆ ಇದ್ದರೂ ನೀನೇ ನಮ್ಮ ಕಡೆಗೆ ನಿಲ್ಲಬೇಕು. ಆವಾಗಲೇ ಧರ್ಮ ನಮ್ಮೆಡೆಗಿದ್ದಂತೆ. ಧರ್ಮ ಯಾವತ್ತಿಗೂ ವಿಜಯ ಸಾಧಿಸುತ್ತದೆ” ಎಂದು ಅರ್ಜುನ ಹೇಳುತ್ತಾನೆ. ನೆನಪಿರಲಿ, ಶ್ರೀಕೃಷ್ಣನದು ಶಪಥ, ಅವನು ಭಾಷೆ ಕೊಟ್ಟಿದ್ದಾನೆ, ನಾನು ಅಸ್ತ್ರ-ಶಸ್ತ್ರ ಮುಟ್ಟುವುದಿಲ್ಲವೆಂದು.
ಇತ್ತ ಭೀಷ್ಮನು(Bhishma’s Pledge) ಕೌರವ ಪಾಳ್ಯದಲ್ಲಿ ಎಂಥಾ ಘೋರ ಯುದ್ಧ ಮಾಡುತ್ತಾನೆ ಎಂದರೆ, ಪಾಂಡವರ ಸೈನ್ಯವೆಲ್ಲಾ ಕಂಗಾಲಾಗಿ ಓಡುತ್ತದೆ, ಸಾವಿರಾರು ಜನ ಹತರಾಗುತ್ತಾರೆ ಪಾಂಡವರ ಸೈನ್ಯದಲ್ಲಿ. ಇದನ್ನು ಕಂಡ ಶ್ರೀಕೃಷ್ಣ ಸುಮ್ಮನೆ ನಿಂತಿರುತ್ತಾನೆ ಹೊರತು ಅಸ್ತ್ರ ಶಸ್ತ್ರಗಳನ್ನು ಮುಟ್ಟುವುದಿಲ್ಲ. ಆದರೆ ದಿನವೂ ಯುದ್ಧ ಮುಗಿದ ನಂತರ ದುರ್ಯೋಧನ ಬಂದು ಭೀಷ್ಮನಿಗೆ ಹಿಯಾಳಿಸುತ್ತಿರುತ್ತಾನೆ.
“ನೀನು ಪಾಂಡವ ಪಕ್ಷಪಾತಿ. ನೀನು ಸರಿಯಾಗಿ ಯುದ್ಧ ಮಾಡುತ್ತಿಲ್ಲ, ನಿನ್ನ ಸಾಮರ್ಥ್ಯಕ್ಕೆ ತಕ್ಕನಾಗಿ ಯುದ್ಧ ಮಾಡಲು ಮನಸ್ಸು ಮಾಡುತ್ತಿಲ್ಲ ಆದ್ದರಿಂದ ನಮಗೆ ಜಯ ದಕ್ಕುತ್ತಲೇ ಇಲ್ಲ. ಪಾಂಡವರಿಗೆ ನೀನು ಯಾವುದೇ ಹಾನಿಯನ್ನು ಮಾಡುತ್ತಿಲ್ಲ” ಎಂದು ಪದೇ ಪದೇ ಪಿತಾಮಹನನ್ನು ಚುಚ್ಚುತಿರುತ್ತಾನೆ. ಇದರಿಂದ ಬೇಸರಗೊಂಡು ಭೀಷ್ಮ ಒಂದು ಪ್ರತಿಜ್ಞೆ ಮಾಡುತ್ತಾನೆ: “ದುರ್ಯೋಧನ, ನಾನು ಎಷ್ಟೇ ಸಾಮರ್ಥ್ಯ ಉಪಯೋಗಿಸಿ ಯುದ್ಧ ಮಾಡಿದರೂ ನಿನಗೆ ಸಮಾಧಾನವಿಲ್ಲ. ಆದರೆ ಒಂದು ಮಾತನ್ನು ಹೇಳುತ್ತೇನೆ ಕೇಳು.
ಅದು ಎಂಥಾ ಸಂದರ್ಭವೇ ಬರಲಿ, ಯಾವುದೇ ಸನ್ನಿವೇಶ ಎದುರಾಗಲಿ ಶಸ್ತ್ರವನ್ನು ಮುಟ್ಟಲ್ಲ ಎಂದ ಭಗವಾನ್ ಶ್ರೀಕೃಷ್ಣನೇ ಶಸ್ತ್ರವನ್ನು ಮುಟ್ಟಿ ನನ್ನೊಂದಿಗೆ ಯುದ್ಧ ಮಾಡುವಂತೆ ನಾಳೆಯಿಂದ ಯುದ್ಧ ಮಾಡುತ್ತೇನೆ” ಎಂದು ಹೇಳುತ್ತಾನೆ.
ಆ ದಿನ ಮುಗಿದು, ಮಾರನೆಯ ದಿನ ಯುದ್ಧ ಆರಂಭವಾಗುತ್ತದೆ.
ಭೀಷ್ಮ ರಣಾಂಗಣವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತಾನೆ. ಶತ್ರು ಪಾಳೆಯದ ಸೈನಿಕರನ್ನು ಸಹಸ್ರಾರು ಸಂಖ್ಯೆಯಲ್ಲಿ ಸಾಯಿಸುತ್ತಾನೆ. ಒಂದೇ ದಿನ 10,000 ಸಂಖ್ಯೆಯಲ್ಲಿ ಪಾಂಡವಪಡೆ ಅಸುನೀಗುತ್ತದೆ. ಆ ಯುದ್ಧಭೂಮಿಯಲ್ಲಿ ಭೀಷ್ಮ ಅರ್ಜುನನಿಗೆ ಅವಿರತ ಬಾಣಗಳನ್ನು ಬಿಡುತ್ತಿರುತ್ತಾನೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಾಂಡವರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಆದರೂ ಭೀಷ್ಮ ರುದ್ರಭಯಂಕರ ಯುದ್ದ ಮಾಡುತ್ತಲಿರುತ್ತಾನೆ ,ಭೀಕರ ಕಾಳಗ ಮುಂದುವರೆಸುತ್ತಾನೆ. ಅವನ ಬಾಣಗಳ ಸುರಿಮಳೆಯಿಂದ ಪಾಂಡವರ ಸೈನ್ಯವನ್ನು ವಿಚಲಿತ ಮಾಡುತ್ತಿರುತ್ತಾನೆ. ಅದೇ ಸಂದರ್ಭದಲ್ಲಿ ಭೀಷ್ಮ ಸತತವಾಗಿ ಬಾಣಗಳನ್ನು ಕೃಷ್ಣನ ಎದೆಗೆ ಹೊಡೆಯುತ್ತಾನೆ.
ಅದರಿಂದ ಗಾಯಗೊಂಡ ಪಾರ್ಥಸಾರಥಿ ಕೃಷ್ಣ ರೋಷಾವೇಶದಿಂದ ತಾನು ನಿಂತ ರಥದಿಂದ ಕೆಳಗಿಳಿದು; ರಥದ ಚಕ್ರವನ್ನೇ ಎರಡೂ ಕೈಯಲ್ಲಿ ಹಿಡಿದು, ಭೀಷ್ಮನನ್ನು ಕೊಂದೇ ಬಿಡುವನೋ ಏನೊ ಎನ್ನುವಂತೆ ಭೀಷ್ಮನ ಎದುರಿಗೇ ಬಂದು ಭೀಷ್ಮನನಿಗೆ ರಥದ ಚಕ್ರವನ್ನು ಎಸೆಯಲು ಮುಂದಾಗುತ್ತಾನೆ. ಅಷ್ಟರಲ್ಲಿ ಭೀಷ್ಮ ತನ್ನ ಕೈಯಲ್ಲಿರುವ ಆಯುಧವನ್ನು ಕೆಳಗಿಟ್ಟು, ಪೂಜ್ಯ ಭಾವದಿಂದ ಕೃಷ್ಣನಲ್ಲಿಗೆ ಬಂದು ಅವನ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾನೆ ಮತ್ತು ಹೇಳುತ್ತಾನೆ.(Bhishma’s Pledge)
“ದೇವ, ನೀನು ಅದೆಷ್ಟು ಕರುಣಾಮಯಿ! ಶಸ್ತ್ರವನ್ನೇ ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೂ ಕೂಡ, ನಿನ್ನ ಈ ಶಿಷ್ಯನು ದುರ್ಯೋಧನನಿಗೆ ಮಾಡಿದ ಪ್ರತಿಜ್ಞೆಯನ್ನು ಉಳಿಸುವ ಸಲುವಾಗಿ ನಿನ್ನ ಪ್ರತಿಜ್ಞೆ ಮುರಿದು ನನ್ನ ಪ್ರತಿಜ್ಞೆಯನ್ನು ಉಳಿಸಿರುವೆ. ನೀನು ಶಸ್ತ್ರ ಮುಟ್ಟುವಂತೆ ಯುದ್ಧ ಮಾಡುತ್ತೇನೆ ಎಂದು ನಾನು ದುರ್ಯೋಧನನಿಗೆ ಕೊಟ್ಟ ಮಾತನ್ನು ನೀನು ಉಳಿಸಿಕೊಟ್ಟಿರುವೆ. ಇಂದಿಗೆ ನನ್ನ ಜನ್ಮ ಸಾರ್ಥಕವಾಯಿತು, ನಿನ್ನ ವಿಶ್ವರೂಪವನ್ನು ತೋರಿ
ಇನ್ನು ನನಗೆ ಮೋಕ್ಷದ ಪಥವನ್ನು ಕರುಣಿಸು.
ಎಂದು ಭೀಷ್ಮ ಭಕ್ತಿಯಿಂದ ಭಾವಪರವಶನಾಗುತ್ತಾನೆ.
ಶ್ರೀಕೃಷ್ಣ ಆಶೀರ್ವದಿಸಿ ಹಿಂತಿರುಗಿ ರಥವೇರಿ ಸಾರಥಿಯಾಗಿ ಎದುರುನಿಂತು ಮುಗುಳ್ನಗುತ್ತಾನೆ..
ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ । ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥
