Love Story: ನನಸಾಗದ ಕನಸೊಂದು ನೆನಪಾಗಿ ಹೃದಯದ ತಳಮಳದಲ್ಲಿ ತಂಗಿದೆ. ಆ ಕನಸು ನನ್ನ ಕಣ್ಣಿನ ಮುಂದೆ ಅಲುಗಾಡುತ್ತಲೇ ಇದೆ. ಅದನ್ನು ನಕ್ಕು ಮರೆಯಲೇ? ಇಲ್ಲ ಅತ್ತು ನೆನೆಯಲೇ? — ಈ ಪ್ರಶ್ನೆಯ ನಡುವೆ ನಾನು ಪ್ರತಿದಿನ ಬದುಕುತ್ತಿರುವೆನು.
ನಮ್ಮ ಕಥೆ ತುಂಬಾ ಸರಳವಾಗಿ ಆರಂಭವಾಯಿತು. ಕಾಲೇಜಿನ ಆ ಮೊದಲ ದಿನ ಅವಳು ತರಗತಿಗೆ ಕಾಲಿಟ್ಟಾಗ, ಎಲ್ಲ ವಿದ್ಯಾರ್ಥಿಗಳ ಕಣ್ಣು ಅವಳ ಕಡೆ ತಿರುಗಿತು. ನಾನೂ ಹೊರತಾಗಿರಲಿಲ್ಲ. ಆದರೆ ನನಗೆ ಮಾತ್ರ ಅವಳು ಕೇವಲ ವಿದ್ಯಾರ್ಥಿನಿ ಆಗಿರಲಿಲ್ಲ, ನನ್ನ ಜೀವನದ ಹೊಸ ಅರ್ಥವನ್ನು ತಂದುಕೊಡುವ ವ್ಯಕ್ತಿಯಾಗಿದ್ದಳು. ಅವಳ ನಗು — ಮಳೆಯ ಮೊದಲ ಹನಿಯಂತೆ ಶುದ್ಧವಾಗಿತ್ತು. ಅವಳ ಮಾತು — ಗಾಳಿಯ ಮರ್ಮರದಂತೆ ಮೃದುವಾಗಿತ್ತು.
ನಾವು ನಿಧಾನವಾಗಿ ಪರಿಚಿತರಾದೆವು. ಪುಸ್ತಕಗಳ ಬಗ್ಗೆ, ಕನಸುಗಳ ಬಗ್ಗೆ, ಜೀವನದ ಬಗ್ಗೆ ಮಾತನಾಡುತ್ತಿದ್ದೆವು. ಅವಳು ಭವಿಷ್ಯದ ಕನಸುಗಳನ್ನು ಕಟ್ಟುತ್ತಿದ್ದಳು — ವೈದ್ಯೆಯಾಗಬೇಕು, ಜನಸೇವೆ ಮಾಡಬೇಕು ಎಂದು. ನಾನು ಅವಳ ಪ್ರತಿಯೊಂದು ಕನಸಿಗೂ ಚಪ್ಪಾಳೆ ತಟ್ಟುತ್ತಿದ್ದೆ. ಆದರೆ ನನ್ನ ಹೃದಯದಲ್ಲಿ, ಅವಳಿಗೆ ಹೇಳಲಾಗದ ಒಬ್ಬಂಟಿ ಕನಸು ಬಂಗಾರವಂತೆ ಕಂಗೊಳಿಸುತ್ತಿತ್ತು — “ಅವಳ ಜೊತೆ ಬದುಕು ಕಟ್ಟಬೇಕು” ಎಂಬುದು.
ಒಂದು ಸಂಜೆ ಮಳೆಯ ಹನಿ ಕಿಟಕಿಯ ಗಾಜು ತಟ್ಟುತ್ತಿದ್ದಾಗ ನಾವು ಇಬ್ಬರೂ ಕಾಲೇಜಿನ ಹಳೆ ಮರದ ಕೆಳಗೆ ಕುಳಿತಿದ್ದೆವು. ಅವಳು ಕೂದಲನ್ನು ಕಿವಿಯ ಹಿಂದೆ ಸರಿಸಿ, ಕಣ್ಣುಗಳಲ್ಲಿ ಹೊಳೆಯುವ ಹರ್ಷದೊಂದಿಗೆ “ಜೀವನ ಎಷ್ಟು ಸುಂದರ ಅಲ್ಲವೇ?” ಎಂದಳು. ನಾನು ಅವಳ ಕಣ್ಣುಗಳಲ್ಲಿ ನೋಡಿದಾಗ ನನ್ನ ಮನಸ್ಸು ಹೇಳಿತು — “ಹೌದು, ಜೀವನ ಸುಂದರ. ಏಕೆಂದರೆ ನೀನು ಇದ್ದೀಯ.” ಆದರೆ ಆ ಮಾತು ಬಾಯಿಗೆ ಬಂದಿಲ್ಲ. ಹೃದಯದೊಳಗೆ ಮಾತ್ರ ಉಳಿಯಿತು.
ಕಾಲ ಸಾಗುತ್ತಾ ಹೋಯಿತು. ದಿನಗಳು ಹಬ್ಬದಂತೆ ಹರಿದವು. ಅವಳ ಜೊತೆಗಿನ ಪ್ರತಿಯೊಂದು ಕ್ಷಣವೂ ಹೃದಯದ ಪುಟಗಳಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆಯಲ್ಪಟ್ಟವು. ಆದರೆ ಜೀವನದ ನಿಜವಾದ ಸತ್ಯವೊಂದು ನಿಧಾನವಾಗಿ ನನ್ನ ಕಡೆ ನಡೆದುಬರುತ್ತಿತ್ತು. ಅವಳ ಕುಟುಂಬ ಅವಳನ್ನು ಬೇರೆ ಊರಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಿತು. ಆ ಕ್ಷಣದಲ್ಲಿ ನನ್ನ ಕನಸುಗಳ ಬಲೆಯೇ ಒಡೆದುಹೋಯಿತು.
ಅವಳು ಹೋದ ದಿನ ನಾನು Railway station-ನಲ್ಲಿ ನಿಂತಿದ್ದೆ. ಅವಳ ಕಣ್ಣುಗಳು ಮಾತಾಡುತ್ತಿದ್ದವು — “ನನ್ನ ಕನಸುಗಳನ್ನು ಅಡ್ಡಿ ಮಾಡಬೇಡ” ಎಂದು. ನಾನು ಏನೂ ಹೇಳದೆ ನಿಂತಿದ್ದೆ. ರೈಲು ಚಲಿಸಿದಂತೆಯೇ, ನನ್ನ ಜೀವನದ ನಗು ಕೂಡಾ ದೂರ ಸರಿಯಿತು.
ಇದನ್ನೂ ಓದಿ: Letters to Daughter: ಮಗಳೇ, ನಿನ್ನ ಹವ್ಯಾಸಕ್ಕಾಗಿ ಒಂದು ಗಂಟೆ ಮೀಸಲಿಡುವುದರಿಂದ ನಿನ್ನ ವ್ಯಕ್ತಿತ್ವ ಅರಳಿಕೊಳ್ಳುತ್ತದೆ.
ಅದರ ನಂತರ ಅವಳ ನೆನಪು ನನ್ನ ಜೀವನದ ಸಂಗಾತಿಯಾಯಿತು. ಪ್ರತಿಯೊಂದು ಹಾಡಿನಲ್ಲಿ ಅವಳ ನಗು ಕೇಳಿಸುತ್ತಿತ್ತು. ಪ್ರತಿಯೊಂದು ಮಳೆಯಲ್ಲೂ ಅವಳ ಮಾತುಗಳು ಹನಿಯಂತೆ ಬೀಳುತ್ತಿತ್ತು. ರಾತ್ರಿ ಮಲಗಿದಾಗ ಅವಳ ಕನಸುಗಳಲ್ಲಿ ನಾನು ತೇಲುತ್ತಿದ್ದೆ. ಎಚ್ಚರವಾದಾಗ ಹೃದಯದಲ್ಲಿ ಖಾಲಿತನ(Love Story)
ಜನರು ನನಗೆ ಕೇಳುತ್ತಿದ್ದರು — “ನೀನು ಇನ್ನೂ ಅವಳನ್ನು ನೆನೆಸಿಕೊಳ್ಳುತ್ತೀಯಾ?” ನಾನು ನಗುತ್ತ ಹೇಳುತ್ತಿದ್ದೆ “ಹೌದು, ಏಕೆಂದರೆ ಅವಳು ನನಗೆ ಕನಸನ್ನು ಕೊಟ್ಟಳು.” ಕೆಲವರು ಹೇಳುತ್ತಿದ್ದರು “ಮರೆಯು, ಮುಂದೆ ನೋಡು.” ಆದರೆ ನನಗೆ ಗೊತ್ತಿತ್ತು ಕನಸುಗಳು ಮರೆಯಲು ಅಲ್ಲ, ಬದುಕಿಸಲು.
ಇಂದು ವರ್ಷಗಳೇ ಕಳೆದಿವೆ. ಅವಳು ಎಲ್ಲಿ ಇದ್ದಾಳೋ, ಯಾವ ಕನಸುಗಳನ್ನು ಸಾಕಾರಗೊಳಿಸುತ್ತಿದ್ದಾಳೋ ನನಗೆ ಗೊತ್ತಿಲ್ಲ. ಆದರೆ ಅವಳ ನೆನಪು ಮಾತ್ರ ನನ್ನ ಹೃದಯದಲ್ಲಿ ಹೂವಿನಂತೆ ಅರಳಿದೆ. ನಾನು ಇನ್ನೂ ಯೋಚಿಸುತ್ತೇನೆ ಆ ಕನಸು ನನಸಾಗದೇ ಹೋದರೂ ಅದು ನನಗೆ ಬದುಕಿನ ಅರ್ಥ ಕಲಿಸಿತು. ಪ್ರೀತಿ ಅಂದ್ರೆ ಕೇವಲ ಒಟ್ಟಿಗೆ ಇರೋದು ಅಲ್ಲ, ಪ್ರೀತಿ ಅಂದ್ರೆ ನೆನಪಿನಲ್ಲೂ ಬದುಕಿಸಿಕೊಳ್ಳೋದು.
ನಾನು ಅವಳ ನೆನಪನ್ನು ನಗುತ್ತಾ ನೆನೆಯಬೇಕೋ? ಇಲ್ಲ ಅತ್ತುತ್ತಾ ನೆನೆಯಬೇಕೋ? ಇದರ ಉತ್ತರವಿಲ್ಲ. ಏಕೆಂದರೆ ಅವಳ ನೆನಪು ಬಂದಾಗ ನಗುವೂ ಬರುತ್ತದೆ, ಕಣ್ಣೀರೂ ಬರುತ್ತದೆ. ಆ ಕನಸು ನನಸಾಗದಿದ್ದರೂ, ಆ ನೆನಪು ನನ್ನ ಬದುಕಿನ ದೀಪವಾಗಿ ಇನ್ನೂ ಹೊಳೆಯುತ್ತಿದೆ.(Love Story)
~ ಲಿಖಿತ್ ಹೊನ್ನಾಪುರ
