ನೋಡಲು ನಿನ್ನ ಮುಗುಳುನಗೆ, ಅರಿವಿಗೆ ಇಲ್ಲ ನಾ ನನಗೆ…
ನೀನ್ನೊಮ್ಮೆ ನಕ್ಕರೆ ಹೀಗೆ, ಕಳೆದೋಗುವೆ ನಾ ನಿನ್ನೊಳಗೆ..
Poetic Love Story: ಆ ಕ್ಷಣದಲ್ಲಿ ಕಾಲವೇ ನಿಂತಂತೆ, ಗಾಳಿಯೂ ತನ್ನ ದಾರಿಯನ್ನು ಮರೆತಂತೆ, ಹೃದಯದ ನಾದವೇ ಹೊಸ ರಾಗವನ್ನು ಹಿಡಿದಂತೆ. ನಿನ್ನ ನೋಟ, ನಿನ್ನ ನಗು ಇವೆರಡರ ನಡುವೆ ನಾನು ಸಂಪೂರ್ಣವಾಗಿ ಕಳೆದುಹೋದೆ.
ಒಮ್ಮೆ ನೀನು ನಕ್ಕರೆ ಹೀಗೆ, ಕಳೆದ್ದೋಗುವೆ ನಾ ನಿನ್ನೊಳಗೆ. ಅದು ನಗು ಅಲ್ಲ, ನನ್ನ ಬದುಕಿನ ಬೆಳಕು. ಅದು ಕಣ್ಣುಗಳ ಚುಮುಕು ಅಲ್ಲ, ನನ್ನ ಕನಸುಗಳ ದೀಪ. ಅದು ಮಾತುಗಳ ಸೌಂದರ್ಯವಲ್ಲ, ನನ್ನ ಹೃದಯದ ಪ್ರಾರ್ಥನೆಯ ಉತ್ತರ. ಮೊದಲ ಭೇಟಿಯೇ ಪ್ರೇಮಕಾವ್ಯದ ಮೊದಲ ಪದ್ಯ. ಮಾತು ಮಾತಿಗೆ ಬೆಸೆದುಕೊಂಡು, ನೋಟ ನೋಟಕ್ಕೆ ನಂಟಾಗಿ, ಮೌನವೇ ಹೃದಯಗಳನ್ನು ಹತ್ತಿರ ಮಾಡಿತು. ಅಲ್ಲಿ ವಾಗ್ದಾನಗಳಿರಲಿಲ್ಲ, ಆದರೆ ಮೌನದಲ್ಲಿ ಅರಳಿದ ಭರವಸೆ ಇತ್ತು. ಅಲ್ಲಿ ಮೆರವಣಿಗೆಗಳಿರಲಿಲ್ಲ, ಆದರೆ ಕಣ್ಣಿನ ಆಳದಲ್ಲಿ ಹೊಳೆಯುವ ಪ್ರೇಮದ ನಕ್ಷತ್ರವಿತ್ತು(Poetic Love Story).
ಇದನ್ನೂ ಓದಿ: Letters to Daughter: ಮಗಳೇ, ಬದುಕಲ್ಲಿ ಹಗಲು ರಾತ್ರಿಗಳು ಇವೆ ಎಂದ ಮೇಲೆ ಸೋಲು ಗೆಲುವುಗಳು ಇದ್ದೇ ಇರುತ್ತವೆ
ನಿನ್ನೊಡನೆ ನಡೆದುಕೊಂಡಾಗ ಹಾದಿಯೂ ಹೂವಿನ ಹಾಸೆಯಂತೆ ಕಾಣುತ್ತದೆ. ನಿನ್ನೊಡನೆ ಮಾತಾಡಿದಾಗ ಪದಗಳೇ ಕವಿತೆಯಾಗುತ್ತವೆ. ನಿನ್ನಿಲ್ಲದ ಕ್ಷಣವು ಶತಮಾನಗಳ ದೀರ್ಘತೆಗೆ ಸಮಾನ. ನಿನ್ನೊಂದಿಗಿರುವ ಕ್ಷಣವು ಜೀವಮಾನದ ಶಾಶ್ವತತೆ. ಪ್ರೇಮವೆಂದರೆ ಕೇವಲ ಹೃದಯಗಳ ಸೇರುವಿಕೆಯಲ್ಲ, ಅದು ಎರಡು ಆತ್ಮಗಳ ಸಂಗಮ, ಎರಡು ಕನಸುಗಳ ಸಮಾಗಮ, ಎರಡು ಬದುಕಿನ ಒಂದೇ ಗಮ್ಯ.
ಹೀಗೇ ದಿನದಿಂದ ದಿನಕ್ಕೆ ನಿನ್ನ ನಗು ನನ್ನ ಜೀವನದ ಪ್ರಾರ್ಥನೆಯಾಯಿತು. ನಿನ್ನ ಸಾನಿಧ್ಯ ನನ್ನ ಬಾಳದ ಶಾಂತಿಯಾಯಿತು. ನಿನ್ನ ಪ್ರೀತಿ ನನ್ನ ಆತ್ಮದ ನಿತ್ಯ ನಾದವಾಯಿತು. ನಿನ್ನ ನಗು ನನ್ನ ಬದುಕಿನ ಬೆಳಕು, ನಿನ್ನ ನೋಟ ನನ್ನ ಕನಸಿನ ಗುರಿ, ನಿನ್ನ ಮಾತು ನನ್ನ ಹೃದಯದ ರಾಗ, ನೀನೇ ನನ್ನೊಳಗೆ ಹರಿಯುವ ಜೀವಧಾರೆ.
ದಿನದಿಂದ ದಿನಕ್ಕೆ ನಿನ್ನ ನೆನಪುಗಳು ನನ್ನನ್ನು ಆವರಿಸುತ್ತಿದ್ದವು. ಬದುಕಿನ ಪ್ರತಿಯೊಂದು ಪುಟದಲ್ಲೂ ನಿನ್ನ ಹೆಸರು ಬರೆಯುತ್ತಲೇ ಇದ್ದೆ. ಅಕ್ಷರಗಳನ್ನು ಬರೆದರೆ ಅದು ಕವಿತೆಯಾಗುತ್ತಿತ್ತು, ಗಾನವನ್ನು ಹಾಡಿದರೆ ಅದು ನಿನ್ನ ನೆನಪುಗಳ ಸಂಗೀತವಾಗುತ್ತಿತ್ತು.
ಒಂದು ಸಂಜೆ, ಮಳೆಯ ತೊಟ್ಟಿಲಿನಲ್ಲಿ ನಾವು ಇಬ್ಬರೂ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕ್ಷಣ ಮರೆಯಲಾಗದು. ಗಾಳಿಯ ತಂಪು, ಹನಿಗಳ ಮುತ್ತು, ನಿನ್ನ ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಆ ಮೃದುವಾದ ಕಿರಣ… ಆಗ ನಿನ್ನ ಕೈ ನನ್ನ ಕೈಗೆ ತಾಗಿದಾಗ, ಹೃದಯವು ಅಕಸ್ಮಾತ್ ಮಿಂಚಿನಂತೆ ನಡುಗಿತು. ಆ ತಾಕಾಟದಲ್ಲಿ ಅನೇಕ ವಾಗ್ದಾನಗಳು ಮೌನದಲ್ಲೇ ಮೂಡಿದವು “ನಿನ್ನ ಹತ್ತಿರದಿಂದ ನಾನು ಎಂದಿಗೂ ದೂರವಾಗುವುದಿಲ್ಲ” ಎಂಬುದು ಅದರಲ್ಲಿ ಪ್ರಮುಖ.
ನಿನ್ನಿಲ್ಲದ ಹೊತ್ತಿನಲ್ಲಿ, ಆಕಾಶದ ನಕ್ಷತ್ರಗಳೇ ನನಗೆ ಮಾತಾಡುತ್ತಿವೆ ಎಂದು ಅನ್ನಿಸುತ್ತಿತ್ತು. ಚಂದ್ರನು ತನ್ನ ಬೆಳಕಿನಲ್ಲಿ ನಿನ್ನ ನಗುವನ್ನು ತೋರಿಸುತ್ತಿದ್ದ. ಗಾಳಿ ತನ್ನ ತಂಪಿನಲ್ಲಿ ನಿನ್ನ ಸ್ಪರ್ಶವನ್ನು ನೆನಪಿಸುತ್ತಿತ್ತು. ಹೀಗೆ ಪ್ರತಿಯೊಂದು ಪ್ರಪಂಚವೇ ನಿನ್ನ ಹೆಸರನ್ನು ಜಪಿಸುತ್ತಿತ್ತು. ಒಂದು ದಿನ ನೀನು ಕೇಳಿದ್ದೆ “ನೀನು ನನ್ನಲ್ಲಿ ಏನು ಕಂಡೆ?” ನಾನು ಉತ್ತರಿಸಿದ್ದೆ “ನೀನು ನನಗೆ ಕನ್ನಡಿ. ನಿನ್ನಲ್ಲಿ ನಾನು ನನ್ನನ್ನು ಕಂಡೆ. ನಿನ್ನ ನಗುವಿನಲ್ಲಿ ನನ್ನ ಬದುಕಿನ ಸಂತೋಷ ಕಂಡೆ. ನಿನ್ನ ಕಣ್ಣಲ್ಲಿ ನನ್ನ ಕನಸುಗಳ ಆಕಾಶ ಕಂಡೆ.”
ಹೀಗೆ ನಮ್ಮ ಕಥೆ ಪ್ರೀತಿಯ ತೀರವರೆಗೆ ಸಾಗುತ್ತಿತ್ತು. ಅದು ಕೇವಲ ಪ್ರೇಮವಲ್ಲ, ಬದುಕಿನ ನಿತ್ಯ ಕಾವ್ಯ. ಎರಡು ಆತ್ಮಗಳ ಸಂಗಮ, ಎರಡು ಹೃದಯಗಳ ತಾಳಮೇಳ. ಇಂದು ನಾನು ಬರೆದ ಈ ಕಥೆಯ ಪ್ರತಿಯೊಂದು ಸಾಲು ನಿನ್ನ ಹೆಸರಿನಿಂದ ತುಂಬಿದೆ. ನಿನ್ನೊಡನೆ ಇರುವವರೆಗೂ ನನ್ನ ಬದುಕು ಪ್ರೇಮಕಾವ್ಯದ(Poetic Love Story) ನಿತ್ಯ ಹರಿವಿನ ನದಿ.
ಈ ಕಥೆ ಇನ್ನೂ ಮುಗಿದಿಲ್ಲ…
ಏಕೆಂದರೆ ಪ್ರೇಮವೇ ಅನಂತ, ನಿನ್ನ ನಗುವೇ ಅಮರ, ನನ್ನ ಹೃದಯವೇ ಅದಕ್ಕೆ ಶಾಶ್ವತ ಸಾಕ್ಷಿ.(Poetic Love Story)
–ಲಿಖಿತ್ ಹೊನ್ನಾಪುರ
