
ಸಾವಿರದ ಹಕ್ಕಿ
Heart Touching Kannada Short Story: ಐದು ವರ್ಷಗಳ ಈ ಸುದೀರ್ಘ ಕಾಲದವರೆಗೆ ನನ್ನ ಅವಳ ನಡುವೆ ಭೇಟಿಯಾಗಿಲ್ಲ, ಮಾತುಗಳಿಲ್ಲ. ನೋಡಿಯೂ ಇಲ್ಲ. ತುಟಿಗಳಿಗೆ ಅತಿಯಾದ ಲಿಪ್ ಸ್ಟಿಕ್ ಹಚ್ಚಿಕೊಂಡವರು ಯಾರಾದರು ಕಂಡರೆ ಸಾಕು ಅವಳೆ ನೆನಪಿಗೆ ಬರುವಳು.
ಸದ್ದಿರದ ಗುಡಿಯ ಆವರಣದೊಳು ಒಣಗಿದ ಅರಳಿ ಮರದೆಲೆಯೊಂದು ಮೆಲ್ಲಗೆ ಚಲಿಸುವ ಸದ್ದಿನಂತೆ ಇರುತಿತ್ತು ಅವಳ ಹೆಜ್ಜೆಯ ಸದ್ದು. ಐದು ವರ್ಷಗಳ ಹಿಂದೆ ಬಹುವಾಗಿ ಇಷ್ಟಪಟ್ಟು ಮನಸಾರೆ ಆಕೆಯ ಪ್ರೇಮವನ್ನು ಯಾಚಿಸಿದ್ದೆ. ಆದರೆ ಅವಳು ಅಂದಿನಿಂದ ನನ್ನ ಸ್ನೇಹವನ್ನೆ ದೂರಮಾಡಿ ಸಂಕಟಕ್ಕೆ ಗುಂಡಿಗೆ ತಳ್ಳಿದಳು. ಅಷ್ಟೇ! ಬೀಜಗಳೇ ಇರದ ಹಣ್ಣುಗಳಿವೆ ಆದರೆ ಬೀಜಗಳಿರುವ ಹಣ್ಣಿನಷ್ಟು ರುಚಿ ಅವುಗಳಿಗೆ ಬಾರದು. ಎಂದೆಂದಿಗೂ! ಅದಕ್ಕೇ ಕೊರಟೆ ಇದ್ದರೂ ಮಾವಿನ ಹಣ್ಣಿನ ರುಚಿಯೇ ಬೇರೆ ಅದರ ಸ್ವಾದವೇ ಬೇರೆ.ಅದನ್ನು ತಿಂದ ಮೇಲೆ ಉಂಟಾಗುವ ತೃಪ್ತಿಕರ ಮನೋಭಾವವೇ ಬೇರೆ.
ಅವಳಿಲ್ಲದ ಮೇಲೆ ಇನ್ನ್ಯಾಕೆ ಆ ಊರೆಂದು ಆ ಊರನ್ನ ಬಿಟ್ಟುಬಂದುಬಿಟ್ಟೆ.ವಿಲವಿಲ ಒದ್ದಾಡಿದೆ.ಮಮ್ಮಲ ಮರುಗಿದೆ.ಕೆಲಸವಿರಲಿಲ್ಲ. ದಿಕ್ಕೆಟ್ಟ ಬದುಕು ಮತಿಕೆಟ್ಟ ಶರೀರ. ಒಂದು ವರ್ಷದಿಂದ ಅವಳ ಹಿಂದೆಹಿಂದೆಯೇ ನಡೆದು ತಡೆದು ಅವಳು ಥೂ ಎಂದರೂ ಮನಸಾರೆ ಇಷ್ಟ ಪಟ್ಟಿರುವ ಕಾರಣಕ್ಕೆ ಸಹ್ಯವಾಗಿತ್ತು. ದಯನೀಯವಾಗಿಯೂ ಇತ್ತು.
ಕೊನೆಗೆ ಅವಳು ತಿರಸ್ಕರಿಸಿ ನನ್ನ ಮುಖ ನೋಡುವುದು ಕೂಡ ಒಂದು ಶಾಪದಂತೆ ಭಾವಿಸಲು ಶುರುಮಾಡಿದಳು. ಏನೆಲ್ಲವನ್ನು ತಡೆದುಕೊಂಡರೂ ತಿರಸ್ಕಾರದ ನೋಟವೊಂದನ್ನ ಮಾತ್ರ ಈ ಮನುಷ್ಯ ಜನ್ಮಕ್ಕೆ ಸಹಿಸಲಾಗುವುದಿಲ್ಲ ಎನಿಸುತ್ತದೆ. ಬಂದುಬಿಟ್ಟೆ. ಅಲ್ಲಿಯವರೆಗೆ ಸ್ನೇಹಿತರಾಗಿದ್ದ ನಾವು ಅನಾಮಿಕರಂತಾದೆವು.ನಾನು ಅಜ್ಞಾತವಾಸಿಯಂತಾದೆ.
ಒಂದು ವರ್ಷದ ಬಳಿಕ ಆಕೆಯ ಕರೆಯು ಬಂದಿತು.ಅದೇ ಕೊನೆ. ಅಂದಿನಿಂದ ನಾನು ಮೊಬೈಲ್ ಉಪಯೋಗಿಸುವುದನ್ನೇ ಬಿಟ್ಟುಬಿಟ್ಟೆ. ನಾಲ್ಕು ವರ್ಷವಾಯಿತು ಮೊಬೈಲ್ ಇಲ್ಲದ ಬದುಕು ಮನಸ್ಸಾಕ್ಷಿಯನ್ನು ಜೀವಂತವಾಗಿರಿಸಿದೆ.
ಇಂದು ಸಾವಿರದ ಹಕ್ಕಿಯೊಂದನ್ನ ನೋಡಲು ಹೋಗಿದ್ದೆ. ಅದೆಂತಹುದೆಂದು!!!ನೋಡಲು. ಆಗ ಬಂದ ಆಗುಂತಕರೊಬ್ಬರು ‘ಪರ್ಣ’ ನಿಮ್ಮನ್ನ ನೋಡಲು ಬಂದಿದ್ದಾಳೆ, ನೀವು ಒಪ್ಫಿದರೆ ಈ ಕೂಡಲೇ ಬರುವಳು’ ಎಂದರು. ಪರ್ಣ ಎಂದ ಕೂಡಲೇ ಅವಳ ಕಣ್ಣಿನ ವರ್ಣ ನೆನಪಾಯಿತು. ಕಪ್ಪುಬಿಳುಪಿನ ಆ ಕಣ್ಣಲಿ ಒಂಚೂರೂ ಕೊಸರಿರಲಿಲ್ಲ! ಆದರೆ ಅದ್ಯಾಕೊ ನನ್ನಿಂದ ಮಾತ್ರ ಕೊಸರಿಕೊಂಡಳು.
ಅದಾವ ಸಂದರ್ಭದೊತ್ತಡವಿತ್ತೊ ಬಲ್ಲವರಾರು .? ಇರಲಿ! ಹೂಂ ಅಂತ ಏನೊ ಅಂದುಬಿಟ್ಟೆ.ಆದರೆ ಐದು ವರ್ಷಗಳ ಮೇಲೆ ಒಬ್ಬರನ್ನ ಅದೂ ಸುಪರಿಚಿತರನ್ನ ಭೇಟಿ ಆಗುವುದೆಂದರೇನು !? ಅವರಿಂದ ತಿರಸ್ಕ್ರತಗೊಂಡು ಈಗ ಅವರಿಂದಲೇ ಆಹ್ವಾನವೆಂದರೆ ಎಂತು ? ಈಗ ಅವಳನ್ನ ಭೇಟಿ ಮಾಡಿ ಮಾತನಾಡುವುದಾದರೂ ಏನನ್ನ ?ಹೇಗೆ ? ಅದೋ, ಅಲ್ಲಿ ಬಂದೇ ಬಿಟ್ಟಳು. ಅಲ್ಲಿ ಹತ್ತಿರದಲ್ಲೇ ಬರುತ್ತಿದ್ದಾಳೆ, ಎದುರಿಗೇ ನಿಂತಿದ್ದಾಳೆ, ಒಂದು ಘಳಿಗೆ ಮೌನ ರೂಪತಾಳಿ ತಾ ನಿಂತಿದೆ.
ಅವಳ ಹಾರುವ ಕೂದಲುಗಳು ಸಮುದ್ರದಲೆಗಳಂತೆ ಭಾಸವಾಗುತ್ತಿದೆ ಎನಗೆ. ಆಕೆಯ ಹಾವಭಾವ ಆ ತನುವಿನ ಅಂದವನ್ನು ಔನ್ನತ್ಯಕ್ಕೇರಿಸುತ್ತಿದೆ. ತುಟಿಯಂಚಿನಲ್ಲಿ ಲಿಪ್ ಸ್ಟಿಕ್ ಗುರುತೇ ಇಲ್ಲ. ಅಹಂ ಇಲ್ಲದ ಕಣ್ಣು,ಗರ್ವವಿಲ್ಲದ ನೋಟ, ಆಡಂಬರವಿಲ್ಲದ ಅಂದ, ಮಾತೇ ಬರುತಿಲ್ಲ.
ಆಕೆಯ ಮೊದಲ ಮಾತೇ ‘ ಮದುವೆ ಆಗಿದಿಯಾ ನಿನಗೆ?’ ಎಂದಿತ್ತು. ನಾನೊ ಮೂಕನಾಗಿದ್ದೆ.ಅವಳ ಕಣ್ಣಲ್ಲಿ ನೀರು ಸಣ್ಣಗೆ ಇಣುಕಿ ಹಾಕುತ್ತಿತ್ತು.ಹೊರಬರಲು ಮೀನಮೇಷ ಹಾಕುತ್ತಿತ್ತು. ನಾನೊ ಮೌನದಲ್ಲೆ ಸಹಜವಾಗಿದ್ದೆ. ಪಾಪ ಐದು ವರ್ಷಗಳಾದ ಮೇಲೆ ಅವಳಿಗೂ ಏನು ಮಾತನಾಡಬೇಕುಂತ ತೋಚುತ್ತಿಲ್ಲವೇನೊ ಎಂದುಕೊಳ್ಳುತ್ತಿದ್ದೆ.ಅಷ್ಟರಲ್ಲಿ ಮತ್ತೊಂದು ಬಾರಿ ಕೇಳಿದಳು.’ ಮದುವೆಯಾಗಿದೆಯಾ’? ಎಂದು.
ನಾನು ನಿರುತ್ತರ!!!!
“ಬದುಕಿನಲ್ಲಿ ಕೆಲಸಾರಿ ಗೊತ್ತಾಗದೆ ಏನೊ ಒಂದು ಕೆಲಸ ಮಾಡಿರುತ್ತೇವೆ ಆನಂತರ ಅದನ್ನ ನಿರ್ಲಕ್ಷಿಸಿ ಬಿಟ್ಟುಬಿಟ್ಟಿರುತ್ತೇವೆ. ಅದರ ಜ್ಞಾಪಕವೇ ಇರುವುದಿಲ್ಲ.ಆದರೆ ಆ ಮೂಲಕ ಒಂದೊಂದು ಸಾರಿ ಬಹಳಷ್ಟನ್ನು ಕಳೆದುಕೊಂಡು ಬಿಟ್ಟಿರುತ್ತೇವೆ.ಅದು ಗೊತ್ತೇ ಆಗುವುದಿಲ್ಲ.ನಿನ್ನ ವಿಷಯದಲ್ಲಿ ನಾನು ಹಾಗೇ ಮಾಡಿಕೊಂಡಿದ್ದೆ. ನಿನ್ನ ನಾ ಹಾಗೆ ನಡೆಸಿಕೊಳ್ಳಬಾರದಿತ್ತು.ಐದು ವರ್ಷಕಾಲ ನೀನು ದೂರವಿದ್ದು ಹ್ಯಾಗಿದ್ದೆಯೊ ತಿಳಿಯದು,ಆದರೆ ನಾನು ಮಾತ್ರ ನಿನ್ನ ದೂರ ಮಾಡಿ ನೆಮ್ಮದಿಯಿಂದ ದೂರವಾಗಿದ್ದೆ.ಇನ್ನಾದರೂ ಹೇಳು ನಿನಗೆ ಮದುವೆ ಆಗಿಲ್ಲ ತಾನೆ”? ಅವಳು ತಡಬಡಿಸಿದಳು.
‘ಅದೆಲ್ಲ ನಾನು ನಿನಗೇಕೆ ಹೇಳಲಿ’ಎಂದೆ. ಅವಳ ದುಗುಡವೆಲ್ಲ ಹೊಮ್ಮಿ ಕಣ್ಣಲ್ಲಿ ನೀರು ಸಲೀಸಾಗಿ ಜಾರುತ್ತಲಿತ್ತು. ಬಿಕ್ಕಳಿಸುತ್ತ ಅವಳು ಜಾತ್ರೆಯಲ್ಲಿ ಕಳೆದುಕೊಂಡ ಕಂದನಂತೆ ರೋಧಿಸುತ್ತ ಕುಸಿದಳು.ನಿನ್ನ ಜೀವನದಲ್ಲಿ ಮತ್ತೆ ನನಗೆ ಸ್ಥಾನವಿದೆಯಾ ? ಎಂದು ಕೇಳಿದಳು. ‘ಜಿವನವಿದ್ದರೆ ನೀನಿಲ್ಲ, ನೀನಿದ್ದರೆ ಅದು ಜೀವನವೇ ಅಲ್ಲ’ ಎಂದು ಬಿರುಸಾಗಿ ನುಡಿದೆ. ‘ನಿನ್ನ ಮದುವೆ ಆಗಿಲ್ಲ ತಾನೆ ?’ ಮತ್ತೆ ಕೇಳಿದಳು. ಆಕೆಯ ಕಣ್ಣಲ್ಲಿ ಅಭದ್ರತೆ ಕಾಣುತ್ತಿದ್ದರೆ ಅಳುವಿನಲ್ಲಿ ಆಕ್ರಂದನವಿತ್ತು. ಹೃದಯ ಒಡೆದಂತಾಯಿತು.ಆಕೆಯ ಧ್ವನಿಯನ್ನು ಕೇಳಿ ದೇಹ ಕಂಪಿಸಿತು. ಆದರೆ ಅವಳ ಅಳು ಮಾತ್ರ ಅಂತರಂಗವ ಕಲಕುವಂತಿತ್ತು.
ಅಯ್ಯೊ ವಿಧಿಯೆ!!
ಅರಿಶಿಣ ಬಣ್ಣದ ಆಕೆಯ ಉಡುಗೆ ಕೆಂಬಣ್ಣದ ನನ್ನ ಉಡುಗೆಯ ಆಸರೆ ಬಯಸಿತು.ಸಮಾಧಾನ ಮಾಡಿದೆ.ಅಪ್ಪಿಕೊಂಡಳು. ಐದು ವರ್ಷದ ಅಗಲಿಕೆಯ, ದುಗುಡದ ಛಾಯೆಯೆಲ್ಲ ಆ ಒಂದು ಅಪ್ಪುಗೆಯಲ್ಲಿ ನಿವಾಳಿಸಿ ಎಸೆದಂತಾಗಿ ಹೋಯಿತು. ಸಾವಿರದ ಹಕ್ಕಿಯದು ಗಾಳಿ. ಗಾಳಿಯಿರದೆ ಹಕ್ಕಿಯಿಲ್ಲ. ಅವಳು ಹಕ್ಕಿಯಾದರೆ ನಾನು ಗಾಳಿಯಂತೆ. ನಾನು ಗಾಳಿಯಾದೊಡೆ ಅವಳು ಮರದಂತೆ. ಆ ಮರದ ಚಿಗುರು ಹಕ್ಕಿಯ ಕಕ್ಕದ ಮೂಲಕ ಮೊಳೆತ ಬೀಜದಂತೆ. ಪ್ರೇಮಾನುರಾಗವು ಬೆಸೆಯುವ ಅವಿನಾಭಾವ ಸಂಬಂಧವು ಮರಕ್ಕೂ- ಗಾಳಿಗೂ ಇರುವ ಸಂಬಂಧದಂತೆ, ಈ ಹೆಣ್ಣು-ಗಂಡಿನ ನಂಟು.ನಮಗಾಗಿ ಒಬ್ಬರು ಅತ್ತರೆ ಜೀವನ ಸಾರ್ಥಕ, ನಮ್ಮಿಂದ ಒಬ್ಬರು ಅತ್ತರೆ ಜೀವನ ಅಕ್ಷರಗಳಿಲ್ಲದ ಪುಸ್ತಕ!!
ಅಷ್ಟು ಪಾಪ ಹೊತ್ತು ಬದುಕುವುದಕಿಂತ ಬೇರೆ ಭಾರವಾದ ಜೀವನ ಇನ್ನೊಂದಿಲ್ಲ. ಮೆಲ್ಲಗೆ ಪಸುರೊಡೆದ ಗಾಳಿಯಲ್ಲಿ ಮೆತ್ತಗೆ ಅವಳು ಕೊಟ್ಠ ಮುದ್ದಾದ ಅಪ್ಪುಗೆಯ ನೆನಯುತ್ತ ಅವಳ ಮುಖವನ್ನೊಮ್ಮೆ ನೋಡಿದೆ.
ವೇಗವಾಗಿ ಓಡುವ ಬಸ್ಸಿನಲ್ಲಿ ಕಿಟ್ಟಕಿಯ ಸೀಟಿಗೆ ಮೊದಲ ಬಾರಿಗೆ ಆತು ಕುಳಿತು ಆಕಾಶವನ್ನ ತೆರೆದ ಕಣ್ಣುಗಳಿಂದ ನೋಡುವ ಪುಟ್ಟ ಮಗುವಿನಂತೆ ಕಂಡಳು.
