Grandmother’s love: ಅಜ್ಜಿ ಎಂಬೊಂದು ವಿಸ್ಮಯ ಪ್ರತಿಯೊಬ್ಬರ ಜೀವನದಲ್ಲೂ ಇರಲೇಬೇಕು. ಇಲ್ಲದಿದ್ದರೆ ಆ ಬುದುಕಿನಲ್ಲಿ ಆ ವ್ಯಕ್ತಿ ದೊಡ್ಡದಾದ ಕೊರತೆಯೊಂದನ್ನು ತನಗರಿವಿಲ್ಲದಂತೆಯೇ ಅನುಭವಿಸಿದ್ದಾನೆಂದೇ ನನ್ನ ಅನಿಸಿಕೆ.ಅಜ್ಜಿ ಪ್ರತಿಯೊಬ್ಬರಿಗೂ ಯಾಕೆ ಅಷ್ಟೊಂದು ಆಪ್ತವಾಗುತ್ತಾಳೆ ? ಅಜ್ಜಿಯ ಮಹತ್ಚವೇನು ಜೀವನದಲ್ಲಿ? ಅಜ್ಜಿಯ ತೊಡಯ ಮೇಲೆ ಮಲಗಿ ಲೋಕಮರೆತು ಮಲಗಿದ್ದವರಿಗೆ ಗೊತ್ತಾಗಿರುತ್ತದೆ ಅಜ್ಜಿ ಎಂದರೆ ಎಲ್ಲರಿಗೂ ಏಕೆ ಅಷ್ಟೊಂದು ಇಷ್ಟವೆಂದು.
ಇದನ್ನೂ ಓದಿ: UDYAM ನೊಂದಣಿ ಮಾಡಿಸಿದ್ದೀರಾ?: ಕಡಿಮೆ ಬಡ್ಡಿಗೆ ಸಾಲ, ಸರ್ಕಾರಿ ಟೆಂಡರ್ ಗಳು ನಿಮ್ಮ ಪಾಲಾಗುತ್ತೆ!
ಅಪ್ಪನ ಭಯದಲ್ಲಿ ಅಮ್ಮನ ಮಡಿಲು ಸೇರುವ ನಾವು ಅಮ್ಮನಿಗೆ ಕೋಪ ಬಂದರೆ ಎಲ್ಲಿ ಹೋಗಬೇಕು ? ಅದೇ ಕೊನೆಯ ಆಶ್ರಯ ತಾಣ ‘ಅಜ್ಜಿ’. ಅಜ್ಜಿ ಪಕ್ಕದಲ್ಲಿದ್ದರೆ ಯಾರೂ ನನ್ನನ್ನು ಹೊಡೆಯುವುದಿಲ್ಲ ಏಕೆಂದರೆ ಅಜ್ಜಿ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ.ಅಜ್ಜಿ ತನ್ನೂರಿಂದ ನಮ್ಮನೆಗೆ ಬಂದರೆ ಆಗ ಮಾಡುವ ತರ್ಲೆಗಳಿಗೆಲ್ಲ ಊಫಿ.ಅಪರಾಧಗಳೆಲ್ಲ ಮಾಫಿ.ಅಜ್ಜಿ ಸಾಮೀಪ್ಯದಲ್ಲಿ ತುಂಟತನಗಳು ತುಸು ಜಾಸ್ತಿಯೇ ಆಗಿಬಿಡುತ್ತವೆ.
ಅಜ್ಜಿ ಬಂದರೆ ಅಮ್ಮಿನಿಗೂ ಹರುಷ. ತರಹೇವಾರಿ ತಿನಿಸುಗಳು ರೆಡಿ. ತನ್ನದೊಂದು ಪಾಲನ್ನೂ ಬಚ್ಚಿಟ್ಟು ಕೊನೆಗೆ ನನಗೇ ಕೊಡುತ್ತಿದ್ದ ಅಜ್ಜಿ ಮಕ್ಕಳೊಂದಿಗೆ ಮಗುವಾಗೇ ಬಿಡುತ್ತಿದ್ದಳು.ಚೌಕಾ-ಭಾರಹ ಆಡುತ್ತ ಯಾವಾಗಲೂ ನನ್ನನ್ನೇ ಗೆಲ್ಲಿಸುತ್ತ ತಾನು ಸೋತರೂ ನನ್ನ ಗೆಲುವಿಗೆ ನಗೆಯಾಗುತ್ತ ಸದಾ ಉಲ್ಲಾಸವಾಗಿರಿಸುತ್ತಿದ್ದಳು. ಅಮ್ಮನ ಮೇಲಿನ ಕೆಲವು ದೂರುಗಳನ್ನ ಅಜ್ಜಿಯಲ್ಲಿ ಮೆಲ್ಲನೆ ಸಲ್ಲಿಸುತ್ತಿದ್ದೆ.
ಇದನ್ನೂ ಓದಿ: Property Registration Fees: ಕರ್ನಾಟಕದಲ್ಲಿ ಆಸ್ತಿ ನೋಂದಣಿ ದುಬಾರಿ: ನಾಳೆಯಿಂದಲೇ ನೋಂದಣಿ ಶುಲ್ಕ ಏರಿಕೆ
ರಜೆ ಬಂದರೆ ಸಾಕು ಅಜ್ಜಿ ಮನೆಗೆ ಹೋಗುತ್ತಿದ್ದ ಸಡಗರಕ್ಕೆ ಎಲ್ಲೆ ಇರುತ್ತಿರಲಿಲ್ಲ.ಎಪ್ರಿಲ್ ತಿಂಗಳ ರಜೆಗೆ ಅಜ್ಜಿ ಮನೆಗೆ ಹೋಗಲು ಎರಡು ತಿಂಗಳಿಂದಲೆ ತಯಾರಿ ನಡೆಯುತ್ತಿತ್ತು.ಅಪ್ಪ-ಅಮ್ಮನ ಬಿಟ್ಟು ಮಕ್ಕಳು ತಿಂಗಳುಗಟ್ಟಲೆ ಇರುವ ಏಕೈಕ ಊರೆಂದರೆ ಅದು ಅಜ್ಜಿ ಮನೆ. ಅವಳು ಹೊಲಿದ ದುಪ್ಪಟ್ಟಿ(ಕೌದಿ)ಯಲ್ಲೆ ಶಯನ.ಅದನ್ನೂ ಬೇರೆ ಯಾರಾದರೂ ತೆಗೆದುಕೊಂಡರೆ ಎಲ್ಲಿಲ್ಲದ ಗಲಾಟೆ. ಅದರ ಮೇಲೆ ಮಲಗಿದಾಗ ಆಗುವ ಆನಂದವನ್ನು ಎಷ್ಟು ಕಾಸು ಕೊಟ್ಟರೂ ಖರೀದಿಸಲಾಗಲ್ಲ.
‘ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆಯಿಲ್ಲ’ಎನ್ನುವ ಹಾಡಿನ ಸಾಲು ಎಷ್ಟು ಸತ್ಯವಲ್ಲವ.ನನ್ನ ಅಜ್ಜಿ ತೀರಿ ಹೋದಾಗಿನಿಂದ ನನ್ನಮ್ಮ ತವರಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾಳೆ. ಪ್ರತೀ ಬೇಸಿಗೆ ರಜೆಯಲ್ಲೂ ಹೋಗುತ್ತಿದ್ದ ನಾನಂತೂ ಹೋಗುವುದನ್ನೇ ನಿಲ್ಲಿಸಿದ್ದೇನೆ. ಆಕೆಯಿಲ್ಲ ಎಂಬುದ ನೆನೆದರೆ ಭಾವನೆಗಳು ಬೆಚ್ಚಗಾಗುತ್ತವೆ.ಕಣ್ಣು ತೇವಗೊಳ್ಳುತ್ತವೆ.ಮನಸ್ಸು ಆರ್ದ್ರಗೊಳ್ಳುತ್ತದೆ.
ಅಜ್ಜಿ, ಮಲಗುವ ಮುಂಚೆ ಮುದ್ಮುದ್ದು ಮಾಡಿ ‘ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ’ಎಂದು ಹೇಳುತ್ತಿದ್ದ ಕಥೆಗಳಂತೂ ನನ್ನ ಬಾಲ್ಯವನ್ನ ಶ್ರೀಮಂತಗೊಳಿಸಿವೆ.ಅಜ್ಜಿ ಹೇಳಿದ ಕಥೆಗಳು ನನ್ನಲ್ಲಿ ಈಗಲೂ ಮುಸುಕು-ಮುಸುಕಾಗಿ ಸ್ಮೃತಿಯಲ್ಲಿ ಉಳಿದಿವೆ.ಆದರೆ ಆಕೆಯೆ ಇಲ್ಲ.ಒಂದು ಸಾರಿ ಹೀಗೆ ಬಂದು ಹಾಗೆ ಹೋಗುವಂತಾದರೆ ಎಷ್ಟು ಚೆಂದ ಎನಿಸುತ್ತದೆ.
ಆದರೆ ವಾಸ್ತವದಲ್ಲಿ ಅದೆಲ್ಲ ಬರೀ ಭ್ರಮೆ.ಮೊಬೈಲು ಟೀವಿಗಳು ಬಂದಮೇಲೆ ಕಥೆ ಕೇಳುವ ಹೇಳುವ ವ್ಯವಧಾನ ಮತ್ತೂ ಆಸಕ್ತಿ ಎರಡೂ ಇಲ್ಲವಾಗಿವೆ.ಅಜ್ಜಿ ಹೋದಮೇಲೆ ಕಥೆಯ ಕಥೆಯೂ ಮುಗಿದಂತಾಗಿದೆ.ಮಕ್ಕಳಿಗೆ ಬರೀ ಶಿಬಿರ ತರಬೇತಿ ಕೋರ್ಸುಗಳೆಂದು ಕೂಪಕ್ಕೆ ತಳ್ಳಿ ಅವರ ನಿಜವಾದ ಬಾಲ್ಯತನದ ಮಜವನ್ನು ಅದರ ಮಜಲುಗಳನ್ನು ದಯವಿಟ್ಟು ಕಸಿಯದಿರಿ ಪಾಲಕರೇ.
ಪಾಲಕರಿಗೆ ನನ್ನದೊಂದು ನಮ್ರ ವಿನಂತಿ.ಅನಗತ್ಯ ವ್ಯಸನಗಳಿಂದ ಮಕ್ಕಳನ್ನು ದೂರವಿರಿಸಿ ಅಜ್ಜಿಯರೊಂದಿಗೆ ಹತ್ತಿರ ಕೂರಿಸಿ.ಅಜ್ಜಿಯರ ಅದಮ್ಯ ಪ್ರೀತಿಯ ಹೃದಯದಬಡಿತ ಮಕ್ಕಳೂ ಕೇಳಲಿ, ಮೊಮ್ಮಕ್ಕಳ ಕಕ್ಕುಲತೆಯಲ್ಲಿ ಅಜ್ಜಿಯಂದಿರೂ ಮಕ್ಕಳಾಗಿಬಿಡಲಿ.ಇಳಿವಯಸ್ಸಿನಲ್ಲಿ ಬಾಲ್ಯದ ಸಿಹಿನೆನಪು ಮತ್ತೆ ಸವಿಯಲಿ.
ಇಷ್ಟೆಲ್ಲ ನೆನಪಾಗಲು ಕಾರಣ ಮೊನ್ನೆ ತಾನೆ ಕಳೆದ ನಾಗರಪಂಚಮಿ.ಪಂಚಮಿಯ ಹಬ್ಬಕ್ಕೆ ಉಂಡೆ ಚಕ್ಕುಲಿ ಕೋಡುಬಳೆ ಖಜ್ಜಾಯಗಳನ್ನು ಮಾಡಿ ಅಜ್ಜಿ ಹೊತ್ತುತರುತ್ತಿದ್ದಳು.ಅವಳ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ.ಹಬ್ಬಗಳು ಎಷ್ಟು ಚೆಂದ.ನೆಂಟರನ್ನು ಹತ್ತಿರವಾಗಿಸುತ್ತ ಬಾಂಧವ್ಯ ಗಟ್ಟಿಗೊಳಿಸುತ್ತಿದ್ದವು.ಈ ಸಲ ಬೇಸಿಗೆಯ ರಜೆಗೆ ನಿಮ್ಮ ಮಕ್ಕಳನ್ನು ನೀವು ಅಜ್ಜಿಯ ಮನೆಗೆ ಕಳುಹಿಸುತ್ತೀರಲ್ಲವೇ .?
“A grandmother’s love and a granddaughter’s joy, perfect duet of the heart”.
