(ಪತ್ರ ಇಪ್ಪತ್ತನಾಲ್ಕು) ಮಗಳೇ,
Letters to Daughter: ಖಾಲೀಲ್ ಗಿಬ್ರಾನ್ ಬರೆದ ‘ಆನ್ ಚಿಲ್ಡçನ್’ ಪದ್ಯವನ್ನು ದ್ವಿತೀಯ ಪಿಯುಸಿ ಮಕ್ಕಳಿಗೆ ಬೋಧಿಸುವುದಿದೆ. ಅದಕ್ಕೂ ಮುನ್ನ ಒಂದೆರಡು ಕತೆಗಳಿರಲಿ ಅಂತ ಹುಡುಕುತ್ತಿದ್ದೆ. ಅದರಲ್ಲಿ ಒಂದು ಕಥೆ ನನಗೆ ತುಂಬಾ ಇಷ್ಟವಾಯಿತು. ಬಹುಶಃ ನಿನಗೂ ಅದು ಅರ್ಥಪೂರ್ಣ ಅನ್ನಿಸಬಹುದು.
ಒಂದು ದೊಡ್ಡ ಕಂಪೆನಿಯಲ್ಲಿ ಮ್ಯಾನೇಜರ್ ಹುದ್ದೆಗಾಗಿ ಅಭ್ಯರ್ಥಿಗಳನ್ನು ಕರೆದಿರುತ್ತಾರೆ.
ಒಬ್ಬ ಶೈಕ್ಷಣಿಕವಾಗಿಯೂ ಸಾಮಾಜಿಕವಾಗಿಯೂ ಉತ್ತಮ ನಿರ್ವಹಣೆ ಹೊಂದಿದವನಿರುತ್ತಾನೆ. ಅವನನ್ನೇ ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದಾದಾಗ ಕಂಪೆನಿಯ ಡೈರೆಕ್ಟರ್ ಅವನನ್ನು ಮಾತಾಡಿಸಲು ಕರೆಯುತ್ತಾರೆ. ಇತರ ಎಲ್ಲಾ ವಿಷಯಗಳನ್ನೂ ಮಾತನಾಡುವುದಕ್ಕಿಂತ ಮೊದಲು ಅವನಲ್ಲಿ ಅವನ ತಂದೆತಾಯಿಯರ ಬಗ್ಗೆ ಕೇಳುತ್ತಾರೆ. ಅವರು ತುಂಬಾ ಬಡತನದ ಹಿನ್ನೆಲೆಯವರಾಗಿದ್ದು, ಬಟ್ಟೆ ಒಗೆಯುವ ಕೆಲಸವನ್ನು ಮಾಡುತ್ತಾರೆ ಎಂದು ಅವನು ವಿವರಿಸುತ್ತಾನೆ.
ಡೈರೆಕ್ಟರ್ ಅಭ್ಯರ್ಥಿಯಲ್ಲಿ ಅವನ ಕೈ ತೋರಿಸುವಂತೆ ಹೇಳುತ್ತಾರೆ. ಅವು ಅತ್ಯಂತ ಸ್ವಚ್ಛವೂ, ಮೃದುವಾಗಿಯೂ ಇರುತ್ತವೆ.‘ನೀನು ಎಂದೂ ತಂದೆತಾಯಿಯರೊಂದಿಗೆ ಕೆಲಸವನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿಲ್ಲವೇ’? ಎಂದು ಡೈರೆಕ್ಟರ್ ಕೇಳುತ್ತಾರೆ. ಅವನು ತಾನು ಓದಿನಲ್ಲಿ ವ್ಯಸ್ತನಾಗಿದ್ದುದರಿಂದ ಇತರ ಕೆಲಸಗಳನ್ನು ಮಾಡದಂತೆ ಹೆತ್ತವರು ನೋಡಿಕೊಂಡರು. ಅವರ ಆಶಯದಂತೆ ತಾನು ಕಷ್ಟಪಟ್ಟು ಓದಿದೆ ಎಂಬುದನ್ನು ವಿವರಿಸುತ್ತಾನೆ. ‘ಇಂದು ಮನೆಗೆ ಹೋದ ತಕ್ಷಣ ನಿನ್ನ ಅಪ್ಪ ಅಮ್ಮನ ಕೈಗಳನ್ನೊಮ್ಮೆ ನೋಡು. ಅವು ಹೇಗಿವೆ ಎಂಬುದನ್ನು ಗಮನಿಸು. ನಾಳೆ ಬೆಳಗ್ಗೆ ಮತ್ತೆ ಬಾ. ಮತ್ತಷ್ಟು ಮಾತಾಡುವುದಿದೆ’ ಎಂದು ಡೈರೆಕ್ಟರ್ ಅವನನ್ನು ಮನೆಗೆ ಕಳುಹಿಸುತ್ತಾರೆ.
ತನಗೆ ಕೆಲಸ ದೊರೆಯಿತೋ ಇಲ್ಲವೋ ಎಂಬ ಗೊಂದಲದಲ್ಲಿ ಅವನು ಸ್ವಲ್ಪ ದುಃಖದಿಂದಲೇ ಮನೆಗೆ ಹೋಗುತ್ತಾನೆ. ಅವನ ತಂದೆ ತಾಯಿ ಆಗಷ್ಟೇ ತಮ್ಮ ಕೆಲಸ ಮುಗಿಸಿ ಕುಳಿತಿರುತ್ತಾರೆ. ಮಗ ಅವರ ಕೈಗಳನ್ನು ತೋರಿಸುವಂತೆ ಹೇಳುತ್ತಾನೆ. ಅವರಿಗೆ ಅಚ್ಚರಿಯೂ ಮುಜುಗರವೂ ಆಗುತ್ತದೆ.
ನಿಧಾನಕ್ಕೆ ಅವನ ಮುಂದೆ ತಮ್ಮ ಅಂಗೈಯನ್ನು ತೆರೆದು ತೋರಿಸುತ್ತಾರೆ. ಅವು ಅತ್ಯಂತ ಒರಟಾಗಿಯೂ ಇರುತ್ತವೆ, ಕೆಲವೆಡೆ ಗಾಯವಾಗಿರುತ್ತದೆ. ಅದನ್ನು ನೋಡಿ ಮಗನಿಗೆ ತನ್ನ ಶಿಕ್ಷಣಕ್ಕಾಗಿ ತನ್ನ ಹೆತ್ತವರು ತೆತ್ತ ಬೆಲೆಯೇನು ಎಂಬುದು ಅರ್ಥವಾಗುತ್ತದೆ. ಮರುದಿನ ಒಗೆಯಲೆಂದು ದಣಿದು ಬಾಕಿಯುಳಿಸಿದ್ದ ಬಟ್ಟೆಗಳನ್ನೆಲ್ಲ ತಾನೇ ಒಗೆದು ಹಾಕುತ್ತಾನೆ. ಅವನಿಗರಿವಿಲ್ಲದಂತೆ ದುಃಖ ಉಮ್ಮಳಿಸಿ ಅಳುತ್ತಾನೆ. ಅಂದು ರಾತ್ರಿ ತಂದೆತಾಯಿಯರ ಜತೆಗೆ ಕುಳಿತುಕೊಂಡು ಮನಬಿಚ್ಚಿ ಮಾತಾಡುತ್ತಾನೆ, ಹೆತ್ತವರೂ ಹಗುರಾಗುತ್ತಾರೆ.
ಮರುದಿನ ಡೈರೆಕ್ಟರನ್ನು ಕಾಣುವುದಕ್ಕೆಂದು ಹೋದಾಗ ಅವರು ಅವನ ಕಣ್ಣುಗಳನ್ನು ಗಮನಿಸುತ್ತಾರೆ. ನಿನ್ನೆ ಸಂಜೆ ಏನೇನಾಯಿತೆಂಬುದನ್ನು ಅವನಲ್ಲಿ ಕೇಳಿದಾಗ ಅವನು ಅದೆಲ್ಲವನ್ನೂ ಸ್ಪಷ್ಟವಾಗಿ ಹೇಳುತ್ತಾನೆ. ತಾನು ಇಂದು ಈ ಹಂತಕ್ಕೇರುವಲ್ಲಿ ತಂದೆತಾಯಿಯರ ಶ್ರಮದ ಮೌಲ್ಯವನ್ನು ಅರ್ಥ ಮಾಡಿಕೊಂಡಿದ್ದೇನೆದು ಹೇಳುತ್ತಾನೆ.
ಇತರರ ಶ್ರಮವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯಿದ್ದವನು ಮಾತ್ರ ಕಂಪೆನಿಯೊAದರ ಮ್ಯಾನೇಜರ್ ಆಗಬಲ್ಲ. ಆ ಹಂತಕ್ಕೇರುವ ಮೊದಲು ಅರ್ಥಮಾಡಿಕೊಳ್ಳಬೇಕಾಗಿರುವುದು ತನ್ನ ಸಾಧನೆಯಲ್ಲಿ ತನ್ನ ತಂದೆತಾಯಿಯರ ಕೊಡುಗೆಯೇನು ಎಂಬುದನ್ನು. ತನ್ನ ಸಹೋದ್ಯೋಗಿಗಳನ್ನು ತಿಳಿದುಕೊಳ್ಳಬೇಕಾದರೆ ಮೊದಲು ತನ್ನ ಮನೆಮಂದಿಯನ್ನು ತಿಳಿದುಕೊಳ್ಳಬೇಕು ಎಂಬುದು ಬಹಳ ಸ್ಪಷ್ಟ ಸಂದೇಶ.
ಮಗಳೇ(Letters to Daughter), ಇಂದು ನಿನ್ನ ವಯಸ್ಸಿನ, ಹದಿಹರೆಯದ ಅನೇಕ ಮಕ್ಕಳನ್ನು ನೋಡುತ್ತೇನಲ್ಲ, ಅಪ್ಪ ಅಮ್ಮ ದುಡಿಯುವುದು ಅವರ ಕರ್ಮ, ತಿಂದು ಸಂತೋಷವಾಗಿರುವುದು ನಮ್ಮ ಧರ್ಮ ಎಂಬ ಮನಸ್ಥಿತಿಯನ್ನು ಬೆಳೆಸಿಕೊಂಡವರಿದ್ದಾರೆ. ಅಪ್ಪ ಅಮ್ಮ ಕಷ್ಟಪಡುತ್ತಾರೆ ಎಂಬ ಅರಿವು ಮಕ್ಕಳಿಗಿದ್ದರೆ ಅವರ ಕಷ್ಟವನ್ನು ದೂರಮಾಡುವುದಕ್ಕೆ, ತಮ್ಮ ಬದುಕನ್ನು ರೂಪಿಸಿದ ಅಪ್ಪ ಅಮ್ಮನಿಗೆ ನೆಮ್ಮದಿಯ ನಾಳೆಗಳನ್ನು ಕೊಡುವುದಕ್ಕೆ ತಾವು ಓದಲೇಬೇಕು, ತಮ್ಮ ಸುಖವಷ್ಟೇ ಮುಖ್ಯವಲ್ಲ ಎಂಬುದು ಅರಿವಾಗುತ್ತದೆ.
ಆದರೆ ಮಗೂ, ತಾಯ್ತಂದೆಯರ ನೋವಿಗೆ ಸ್ಪಂದಿಸದ ಮಕ್ಕಳು, ಆ ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಳ್ಳದ ಮಕ್ಕಳು ಮುಂದೆ ತಮ್ಮ ಬದುಕಿನಲ್ಲಿ ಸಹೋದ್ಯೋಗಿಗಳ ಜತೆಗೆ, ಸಂಗಾತಿಯ ಜತೆಗೆ ಹೊಂದಿಕೊಳ್ಳುವ ಬಗೆ ಹೇಗೆ? ತಮ್ಮ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ತಮ್ಮ ಕರ್ತವ್ಯಗಳ ಬಗ್ಗೆ ಮಾತನಾಡುವುದನ್ನು ಹೇಳಿಕೊಡಬೇಕು ಅಲ್ಲವೇ ಮಗೂ?(Letters to Daughter)
ಒಬ್ಬರು ತಾಯಿ ಹೇಳುವುದನ್ನು ಕೇಳಿದೆ, ‘ಮಗಳು ಆಸೆ ಪಟ್ಟಳು ಅಂತ ಅವಳಿಗೆ ನೂರು ರೂಪಾಯಿಗೆ ಪೇಸ್ಟಿç ಕೊಡಿಸಿದೆ. ನನಗೂ ತುಂಬಾ ಹಸಿವಾಗಿತ್ತು. ಆದರೆ ಹೆಚ್ಚಿಗೆ ದುಡ್ಡಿರಲಿಲ್ಲ. ನೀರು ಕುಡಿದು ಮನೆಗೆ ಹೋದೆ. ರಾಗಿ ಅಂಬಲಿ ಕುಡಿದೆ…ಇಷ್ಟೆಲ್ಲಾ ಮಾಡಿ ನೋಡಿಕೊಂಡರೂ ಮಗಳು ನನಗೆ ಯಾವ ಬೆಲೆಯೂ ಇಲ್ಲದಂತೆ ಮಾಡುತ್ತಾಳೆ, ನನ್ನ ಕಷ್ಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ನನ್ನ ನೋವಿಗೆ ಸ್ಪಂದಿಸುವುದಿಲ್ಲ.’
ಅವರು ಕಣ್ಣೀರು ಹಾಕುವುದನ್ನು ನೋಡಿದರೆ ಸಂಕಟವಾಯ್ತು ನಿಜ, ಆದರೆ ಮತ್ತೆ ಅವರ ಮೇಲೆಯೇ ಸಿಟ್ಟು ಬಂತು. ನೂರು ರೂಪಾಯಿಗೆ ಮಗಳಿಗೆ ಪೇಸ್ಟಿç ಕೊಡಿಸುವ ಬದಲು ಇಬ್ಬರೂ ಹೊಟ್ಟೆತುಂಬಾ ಊಟಮಾಡಬಹುದಿತ್ತಲ್ಲ? ಮಗಳಿಗೆ ತಮಗಿರುವ ದುಡ್ಡಿನ ಕಷ್ಟವನ್ನು ಅರ್ಥ ಮಾಡಿಸಬೇಕಿತ್ತು ಅನ್ನುವುದು ಒಂದುಕಡೆ ಆದರೆ ಹಸಿವಾಗುವುದು ಮಗಳಿಗೆ ಮಾತ್ರವಲ್ಲ, ತಾನೂ ದಣಿದಿದ್ದೇನೆ ಎಂಬುದನ್ನು ಮಗಳು ತಿಳಿದುಕೊಳ್ಳುವಂತೆ ಇವರು ಬೆಳೆಸಬೇಕಿತ್ತಲ್ಲ.
ಪುಟ್ಟಾ, ಕೆಲವು ಸಲ ನೀವು ಕೇಳಿದ್ದೆಲ್ಲವನ್ನೂ ತೆಗೆದುಕೊಡುವುದಿಲ್ಲ ಎಂದರೆ ದುಡ್ಡಿಲ್ಲ ಎಂಬುದಕ್ಕಾಗಿ ಅಲ್ಲ. ದುಡ್ಡಿದ್ದರೂ ಅನೇಕ ಸಲ ದುಡ್ಡಿನ ಮೌಲ್ಯ ನೀವು ಅರಿಯಬೇಕಾದರೆ ಒಂದೆರಡು ದಿನ ಬೇಕು, ಬಯಸಿದ ವಸ್ತು ನಿಜವಾಗಿಯೂ ಅಗತ್ಯದ್ದೇ ಎಂಬುದನ್ನು ನೀವು ಯೋಚಿಸಬೇಕು. ಬಳಿಕವೂ ಅದು ಬೇಕಾದುದೇ ಹೌದಾದರೆ ಕೊಡಿಸಿಯೇ ಕೊಡಿಸುತ್ತೇವೆ. ಆದರೆ ನೀನೂ ಗಮನಿಸಿದಂತೆ ಒಂದೆರಡು ದಿನಗಳು ಕಳೆಯುವಷ್ಟರಲ್ಲಿ ನಿಮಗೇ ಅದು ಬೇಡ ಎನಿಸುತ್ತದೆ. ಒಂದು ವೇಳೆ ದುಡ್ಡು ಕೊಟ್ಟು ತಂದಿದ್ದರೂ ಅಷ್ಟೇ ಅಲ್ಲವೇ? ಅದು ಎರಡೇ ದಿನದಲ್ಲಿ ಮೂಲೆ ಸೇರುತ್ತಿತ್ತು.
ಮಗಳೇ(Letters to Daughter), ನಮ್ಮ ಮನೆಯ ಬೆಳಕು ನೀನು. ಹಿರಿಯರನ್ನು ಗೌರವಿಸುವುದನ್ನು, ಅವರ ಮಾತಿಗೆ ಬೆಲೆಕೊಡುವುದನ್ನು ನೀನು ಅರ್ಥಮಾಡಿಕೊಂಡAತೆ ನಿನ್ನ ಗೆಳತಿಯರಿಗೂ ಕಲಿಸುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸು. ಒಂದಿಬ್ಬರಾದರೂ ಬದಲಾದರೆ ಅವರೂ ಜೀವನಪೂರ್ತಿ ನಿನ್ನನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.(Letters to Daughter)
ಇಂತೀ ಆಶೀರ್ವಾದಗಳೊಂದಿಗೆ,
ಅಮ್ಮ
