(ಪತ್ರ ಹತು)ಮಗಳೇ,
ಹೆಚ್ಚುಕಡಿಮೆ ಒಂದು ವರ್ಷದ ಹಿಂದೆ ಸಹನಕ್ಕ ಕೊಟ್ಟ ವಸುಧೇಂದ್ರರ ತೇಜೋ- ತುಂಗಭದ್ರಾ ಕಾದಂಬರಿಯನ್ನು ಈ ಎರಡು ಮೂರು ದಿನಗಳಲ್ಲಿ ಓದಿದೆ. ಮುಂದೊAದು ದಿನ ನೀನೂ ಅದನ್ನು ಓದುವಿಯಂತೆ. ಅದರ ಕಥೆ, ಕಾದಂಬರಿಯ ಹಂದರ ಇತ್ಯಾದಿಗಳನ್ನು ವಿಮರ್ಶಿಸುವ ಉದ್ದೇಶ ನನಗಿಲ್ಲ. ಆದರೆ ಒಮ್ಮೆ ಓದಿದರೆ ಸ್ವಲ್ಪ ಮಟ್ಟಿಗಾದರೂ ಬದುಕನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯ ಅಂತಷ್ಟೇ ಹೇಳಬಲ್ಲೆ. ವಾಸ್ಕೋ ಡಾ ಗಾಮಾ ಭಾರತಕ್ಕೆ ಸಮುದ್ರಪಥವನ್ನು ಕಂಡುಹುಡುಕಿದ, ಬಂದ..ಇತ್ಯಾದಿ ಇತಿಹಾಸವೇನಿದೆಯೋ ಅದೆಲ್ಲವನ್ನೂ ಬದಿಗಿರಿಸಿ ನೋಡಿದರೂ ಅದರಲ್ಲಿ ಅಪ್ಪಟ ಜೀವನವಿದೆ. ಅದಕ್ಕೇ ನಿನಗೆ ಹೇಳಬೇಕೆನಿಸಿತು.
ಮಗಳೇ, ‘ಜಗತ್ತಿನ ಬಹುತೇಕ ಸುಂದರ ಸಂಗತಿಗಳು ಅತ್ಯಂತ ಸುಲಭವಾಗಿಯೇ ಕೈಗೆ ಎಟಕುತ್ತವೆ’ ಅನ್ನುತ್ತದೆ ಪಾತ್ರವೊಂದು. ಮನೆಯೊಳಗಾದರೂ ಗಮನಿಸಿ ನೋಡು, ಅಪ್ಪ ಅಮ್ಮ ಕೊಡಿಸುವ ದುಬಾರಿ ಉಡುಗೊರೆಗಿಂತ ಮೌಲ್ಯವುಳ್ಳದ್ದು ಬಳಲಿದಾಗ, ನೊಂದಾಗ ಸಿಗುವ ಅವರ ಅಪ್ಪುಗೆ, ಜತೆಗೆ ಯಾವ ಸೋಲೂ ಸೋಲಲ್ಲ, ಅದೊಂದು ಪಾಠ ಎಂದು ತುಂಬುವ ಧೈರ್ಯ.
ಕಂದಾ ಎಷ್ಟೋ ಮಕ್ಕಳಿಗೆ ಈ ಭಾಗ್ಯ ಇರುವುದಿಲ್ಲ ಗೊತ್ತಾ? ಒಂದು ದಿನ ಸಂಜೆಯ ತಿಂಡಿಯ ವಿಷಯಕ್ಕೆ ನೀನು ಸಿಟ್ಟು ಮಾಡಿಕೊಂಡು ಅತ್ತುಬಿಟ್ಟಾಗಲೂ ನಾನು ಇದನ್ನೇ ಹೇಳಿದ್ದೆ- ಅಮ್ಮ ಇದ್ದಾಳೆ, ಬಿಸಿಬಿಸಿಯಾಗಿ ದೋಸೆ ಮಾಡಿಕೊಡುತ್ತಾಳೆ. ಬದುಕಿಗಾಗುವಷ್ಟು ಪ್ರೀತಿ ಕೊಡುತ್ತಾಳೆ ಅಂತ ಇರುವಾಗ ಅದನ್ನು ಅನುಭವಿಸು.
ದಿನವೂ ದೋಸೆಯಾ ಅಂತ ತಗಾದೆ ತೆಗೆಯಬೇಡ ಅಂತ- ಅಮ್ಮನನ್ನು ಕಳೆದುಕೊಂಡ ಅದೆಷ್ಟು ಎಳೆಯ ಮಕ್ಕಳನ್ನು ನಾವು ನೆಲೆಯಲ್ಲಿ ನೋಡಿಲ್ಲ ಹೇಳು? ಕೆಲವರಿಗಾದರೂ ಅಮ್ಮ ಇದ್ದಾರಂತೆ, ವರ್ಷಕ್ಕೊಮ್ಮೆ ಮಕ್ಕಳನ್ನು ನೋಡಲು ಬರುತ್ತಾರೆ ಅಂದಿದ್ದಕ್ಕೆ ನಮಗೆಷ್ಟು ಸಮಾಧಾನವಾಗಿತ್ತು ಅಲ್ವಾ? ಅಮ್ಮನಿಲ್ಲದ ಪುಟ್ಟ ಮಕ್ಕಳನ್ನು ಕಲ್ಪಿಸಿಕೊಳ್ಳುವುದೇ ತುಂಬ ಕಷ್ಟ ಮಗೂ. ಅವರ ಬದುಕಿನ ಯಾವ ಸಂಭ್ರಮಗಳನ್ನು ಹೆಚ್ಚಿಸುವುದಕ್ಕೂ ಯಾವ ದುಃಖವನ್ನು ಕಡಿಮೆ ಮಾಡುವುದಕ್ಕೂ ಅಮ್ಮನೆಂಬ ಜೀವ ಜೊತೆಗಿರುವುದಿಲ್ಲ. ಜೊತೆಗಿರುವ ಯಾರು ಎಷ್ಟೇ ಮಾಡಿದರೂ ಅವರು ಅಮ್ಮನಾಗುವುದಕ್ಕಿಲ್ಲ ಪುಟ್ಟಾ.. ನಮ್ಮಲ್ಲಿ ಇರುವುದರಲ್ಲಿ ಸಂತೋಷ ಪಡುವ, ನಮಗೊದಗಿ ಬಂದ ಭಾಗ್ಯಕ್ಕೆ ಭಗವಂತನಿಗೆ ಕೃತಜ್ಞತೆ ಹೇಳುವುದಷ್ಟೇ ನಮ್ಮ ಕರ್ತವ್ಯ.
ಮಗಳೇ, ನಮ್ಮ ಸುತ್ತಲೂ ಅನೇಕ ಸಂಗತಿಗಳು ಘಟಿಸುತ್ತಿರುತ್ತವೆ, ಅದಕ್ಕೆ ಪೂರಕವಾಗಿ ನಾವೂ ಸ್ಪಂದಿಸುತ್ತಿರುತ್ತೇವೆ. ಖುಷಿ ಕಾಣುವುದಾದರೆ ಮನೆಯ ಸುತ್ತ ಬೆಳಗ್ಗಿನ ಹೊತ್ತು ತುಂಬಿಕೊಳ್ಳುವ ಹಕ್ಕಿಗಳ ಕಲರವವೂ ಸಂತೋಷ ಕೊಡುತ್ತದೆ. ನಮ್ಮ ಮನಸ್ಸು ಖಿನ್ನವಾಗಿದ್ದರೆ ಆ ಸದ್ದೂ ಹರಟೆಯೆನಿಸಬಹುದು. ನಮಗೆ ಹೇಗೆ ಬೇಕೋ ಹಾಗೆ ನಾವು ಸ್ಪಂದಿಸುವುದೆAಬುದAತೂ ಸ್ಪಷ್ಟ.
ಇದನ್ನೂ ಓದಿ: Pro Kabaddi League: ಕ್ರಿಕೆಟ್ ನಂತರದ ಅತಿದೊಡ್ಡ ಕ್ರೀಡಾ ಕ್ರಾಂತಿ
ನೀನೇ ಆಗೀಗ ಪದ್ಯ ಕೇಳುವಾಗ ಗಮನಿಸಿದ್ದೀಯಲ್ಲ? ನಿನಗೇನಾದರೂ ನೋವಾದ ದಿನ ನಿಧಾನಗತಿಯ ಪದ್ಯಗಳನ್ನು ಕೇಳುತ್ತೀ. ಉತ್ಸಾಹದಿಂದ ಕೆಲಸ ಮಾಡಬೇಕಿದ್ದಾಗ ಬಹಳ ಜೋಶ್ ನ ಪದ್ಯಗಳನ್ನು ಕೇಳುತ್ತೀ. ಇದು ಸಣ್ಣ ಉದಾಹರಣೆ ಅಷ್ಟೇ. ಕೆಲವೊಮ್ಮೆ ನನಗರ್ಥವಾಗದ ಹಾಗೆ ಸಿಡಿಗುಟ್ಟುತ್ತೀ.. ಇನ್ನೂ ಕೆಲವೊಮ್ಮೆ ಎಳೆಯ ಮಗುವಿನಂತೆ ಬಂದು ಮಡಿಲಲ್ಲಿ ತಲೆಯಿಡುತ್ತೀ.. ಈ ಸಲುಗೆ ಸಾಧ್ಯವಾಗುವುದು ಅಮ್ಮನೊಂದಿಗೆ ಮಾತ್ರ ಮಗೂ..
ಮೊನ್ನೆ ಮೊನ್ನೆಯವರೆಗೆ ನನ್ನ ಅಮ್ಮನೊಂದಿಗೆ ನಾನೂ ಹೀಗೆಯೇ ಇದ್ದೆ. ಒಂದು ಘಟನೆ ಹೇಳುತ್ತೇನೆ ಕೇಳು. ಹುಷಾರಿಲ್ಲದ ಒಂದು ರಾತ್ರಿ ಅವರ ಕೈಹಿಡಿದು ಕುಳಿತುಬಿಟ್ಟಿದ್ದೆ. ‘ಮಗಳೇ, ನಾನೂ ಹಾಸಿಗೆ ಹಿಡಿದುಬಿಟ್ಟೆ, ನೀನು ಖುಷಿಯಿಂದ ಕಳೆಯಬೇಕಿದ್ದ ವಯಸ್ಸೆಲ್ಲ ಹೀಗೆ ಚಾಕರಿಯಲ್ಲೇ ಮುಗಿಯಿತು’ ಅಂತ ಕಣ್ಮಣಿ ಅಜ್ಜಿ ಬಿಕ್ಕಳಿಸಿದಾಗ ಅಜ್ಜಿಯನ್ನು ತಬ್ಬಿಕೊಂಡು ನಾನೂ ಅತ್ತುಬಿಟ್ಟೆ ಮಗೂ.
ಅಮ್ಮನಿದ್ದಾಳೆ, ಹುಷಾರಾಗುತ್ತಾಳೆ ಎಂಬ ನಂಬಿಕೆ ನನಗೆ ಎಲ್ಲ ಧೈರ್ಯ ಕೊಟ್ಟಿತ್ತು. ಈಗ ಸಣ್ಣಪುಟ್ಟದಕ್ಕೂ ನನ್ನ ಕಣ್ಣಂಚು ನೆನದರೆ ನೀನು ಬೆರಗಾಗಿ ನೋಡುತ್ತೀ ಅಲ್ವಾ? ಕಳೆದುಹೋದದ್ದು ಅಮ್ಮನೆಂಬ ಸ್ಥೆöÊರ್ಯ ಮಗೂ.. ಈಗ ನನಗೆ ಬೇಕಾದ ಧೈರ್ಯ ತುಂಬಿಕೊಡುತ್ತಿರುವವಳು ನೀನು. ಮಗುವು ಮನುಜನ ತಂದೆ ಎಂದು ವರ್ಡ್ಸ್ವರ್ತ್ ಹೇಳಿದ. ಮಗಳು ಮನುಜನ ತಾಯಿಯೂ ಹೌದಲ್ಲ ಪುಟ್ಟಾ?
ಇದನ್ನೂ ಓದಿ: ಗೀತಾಸಾರ : ಬಾಂಧವ್ಯ ಏಕೆ ದುಃಖಕ್ಕೆ ಕಾರಣವಾಗುತ್ತದೆ ಗೊತ್ತಾ?
ಕಾದಂಬರಿಯಲ್ಲಿ ಇನ್ನೊಂದು ಸಾಲು ನನಗೆ ಬಹಳ ಇಷ್ಟವಾಯಿತು- ವಿನಯಪೂರ್ವಕವಾಗಿ ಶಿಲೆಗೆ ಬಾಗದಿದ್ದರೆ ಯಾವ ಕಲ್ಲು ಶಿಲ್ಪವಾದೀತು ಹೇಳು- ಅಂತ. ಬದುಕೆಂಬ ಕಲ್ಲಿಗೂ ನಾವು ವಿನಯಪೂರ್ವಕವಾಗಿ ಬಾಗಿದರಷ್ಟೇ ಅದು ಎಲ್ಲರೂ ಗೌರವಿಸುವ ಶಿಲ್ಪವಾಗುವುದು. ಶಿಲ್ಪಿ ಶಿಲೆಯೆದುರು ಬಾಗುತ್ತಾನೆ, ಕಲ್ಲು ಶಿಲ್ಪವಾಗುವುದಕ್ಕಾಗಿ ನೂರಾರು ಹೊಡೆತಗಳನ್ನು ತಾಳಿಕೊಳ್ಳಲು ಸಿದ್ಧವಾಗುತ್ತದೆ. ಪ್ರೀತಿಯಿಂದ ಬದುಕನ್ನು ಗೆದ್ದಂತೆ ಹಠದಿಂದ ಗೆಲ್ಲಲಾಗದು ಮಗೂ.
ಬದುಕನ್ನು ಗೆಲ್ಲುವ ಛಲವಿರಬೇಕು ಎಂಬುದೇನೋ ನಿಜವೇ. ಆದರೆ ಅನಗತ್ಯವಾಗಿ ಎದೆಸೆಟೆಸಿ ನಾನಿರುವುದೇ ಹೀಗೆ ಎಂದರೆ ಬದುಕು ಕಾಡದೇ ಇರುವುದಿಲ್ಲ ಎಂಬುದು ಸತ್ಯ. ನಾವು ವಿದ್ಯೆ ಕಲಿಯುತ್ತಾ ಬಂದAತೆ ವಿನಯತೆ ನಮ್ಮೊಳಗೆ ತುಂಬುತ್ತಾ ಹೋಗಬೇಕು. ಶಾಲೆಯ ಶಿಕ್ಷಕರಿಗೆ ಹಾಯ್ ಎನ್ನದೇ ನಮಸ್ತೇ ಎನ್ನಬೇಕು ಅಂತ ನಾವು ಆಗಾಗ ಗದರುತ್ತೇವಲ್ಲ.. ಅದೆಲ್ಲ ವಿನಯವಂತಿಕೆಯನ್ನು ಸೂಚಿಸುವ ನಡೆನುಡಿಗಳು ಕಂದಾ. ಕೆನ್ನೆ-ಕಣ್ಣಿನಲ್ಲಿ ಚಂದದ ನಗೆಯನ್ನು ಅರಳಿಸಿಕೊಂಡು ಮಕ್ಕಳು ನಮಸ್ತೆ ಹೇಳಿದಾಗ ಶಿಕ್ಷಕವೃಂದಕ್ಕೆ ಅದೆಷ್ಟು ಸಂತೋಷವಾಗುತ್ತದೆ ಎಂದರೆ ಅದರ ಮುಂದೆ ತೆಗೆದುಕೊಳ್ಳುವ ಸಂಬಳ ಎಂದೂ ಕೊರತೆಯೆನ್ನಿಸುವುದಿಲ್ಲ.
ಮಗಳೇ, ‘ಬಣ್ಣಗಳನ್ನು ಸರಿಯಾಗಿ ಸೇರಿಸಿದರೆ ಎಲ್ಲವೂ ಸೊಗಸಾಗಿ ಹೊಂದಿಕೊಳ್ಳುತ್ತವೆ’ ಎಂದು ಕಾದಂಬರಿ ಮುಕ್ತಾಯಗೊಳ್ಳುತ್ತದೆ. ಬಣ್ಣಗಳನ್ನು ಬೆರೆಸುವಲ್ಲಿ ನಿನ್ನೊಂದಿಗೆ ನನ್ನ ಸ್ಪರ್ಧೆಯಿಲ್ಲ.. ಬಣ್ಣಗಳನ್ನು ನೀನು ಸುಲಲಿತವಾಗಿ ಬಳಸುವ ಬಗೆ ನಮಗೊಂದು ಅಚ್ಚರಿಯ ಸಂಭ್ರಮ. ಅದರ ಬಗ್ಗೆ ಹೇಳಲೇಬೇಕಲ್ಲ..ನಾಳೆ ಹೇಳುವೆ.
ಇಂತೀ ಅಮ್ಮ
