(ಪತ್ರ ಇಪ್ಪತ್ತೇಳು)ಮಗಳೇ,
Letters to Daughter: ದಿನವೂ ಅರ್ಧಗಂಟೆಯಾದರೂ ಸಂಗೀತಾಭ್ಯಾಸ ಮಾಡಲೇಬೇಕು ಅಂತ ಪದೇಪದೇ ಎಚ್ಚರಿಸುತ್ತಿರುತ್ತೇವಲ್ಲ, ಕೆಲವೊಮ್ಮೆ ನಿನಗೆ ಸಿಟ್ಟು ಬರುವುದೂ ಇದೆ. ಒಂದು ದಿನ ಮಾಡದಿದ್ದರೇನು ಅಂತ? ಆದರೆ ಮಗೂ ಸಂಗೀತವೆನ್ನುವುದು ಒಂದು ತಪಸ್ಸು. ಅದೊಂದೇ ಅಂತಲ್ಲ, ಎಲ್ಲ ಕಲೆಗಳೂ ಅಷ್ಟೇ. ನಿರಂತರವಾಗಿ ನೀನು ಅದರಲ್ಲಿ ತೊಡಗಿಸಿಕೊಂಡಷ್ಟೂ ನೀನು ಉತ್ಕೃಷ್ಟವಾಗುತ್ತಾ ಸಾಗುತ್ತೀಯ.
ಅದು ಬರೆವಣಿಗೆಯಾಗಿರಬಹುದು, ಸಂಗೀತದ ಯಾವ ಅಂಗವೇ ಆಗಿರಬಹುದು, ಯಕ್ಷಗಾನವಾಗಿರಬಹುದು, ಯೋಗ, ಆಟೋಟ..ಡ್ರೆöÊವಿಂಗ್..ಏನೇ ಇದ್ದರೂ ಅದರಲ್ಲಿ ಪರಿಣತಿಯನ್ನು, ನೈಪುಣ್ಯತೆಯನ್ನು ಸಾಧಿಸುವುದು ನಮ್ಮನ್ನು ನಾವು ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಾಗ. ಅದರರ್ಥ ದಿನದ ಬಹುತೇಕ ಸಮಯವನ್ನೂ ಅದರಲ್ಲಿ ಕಳೆಯಬೇಕೆಂದಲ್ಲ. ನೀನು ಶಾಲೆಗೆ ಹೋಗುವಾಗ ಶಾಲಾ ಕೆಲಸಗಳು ಬಹಳಷ್ಟು ಇರುತ್ತವೆ. ಆದರೆ ಸಂಜೆಯವೇಳೆಗೆ ನಿನ್ನ ಹವ್ಯಾಸಕ್ಕಾಗಿ ಒಂದು ಗಂಟೆ ಮೀಸಲಿಡುವುದರಿಂದ ನಿನ್ನ ವ್ಯಕ್ತಿತ್ವ ಅರಳಿಕೊಳ್ಳುತ್ತದೆ.
ಎಷ್ಟೋ ಮಂದಿ ಪೋಷಕರು ತಮ್ಮ ಮಕ್ಕಳು ಹತ್ತನೇ ತರಗತಿಯೆಂದೋ, ಪಿಯುಸಿಯೆಂದೋ ಇತರ ಎಲ್ಲ ಹವ್ಯಾಸಗಳಿಂದಲೂ ಅವರನ್ನು ದೂರಮಾಡಿ ಶಾಲೆ-ಕಾಲೇಜು ಅಂತ ನಿರ್ಬಂಧಿಸಿ ಬಿಡುತ್ತಾರೆ. ಇದರ ಜತೆಗೆ ಟ್ಯೂಷನ್. ಒಂದು ವೇಳೆ ಹೆತ್ತವರು ಹೀಗೆ ಮಾಡದಿದ್ದರೆ ಶಾಲೆಗಳಲ್ಲಿ ತಮ್ಮ ವಿದ್ಯಾರ್ಥಿಗಳ ಅಂಕಗಳನ್ನಷ್ಟೇ ಯೋಚಿಸುವವರು ಮಕ್ಕಳಿಗೆ ಇದೇ ಥರ ಹೇಳಿ ಬದಲಾಯಿಸಿಬಿಡುತ್ತಾರೆ. ಆದರೆ ಮಗೂ ನೆನಪಿಟ್ಟುಕೋ. ಹತ್ತು ಹಲವು ಒತ್ತಡಗಳು ನಮ್ಮನ್ನು ಕಾಡಿದಾಗ, ಬೇರೇನೂ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂಬAಥ ದಣಿವು ಕಾಡಿದಾಗ, ನನ್ನಿಂದೇನೂ ಸಾಧಿಸಲು ಸಾಧ್ಯವಿಲ್ಲ ಎನ್ನಿಸಿದಾಗ ನಮ್ಮನ್ನು ಬಡಿದೆಬ್ಬಿಸುವುದು ನಮ್ಮ ಹವ್ಯಾಸವೇ.(Letters to Daughter)
ಅದಕ್ಕೆ ಅಂಥ ಶಕ್ತಿಯಿದೆ. ಒಂದೂರಲ್ಲಿ ಒಮ್ಮೆ ಒಬ್ಬ ಅರಸನ ಪಟ್ಟದಾನೆಗೆ ವಯಸ್ಸಾಗಿದೆ ಅಂತ ಅದಕ್ಕೆ ವಿಶ್ರಾಂತಿ ಕೊಡುವ ನಿರ್ಧಾರ ಮಾಡಿದರಂತೆ. ಅರಸನ ಅಂಬಾರಿ ಹೊರುವುದಕ್ಕೆ ಇನ್ನೊಂದು ಆನೆ ಇದ್ದೇ ಇರುತ್ತದಲ್ಲ. ಇತ್ತ ಈ ಆನೆಗೆ ಮನಸ್ಸಿಗೆ ತುಂಬಾ ವ್ಯಥೆ ಕಾಡಿತಂತೆ. ತನ್ನಿಂದ ಇನ್ನೇನೂ ಸಾಧ್ಯವೇ ಇಲ್ಲ, ತನ್ನನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ ಎಂಬ ನೋವು ಅದನ್ನು ಬಲುವಾಗಿ ಕಾಡಿತು. ಇದೇ ಚಿಂತೆಯಲ್ಲಿ ಒಮ್ಮೆ ಅದು ನಡೆದುಹೋಗುವಾಗ ಹಳ್ಳವೊಂದರಲ್ಲಿ ಅದರ ಕಾಲುಗಳು ಹೂತುಹೋದವು.
ಆನೆಯನ್ನು ಎತ್ತುವವರು ಯಾರು ಹೇಳು? ಏನೇನು ಪ್ರಯತ್ನ ಪಟ್ಟರೂ ಬೇರೆ ಆನೆ ಬಂದೆಳೆಯುವAತೆ ಮಾಡಿದರೂ ಅದು ಕುಸಿಯುತ್ತಿತ್ತೇ ವಿನಾ ಎದ್ದೇಳದು. ಅರಸನಿಗೆ ಅದನ್ನು ಕಂಡು ದುಃಖವಾಯಿತು. ಇದನ್ನು ಗಮನಿಸಿದ ಮಂತ್ರಿ ಅರಸನಿಗೆ ಹೇಳಿದ- ಯುದ್ಧಾರಂಭವನ್ನು ಘೋಷಿಸುವಂತೆ ಕಹಳೆ ಮೊಳಗಿಸೋಣ, ಆನೆ ಸ್ವತಃ ಮೇಲೆದ್ದು ಬಂದೀತು. ಹಾಗೆಯೇ ಆಯಿತು ಕೂಡಾ. ನಿರಂತರವಾಗಿ ಆ ಸದ್ದಿಗೆ ತನ್ನ ಅರಸನನ್ನು ಹೊತ್ತೊಯ್ಯುವುದಕ್ಕೆ ಸಿದ್ಧವಾಗುವುದು ರೂಢಿಯಿದ್ದ ಆನೆ ಸ್ವಪ್ರಯತ್ನದಿಂದಲೇ ಮೇಲೆದ್ದು ಬಂತು. ಈ ಕತೆಯನ್ನು ಸಾಮಾನ್ಯವಾಗಿ ಸ್ವಯಂ ಸ್ಫೂರ್ತಿಯ ಪ್ರಾಮುಖ್ಯತೆಯನ್ನು ಉಲ್ಲೇಖಿಸುವಾಗ ಹೇಳುತ್ತೇವೆ.
ನಮ್ಮ ಹವ್ಯಾಸಕ್ಕೂ ಅಂಥದ್ದೇ ಶಕ್ತಿಯಿದೆ ಪುಟ್ಟಾ. ಜ್ವರವಿರಲಿ, ಕಾಲುನೋವಿರಲಿ, ಯಕ್ಷಗಾನವಿದೆ ಅನ್ನುವಾಗ ನನ್ನೆಲ್ಲಾ ನೋವು ಸಂಕಟಗಳೂ ಮಾಯವಾಗುತ್ತವೆ ನೋಡು.. ನಾವು ಒಂದಿಲ್ಲೊAದು ಹವ್ಯಾಸದಲ್ಲಿ ತೊಡಗಿಸಿಕೊಳ್ಳಲೇಬೇಕಾಗಿರುವುದು ಅದಕ್ಕಾಗಿಯೇ. ಅದು ನಮ್ಮನ್ನು ಬಡಿದೆಬ್ಬಿಸಬಲ್ಲುದು. ನನಗಾಗಲೀ, ಅಪ್ಪನಿಗಾಗಲೀ ಎಷ್ಟೋ ಮಂದಿ ಕೇಳುವುದಿದೆ, ನಿಮಗೆ ಒಂದು ದಿನದಲ್ಲಿ ಎಷ್ಟು ಗಂಟೆಗಳಿವೆ ಅಂತ.
ಗಂಟೆಗಳು ಹೆಚ್ಚುವುದಿಲ್ಲ ಮಗೂ.. ಮನಸ್ಸಿಗೆ ಮುಖ್ಯ ಅನ್ನಿಸಿದ್ದಕ್ಕೆ ಸಮಯ ಹೊಂದಿಸಿಕೊಳ್ಳುವುದಕ್ಕೆ ಬುದ್ಧಿಗೆ ಗೊತ್ತಿರುತ್ತದೆ. ಉಳಿದೆಲ್ಲ ಕೆಲಸಗಳು ಮುಗಿದ ನಂತರ ಬಿಡುವಿನ ವೇಳೆ ಉಳಿದರೆ ಮಾತ್ರ ಹವ್ಯಾಸದಲ್ಲಿ ತೊಡಗುವುದು ಎಂದಲ್ಲ. ನಮ್ಮ ಇತರೆ ಕೆಲಸಗಳ ಒತ್ತಡ ಅದೇನೇ ಇದ್ದರೂ ನಾವು ಸಮಯ ಕಂಡುಕೊAಡು ಹೊಂದಿಸಿಕೊAಡು ಮಾಡುವ ಕೆಲಸಗಳವು.
ಮತ್ತೆ, ಹವ್ಯಾಸವನ್ನು ನಾವು ಗಂಭೀರವಾಗಿ ತೆಗೆದುಕೊಂಡರೆ ಅದೇ ನಮ್ಮ ವೃತ್ತಿಯೂ, ಜೀವನಾಧಾರವೂ ಆಗಬಲ್ಲದು. ಒಂದೊಮ್ಮೆ ಹಾಗಾಗದಿದ್ದರೂ ನಾವು ಉದ್ಯೋಗ ನಡೆಸುವ ಸ್ಥಳಗಳಲ್ಲಿ ನಮಗೆ ವಿಶೇಷವಾದ ಮನ್ನಣೆಯನ್ನೂ ಒದಗಿಸಬಲ್ಲದು. ಅದರಲ್ಲೂ ಸಂಗೀತಕ್ಕೆ ಯಾವುದೇ ಭಾಷೆಯ ಹಂಗಿಲ್ಲ. ಸಾಹಿತ್ಯದ ಗೊಡವೆಯಿಲ್ಲದೇ ಯಾರನ್ನೇ ಆದರೂ ತಲುಪುವ ಶಕ್ತಿ ಸಂಗೀತಕ್ಕಿದೆ. ಮಿಗಿಲಾಗಿ ಹೆಚ್ಚಿನ ಸಮಯವನ್ನೂ ಅದು ನಿರೀಕ್ಷೆ ಮಾಡುವುದಿಲ್ಲ. ಗಣಿತಜ್ಞರೂ ಒಪ್ಪಿಕೊಂಡAತೆ ಸಂಗೀತವನ್ನು ಹಾಡಬಲ್ಲವರ ಏಕಾಗ್ರತೆ ಬಹಳ ಉತ್ತಮವಾಗಿರುತ್ತದೆ. ಹಾಗಾಗಿ ಅಧ್ಯಯನದ ದೃಷ್ಟಿಯಿಂದಲೂ ಅದು ಒಳ್ಳೆಯದೇ.
ಮಗಳೇ,(Letters to Daughter) ಡ್ರಾಯಿಂಗ್ ಪೇಂಟಿAಗ್ ಇದೆಯಲ್ಲ.. ಸಂಗೀತವೇ ಯಾಕೆ ಅನ್ನುತ್ತೀಯಲ್ಲ.. ಪಫಾರ್ಮಿಂಗ್ ಆರ್ಟ್ಸ್ ಅಂತ ನಾವು ಯಾವುದನ್ನು ಕರೆಯುತ್ತೇವೋ ಅದರಲ್ಲೊಂದು ನಮ್ಮೊಳಗೆ ಇದ್ದೇ ಇರುತ್ತದೆ. ಹವ್ಯಾಸದ ರೂಪದಲ್ಲಿ ನಾವು ಕಂಡುಕೊಳ್ಳಬೇಕಾದುದೂ ಅದನ್ನೇ. ಚಂದದ ಪದ್ಯ ಕೇಳುವಾಗ ಒಂದೆರಡು ಹೆಜ್ಜೆ ಹಾಕೋಣ ಅಂತ ನಿನಗಷ್ಟೇ ಅಲ್ಲ, ಎಂಥ ವಯಸ್ಸಾದವರಿಗೂ ಅನಿಸುತ್ತದೆ.
ಅಂಥದ್ದರಲ್ಲಿ ಚಂದದ ಧ್ವನಿಯನ್ನಿಟ್ಟುಕೊಂಡು ಹಾಡುವುದಕ್ಕೆ ನೀನೆಷ್ಟು ಸಂಭ್ರಮಿಸಬೇಡ! ಅಲ್ವಾ? ಗುರುಗಳು ಹಿಂದೊಮ್ಮೆ ನೀನು ಒಂದನೇ ತರಗತಿಯಲ್ಲಿದ್ದಾಗ ಆಡಿದ ಮಾತುಗಳನ್ನು ನೆನಪಿಸಿಕೋ. ‘ಈ ಮಗುವನ್ನು ಮೂರು ವರ್ಷ ನನ್ನ ಬಳಿ ಬಿಡಿ. ಅಜ್ಜಿ (ಗುರುಗಳ ಪತ್ನಿ) ಇದ್ದಾರೆ. ನೋಡಿಕೊಳ್ಳುತ್ತಾರೆ. ಇವಳು ಸಂಗೀತ ಕಛೇರಿ ಕೊಡುವಷ್ಟು ಸಾಮರ್ಥ್ಯದ ಮಗು’ ಅಂತ.
ಮಗಳೇ, ಆಗ ನಮಗಿದ್ದ ಪರಿಸ್ಥಿತಿಯಲ್ಲಿ ನಿನ್ನ ಸಂಗೀತಾಭ್ಯಾಸದ ಕಡೆಗೆ ಮಾತ್ರ ಗಮನ ಕೊಡುವುದಕ್ಕೆ ನಮ್ಮಿಂದಾಗಲಿಲ್ಲ. ಕೆಲವು ಕ್ಲಾಸುಗಳಿಗೆ ಕರೆದುಕೊಂಡು ಹೋಗುವುದಕ್ಕೂ ಅನುಕೂಲ ಆಗಲಿಲ್ಲ. ನಿಜವೇ ಮಗೂ. ಆದರೂ ಈಗ ನಮ್ಮಿಂದಾದಷ್ಟು ಅನುಕೂಲ ಮಾಡಿಕೊಡುತ್ತಿದ್ದೇವಲ್ಲ. ಅವಕಾಶವನ್ನು ಕಳೆದುಕೊಳ್ಳಬೇಡ. ಬಳಸಿಕೋ. ನಿನ್ನೊಳಗಿನ ಸಂಗೀತ, ನಿನ್ನ ಹವ್ಯಾಸ ನಿನ್ನನ್ನು ಸದಾ ಉಲ್ಲಸಿತಳನ್ನಾಗಿರಿಸುತ್ತದೆ.(Letters to Daughter)
ಇಂತೀ ಆಶೀರ್ವಾದಗಳೊಂದಿಗೆ
ಅಮ್ಮ
