Nachiketa and Yama: ನಚಿಕೇತ ಮತ್ತು ಯಮನ ಸಂವಾದ : ಉಪನಿಷತ್ತಿನಲ್ಲಿ ಬರುವ ಒಂದು ಕಥೆ. ಮನುಷ್ಯ ಸಾವನ್ನಪ್ಪಿದ ನಂತರ, ಅಲ್ಲಿಗೇ ಅವನ ಬದುಕು ಅಂತ್ಯವಾಗುತ್ತಾ? ಇಲ್ಲವಾ? ಜೀವಾತ್ಮಕ್ಕೆ ಸಾವಿಲ್ಲ ಎನ್ನುವುದಾದರೆ, ಮುಂದೆ ಆ ಜೀವಾತ್ಮ ಯಾವ ರೂಪ ಪಡೆದುಕೊಳ್ಳುತ್ತದೆಂದು ತಿಳಿಸಿಕೊಡುವಂತಹ ಕಥೆ ಇದು.
ವಾಜಶ್ರವಸ್ ಎಂಬ ಋಷಿಯೊಬ್ಬ ವಿಶ್ವಜೀತ್ ಎಂಬ ಯಜ್ಞ ಮಾಡುತ್ತಿರುತ್ತಾನೆ. ಸಾತ್ವಿಕವಾದ ಋಷಿಯಾಗಿದ್ದರೂ ಅವನು ಕೋಪಿಷ್ಠ.ಭಾವೋದ್ವೇಗಕ್ಕೊಳಗಾಗಿ ಅವಿವೇಕದಿಂದ ವರ್ತಿಸುತ್ತಿದ್ದ.
ಅವನ ಮಗನೇ ನಚಿಕೇತ. ಇನ್ನೂ ಬಾಲಕ.
ಯಜ್ಞ ಯಾಗಾದಿಗಳನ್ನು ಮಾಡುವಂತಹ ಸಂದರ್ಭದಲ್ಲಿ, ಹೋಮಕ್ಕೆ ಬಂದ ಪಂಡಿತರಿಗೆ, ಬ್ರಾಹ್ಮಣರಿಗೆ ದಕ್ಷಿಣೆಯನ್ನು, ಕಾಣಿಕೆಯನ್ನು ಕೊಡುವುದು ಸಂಪ್ರದಾಯ ಹಾಗೂ ಪದ್ಧತಿಯಾಗಿತ್ತು ಆಗಿನ ಕಾಲದಲ್ಲಿ. ದಾನವನ್ನು ಕೊಡುವಂತಹ ಸಮಯದಲ್ಲಿ, ದಾನಕ್ಕಾಗಿ ಯಾವ ವಸ್ತುಗಳನ್ನು ಅಥವಾ ಯಾವ ಪರಿಕರಗಳನ್ನು ಕೊಡುತ್ತೇವೋ, ಆ ವಸ್ತುಗಳು ಅಥವಾ ಪರಿಕರಗಳು ಉತ್ತಮ ಗುಣಮಟ್ಟದ್ದಾಗಿರಬೇಕು.
ಆದರೆ ವಾಜಶ್ರವಸ್ಸು ಕೊಡತಕ್ಕಂತಹ ದಾನಗಳು ಅಷ್ಟೊಂದು ಯೋಗ್ಯವಲ್ಲದವಾಗಿರುತ್ತಿದ್ದವು ಮತ್ತು ಅನುಪಯುಕ್ತಕರವಾದ ವಸ್ತುಗಳನ್ನೇ ಅವನು ದಾನ ಮಾಡುತ್ತಿದ್ದನು. ಅವನು ಬ್ರಾಹ್ಮಣರಿಗೆ ದಾನ ಮಾಡುವಾಗಲೂ ಗೊಡ್ಡುಹಸುಗಳು ಮುದಿಯಾದ,ಹಲ್ಲುಗಳಿಲ್ಲದ, ಅನಾರೋಗ್ಯಯುಕ್ತ ಗೋವುಗಳನ್ನು ದಾನ ಮಾಡುತ್ತಿದ್ದನು. ಇದನ್ನು ತಿಳಿದ ಅವನ ಮಗ, ಬಾಲಕ ನಚಿಕೇತ, ಶಾಸ್ತ್ರ ವಿಹಿತವಾದ ಮತ್ತು ಮನಸ್ಸಿಲ್ಲದ ದಾನಗಳಿಂದ ತಂದೆಗೆ ಯಜ್ಞದ ಫಲ ದೊರೆಯುವುದಿಲ್ಲವೆಂದು ನೋಯುತ್ತಾನೆ.ತನ್ನ ತಂದೆಗೆ ಸಾತ್ವಿಕ ಫಲವು ಸಿಗಲೆಂದು ಬಯಸುತ್ತಾನೆ.
ನಚಿಕೇತ(Nachiketa and Yama) ತನ್ನಲ್ಲಿ ಮೂಡಿದ ಸಂದೇಹಗಳನ್ನು ಅವನ ತಂದೆಗೆ ಕೇಳಿದನು. “ತಂದೆ, ದಾನಗಳನ್ನು ಅರ್ಹರಾದವರಿವೆ, ಯೋಗ್ಯವಾದ ವಸ್ತುಗಳನ್ನೇ ಕೊಡಬೇಕು ಎಂದು ಹೇಳುತ್ತದೆ ಶಾಸ್ತ್ರ, ಆದರೆ ನೀವು ಈ ರೀತಿ ಅನುಪಯುಕ್ತ ವಸ್ತುಗಳನ್ನು ದಾನ ಮಾಡುತ್ತಿರುವಿರಿ, ಇದು ಸರಿಯಾ?” ಅಂತ. ಆದರೆ ತಂದೆ ವಾಜಶ್ರವಸ್ಸು ಹೇಳುವನು, “ನಿನಗೆ ಇದೆಲ್ಲ ತಿಳಿಯುವುದಿಲ್ಲ, ಸುಮ್ಮನೆ ಇರು.” ಎಂದು.
ಇಷ್ಟಕ್ಕೆ ಸುಮ್ಮನಾಗದ ನಚಿಕೇತ, “ನಿಮ್ಮ ಹತ್ತಿರವಿರುವ ಎಲ್ಲಾ ವಸ್ತುಗಳನ್ನು ನೀವು ದಾನವಾಗಿ ಕೊಡುತ್ತಿದ್ದೀರಾ, ಹಾಗದರೆ ನನ್ನನ್ನು ಯಾರಿಗೆ ದಾನವಾಗಿ ಕೊಡುತ್ತೀರಾ?” ಎಂದು ಕೇಳುತ್ತಾನೆ. ಆದರೆ ತಂದೆ ವಾಜಶ್ರವಸ್ಸು, ನಚಿಕೇತನನ್ನು ಅಲಕ್ಷಿಸಿ, “ಸುಮ್ಮನೆ ಕುಳಿತುಕೋ” ಎಂದು ಗದರಿಸಿ, ಮತ್ತೆ ತನ್ನ ಯಜ್ಞ ಯಾಗಾದಿಗಳ ಕೆಲಸದಲ್ಲಿ ನಿರತನಾಗುತ್ತಾನೆ.
ಆದರೆ ಅಷ್ಟಕ್ಕೆ ಸುಮ್ಮನಿರದ ನಚಿಕೇತ(Nachiketa and Yama), ಮತ್ತೆ ಒಂದು ಸಾರಿ ಪ್ರಶ್ನೆ ಕೇಳುತ್ತಾನೆ, “ತಂದೆ, ಎಲ್ಲವನ್ನೂ ದಾನವಾಗಿ ಕೊಡುವ ನೀವು ನನ್ನನ್ನು ಯಾರಿಗೆ ದಾನವಾಗಿ ಕೊಡುತ್ತೀರಾ?” ಅಂತ. ಕೋಪ ಬಂದರೂ, ಅವನು ಸುಮ್ಮನಾಗಿ, ಅವನನ್ನು ನಿರ್ಲಕ್ಷಿಸಿ ಮತ್ತೆ ತನ್ನ ಕಾರ್ಯದಲ್ಲಿ ತೊಡಗುತ್ತಾನೆ ವಾಜಶ್ರವಸ್ಸು.ಬಾಲಕ ನಚಿಕೇತನಿಗೆ ಹುಟ್ಟಿರುವ ಪ್ರಶ್ನೆ ಸಣ್ಣದಲ್ಲ. ಆ ಕುತೂಹಲ ತಣಿಯದೆ ಅವನು ಸುಮ್ಮನಿರುವವನಲ್ಲ. ಅವನ ತಂದೆಗೆ ಮತ್ತೆ ಕೇಳುತ್ತಾನೆ, “ತಂದೆ,ನನ್ನನ್ನು ಯಾರಿಗೆ ದಾನವಾಗಿ ಕೊಡುತ್ತೀರಾ?” ಇದನ್ನು ಕೇಳಿದ ಕೂಡಲೇ, ತುಂಬಾ ಕೋಪಗೊಂಡು, ರೋಷದಿಂದ ವಾಜಶ್ರವಸ್ಸು ಹೇಳುತ್ತಾನೆ, “ನಿನ್ನನ್ನು ಯಮನಿಗೆ ದಾನವಾಗಿ ಕೊಟ್ಟಿದ್ದೇನೆ ಹೋಗು” ಎಂದು.
ಅಷ್ಟೇ! ನಚಿಕೇತನಿಗೆ(Nachiketa and Yama) ತಂದೆ ಆಡಿದ ಮಾತು ಅವನಲ್ಲಿ ಅನುರಣಿಸುತ್ತಿದೆ. ಅವನು ಅದೇ ಚಿಂತೆಯಲ್ಲಿರುತ್ತಾನೆ. ಯಮನನ್ನು ಹೋಗಿ ಭೇಟಿಯಾಗಲು ತವಕಿಸುತ್ತಾನೆ.ಕೂಡಲೇ ಯಮನ ವಾಸಸ್ಥಳ ಸಂಯಮಿನೀ ನಗರಕ್ಕೆ ಹೋಗುತ್ತಾನೆ. ಅಲ್ಲಿ ಯಮ ಇರದುದರಿಂದ ಅಲ್ಲಿ ಮೂರು ದಿನಗಳ ಕಾಲ ಯಮನ ಅರಮನೆಯ ಬಾಗಿಲ ಬಳಿ ನಿಂತುಕೊಳ್ಳುತ್ತಾನೆ ಅನ್ನ ಆಹಾರಗಳಿಲ್ಲೆ. ಆದರೆ ಮೂರು ದಿನಗಳ ನಂತರ ಬಂದ ಯಮನು ಧ್ಯಾನಮಗ್ನನಾಗಿದ್ದ ಬಾಲಕನನ್ನು ಅವನ ತೇಜಸ್ಸನ್ನು ಕಂಡು ನಮಸ್ಕರಿಸಿ
ಈ ರೀತಿ ಮೂರು ದಿನಗಳ ಕಾಲ ಅತಿಥಿಯನ್ನು ಕಾಯಿಸಿದ್ದಕ್ಕಾಗಿ ಕ್ಷಮೆ ಕೇಳಿ, “ನೀನು ಯಾರು, ಯಾತಕ್ಕಾಗಿ ಬಂದಿದ್ದಿ?” ಎಂದು ಕೇಳುತ್ತಾನೆ. ಆಗ ನಡೆದ ಕಥೆಯನ್ನೆಲ್ಲ ಹೇಳಿದ ನಚಿಕೇತ,ನನ್ನ ತಂದೆ ಯಜ್ಞದ ಸಮಯದಲ್ಲಿ ನನ್ನನ್ನು ನಿಮಗೆ ದಾನವಾಗಿ ಕೊಟ್ಟಿದ್ದಾರೆ.ನಾನು ಈಗ ನಿಮ್ಮ ಸೇವಕ.ಎಂದು ಹೇಳುತ್ತಾನೆ.
ಆಗ
ಯಮಧರ್ಮನು” ………
ಕಥೆ ಮುಂದುವರೆಯುವುದು…ನಾಳಿನ ಲೇಖನದಲ್ಲಿ ಓದಿ..
