ಬೆಂಗಳೂರು: ಧರ್ಮಸ್ಥಳದಲ್ಲಿ(Dharmasthala Case) ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಮತ್ತು ಸಾಮೂಹಿಕ ಹತ್ಯೆಗಳ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (SIT) ಇದುವರೆಗೆ ಯಾವುದೇ ಬಲವಾದ ಸಾಕ್ಷ್ಯಗಳು ಸಿಕ್ಕಿಲ್ಲ. ಹೀಗಾಗಿ, ಇಡೀ ಪ್ರಕರಣವು ಧರ್ಮಸ್ಥಳ(Dharmasthala) ಮತ್ತು ಅದರ ಆಡಳಿತ ಮಂಡಳಿಯ ವಿರುದ್ಧ ರೂಪಿಸಿದ ಒಂದು ದೊಡ್ಡ ಷಡ್ಯಂತ್ರವೇ? ಎಂಬ ನಿಟ್ಟಿನಲ್ಲಿ ಇದೀಗ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂದು ಸುದ್ದಿಮೂಲಗಳಿಂದ ತಿಳಿದುಬಂದಿದೆ.
ದೂರುದಾರನೇ ಸುಳ್ಳು ಒಪ್ಪಿಕೊಂಡಿದ್ದು ಯಾಕೆ?
‘ನನ್ನಿಂದ 100ಕ್ಕೂ ಹೆಚ್ಚು ಹೆಣಗಳನ್ನು, ಹದಿಹರೆಯದ ಯುವತಿಯರ, ಮಹಿಳೆಯರ ಶವಗಳನ್ನು ಹೂಳಿಸಿದ್ದರು’ ಎಂದು ಆರೋಪಿಸಿದ್ದ ಧರ್ಮಸ್ಥಳದ ಮಾಜಿ ಕೆಲಸಗಾರ ಸಿ ಎನ್ ಚಿನ್ನಯ್ಯ ಈಗ ನ್ಯಾಯಾಲಯದ ಮುಂದೆ ತಾನು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದಾನೆ. ಇಂತಹ ಗಂಭೀರ ಆರೋಪಗಳನ್ನು ಮಾಡಲು ಆತನಿಗೆ ಯಾರು ಪ್ರಚೋದನೆ ನೀಡಿದರು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಇದೀಗ ಎಸ್ ಐಟಿ ಮುಂದಾಗಿದೆ . ಈ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತರಾದ ಮಹೇಶ್ ಶೆಟ್ಟಿ ತಿಮರೋಡಿ, ಟಿ ಜಯಂತ್ ಮತ್ತು ಗಿರೀಶ್ ಮಟ್ಟಣ್ಣನವರ್( Girish MattannaNaveer) ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ 41ಎ ನೋಟಿಸ್ ಜಾರಿ ಮಾಡಲಾಗಿದೆ.
2025ರ ಆಗಸ್ಟ್ನಲ್ಲಿ ದೂರು ದಾಖಲಿಸಿದ್ದ ಚಿನ್ನಯ್ಯ, 1995ರಿಂದ 2014ರವರೆಗೆ ದೇವಸ್ಥಾನದಲ್ಲಿ ಕೆಲಸ ಮಾಡುವಾಗ 2002 ಮತ್ತು 2014ರ ನಡುವೆ ದೇವಾಲಯದ ಆವರಣದಲ್ಲಿ 200ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ರಹಸ್ಯವಾಗಿ ಹೂತುಹಾಕುವುದಕ್ಕೆ ತಾನೇ ಸಾಕ್ಷಿ ಎಂದು ಆರೋಪಿಸಿದ್ದ.
ನ್ಯಾಯಾಲಯದಲ್ಲಿ ಚಿನ್ನಯ್ಯನ ಯು-ಟರ್ನ್:
ಅಪಘಾತ, ಕೊಲೆ ಮತ್ತು ಅನುಮಾನಾಸ್ಪದ ಸಾವಿನಿಂದ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಅಥವಾ ಪೊಲೀಸರ ವರದಿ ಇಲ್ಲದೆ ಹೂತುಹಾಕಲಾಗಿದೆ ಎಂದು ಮೊದಲು ಹೇಳಿದ್ದ ಚಿನ್ನಯ್ಯ, ನಂತರ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ್ದು, ತನ್ನ ಮೊದಲ ಹೇಳಿಕೆ ಹಾಗೂ ಸಾಕ್ಷ್ಯ ಸುಳ್ಳು ಎಂದು ಹೇಳಿದ್ದಾನೆ. ‘ಕೆಲವರ ಆಜ್ಞೆಯಿಂದ ನಾನು ಆ ರೀತಿ ಮಾಡಿದೆ’ ಎಂದೂ ಆತ ತಿಳಿಸಿದ್ದಾನೆ.
18 ಕಡೆಗಳಲ್ಲಿ ಉತ್ಖನನ: ಪತ್ತೆಯಾದದ್ದು ಏನು?
ತಾನೇ ಹೂತಿಟ್ಟಿದ್ದ ಜಾಗದಿಂದ ತಂದದ್ದು ಎಂದು ಹೇಳಿ ದಕ್ಷಿಣ ಕನ್ನಡ ಪೊಲೀಸರಿಗೆ ತಲೆಬುರುಡೆಯನ್ನು ನೀಡಿದ್ದ ಚಿನ್ನಯ್ಯ, ಬಳಿಕ ಅದನ್ನೂ ಹಿಂಪಡೆದು, 2012ರ ಅಕ್ಟೋಬರ್ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸೌಜನ್ಯ(Soujanya Case) ಅವರ ಚಿಕ್ಕಪ್ಪ ವಿಠಲ ಗೌಡ ತಲೆಬುರುಡೆಯನ್ನು ತನಗೆ ನೀಡಿದ್ದರು ಎಂದಿದ್ದ. ಚಿನ್ನಯ್ಯ ಗುರುತಿಸಿದ ಸುಮಾರು 18 ಕಡೆಗಳಲ್ಲಿ ಎಸ್ ಐಟಿ ಅಗೆದು ಪರಿಶೀಲಿಸಿದೆ. ಬಂಗ್ಲೆ ಗುಡ್ಡೆ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಅವುಗಳನ್ನು ಡಿಎನ್ಎ ವಿಶ್ಲೇಷಣೆ ಮತ್ತು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.
ಮತ್ತೊಬ್ಬ ದೂರುದಾರರ ಸುಳ್ಳು ಹೇಳಿಕೆ!
ಈ ಪ್ರಕರಣದಲ್ಲಿ ಇನ್ನೊಂದು ಅಚ್ಚರಿಯ ತಿರುವು ಸಿಕ್ಕಿದ್ದು, 2003ರಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದ ತನ್ನ ಮಗಳು ಅನನ್ಯಾ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ ಸುಜಾತಾ ಭಟ್ ಎಂಬ ಮಹಿಳೆ ಕೂಡ ನಂತರ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ. ತನಗೆ ಹೆಣ್ಣು ಮಕ್ಕಳೇ ಇಲ್ಲ ಎಂದಿರುವ ಅವರು, ಮಟ್ಟಣ್ಣನವರ್, ಜಯಂತ್ ಮತ್ತು ಇತರರ ಪ್ರಚೋದನೆಯಿಂದ ಸುಳ್ಳು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.
2012ರ ಅಕ್ಟೋಬರ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಈ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣವು ಜುಲೈನಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರಕರಣವು ಈಗ, ಕೊಲೆಗಳ ಸಾಕ್ಷಗಳಿಗಿಂತ ಹೆಚ್ಚಾಗಿ, ದೇವಸ್ಥಾನದ ವಿರುದ್ಧ ನಡೆದ ಒಂದು ದೊಡ್ಡ ಸಂಚು ಎಂಬತ್ತ ತಿರುಗಿದಂತೆ ಕಾಣುತ್ತಿದೆ(Dharmasthala Case)
