(ಪತ್ರ ಇಪ್ಪತ್ತಮೂರು)ಮಗಳೇ,
Letters to Daughter: ಹತ್ತನೆಯ ತರಗತಿ, ಪಿಯುಸಿ ಫಲಿತಾಂಶಗಳೆಲ್ಲ ಬಂದಾಗ ಯಾರಿಗೆಷ್ಟು ಮಾಕ್ಸ್ ಬಂದವು, ಯಾವ ಜಿಲ್ಲೆಗೆ ಒಳ್ಳೆಯ ಫಲಿತಾಂಶ ಬಂತು ಎಂಬ ಚರ್ಚೆ ಎಲ್ಲ ಕಡೆ ನಡೆದೇ ನಡೆಯುತ್ತದೆ. ಸರಕಾರದ ದೃಷ್ಟಿಯಿಂದ ಶಿಕ್ಷಣವೆಂಬುದು ಅಭಿವೃದ್ಧಿಯ ಪಥವೇ ಆಗಿರುವುದರಿಂದ ಈ ಬಗೆಯ ಸುದ್ದಿಗಳು ಅಗತ್ಯವೇ. ಆದರೆ ಮಗಳೇ, ಅನೇಕ ಮಂದಿ ಪೋಷಕರು ತಮ್ಮ ಮಕ್ಕಳಿಗೆ ಕಡಿಮೆ ಅಂಕಗಳು ಬಂದಾಗ ಪರಿತಪಿಸುವ ಬಗೆಯನ್ನು ನೋಡಿದರೆ ಕೊಂಚ ಕಸಿವಿಸಿಯಾಗುತ್ತದೆ.
ಅದಕ್ಕಿಂತಲೂ ಹೆಚ್ಚಾಗಿ ಮಕ್ಕಳು ತಮಗೆ ಕಡಿಮೆ ಅಂಕಗಳು ಬಂದವೆಂದು ಆತ್ಮಹತ್ಯೆಯ ದಾರಿ ಹಿಡಿಯುವುದನ್ನು ನೋಡಿದರೆ ಬಹಳ ದುಃಖವಾಗುತ್ತದೆ. ಅಷ್ಟಕ್ಕೂ ಮುಂದಿನ ಹಂತದ ಶಿಕ್ಷಣವನ್ನು ತಕ್ಕಮಟ್ಟಿಗೆ ಈ ಅಂಕಗಳು ನಿರ್ಧರಿಸುವುದು ಹೌದಾದರೂ ಈ ಅಂಕಗಳೇ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ. ಅಂದರೂ ಪೋಷಕರು, ಮಕ್ಕಳು ಇಂಥಹ ನಿರ್ಧಾರಕ್ಕೆ ಅದೇಕೆ ಬರುತ್ತಾರೆ? ಅದಕ್ಕೆ ಕಾರಣವೆಂದರೆ ಭಯ, ಸೋಲಿನ ಭಯ. ಸಮಾಜವನ್ನು ಎದುರಿಸಲಾಗದ ಭಯ.
(Letters to Daughter)ಮಗಳೇ, ಬದುಕಿನಲ್ಲಿ ಹಗಲು ರಾತ್ರಿಗಳು ಇವೆ ಎಂದ ಮೇಲೆ ಸೋಲು ಗೆಲುವುಗಳು, ಕಷ್ಟ ಸುಖಗಳು ಇದ್ದೇ ಇರುತ್ತವೆ. ಗೆಲುವು ಬಂದಾಗ ಹಿಗ್ಗದೇ ಸೋಲು ಬಂದಾಗ ಕುಗ್ಗದೇ ಇದ್ದರೆ ಬದುಕೇ ಮುಂದೆ ನಮ್ಮನ್ನು ಗೌರವಿಸುತ್ತದೆ. ಇಂದು ತೊಂದರೆಯಾಗಿರುವುದೇನು ಗೊತ್ತಾ ಪುಟ್ಟಾ, ಅಪ್ಪ ಅಮ್ಮನಿಗೆ ‘ತಮಗಿಲ್ಲದ ಸೌಕರ್ಯವನ್ನೆಲ್ಲ ಮಕ್ಕಳಿಗೆ ಒದಗಿಸಿ ಕೊಟ್ಟಿದ್ದೇವೆ, ಹಗಲಿರುಳು ದುಡಿದು ಸಂಪಾದಿಸಿದ್ದೆಲ್ಲವನ್ನೂ ಮಕ್ಕಳ ಶಾಲೆಯ ಫೀಸಿಗಾಗಿ ತುಂಬಿದ್ದೇವೆ. ಹಾಗಾಗಿ ಮಕ್ಕಳು ಶೇಕಡಾ 98% ಕ್ಕಿಂತ ಹೆಚ್ಚು ತೆಗೆಯಲೇ ಬೇಕು!’ ವ್ಯವಸ್ಥೆಯೆಲ್ಲವನ್ನೂ ಮಾಡಿಕೊಟ್ಟ ಕೂಡಲೇ ಅಂಕಗಳು ಬರುವುದಿಲ್ಲ ಮಗೂ. ಅಪ್ಪ ಅಮ್ಮ ಮಕ್ಕಳಿಗೆ ತಮ್ಮ ಬದುಕಿನ ಕಷ್ಟವೇನೆಂಬುದನ್ನು ಅರಿವು ಮಾಡಿಕೊಡಬೇಕು. ತಾವು ಬಂದ ಹಿನ್ನೆಲೆಯೇನೆಂಬುದನ್ನು ಮನದಟ್ಟು ಮಾಡಿಕೊಡಬೇಕು(Letters to Daughter).
ಓದಲೇಬೇಕೆಂಬ ಛಾತಿಯನ್ನು ಮಕ್ಕಳಲ್ಲಿ ತುಂಬಬೇಕು. ಜತೆಗೆ ಪ್ರಾಮಾಣಿಕವಾಗಿ ಓದಬೇಕೆಂಬುದನ್ನು ಅರ್ಥಮಾಡಿಸಬೇಕು. ಇಷ್ಟಿದ್ದರೆ ಮಕ್ಕಳು ಮೂರನೇ ದರ್ಜೆಯಲ್ಲಿ ಉತ್ತೀರ್ಣರಾದರೂ ಮುಂದಿನ ಬದುಕನ್ನು ಚೆನ್ನಾಗಿಯೇ ಕಟ್ಟಿಕೊಳ್ಳುತ್ತಾರೆ. ಓದಬೇಕೆಂಬ ಹಟವಿದ್ದು ನಿನ್ನ ಸಾಮರ್ಥ್ಯವನ್ನಷ್ಟೂ ಬಳಸಿಕೊಂಡು ಗೆಲುವು ಸಾಧಿಸಹೊರಟರೆ ನಿನ್ನ ಪ್ರಯತ್ನವೇ ನಿನಗೆ ಯಶಸ್ಸು ತಂದುಕೊಡುತ್ತದೆ ಎಂಬುದಕ್ಕಿಂತಲೂ ನೀನು ಗಳಿಸುವ ಪ್ರತಿಯೊಂದು ಅಂಕವೂ ಗೌರವಿಸಲ್ಪಡುತ್ತದೆ.
ನಾವು ಚಿಕ್ಕವರಿದ್ದಾಗ ಬೇರೆಬೇರೆ ಬಗೆಯ ಆಟಗಳನ್ನು ಆಡುತ್ತಿದ್ದೆವು. ನಿಮಗೀಗ ಅದರ ಹೆಸರುಗಳನ್ನು ಕೇಳಿದರೆ ನಗು ಬರಬಹುದು. ಕಪ್ಪೆಜಿಗಿತವೋ, ಮೀನುಬಲೆಯೋ.. ಇಂಥವೆಲ್ಲ ಆಟಗಳು. ನಾನು ಒಂದನೇ ತರಗತಿಯಲ್ಲಿದ್ದಾಗಲೊಮ್ಮೆ ಕಪ್ಪೆಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಾನು ಆಟೋಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದುದು ಹೈಸ್ಕೂಲಿನಲ್ಲಷ್ಟೇ. ಅದಕ್ಕಿಂತ ಮೊದಲು ಕೊಂಚ ಸೋಮಾರಿಯೇ ಆಗಿದ್ದೆ. ಆರನೇ ತರಗತಿಯಿಂದೀಚೆಗೆ ದಿನಕ್ಕೆ ಹದಿನಾಲ್ಕು ಕಿಲೋಮೀಟರು ನಡಿಗೆ ಅನಿವಾರ್ಯವಾದಲ್ಲಿಂದ ಆಟೋಟಗಳಲ್ಲಿ ಭಾಗವಹಿಸುವುದು ಪ್ರಾರಂಭವಾಯ್ತು. ಅದಿರಲಿ, ಕಪ್ಪೆಜಿಗಿತ ಅಂದೆನಲ್ಲ, ನಾನು ಹಿಂದೆಯೂ ಅಲ್ಲದೇ ಮುಂದೆಯೂ ಅಲ್ಲದೇ ಕಪ್ಪೆಜಿಗಿತ ಎಂಬ ಜಿಗಿತದಲ್ಲಿದ್ದೆ. ನನ್ನೆದುರು ಒಂದು ಗುಲಾಬಿ ಬಣ್ಣದ ರಬ್ಬರು (ನಿಮ್ಮ ಮಾತಿನಲ್ಲಿ ಇರೇಸರ್) ಬಿದ್ದುದು ಕಂಡಿತು. ಅದೊಂಥರ ಸುಗಂಧವಿದ್ದ ರಬ್ಬರು.
ಅಯ್ಯೋ ಪಾಪ ಯಾರೋ ಬೀಳಿಸಿಕೊಂಡಿದ್ದಾರಲ್ಲ ಅಂತ ಬೇಜಾರಾಯ್ತು. ಕಪ್ಪೆ ಮಾಡಿದ್ದ ಕೈ ಬಿಟ್ಟು ರಬ್ಬರ್ ಹೆಕ್ಕಿದೆ. ಎದ್ದು ನಿಂತುಕೊಂಡು ‘ಟೀಚಾರ್.. ಯಾರದ್ದೋ ರಬ್ಬರ್ ಬಿದ್ದಿದೆ’ ಅಂದೆ! ನಾನು ಆಟದಿಂದ ಔಟ್! ಅಂದರೂ ಪಾಪ ಟೀಚರ್ ‘ಅದಿರಲಿ, ನೀನು ಮುಂದಕ್ಕೆ ಹೋಗು’ ಎಂದರು. ಕಡೆಯಲ್ಲಿ ನಾನೊಬ್ಬಳೇ ಕಪ್ಪೆಮಾಡಿಕೊಂಡು ಗೆರೆಯವರೆಗೂ ಹೋದೆ, ಕೊನೆಯಿಂದ ಮೊದಲಿಗಳಾದೆ. ಕೈಯೆಲ್ಲ ಚರ್ಮಕಿತ್ತಂತೆ ಆಗಿದ್ದುದಕ್ಕಿಂತ ಹೆಚ್ಚು ನನಗೆ ಆ ರಬ್ಬರ್ ಕಳೆದುಕೊಂಡವರ ಬಗ್ಗೆ ದುಃಖವಾಗಿತ್ತು. ಟೀಚರ್ ಬೈದರು.
ಆಡುವಾಗ ಓಡುವಾಗ ಗಮನ ಗುರಿಯ ಮೇಲೆ ಮಾತ್ರ ಇರಬೇಕು. ರಬ್ಬರ್ ಕಂಡಿದ್ದರೆ ಆಮೇಲೆ ಆದರೂ ಹೆಕ್ಕಬಹುದಿತ್ತು ಅಲ್ವಾ? ಹೌದು. ಬಹಳ ಸಂದರ್ಭ ನಮ್ಮ ಗುರಿಯ ಕಡೆಗೆ ಗಮನ ನೆಟ್ಟು ಓಡುವಾಗ ನಮ್ಮನ್ನು ಆಕರ್ಷಿಸುವ ಅದೆಷ್ಟೋ ಸಂಗತಿಗಳಿರುತ್ತವೆ. ನಾವು ವಿಚಲಿತರಾದರೆ ಹಿಂದುಳಿದುಬಿಡುತ್ತೇವೆ. ಎಂಥ ಪಾಠ ಹೇಳಿದ್ದರು ಟೀಚರ್! ಅಂದಿಗದು ಅರ್ಥವಾಗಿರಲಿಕ್ಕಿಲ್ಲವೇನೋ.. ಆದರೆ ಇಂದು ಸ್ಪಷ್ಟವಾಗಿ ಅರ್ಥವಾಗಿದೆ.
ಮಗೂ, ಹಾಗೆಂದು ಸೋಲಿನಿಂದಲೂ ಕಲಿಯುವುದು ತುಂಬಾ ಇರುತ್ತದೆ. ಸೋಲಿಗಿಂತ ದೊಡ್ಡ ಪಾಠವೇನೂ ಇಲ್ಲ ಬದುಕಿನಲ್ಲಿ. ಸೋಲನ್ನು ಸ್ವೀಕರಿಸುವ ಧೈರ್ಯ ನಮ್ಮಲ್ಲಿರಬೇಕು ಅಷ್ಟೇ. ತರಗತಿಯಲ್ಲಿ ಒಂದೆರಡು ಅಂಕಗಳನ್ನು ಕಡಿಮೆ ತೆಗೆದರೆ ದಂಡಿಸುವ ಎಷ್ಟೋ ಮಂದಿ ಹೆತ್ತವರನ್ನು ಕಂಡಿದ್ದೇನೆ. ಆ ಕಾರಣಕ್ಕೆ ಪರೀಕ್ಷೆಯೆಂದರೆ ಆತಂಕಕ್ಕೆ, ಖಿನ್ನತೆಗೆ ಒಳಗಾಗುವ ಮಕ್ಕಳನ್ನು ಕಂಡಿದ್ದೇನೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲದೇ ಹೋದಾಗ ತೀರ್ಪುಗಾರರನ್ನು‘ಅವರು ಸರಿಯಿಲ್ಲ’ ಅಂದುಕೊಂಡುಬಿಡುತ್ತೇವೆ.
ಆದರೆ ಪುಟ್ಟಾ, ಒಂದೆರಡು ಕಡೆಗಳಲ್ಲಿ ತೀರ್ಪುಗಾರರು ತಮ್ಮ ಕಡೆಯವರಿಗೆ ಮಾರ್ಕ್ ಹಾಕಿ ಆ ದಿನದ ಸ್ಪರ್ಧೆಯಲ್ಲಿ ಗೆಲ್ಲಿಸಬಹುದು. ಅಥವಾ ಗೆದ್ದವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಬಹುದು. ಆದರೆ ಯಾವಾಗ ನಮ್ಮೊಳಗಿನ ಅಂತಃಸತ್ವ, ಅಂತಃಶಕ್ತಿ ಸದೃಢವಾಗಿರುವುದೋ ಬದುಕಿನಲ್ಲಿ ಗೆಲ್ಲುವವರು ನಾವೇ ಆಗುತ್ತೇವೆ. ಸೋಲುಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸುವ ದೃಢಮನಸ್ಸು ನಿನ್ನಲ್ಲಿದ್ದರೆ ಗೆಲುವು ನಿನ್ನನ್ನು ಅಹಂಕಾರಿಯನ್ನಾಗಿಸುವುದಿಲ್ಲ, ಸೋಲು ನಿನ್ನನ್ನು ಕಂಗೆಡಿಸುವುದಿಲ್ಲ.
ಕಂದಾ, ಶಾಲಾ ಪರೀಕ್ಷೆಗಳಲ್ಲಿ ಶಾಲೆಯಲ್ಲಿ ಕೊಡುವ ಟಾಪರ್ ಬ್ಯಾಡ್ಜ್ ಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನೀನೂ ತಮ್ಮನೂ ಶ್ರದ್ಧೆಯಿಂದ ಓದುವುದನ್ನು ನೋಡುವಾಗ ಸಮಾಧಾನವಾಗುತ್ತದೆ. ಒಂದೊಮ್ಮೆ ಟಾಪರ್ ಬ್ಯಾಡ್ಜ್ ಗೆಳತಿಯರ ಪಾಲಾದಾಗ ಕಣ್ಣರಳಿಸಿಕೊಂಡು ಈ ಸಲ ಇವಳು ಫಸ್ಟ್, ಇವಳು ಸೆಕೆಂಡ್.. ನನ್ನ ಬ್ಯಾಡ್ಜ್ ಹೋಯ್ತು ಅಂತ ನೀನು ಹೇಳುವುದನ್ನು ಕೇಳಿದಾಗ ನಿನ್ನಲ್ಲಿರುವ ಪ್ರಬುದ್ಧತೆ ಕೆಲವೊಮ್ಮೆ ನನಗೆ ಪಾಠವೆನಿಸುತ್ತದೆ. ಯೋಗ ಸ್ಪರ್ಧೆಯಲ್ಲೂ ವಲಯ ಮಟ್ಟದಲ್ಲಿ ಭಾಗವಹಿಸಿದ ನೀನು ಉತ್ತಮ ಸ್ಪರ್ಧೆ ಕೊಟ್ಟು ಬಂದಿದ್ದಿ ಎಂವ ಬಗ್ಗೆ ನಮಗೆ ಹೆಮ್ಮೆಯಿದೆ. ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಎಂಬ ತಿಳುವಳಿಕೆ ಸದಾ ಇರಲಿ. ಇನ್ನೂ ಹೇಳುವುದು ತುಂಬಾ ಇದೆ. ಇನ್ನೊಮ್ಮೆ ಬರೆಯುವೆ.
ಇಂತೀ ಆಶೀರ್ವಾದಗಳೊಂದಿಗೆ,
ಅಮ್ಮ
