ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್
Maharshi Valmiki: ಮನುಜ ಜೀವನವೆಂದರೆ ಒಂದು ಅನಂತ ಯಾತ್ರೆ. ಜನನದಿಂದ ಮರಣದವರೆಗೆ ಸಾಗುವ ಈ ಪಥದಲ್ಲಿ ಎಷ್ಟು ತಿರುವುಗಳು, ಎಷ್ಟು ಹಾದಿಗಳು, ಎಷ್ಟು ಪಾತಕ-ಪುನ್ಯಗಳ ಕಥೆಗಳಿವೆ! ಆ ಹಾದಿಗಳಲ್ಲಿ ಕೆಲವರದು ಕತ್ತಲೆಯ ನೆರಳು, ಕೆಲವರದು ಬೆಳಕಿನ ಹೊಳಪು. ಆದರೆ ಕೆಲವರ ಜೀವನವೇ ಒಂದು ಅಸಾಧಾರಣ ಪರಿವರ್ತನೆಯ ಸಾಕ್ಷಿ. ಕತ್ತಲೆಯ ಅಂಧಕಾರದಿಂದ ಬೆಳಕಿನ ಶಿಖರಕ್ಕೆ ಏರಿದ ಅಂತಹ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ಮಹರ್ಷಿ ವಾಲ್ಮೀಕಿ.
ಇಂದು ನಾವು ಅವರನ್ನು ಆದಿ ಕವಿ ಎಂದು ಸ್ತುತಿಸುತ್ತೇವೆ. ಅವರ ಕಾವ್ಯವೇ ಆದಿ ಮಹಾಕಾವ್ಯ — ರಾಮಾಯಣ. ಆದರೆ ನೀವು ತಿಳಿದಿದ್ದೀರಾ? ಈ ಆದಿಕವಿಯ ಪೂರ್ವಾಶ್ರಮದ ಹೆಸರು ರತ್ನಾಕರ, ವೃತ್ತಿಯೇ ದರೋಡೆಗಾರ ! ಕಾಡಿನಲ್ಲಿ ಹಾದು ಹೋಗುವ ಯಾತ್ರಿಕರನ್ನು, ಬೇಟೆಗೆ ಬರುವವರನ್ನು, ನಿರಪರಾಧಿಗಳನ್ನು ದೋಚಿ ಕುಟುಂಬವನ್ನು ನಡೆಸುತ್ತಿದ್ದ ಕಳ್ಳ. ಇಂತಹವನೊಬ್ಬನು ಏನೆಂಬ ಪರಿವರ್ತನೆ ಕಂಡನು? ಯಾವ ಶಕ್ತಿ ಅವನ ಹೃದಯವನ್ನು ಕರಗಿಸಿತು? ಹೇಗೆ ಅವನು ಲೋಕಕವಿಯಾದನು? ಇದೇ ಕಥೆ.
ರತ್ನಾಕರ ಕತ್ತಲೆಯ ಜೀವನ
ದೂರದ ಕಾಡಿನ ಅಂಗಳದಲ್ಲಿ, ಒಂದು ಮನೆತನದಲ್ಲಿ ಜನಿಸಿದ ಬಾಲಕ ರತ್ನಾಕರ. ಜನನವೇ ಶ್ರೇಷ್ಠ, ಆದರೆ ಪರಿಸ್ಥಿತಿಗಳೆಂಬ ಪ್ರವಾಹ ಅವನನ್ನು ಬೇರೆ ಹಾದಿಯತ್ತ ಎಳೆದವು. ಬಡತನ, ಹಸಿವು, ಬದುಕು ಸಾಗಿಸುವ ಸಂಕಷ್ಟ ಇವೆಲ್ಲವು ಅವನ ಹೃದಯವನ್ನು ಕಠಿಣಗೊಳಿಸಿದವು. ಕೊನೆಗೆ ಅವನು ಬದುಕಿಗಾಗಿ ಬೇಡತನ, ಅಂದರೆ ಬೇಟೆಗಾರಿಕೆಯ ದಾರಿಯನ್ನು ಹಿಡಿದ.
ಆದರೆ ಬೇಟೆಯೊಂದಿಗೆ ಮಾತ್ರ ಜೀವನ ಸಾಗಲಿಲ್ಲ. ಮಳೆ ಬರದ ದಿನಗಳಲ್ಲಿ ಆಹಾರ ಸಿಗಲಿಲ್ಲ. ಹೆಂಡತಿ ಮತ್ತು ಮಕ್ಕಳ ಹಸಿವು ಅವನ ಹೃದಯವನ್ನು ಕವಿದುಕೊಂಡಿತು. ಆಗ ಅವನು ಬೇರೊಂದು ಮಾರ್ಗ ಹಿಡಿದನು ದರೋಡೆಗಾರನ ಹಾದಿ. ಕಾಡಿನ ದಾರಿಯಲ್ಲಿ ಹೋಗುವ ಯಾತ್ರಿಕರನ್ನು ತಡೆದು, ಅವರ ಹಣ, ಆಹಾರ, ಆಭರಣ ಏನಿದ್ದರೂ ದೋಚುತ್ತಿದ್ದನು. ಅವನ ಕತ್ತಿಯ ಚುರುಕು, ಬಾಣದ ಗುರಿ ಅತಿದೊಡ್ಡ ಯೋಧರನ್ನೇ ಬೆಚ್ಚಿಬೀಳಿಸುತ್ತಿತ್ತು.
ಈ ದಾರಿಯಲ್ಲೇ ಅವನು ಅಷ್ಟು ಕ್ರೂರನಾದನು, ತನ್ನ ತಪ್ಪುಗಳು ತಪ್ಪು ಎಂದುಕೊಂಡೇ ಇಲ್ಲ. ತನ್ನ ಕುಟುಂಬಕ್ಕಾಗಿ ಮಾಡುತ್ತಿದ್ದೇನೆಂಬ ತೃಪ್ತಿಯೇ ಅವನಿಗೆ ಧರ್ಮವೆನಿಸಿತ್ತು. ಆದರೆ ಒಮ್ಮೆ, ಅವನ ಜೀವನದಲ್ಲಿ ಅಸಾಧಾರಣ ತಿರುವು ಬಂತು.
ನಾರದಮುನಿಯ ಭೇಟಿಯ ಅಲೌಕಿಕ ಕ್ಷಣ
ಒಂದು ದಿನ, ಕಾಡಿನ ದಾರಿಯಲ್ಲಿ ಮಹರ್ಷಿ ನಾರದ ನಡೆದು ಬರುತ್ತಿದ್ದರು. ಕೈಯಲ್ಲಿ ವೀಣೆ, ತುಟಿಗಳಲ್ಲಿ “ನಾರಾಯಣ, ನಾರಾಯಣ” ಎಂಬ ಮಧುರ ಜಪ. ರತ್ನಾಕರ ಎಂದಿನಂತೆ ಅವರನ್ನೂ ತಡೆದು ನಿಲ್ಲಿಸಿದ.
“ಏ ಸನ್ಯಾಸೀ! ನಿನ್ನ ಹತ್ತಿರ ಏನಿದೆ? ನಿನ್ನ ಸಂಪತ್ತು ನನಗೆ ಬೇಕು!” ಎಂದು ಕೋಪದಿಂದ ಕೂಗಿದ.
ಆದರೆ ನಾರದನು ಚಿಂತೆಯಿಲ್ಲದೆ ನಕ್ಕರು. “ರತ್ನಾಕರ, ನಿನಗೆ ಈ ಪಾಪದ ಫಲ ನಿನ್ನೊಬ್ಬನಿಗೆ ಮಾತ್ರವಲ್ಲ, ನಿನ್ನ ಕುಟುಂಬಕ್ಕೂ ಬರುತ್ತದೆ. ಆದರೆ ಹೇಳು — ನೀನು ದರೋಡೆ ಮಾಡುವುದು ನಿನ್ನ ಹೆಂಡತಿ ಮತ್ತು ಮಕ್ಕಳ ಹಸಿವಿಗಾಗಿ. ಅವರು ನಿನ್ನ ಪಾಪದಲ್ಲಿ ಪಾಲುದಾರರಾಗುತ್ತಾರೆಯೇ?” ಎಂದು ಶಾಂತವಾಗಿ ಕೇಳಿದರು.
ರತ್ನಾಕರ ಕ್ಷಣಕಾಲ ಗಾಬರಿಯಾದ. “ಖಂಡಿತಾ, ಅವರು ನನ್ನ ತಪ್ಪುಗಳಲ್ಲಿ ಪಾಲು ತಾಳುತ್ತಾರೆ. ನಾನು ಅವರಿಗೋಸ್ಕರ ಬದುಕುತ್ತಿದ್ದೇನೆ ಅಲ್ವೇ!” ಎಂದು ಉತ್ತರಿಸಿದ.
ನಾರದನು ಸಿಹಿಯಾದ ನಗುಚುಂದಿದರು. “ಹೋಗಿ ಕೇಳು. ನಿನ್ನ ಹೆಂಡತಿ, ಮಕ್ಕಳು ನಿನ್ನ ಪಾಪವನ್ನು ತಮ್ಮ ಮೇಲಿದೆ ಎಂದು ಹೇಳುತ್ತಾರೆಯೇ ಎಂದು ವಿಚಾರಿಸು.”
ರತ್ನಾಕರ ಗರ್ವದಿಂದಲೇ ಹೋದ. ಹೆಂಡತಿಯನ್ನು, ಮಕ್ಕಳನ್ನು, ತಾಯಿಯನ್ನು ವಿಚಾರಿಸಿದ. ಆದರೆ ಉತ್ತರ ಕಠಿಣವಾಗಿತ್ತು “ಪಾಪ ನಿನ್ನದು. ನಾವು ಹಸಿವುಗಾಗಿ ತಿನ್ನುತ್ತೇವೆ, ಆದರೆ ಅದರ ಹೊಣೆಗಾರಿಕೆ ನಿನ್ನದು.”
ಆ ಕ್ಷಣದಲ್ಲಿ ರತ್ನಾಕರನ ಹೃದಯವು ಭೇದವಾಯಿತು. ಅವನು ಬಿಲ್ಲು ಬಾಣಗಳನ್ನು ಎಸೆದುಬಿಟ್ಟು, ನಾರದನ ಪಾದಗಳಲ್ಲಿ ಬಿದ್ದು ಕಣ್ಣೀರಿಟ್ಟ. “ಮಹರ್ಷೇ! ನನ್ನನ್ನು ರಕ್ಷಿಸಿರಿ. ನಾನು ಹೇಗೆ ಪಾಪದಿಂದ ಶುದ್ಧನಾಗಲಿ?”
ನಾರದನು ಕರುಣೆಯಿಂದ ಹೇಳಿದರು: “ರಾಮನ ನಾಮವನ್ನು ಜಪಿಸು. ಆದರೆ ನಿನ್ನ ಬಾಯಲ್ಲಿ ‘ರಾಮ’ ಎಂಬುದು ಹೊರಬರುವುದಿಲ್ಲ. ಆದ್ದರಿಂದ ‘ಮಾರ, ಮಾರ’ ಎಂದು ಜಪಿಸು. ಅದು ಕಾಲಕ್ರಮೇಣ ‘ರಾಮ’ವಾಗುತ್ತದೆ.”
ತಪಸ್ಸಿನ ಅಗಾಧ ಸಮುದ್ರ
ರತ್ನಾಕರ ನಾರದನ ಮಾತುಗಳನ್ನು ಹೃದಯದಲ್ಲಿ ದೀಪವನ್ನಂತೆ ಹಿಡಿದುಕೊಂಡ. ಒಂದು ಮರದ ಕೆಳಗೆ ಕೂತು “ಮಾರ, ಮಾರ” ಎಂದು ಜಪವನ್ನು ಪ್ರಾರಂಭಿಸಿದ. ದಿನ, ತಿಂಗಳು, ವರ್ಷಗಳು ಕಳೆದವು. ಅವನು ಅಲ್ಲಿಂದಲೇ ಎದ್ದು ಹೋಗಲಿಲ್ಲ.
ಸಮಯ ಎಷ್ಟೇ ಕಳೆದರೂ ಅವನು ಕಣ್ಣನ್ನು ತೆರೆಯಲಿಲ್ಲ. ಅವನ ಸುತ್ತಲೂ ಇರುವೆಗಳು ಗುಡ್ಡ ಕಟ್ಟಿ, ದಿಬ್ಬ ಬಿದ್ದುಬಿಟ್ಟವು. ಅವನು ಆ ಇರುವೆ ಗುಡ್ಡದಲ್ಲೇ ಕುಳಿತಿದ್ದನು. ವರ್ಷಗಳ ತಪಸ್ಸಿನ ನಂತರ, ನಾರದರು ಮತ್ತೊಮ್ಮೆ ಬಂದು ಅವನ ಕಣ್ಣು ತೆರೆದರು.
“ಋಷಿಯೇ! ನೀನು ಇರುವೆ ಹುತ್ತದೊಳಗೇ ತಪಸ್ಸು ಮಾಡಿಕೊಂಡಿದ್ದೀ. ಆದ್ದರಿಂದ ಇಂದಿನಿಂದ ನೀನು ವಾಲ್ಮೀಕಿ. ಲೋಕವು ನಿನ್ನನ್ನು ಇದೇ ಹೆಸರಿನಲ್ಲಿ ಸ್ತುತಿಸಲಿದೆ.”
ಇಂತಹುದೇ ಅವನ ಪರಿವರ್ತನೆ — ರತ್ನಾಕರ ದರೋಡೆಗಾರನಿಂದ ಮಹರ್ಷಿ ವಾಲ್ಮೀಕಿಯಾದ ಕ್ಷಣ.
ಕ್ರೌಂಚಪಕ್ಷಿಗಳ ಪ್ರಸಂಗ — ಆದಿಶ್ಲೋಕ ಜನನ
ಒಮ್ಮೆ, ಶಿಷ್ಯನಾದ ಭಾರದ್ವಾಜನೊಂದಿಗೆ ವಾಲ್ಮೀಕಿ ಮಹರ್ಷಿ ತಮಸಾ ನದಿಯ ತೀರಕ್ಕೆ ತೆರಳಿದರು. ಅಲ್ಲಿ ನೀರಿನ ಸ್ವಚ್ಛತೆಯನ್ನು ಕಂಡು ಸಂತೋಷಪಟ್ಟರು. ಆಗ ಅವರ ಕಣ್ಣಿಗೆ ಒಬ್ಬರನ್ನೊಬ್ಬರು ಪ್ರೀತಿಯಿಂದ ತಬ್ಬಿಕೊಂಡು ಹಾರಾಡುತ್ತಿದ್ದ ಕ್ರೌಂಚಪಕ್ಷಿಗಳ ಜೋಡಿ ಕಣ್ಣಿಗೆ ಬಿದ್ದಿತು.
ಅವರ ಸಂತೋಷವನ್ನು ಕಣ್ಣಾರೆ ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆ ಬೇಟೆಗಾರನೊಬ್ಬ ಬಂದು ಗಂಡು ಹಕ್ಕಿಯನ್ನು ಬಾಣದಿಂದ ಹೊಡೆದನು. ಆ ಪಕ್ಷಿ ನೆಲಕ್ಕೆ ಬಿದ್ದು ಸತ್ತಿತು. ಅದರ ಸಂಗಾತಿ ದುಃಖದಿಂದ ಕೂಗುತ್ತಾ ನೆಲಕ್ಕೇ ಬಿದ್ದು ಹೋಯಿತು.
ಈ ದೃಶ್ಯವು ವಾಲ್ಮೀಕಿಯ ಹೃದಯವನ್ನು ಹೊಡೆದಿತು. ಅವರ ಬಾಯಿಂದ ಕೋಪ-ದುಃಖಗಳಿಂದ ಕೂಡಿದ ಒಂದು ದ್ವಿಪದಿ ಸ್ವಯಂ ಹೊರಬಂತು:
“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ।
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್॥”
ಅದು ಸಂಸ್ಕೃತ ಸಾಹಿತ್ಯದ ಮೊದಲ ಶ್ಲೋಕ. ಕಾವ್ಯದ ಮೊದಲ ಬೀಜ. ಆಗಲೇ ಬ್ರಹ್ಮದೇವರು ಪ್ರತ್ಯಕ್ಷವಾಗಿ ಹೇಳಿದರು:
“ಋಷಿಯೇ, ನೀನು ಈ ಛಂದಸ್ಸಿನಲ್ಲಿ ರಾಮನ ಕತೆಯನ್ನು ಬರೆಯು. ಇಡೀ ಲೋಕದ ಮೊದಲ ಮಹಾಕಾವ್ಯ ನಿನ್ನ ಮೂಲಕ ಬರಲಿದೆ.”
ರಾಮಾಯಣ — ಆದಿ ಮಹಾಕಾವ್ಯ
ಹೀಗೆ ವಾಲ್ಮೀಕಿಯು ತನ್ನ ಕಾವ್ಯಯಾತ್ರೆಯನ್ನು ಪ್ರಾರಂಭಿಸಿದರು. ರಾಮನ ಜೀವನ, ಅವನ ಸತ್ಯ, ಧರ್ಮ, ಧೈರ್ಯ, ತ್ಯಾಗ, ಸೀತೆಯ ಪಾವಿತ್ರ್ಯ, ಭಕ್ತ ಹನುಮಂತನ ಶೌರ್ಯ — ಇವೆಲ್ಲವನ್ನು ಕಾವ್ಯರೂಪದಲ್ಲಿ ಕಟ್ಟಿದರು.
ಏಳು ಕಂಡಗಳಲ್ಲಿ, ಇಪ್ಪತ್ತ್ನಾಲ್ಕು ಸಾವಿರ ಶ್ಲೋಕಗಳಲ್ಲಿ ಕಟ್ಟಿದ ಈ ಕೃತಿ ರಾಮಾಯಣ. ಅದು ಕೇವಲ ಕಥೆ ಅಲ್ಲ ಅದು ಜೀವನದ ಮಾರ್ಗದರ್ಶಿ. ಸತ್ಯ-ಅಸತ್ಯ, ಧರ್ಮ-ಅಧರ್ಮ, ಪ್ರೀತಿ-ವೈರ, ಕುಟುಂಬ-ರಾಜಕೀಯ ಎಲ್ಲವನ್ನು ಒಳಗೊಂಡಿದೆ.
ರಾಮಾಯಣ ಪೂರ್ಣಗೊಂಡಾಗ, ಅದನ್ನು ಮೊದಲಾಗಿ ವಾಲ್ಮೀಕಿ(Maharshi Valmiki) ತನ್ನ ಶಿಷ್ಯರಾದ ಲವ ಮತ್ತು ಕುಶರಿಗೆ ಕಲಿಸಿದರು. ಇವರು ನಂತರ ಅಯೋಧ್ಯೆಯ ರಾಜಮನೆತನದಲ್ಲೇ ರಾಮನ ಮುಂದೆ ಕಾವ್ಯವನ್ನು ಗಾಯನಮಾಡಿದರು. ತನ್ನ ಮಕ್ಕಳೇ ರಾಮನ ಮಕ್ಕಳಾಗಿದ್ದಾರೆ ಎಂಬ ಅಚ್ಚರಿ ಸತ್ಯವನ್ನೂ ಅಲ್ಲಿ ತಿಳಿದುಕೊಳ್ಳಬಹುದು.
ಮಹರ್ಷಿಯ ಜೀವನದ ಸಂದೇಶ
ವಾಲ್ಮೀಕಿ ಎಂದರೆ ಕೇವಲ ಕವಿ ಅಲ್ಲ, ಪರಿವರ್ತನೆಯ ಪ್ರತೀಕ. ದರೋಡೆಗಾರನೂ ಒಮ್ಮೆ ಸಜ್ಜನನಾಗಬಹುದು, ಕತ್ತಲೆಯಲ್ಲಿದ್ದವನೂ ಬೆಳಕಿನ ದಾರಿ ಹಿಡಿಯಬಹುದು ಎಂಬುದನ್ನು ಅವರು ತೋರಿಸಿದರು.
ಅವರ ಜೀವನವು “ಯಾರು ಹುಟ್ಟಿನಿಂದಲೇ ಪಾಪಿ ಅಲ್ಲ; ಸತ್ಯದ ದಾರಿ ಹಿಡಿದರೆ ಯಾರು ಬೇಕಾದರೂ ಮಹರ್ಷಿಯಾಗಬಹುದು” ಎಂಬ ಸಂದೇಶ ನೀಡುತ್ತದೆ.
ವಾಲ್ಮೀಕಿಯ ಆರಾಧನೆ(Maharshi Valmiki)
ಇಂದಿಗೂ ದೇಶದ ಹಲವೆಡೆ ವಾಲ್ಮೀಕಿಯ ಆಶ್ರಮಗಳು, ಮಂದಿರಗಳು, ಜಯಂತಿ ಆಚರಣೆಗಳು ನಡೆಯುತ್ತಿವೆ. ಕರ್ನಾಟಕದ ರಾಜನಹಳ್ಳಿ, ತಮಿಳುನಾಡಿನ ತಿರುವನ್ಮಿಯೂರು, ನೇಪಾಳದ ಚಿತ್ವಾನ್ ಜಿಲ್ಲೆ — ಎಲ್ಲೆಡೆ ಅವರ ಪಾದಸ್ಪರ್ಶದ ನೆನಪು ಜೀವಂತವಾಗಿದೆ.
ಹಿಂದೂ ಪಂಚಾಂಗದ ಆಶ್ವಯುಜ ಮಾಸದ ಹುಣ್ಣಿಮೆಯ ದಿನವನ್ನು ವಾಲ್ಮೀಕಿ ಜಯಂತಿ ಎಂದು ಆಚರಿಸಲಾಗುತ್ತದೆ. ಅನೇಕರು ಅವರನ್ನು ತಮ್ಮ ಕುಲದೇವರಾಗಿ, ಗುರುವಾಗಿಯೂ ಆರಾಧಿಸುತ್ತಾರೆ.
ದರೋಡೆಗಾರನಾಗಿದ್ದ ರತ್ನಾಕರ, ಕತ್ತಲೆಯೊಳಗೆ ಮುಳುಗಿದ್ದವನಾಗಿದ್ದವನು, ನಾರದಮುನಿಯ ದಿವ್ಯೋಪದೇಶದಿಂದ ಮಹರ್ಷಿ ವಾಲ್ಮೀಕಿಯಾಗಿ ಹೊರಬಂದ. ಅವರ ತುಟಿಯಿಂದ ಹೊರಬಂದ “ಮಾ ನಿಷಾದ…” ಎಂಬ ಶ್ಲೋಕವೇ ಸಂಸ್ಕೃತ ಸಾಹಿತ್ಯದ ಆದಿ ಶ್ಲೋಕ. ಅವರ ಕಾವ್ಯವೇ ಮೊದಲ ಮಹಾಕಾವ್ಯ.
ಕಾವ್ಯ ವೃಕ್ಷದ ಮೇಲೆ ಕುಳಿತ ವಾಲ್ಮೀಕಿ ಕೋಕಿಲ, “ರಾಮ, ರಾಮ” ಎಂಬ ಮಧುರ ನಾದವನ್ನು ಕೂಗುತ್ತಾ ಇಡೀ ಜಗತ್ತಿಗೆ ಧರ್ಮದ ಮಾರ್ಗವನ್ನು ತೋರಿಸಿದನು. ಆ ಕೋಗಿಲೆಗೆ ನಮಿಸುತ್ತೇವೆ.
ಕಾಡು ಕತ್ತಲಲಿ ಕಳ್ಳನಾಗಿ ನಡೆದುಕೊಂಡ,
ರತ್ನಾಕರನೇ ನೀನು — ಪಾಪದ ಹಾದಿ ಹಿಡಿದು,
ನಾರದ ಮಂತ್ರದ ಸ್ಪರ್ಶವೊಂದು ಬಂದಾಗ,
“ಮಾರ” ಜಪವೇ “ರಾಮ” ನಾದವಾಯಿತು.
ಗೆದ್ದಲು ಹುಳುಗಳ ಹುತ್ತದೊಳಗೆ ಕುಳಿತು,
ತಪಸ್ಸಿನ ಜ್ವಾಲೆಯಲಿ ಕರಗಿ,
ಹೊಸ ಜನ್ಮ ಪಡೆದ ನೀನು —
ಆದಿಕವಿ, ಕಾವ್ಯದ ಕೋಕಿಲೆಯಾದೆ.
ಕ್ರೌಂಚ ಹಕ್ಕಿಯ ರೋದನ ಕಂಡ ಕಣ್ಣು,
ಶ್ಲೋಕವೊಂದು ಹರಿದುಬಂತು ತುಟಿಯಲಿ.
ಅಲ್ಲಿ ಹುಟ್ಟಿತು ಕಾವ್ಯದ ಮೊದಲ ಬೀಜ,
ಅಲ್ಲಿ ಅರಳಿತು ರಾಮಾಯಣದ ನಂದನವನ.
ಲವಕುಶರಿಗೆ ನೀನು ಬೋಧಿಸಿದ ಪಾಠ,
ರಾಮನ ಕಥೆ, ಸೀತೆಯ ದುಗುಡ,
ಅವನೇ ನಿನ್ನ ಕಾವ್ಯದ ಅಮೃತ.
ನಮೋ ನಮಃ, ವಾಲ್ಮೀಕಿ ಮುನೀಂದ್ರ!
ಪ್ರಸ್ತುತ ದಿನಕ್ಕೆ ವಾಲ್ಮೀಕಿಯ ಪ್ರಾಮುಖ್ಯತೆ
ಆದಿ ಕವಿ ವಾಲ್ಮೀಕಿಯವರು(Maharshi Valmiki) ಕೇವಲ ಪುರಾಣದ ಪಾತ್ರವಲ್ಲ, ಅವರು ಮಾನವೀಯ ಮೌಲ್ಯಗಳ ಪ್ರತೀಕ. ಇಂದಿನ ಕಾಲದಲ್ಲಿ ಅವರ ಚಿಂತನೆಗಳು, ಕಾವ್ಯ, ಮತ್ತು ಜೀವನಪರಿವರ್ತನೆ ಅತ್ಯಂತ ಪ್ರಸ್ತುತವಾದದ್ದು. ಅರಣ್ಯದಲ್ಲಿ ಬದುಕುತ್ತಿದ್ದ ಬೇಡನೊಬ್ಬನು ಆತ್ಮಪರಿಶೀಲನೆಯಿಂದ ಆದಿಕವಿಯಾಗಿ ರೂಪಾಂತರಗೊಂಡದ್ದು ಮಾನವ ಜೀವನದ ಪರಿವರ್ತನೆಗೆ ನಿದರ್ಶನ. ಇಂದಿನ ಸಮಾಜದಲ್ಲಿ ಅಕ್ರಮ, ಅಸಹಿಷ್ಣುತೆ, ಹಿಂಸೆ ಮತ್ತು ಲೋಭ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವಾಲ್ಮೀಕಿಯವರ ಜೀವನ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ.
ವಾಲ್ಮೀಕಿಯವರ(Maharshi Valmiki) ರಾಮಾಯಣ ಕೇವಲ ಧಾರ್ಮಿಕ ಗ್ರಂಥವಲ್ಲ — ಅದು ಮಾನವೀಯ ಮೌಲ್ಯಗಳ ಪಾಠಶಾಲೆ. ರಾಮನ ಧರ್ಮನಿಷ್ಠೆ, ಸೀತೆಯ ತ್ಯಾಗ, ಲಕ್ಷ್ಮಣನ ಸೇವಾಭಾವ, ಭರತನ ಭಕ್ತಿ ಇವೆಲ್ಲವೂ ಇಂದು ಕುಟುಂಬ ಮತ್ತು ಸಮಾಜದಲ್ಲಿ ಅಗತ್ಯವಾದ ಗುಣಗಳಾಗಿವೆ. ವಾಲ್ಮೀಕಿಯ ರಾಮಾಯಣವು “ಸತ್ಯ”, “ಧರ್ಮ” ಮತ್ತು “ನೀತಿ”ಗಳ ಬೆಳಕನ್ನು ಹರಡುವ ಗ್ರಂಥ. ಇಂದಿನ ರಾಜಕೀಯದಿಂದ ಹಿಡಿದು ಸಾಮಾನ್ಯ ಜೀವನದವರೆಗೆ ಈ ಮೌಲ್ಯಗಳ ಕೊರತೆಯನ್ನು ನಾವು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ವಾಲ್ಮೀಕಿಯ ಉಪದೇಶಗಳು ಸಮಾಜಕ್ಕೆ ನೈತಿಕ ದಾರಿದೀಪವಾಗಬಹುದು.
ಮತ್ತೊಂದು ಅಂಶ ಎಂದರೆ ವಾಲ್ಮೀಕಿಯವರ(Maharshi Valmiki) ಕಾವ್ಯಪ್ರತಿಭೆ. ಅವರು ಪ್ರಥಮ ಕವಿ, ಅವರ ಕಾವ್ಯದಿಂದಲೇ ಸಂಸ್ಕೃತ ಸಾಹಿತ್ಯಕ್ಕೆ ಆಧಾರ ಸಿಕ್ಕಿತು. ಇಂದಿನ ಕವಿ, ಸಾಹಿತ್ಯಿಕ, ಪತ್ರಕರ್ತ ಅಥವಾ ಕಲಾವಿದರಿಗೆ ಅವರ ಕಾವ್ಯಪಥ ಒಂದು ಮಾದರಿ. ಮನಸ್ಸಿನ ನೋವು, ಸಮಾಜದ ವಾಸ್ತವಿಕತೆ, ಮತ್ತು ಆತ್ಮಜ್ಞಾನ ಇವೆಲ್ಲವನ್ನೂ ಅವರು ಕಾವ್ಯದಲ್ಲಿ ಮೇಳೈಸಿದರು. ಇಂದಿನ ಕಲೆ ಮತ್ತು ಸಾಹಿತ್ಯವು ವಾಣಿಜ್ಯೀಕರಣದ ದಾರಿಗೆ ಹೋಗುತ್ತಿರುವಾಗ, ವಾಲ್ಮೀಕಿಯವರ ಶುದ್ಧ ಸೃಜನಾತ್ಮಕತೆ ನಮಗೆ ನೈತಿಕ ದಿಕ್ಕನ್ನು ತೋರಿಸುತ್ತದೆ.
ಆದಿ ಕವಿ ವಾಲ್ಮೀಕಿಯವರು ನಮಗೆ ತಿಳಿಸಿದ ಮತ್ತೊಂದು ಮಹತ್ವದ ಪಾಠ “ಪರಿವರ್ತನೆ ಸಾಧ್ಯ” ಎಂಬುದು. ಒಬ್ಬ ಕ್ರೂರ ಬೇಡನಿಂದ ಒಬ್ಬ ಋಷಿಯಾಗುವ ಮಟ್ಟಿಗೆ ಅವರ ಜೀವನ ಪರಿವರ್ತಿತವಾಯಿತು. ಇಂದಿನ ಯುವ ಪೀಳಿಗೆಯು ತಪ್ಪು ಮಾರ್ಗದಿಂದ ಸತ್ಮಾರ್ಗಕ್ಕೆ ತಿರುಗಿಕೊಳ್ಳಲು ವಾಲ್ಮೀಕಿಯ ಉದಾಹರಣೆ ಅತ್ಯುತ್ತಮ. ಅವರ ಜೀವನ ಕಥೆ ಹೇಳುತ್ತದೆ ಜನ್ಮದಿಂದ ಯಾರೂ ಮಹಾನ್ ಆಗುವುದಿಲ್ಲ, ಆದರೆ ನಂಬಿಕೆ, ತಪಸ್ಸು, ಮತ್ತು ಸತ್ಯಸಂಧತೆಯಿಂದ ಯಾರಾದರೂ ಮಹಾನ್ ಆಗಬಹುದು.
ಇಂದಿನ ತಂತ್ರಜ್ಞಾನ ಮತ್ತು ವೇಗದ ಯುಗದಲ್ಲಿ ಮಾನವೀಯತೆ ನಿಧಾನವಾಗಿ ಕ್ಷೀಣಿಸುತ್ತಿರುವಂತೆಯೇ, ವಾಲ್ಮೀಕಿಯವರ ಆದರ್ಶಗಳು ಮಾನವನ ಮನಸ್ಸಿಗೆ ಶಾಂತಿ, ಶುದ್ಧತೆ ಮತ್ತು ನೈತಿಕತೆ ತುಂಬಬಲ್ಲವು. ಅವರ ಚಿಂತನೆಗಳು ಇಂದಿಗೂ ಜೀವಂತವಾಗಿದ್ದು, ಪ್ರತಿಯೊಬ್ಬ ಮಾನವನೊಳಗಿನ “ಬೇಡನ”ನ್ನು “ಕವಿಯಾಗಿ” ರೂಪಾಂತರಗೊಳಿಸುವ ಶಕ್ತಿ ಹೊಂದಿವೆ.
ಅದಕ್ಕಾಗಿ ವಾಲ್ಮೀಕಿಯವರು ಕೇವಲ ಇತಿಹಾಸದ ವ್ಯಕ್ತಿಯಲ್ಲ — ಇಂದಿನ ಕಾಲಕ್ಕೂ ಜೀವಂತ ಆದರ್ಶ. ಅವರ ಕಾವ್ಯವು ಕೇವಲ ಪಾಠವಲ್ಲ, ಅದು ಜೀವನದ ಮಾರ್ಗದರ್ಶಿ. ಸಮಾಜದಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಲಿ, ನೈತಿಕ ಬದುಕಿಗಾಗಲಿ, ಆತ್ಮಶೋಧನೆಗಾಗಲಿ ವಾಲ್ಮೀಕಿಯMaharshi Valmiki: ಚಿಂತನೆಗಳು ನಿತ್ಯ ಹೊಸ ಬೆಳಕಾಗಿವೆ.
~ಲಿಖಿತ್ ಹೊನ್ನಾಪುರ
