ಶಿವಮೊಗ್ಗ: ಎರಡು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ, ಸಂಸಾರ ಶುರುಮಾಡಿದ್ದ ದಂಪತಿಯ ಬದುಕಿನಲ್ಲಿ ದುರಂತವೊಂದು ನಡೆದುಹೋಗಿದೆ. ಪ್ರೀತಿಯ ಮದುವೆಗೆ ಒಂದೂವರೆ ವರ್ಷದ ಮುದ್ದಾದ ಕಂದಮ್ಮ ಕೂಡ ಇದೆ. ಎಲ್ಲವೂ ಚೆನ್ನಾಗಿದೆ ಎನ್ನುವಷ್ಟರಲ್ಲಿ, ಆ ಸಂಸಾರದ ಹೆಣ್ಣು ನಿಗೂಢವಾಗಿ ಸಾವಿಗೀಡಾಗಿದ್ದಾಳೆ.(Tragedy Love Story)
ದಾವಣಗೆರೆ ಜಿಲ್ಲೆಯ ಚನ್ನಗರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನಡೆದ ಈ ಘಟನೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಜಿಶಾನ್ (23) ಮತ್ತು ಜುನೇರಾ ಕೌಸರ್ (19) ಇಬ್ಬರೂ ಪರಸ್ಪರ ಮನಸೋತು ಪ್ರೀತಿಸಿ ಮದುವೆಯಾದವರು. ಆದ್ರೆ, ಈ ಪ್ರೀತಿಯ ಸಂಸಾರದಲ್ಲಿ ಇತ್ತೀಚೆಗೆ ಮನಸ್ತಾಪ, ಜಗಳ ಶುರುವಾಗಿತ್ತು. ಪ್ರೀತಿಯನ್ನು ನಂಬಿ ಬಂದಿದ್ದ ಜುನೇರಾ ಕೌಸರ್, ಏಕಾಏಕಿ ಹೆಣವಾಗಿರುವುದು ಸುತ್ತಮುತ್ತಲಿನವರನ್ನು ಬೆಚ್ಚಿಬೀಳಿಸಿದೆ.(Tragedy Love Story)
ಪರಿಚಯ, ಪ್ರೀತಿ, ಮದುವೆ – ಕೊನೆಗೆ ಕೊಲೆ ಆರೋಪ!
ಚನ್ನಗಿರಿ ಪಟ್ಟಣದ ಜುನೇರಾ ಕೌಸರ್ ಕಾಲೇಜಿಗೆ ಹೋಗುತ್ತಿದ್ದಾಗ, ಹೊನ್ನೆಬಾಗಿ ಗ್ರಾಮದ ಅಡಿಕೆ ವ್ಯಾಪಾರಸ್ತ ಜಿಶಾನ್ ಪರಿಚಯವಾಗಿದ್ದ. ಅದು ಪ್ರೀತಿಗೆ ತಿರುಗಿ, ಕೊನೆಗೆ ಇಬ್ಬರೂ ತಮ್ಮ ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು.(Tragedy Love Story)ಮುದ್ದಾದ ಹೆಂಡತಿಯೊಂದಿಗೆ ಸುಖವಾಗಿ ಸಂಸಾರ ಮಾಡಬೇಕಿದ್ದ ಜಿಶಾನ್, ಇತ್ತೀಚೆಗೆ ಪದೇ ಪದೇ ಜಗಳವಾಡುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಜುನೇರಾ ಕೌಸರ್ ಕಳೆದ ವಾರ ತವರು ಮನೆಗೆ ಹೋಗಿದ್ದರು.
ಮಗಳ ಸಂಸಾರ ಚೆನ್ನಾಗಿರಲಿ ಎಂದುಕೊಂಡು ಆಕೆಯ ಹೆತ್ತವರು, ಗಂಡನ ಮನೆಗೆ ಬಂದು ಗುರುವಾರ ರಾಜಿ ಪಂಚಾಯಿತಿ ಮಾಡಿದ್ದರು. ಆದರೆ ವಿಧಿ ಆಡಿಸಿದಾಟವೇ ಬೇರೆ! ರಾಜಿ ಪಂಚಾಯಿತಿ ಆಗಿ ಮೂರೇ ದಿನಕ್ಕೆ ಮಗಳು ಶವವಾಗಿ ಮರಳಿದ್ದಾಳೆ. ‘ಪತಿ ಮಾಡಿದ ಮೋಸ ಮತ್ತು ವಂಚನೆಯಿಂದಲೇ ನಮ್ಮ ಮಗಳು ಸತ್ತು ಹೋಗಿದ್ದಾಳೆ. ಆಕೆಯ ಸಾವಿನ ಕುರಿತು ಸೂಕ್ತ ತನಿಖೆ ನಡೆಯಬೇಕು’ ಎಂದು ಜುನೇರಾ ಕೌಸರ್ ಅವರ ಹೆತ್ತವರು ಕಣ್ಣೀರು ಹಾಕುತ್ತಾ ಒತ್ತಾಯಿಸಿದ್ದಾರೆ.
ಬೇರೊಬ್ಬ ಯುವತಿಗಾಗಿ ಪತ್ನಿಗೆ ಚಿತ್ರಹಿಂಸೆ?
ಪತಿ ಜಿಶಾನ್ ಪ್ರತಿದಿನ ಪತ್ನಿಯೊಂದಿಗೆ ಗಲಾಟೆ ಮಾಡಿ, ವಿನಾಕಾರಣ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ‘ನಾನು ಮತ್ತೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೇನೆ, ಅವಳನ್ನೇ ಮದುವೆಯಾಗುತ್ತೇನೆ’ ಎಂದು ಬೆದರಿಸಿ, ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನಂತೆ. ಈ ಕಿರುಕುಳದ ನಡುವೆಯೇ ಆತ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ನಂತರ, ಜುನೇರಾ ಕೌಸರ್ ಬೆಡ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆತಂಕಗೊಂಡ ಪತಿ ಮತ್ತು ಆತನ ಕುಟುಂಬಸ್ಥರು ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಇಂದು (ಅಕ್ಟೋಬರ್ 26ರ) ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಜುನೇರಾ ಕೌಸರ್ ಮೃತಪಟ್ಟಿದ್ದಾಳೆ.
ಪತಿಯಿಂದ ಶರಣಾಗತಿ, ಕೊಲೆ ಕೇಸ್ ದಾಖಲು!
ಪತ್ನಿ ಶಿವಮೊಗ್ಗದಲ್ಲಿ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಪತಿ ಜಿಶಾನ್ ಚನ್ನಗಿರಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಮೃತಳ ದೇಹದ ಮೇಲೆ ಹಲ್ಲೆ ಮಾಡಿದ ಗಾಯಗಳಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಮೃತಳ ಕುಟುಂಬಸ್ಥರು, ಪತಿಯ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು, ಸತ್ಯಾಂಶ ಹೊರತೆಗೆಯಲು ತನಿಖೆ ಮುಂದುವರೆಸಿದ್ದಾರೆ. ಪ್ರೀತಿಯಿಂದ ಶುರುವಾದ ಈ ಸಂಸಾರಕ್ಕೆ ಕೊನೆಗೆ ಇಂತಹ ದುರಂತ ಅಂತ್ಯವಾಯಿತೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.(Tragedy Love Story)
