(ಪತ್ರ ಇಪ್ಪತ್ತೆಂಟು)ಮಗಳೇ,
Letters to Daughter: ನಿನ್ನ ಗೆಳತಿಯರೆಲ್ಲ ಒಂದಿಲ್ಲ ಒಂದು ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾರೆ, ನಿನಗೆ ಇನ್ನೂ ಯಾವುದೆಂದು ಸ್ಪಷ್ಟ ಪಡಿಸಿಕೊಳ್ಳಲಾಗುತ್ತಿಲ್ಲ ಅಂತ ಅಂದೆಯಲ್ಲ. ಈ ಗೊಂದಲ ಇದ್ದದ್ದೇ ಮತ್ತು ಇರಬೇಕಾದುದೇ. ಕೆಲವು ದಿನಗಳ ಹಿಂದಿನವರೆಗೂ ಫಾಷನ್ ಟೆಕ್ನಾಲಜಿ ಓದಬೇಕು ಅಂತಿದ್ದವಳು ಯಾಕೋ ಮನಸ್ಸು ಬದಲಾಯಿಸಿಕೊಂಡಿದ್ದೀಯಾ. ಇರಲಿ. ಯಾವುದಕ್ಕೂ ಬಲವಂತವೆ ಎಂಬುದಿಲ್ಲ. ನೀಟ್, ಜೆಇಇ ಬರೆಯುವುದಿಲ್ಲ ಅನ್ನುವುದನ್ನು ನೀನು ಖಡಾಖಂಡಿತವಾಗಿ ಹೇಳಿದ್ದೀಯ. ಸರಿಯೇ. ಅವೆರಡೇ ಫೀಲ್ಡ್ ಗಳಲ್ಲಿ ಭವಿಷ್ಯವಿರುವುದು ಅಂತನ್ನುವ ಭ್ರಮೆ ನಮಗ್ಯಾವತ್ತೂ ಇಲ್ಲ.
ನೀನು ಇಷ್ಟಪಟ್ಟು ಯಾವುದನ್ನು ಓದುವೆ ಅನ್ನುತ್ತೀಯೋ ಅದನ್ನು ಓದಿಸುವ ಹೊಣೆ ನಮ್ಮದು. ಯಾಕೆಂದರೆ ವಿದ್ಯೆಗೆ ಹೊರತಾದ ಯಾವ ಆಸ್ತಿಯನ್ನೂ ನಾವು ನಿಮಗೆ ಉಳಿಸಿಹೋಗಲಾಗುವುದಿಲ್ಲ. ನಮ್ಮ ಅಪ್ಪ ಹೇಳುತ್ತಿದ್ದುದೂ ಇದನ್ನೇ. ಮಕ್ಕಳು ಎಷ್ಟು ಓದುತ್ತಾರೋ ಅಷ್ಟು ಓದಿಸೋಣ ಎಂದು.
ಮಗಳೇ,(Letters to Daughter)ನಾವು ಚಿಕ್ಕವರಿದ್ದಾಗ ನಮಗಿದ್ದ ಆದರ್ಶ, ನಮ್ಮ ತಿಳುವಳಿಕೆ ಏನಿತ್ತೆಂದರೆ ಓದಿನಲ್ಲಿ ಚುರುಕಾಗಿರುವವರು ಶಿಕ್ಷಕರಾಗಬೇಕು ಎಂಬುದು. ಯಾಕೆಂದರೆ ವಿದ್ಯಾರ್ಥಿಗಳಿಗೆ ಕಲಿಸಬೇಕಾದರೆ ಕಲಿಸುವವರು ಜ್ಞಾನಭಂಡಾರವೇ ಆಗಿರಬೇಕಲ್ಲ! ಅದು ಕಲ್ಪನೆ ಮಾತ್ರವಲ್ಲ ಮಗೂ, ವಾಸ್ತವ ಕೂಡಾ. ತಾವು ಕಲಿತುಕೊಂಡು ಇತರರಿಗೆ ಕಲಿಸುವ ಕಲೆ ಎಲ್ಲರಿಗೂ ದಕ್ಕುವಂಥದ್ದಲ್ಲ. ಆದರೆ ಜಾಗತೀಕರಣದ ನಂತರ ಆಗಿರುವ ಬದಲಾವಣೆಗಳಲ್ಲಿ ಪ್ರಮುಖವಾದುದೆಂದರೆ ಜನ ಇಂಜಿನಿಯರಿಂಗ್ ಮತ್ತು ವೈದ್ಯಕೀಯದ ಕಡೆಗೆ ಆಕರ್ಷಿತರಾಗಿರುವುದು. ಅವೆರಡೇ ಕ್ಷೇತ್ರಕ್ಕೆ ಭವಿಷ್ಯವಿದೆ ಎಂದು ನಂಬಿರುವುದು. (Letters to Daughter)
ಮಗಳೇ(Letters to Daughter) ಬದುಕನ್ನು ಕಟ್ಟಿಕೊಳ್ಳುವ ಛಾತಿಯಿದ್ದವರಿಗೆ ಸಾವಿರದಾರಿಗಳಿವೆ. ನಮಗೆ ನಮ್ಮ ಸಾಮರ್ಥ್ಯವೇನು ಎಂಬುದು ಗೊತ್ತಿರಬೇಕು, ಅದನ್ನು ಮತ್ತಷ್ಟು ಸುದೃಢಗೊಳಿಸುವ ಬಗೆಯೇನು ಎಂಬುದರ ಎಚ್ಚರ, ಜ್ಞಾನವಿರಬೇಕು. ಅಷ್ಟಿದ್ದರೆ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವುದಕ್ಕೆ ಖಂಡಿತಾ ಸಾಧ್ಯ.
ನಿನ್ನ ಶಿಕ್ಷಣವನ್ನು ಮುಂದುವರಿಸುವ ಬಗೆಯಲ್ಲಿ ಒಂದೇ ಪ್ಲಾನ್ ಇದ್ದರೂ ಸಾಕಾಗುವುದಿಲ್ಲ. ಎರಡು ಪ್ಲಾನ್ ಇರುವುದೊಳಿತು. ಒಂದೊಮ್ಮೆ ಮೊದಲ ಪ್ಲಾನ್ ನಮಗೆ ಪೂರಕವಾಗಿ ಒದಗಲಿಲ್ಲ ಅಂತಾದರೆ ಕುಸಿಯುವುದಕ್ಕೇನೂ ಇಲ್ಲ. ಎರಡನೇ ಪ್ಲಾನ್ ಖಂಡಿತಾ ನಮ್ಮ ಕೈಹಿಡಿದೇ ಹಿಡಿಯುತ್ತದೆ. ಅದಕ್ಕೆ ನಾವು ಮಾನಸಿಕವಾಗಿ ಸಿದ್ಧತೆಯನ್ನು ಹೊಂದಿರಬೇಕು ಅಷ್ಟೇ.
ಈಗೀಗ ಸ್ಪರ್ಧಾತ್ಮಕ ಪರೀಕ್ಷೆಗಳು ಹೇಗಿರುತ್ತವೆಯೆಂದರೆ ಪಿಯುಸಿ ಮುಗಿದ ಬಳಿಕ ಒಂದು ವರ್ಷ ಪೂರ್ತಿ ಅದನ್ನೊಂದನ್ನೇ ಕೇಂದ್ರವಾಗಿಸಿಕೊಂಡು ತರಬೇತಿ ಪಡೆಯುವುದು ಅನಿವಾರ್ಯವೆಂಬಂತಾಗಿದೆ. ಅಷ್ಟಾಗಿ ಅರ್ಹತೆ ಗಿಟ್ಟಿಸಿಕೊಂಡರೆ ಪರವಾಗಿಲ್ಲ, ಅಲ್ಲದಿದ್ದರೆ ಮತ್ತೆ ಪುನಃ ಒಂದು ವರ್ಷ ವ್ಯರ್ಥವಾಯಿತಲ್ಲ ಎಂದು ಅಳಲುವಂತಾಗಬಾರದು.
ಇಂತಹ ವೃತ್ತಿಪರ ಶಿಕ್ಷಣದ ವ್ಯವಸ್ಥೆ ಹೇಗಿದೆಯೆಂದರೆ ಸರಕಾರೀ ಸೀಟು ಸಿಗಬೇಕೆಂದರೆ ನಾವು ಸಾಮಾನ್ಯ ವರ್ಗಕ್ಕೆ ಸೇರುವವರು ಅತ್ಯುನ್ನತವಾದ ನಿರ್ವಹಣೆ ತೋರಲೇಬೇಕು. ಅದಕ್ಕೆ ಸ್ಪರ್ಧೆಯೂ ಜಾಸ್ತಿಯೇ. ಸ್ವಾತಂತ್ರ್ಯಾ ನಂತರದಲ್ಲಿ ಸಾಂವಿಧಾನಿಕವಾಗಿ ಮೀಸಲಾತಿಯೆಂಬುದು ಜ್ಯಾರಿಗೆ ಬಂದಲ್ಲಿಂದ ಎಲ್ಲ ವ್ಯವಸ್ಥೆಯಲ್ಲಿಯೂ ಜಾತಿ ಆಧಾರಿತವಾಗಿಯೇ ಸೀಟು ಹಂಚಿಕೆಯಿರುತ್ತದೆ.
ಹಲವು ಕಾಲ ಶೋಷಣೆಗೊಳಗಾಗಿದ್ದವರನ್ನು ಮೇಲೆತ್ತುವುದಕ್ಕೆ ಅಂದು ಅದು ಅನಿವಾರ್ಯವೂ ಆಗಿತ್ತು. ಆದರೆ ಇಂದು ಅದೇ ಅಭಿವೃದ್ಧಿಯ ಪಥದಲ್ಲಿ ದೊಡ್ಡ ತೊಡಕಾಗಿ ನಿಂತಿದೆ. ಮಗಳೇ, ನೂರರಿಂದ ಇಳಿಕೆ ಕ್ರಮದಲ್ಲಿ ಬಂದು ಉನ್ನತ ನಿರ್ವಹಣೆ ತೋರಿದವರಿಗೆ ಸೀಟು ದೊರೆಯುತ್ತದೆ ಎಂಬAತಿದ್ದರೆ ಇಂದು ಅದೆಷ್ಟೋ ಪ್ರತಿಭಾವಂತರು ತಮ್ಮ ಅರ್ಹತೆಗನುಸಾರವಾಗಿ ದೊರೆಯಬೇಕಾದ ಅವಕಾಶಗಳು ಸಿಗದೇ ಮರುಗಬೇಕಾಗಿರಲಿಲ್ಲ. 90% ಶೇಕಡಾ ಪಡೆದವನೂ 35% ಶೇಕಡಾ ಪಡೆದವನೂ ಪರಸ್ಪರ ಸ್ಪರ್ಧಿಸಿಕೊಳ್ಳುವುದು ಹೇಗಾದೀತು ಹೇಳು? ಅದು ಶಿಕ್ಷಣ ಕ್ಷೇತ್ರದ ಇಂದಿನ ಸ್ಥಿತಿ.
ಮಹಾಭಾರತ(Mahabharat) ಯುದ್ಧದ ಹದಿನೆಂಟನೆಯ ದಿನ ದುರ್ಯೋಧನ ನೀರಲ್ಲಿ ಮುಳುಗಿದ್ದವನನ್ನು ಪಾಂಡವರು ಕೃಷ್ಣನೊಂದಿಗೆ(Lord Krishna) ಬಂದು ಹೊರಗೆ ಕರೆಯುತ್ತಾರಲ್ಲ. ಧರ್ಮರಾಯ ನಿರಾತಂಕವಾಗಿ ನಮ್ಮಂತವರಲ್ಲಿ ಯಾರನ್ನು ಬೇಕಾದರೂ ನೀನು ಯುದ್ಧಕ್ಕೆ ಆಯ್ಕೆ ಮಾಡಬಹುದು, ನಾನಾದರೂ ಸರಿಯೇ ಎಂದು ಆಹ್ವಾನ ಕೊಡುತ್ತಾನೆ. ದುರ್ಯೋಧನ ಮನಸ್ಸು ಮಾಡಿದ್ದಿದ್ದರೆ ನಕುಲನನ್ನೋ ಸಹದೇವನನ್ನೋ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಅವನು ಆರಿಸಿಕೊಂಡದ್ದು ಭೀಮನನ್ನೇ ಹೌದಲ್ಲ.
ಭೀಮ ಪ್ರತಿಜ್ಞಾಬದ್ಧನಾಗಿದ್ದವನೂ ಹೌದು. ಅವನೊಂದಿಗೆ ಯುದ್ಧಮಾಡಿದರೆ ಅವನು ತನ್ನ ತೊಡೆ ಮುರಿದು ಕೊಂದಾನು, ಸುಮ್ಮನೇ ಸಹದೇವನೊಂದಿಗೆ ಯುದ್ಧಮಾಡಿ ಗೆದ್ದು ಬಿಡೋಣ ಅಂತ ಅವನು ಭಾವಿಸಿದ್ದಿದ್ದರೆ ಗೆಲ್ಲಬಹುದಿತ್ತೇನೋ! ಆದರೆ ದೈವಸಂಕಲ್ಪ ಎಂಬುದೊಂದಿದೆಯಲ್ಲ. ಮಿಗಿಲಾಗಿ ಭೀಮನನ್ನು ಅವನೆಲ್ಲಿಯಾದರೂ ಸೋಲಿಸಿದರೆ ಹೆಗ್ಗಳಿಕೆ ಒಂದು ತೂಕ ಹೆಚ್ಚೇ ಇರುತ್ತಿತ್ತು. ಹಾಗಾಗಿ ಅವನ ಆಯ್ಕೆ ಭೀಮನೇ ಆಗಿದ್ದ. ಸಾವಿನಲ್ಲೂ ವೀರೋಚಿತ ಸಾವು ಎಂಬುದು ಅದು.
ಹಾಗಿದ್ದರೆ ಬದುಕೂ ವೀರೋಚಿತವಾಗಿಯೇ ಇರಬೇಕಲ್ಲ ಕಂದಾ.
ಏನು ಮಾಡೋಣ? ನಿಯಮಗಳನ್ನು ರೂಪಿಸುವವರಿಗೆ ಇದೆಲ್ಲ ಅರ್ಥವಾಗದು. ಹೇಳಹೊರಟವರನ್ನು ಮನುವಾದಿಗಳೆಂದೋ ಪುರೋಹಿತಶಾಹಿಗಳೆಂದೋ ಕ್ರಾಸ್ ಬೆಲ್ಟಿನವರೆಂದೋ ಹೀಯಾಳಿಸುವುದು ಕೆಲವರಿಗೆ ಪರಿಪಾಠವೇ ಆಗಿದೆ. ಅಭಿವೃದ್ಧಿಯೆಂದರೆ ಎಲ್ಲರೂ ಒಟ್ಟು ಸೇರಿ ಮುಂದುವರಿಯುವಂತಿರಬೇಕೇ ಹೊರತು, ಮುಂದೆ ಇರುವವರನ್ನು ಹಿಂದೆತಳ್ಳುವುದರಿಂದ ಸಾಧಿತವಾಗದು. ಇನ್ನೊಂದೈದು ವರ್ಷಗಳಲ್ಲಿ ನಿನಗಿದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಪೈಲೆಟ್ ಆಗುವುದಕ್ಕೆ, ನಾವಿಕನಾಗುವುದಕ್ಕೆ, ಚಾಲಕನಾಗುವುದಕ್ಕೆ ಕೌಶಲ್ಯವೇ ಇಲ್ಲದವರನ್ನು ಆಯ್ಕೆ ಮಾಡಿದರೆ ಹೇಗಾದೀತು ಅಲ್ಲವೇ? ಯೋಚಿಸು.
ನಾವು ಯಾವ ಹಂತಕ್ಕೇರುವ ಮನಸ್ಸು ಮಾಡುತ್ತೇವೆಯೋ ಅದನ್ನು ಏರುವುದಕ್ಕೆ ದೈಹಿಕವಾಗಿಯೂ ಮಾನಸಿಕವಾಗಿಯೂ ನಾವು ಸಮರ್ಥರೇ ಆಗಬೇಕು. ಸಾಧನೆಯ ಹಠ ನಿನ್ನೊಳಗೆ ಅಂತಿರಲಿ. ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ಬುದ್ಧಿವಂತರೇ. ಆದರೆ ಒಬ್ಬರನ್ನಿನ್ನೊಬ್ಬರ ಜತೆಗೆ ಹೋಲಿಸಿಕೊಂಡು ಅಳೆಯಬಾರದು ಅಷ್ಟೇ. ಮೀನಿನ ಬುದ್ಧಿವಂತಿಕೆಯನ್ನು ನೀರಿನಲ್ಲಿ ನೋಡಬೇಕು ವಿನಾ ಮರಹತ್ತುವುದರಲ್ಲಿ ಅಲ್ಲ ಎಂದು ಐನ್ಸ್ಟೆöÊನ್ ಹೇಳಿದ್ದೂ ಅದನ್ನೇ.
ಆನೆಯ ಬುದ್ಧಿವಂತಿಕೆಯನ್ನು ಅದು ಹಕ್ಕಿಯಂತೆ ಹಾರಬಲ್ಲುದೇ ಎಂಬುದರಲ್ಲಿ ಪರೀಕ್ಷಿಸಹೊರಟರೆ ಪರೀಕ್ಷಿಸಿದರು ದಡ್ಡರೆನಿಸಿಕೊಳ್ಳುತ್ತಾರೆ ಹೊರತು ಆನೆಯ ದಡ್ಡತನವಾಗುವುದಿಲ್ಲ. ನೀನು ಬೆಳೆದು ದೊಡ್ಡವಳಾಗುತ್ತಾ ಯೋಚಿಸಬೇಕಾದುದು ಬಹಳಷ್ಟಿದೆ ಮಗಳೇ. ಚೆನ್ನಾಗಿ ಯೋಗ ಮಾಡುತ್ತೀಯಲ್ಲ.. ಅದರಲ್ಲೇ ಮುಂದುವರಿಯುವ, ಅದಕ್ಕೆ ಸಂಬಂಧಿಸಿದ ಕೋರ್ಸ್ಗಳನ್ನು ಕಲಿಯುವ ಸಾಧ್ಯತೆಯ ಬಗೆಗೂ ಒಂದು ಗಮನವಿರಲಿ. ಮುಂದಿನ ದಿನಗಳಲ್ಲಿ ಜನರು ಖಂಡಿತವಾಗಿಯೂ ಯೋಗ, ಪ್ರಕೃತಿ ಚಿಕಿತ್ಸೆಯ ಕಡೆಗೆ ಹೊರಳಿಯೇ ಹೊರಳುತ್ತಾರೆ. ನೋಡೋಣ. (Letters to Daughter)
ಇಂತೀ ಆಶೀರ್ವಾದಗಳೊಂದಿಗೆ
ಅಮ್ಮ
