
ಚಿತ್ರದುರ್ಗ: ನಗರದ ರಾಷ್ಟ್ರೀಯ ಹೆದ್ದಾರಿ- 48ರ ಸಮೀಪ ಭೀಕರವಾಗಿ ಹತ್ಯೆಗೀಡಾದ ಪದವಿ ವಿದ್ಯಾರ್ಥಿನಿ ವರ್ಷಿತಾ (19) ಪ್ರಕರಣವು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ನಡುವೆ ಪ್ರಕರಣದ ಮುಖ್ಯ ಆರೋಪಿ ವರ್ಷಿತಾಳ ಗೆಳೆಯ ಚೇತನ್ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.(Varshita murder case)
ಇದನ್ನೂ ಓದಿ: K L Rahul: ಏಷ್ಯಾಕಪ್ ಟಿ20 ತಂಡಕ್ಕೆ ಆಯ್ಕೆಯಾಗದಿರಲು ಇದೇ ಕಾರಣ!
ಘಟನೆಯ ಹಿನ್ನೆಲೆ
ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿ ಗ್ರಾಮದ ನಿವಾಸಿ ವರ್ಷಿತಾ, ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ಕಾಲೇಜಿನಿಂದ ಊರಿಗೆ ಹೋಗುವುದಾಗಿ ಹೊರಟಿದ್ದ ಅವರು ಮನೆಗೆ ತಲುಪಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಐಮಂಗಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಗೋನೂರು ರಸ್ತೆಯ ಜಮೀನಿನಲ್ಲಿ ಸಂಪೂರ್ಣ ಸುಟ್ಟ ಅನಾಮಧೇಯ ಶವವೊಂದು ಪತ್ತೆಯಾಗಿದೆ. ಶವದ ಸ್ಥಿತಿ ಸಂಪೂರ್ಣವಾಗಿ ವಿಕೃತಗೊಂಡಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಗುರುತುಗಳು ಕಂಡುಬಂದಿವೆ. ತನಿಖೆ ಮುಂದುವರಿದಂತೆ ಇದು ನಾಪತ್ತೆಯಾಗಿದ್ದ ವರ್ಷಿತಾ ಅವರದೇ ಶವ ಎಂದು ದೃಢಪಟ್ಟಿದೆ.
ಇದನ್ನೂ ಓದಿ: Dharmasthala Case Update: ತಪ್ಪು ಮಾಹಿತಿ ಹಬ್ಬಿಸಿದ್ದ ಮಾಧ್ಯಮಗಳಿಗೆ SIT ಸ್ಪಷ್ಟನೆ
ಆರೋಪಿ ಚೇತನ್ ಬಂಧನ
ಪ್ರಕರಣದ ಬೆನ್ನತ್ತಿದ ಗ್ರಾಮಾಂತರ ಪೊಲೀಸರು, ವರ್ಷಿತಾಳ ಗೆಳೆಯ ಚೇತನ್ (21) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಹತ್ಯೆಗೆ ಬಳಸಿದ ಪೆಟ್ರೋಲ್, ಹಗ್ಗ ಮತ್ತು ಕೃತ್ಯಕ್ಕೆ ಬಳಸಿದ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರ ಪ್ರಕಾರ, “ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಘಟನೆಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಲಿದೆ.”
ಇದೇ ವೇಳೆ, ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಳೆಯ ನಡುವೆಯೂ ಹೆದ್ದಾರಿ 48 ತಡೆದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ವರ್ಷಿತಾ ಕುಟುಂಬಕ್ಕೆ ಸರ್ಕಾರದಿಂದ ₹2.5 ಲಕ್ಷ ಮತ್ತು ವೈಯಕ್ತಿಕವಾಗಿ ₹2.5 ಲಕ್ಷ ಪರಿಹಾರ ಘೋಷಿಸಿದರು.
ವರ್ಷಿತಾ ಹತ್ಯೆಯ ಹಿಂದೆ ನಿಖರವಾದ ಕಾರಣಗಳು ಏನು? ಮರಣೋತ್ತರ ಪರೀಕ್ಷೆ ಮತ್ತು ಪೊಲೀಸ್ ವಿಚಾರಣೆಯಿಂದ ಹೊಸ ಅಂಶಗಳು ಬೆಳಕಿಗೆ ಬರಬಹುದೇ ಎಂಬುದನ್ನು ಕಾದು ನೋಡಬೇಕಿದೆ.
