
ಇಂದೋರ್: ಇಂದೋರ್ನಿಂದ ಪುಣೆ ನಡುವೆ ಸಂಚರಿಸುವ ಖಾಸಗಿ ಟ್ರಾವೆಲ್ಸ್ ಬಸ್ನಲ್ಲಿ 30 ವರ್ಷದ ರಾಷ್ಟ್ರೀಯ ಮಟ್ಟದ ಶೂಟರ್ಗೆಗೆ ಕಿರುಕುಳ ನೀಡಿದ ಘಟನೆ ನಡೆದಿದೆ.(Sexual harassment) ಭಾನುವಾರ ರಾತ್ರಿ ಇಂದೋರ್ನ ರಾಜೇಂದ್ರ ನಗರದ ಬಳಿ ಈ ಘಟನೆ ನಡೆದಿದೆ.
ಪ್ರಕರಣದ ವಿವರ:
ವರದಿಗಳ ಪ್ರಕಾರ, ಶೂಟರ್ ಬಸ್ ಏರುತ್ತಿದ್ದಾಗ, ನಿರ್ವಾಹಕ (ಕಂಡಕ್ಕರ್) ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿದಾಗ, ನಿರ್ವಾಹಕ ಮತ್ತು ಚಾಲಕ ಇಬ್ಬರೂ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡಿದ ಮಹಿಳಾ ಶೂಟರ್, ಇಬ್ಬರಿಗೂ ‘ಹೊಡೆದಿದ್ದಾರೆ. ನಂತರ ಆರೋಪಿಗಳಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರು, ನಿರ್ವಾಹಕ ಮತ್ತು ಚಾಲಕ ಇಬ್ಬರೂ ಮದ್ಯಪಾನ ಮಾಡಿರುವಂತೆ ಕಂಡುಬಂದರು ಎಂದು ತಿಳಿಸಿದ್ದಾರೆ.
ಪ್ರಯಾಣಿಕರು ಪರದಾಟ, ಬಸ್ ವಿಳಂಬ:
ಈ ಗಲಾಟೆಯ ನಂತರ, ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೆಳಗಿಳಿದು ಟ್ರಾವೆಲ್ ಕಂಪನಿಯ ಕಚೇರಿಗೆ ಕರೆ ಮಾಡಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದರು. ಬಸ್ ಇಡೀ ರಾತ್ರಿ ಅಲ್ಲೇ ನಿಂತಿತ್ತು. ಸೋಮವಾರ ಬೆಳಗಿನ ಜಾವ 4 ಗಂಟೆಗೆ ಟ್ರಾವೆಲ್ ಅಪರೇಟರ್ಗಳು ಪರ್ಯಾಯ ಚಾಲಕನನ್ನು ಕಳುಹಿಸಿದ ನಂತರವಷ್ಟೇ, ಪುಣೆಗೆ ಪ್ರಯಾಣ ಪುನರಾರಂಭವಾಯಿತು.
ಪೊಲೀಸ್ ಕ್ರಮ ಕೈಗೊಳ್ಳಲು ಸಿದ್ಧತೆ:
ಸಂತ್ರಸ್ತ ಯುವತಿ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯನ್ನು ದೃಢಪಡಿಸಿದ ಸಬ್-ಇನ್ಸ್ಪೆಕ್ಟರ್ ಶಿಲ್ಪಾ ಪಾಟಿದಾರ್, ದೂರುದಾರರು ಪುಣೆಯ ನಿವಾಸಿ ಎಂದು ತಿಳಿಸಿದ್ದಾರೆ. ‘ತನಿಖೆಯ ನಂತರ ಎಫ್ಐಆರ್ ದಾಖಲಿಸಲಾಗುವುದು. ಮುಂದಿನ ಕ್ರಮಗಳಿಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ” ಎಂದು ಅವರು ಹೇಳಿದರು.
ಈ ಹಿಂದೆಯೂ ಇದೇ ರೀತಿಯ ಘಟನೆಗಳು:
ಈ ಪ್ರದೇಶದ ಬಸ್ಗಳಲ್ಲಿ ಕಿರುಕುಳದ ಪ್ರಕರಣಗಳು ಇದೇ ಮೊದಲಲ್ಲ. ಈ ಹಿಂದೆ ನವೆಂಬರ್ 6 ರಂದು, ಮುಂಬೈ-ಇಂದೋರ್ ಹ್ಯಾನ್ಸ್ ಟ್ರಾವೆಲ್ಸ್ ಬಸ್ನಲ್ಲಿ ಪುಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಸಹ ಪ್ರಯಾಣಿಕರೊಬ್ಬರಿಂದ ಅನುಚಿತ ವರ್ತನೆ ಎದುರಾಗಿತ್ತು. ಆಗ ಬಸ್ ಚಾಲಕ ಮತ್ತು ಕ್ಲೀನರ್ ಮಧ್ಯ ಪ್ರವೇಶಿಸಲಿಲ್ಲ ಎಂದು ಆರೋಪಿಸಲಾಗಿತ್ತು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ರಾಜೇಂದ್ರ ನಗರ ಪೊಲೀಸರು ಎಫ್ಐಆರ್ ದಾಖಲಿಸಿ ಪ್ರಕರಣವನ್ನು ಬರ್ವಾನಿಗೆ ವರ್ಗಾಯಿಸಿದ್ದರು.
ಪರಿಶೀಲನೆಯ ಅಗತ್ಯದ ಬಗ್ಗೆ ಅಧಿಕಾರಿಗಳ ಒತ್ತಾಯ:
ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ದೂರ ಪ್ರಯಾಣದ ಮಾರ್ಗಗಳಲ್ಲಿ, ಬಸ್ ಸಿಬ್ಬಂದಿಯ ಸರಿಯಾದ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಅಗತ್ಯ ಎಂದು ಪ್ರಯಾಣಿಕರು ಮತ್ತು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
