ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ(Chinnaswamy Stedium) ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಮಾಯಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಈ ಕುರಿತು ಬರೋಬ್ಬರಿ 2,200ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಕೆಗೆ ಸಿದ್ಧತೆ ನಡೆಸಲಾಗಿದೆ.(Bengaluru Stampede Case)
ಸಿಐಡಿ ತನಿಖೆಯಲ್ಲಿ 11 ಜನರ ಸಾವಿಗೆ ನೇರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವೇ ಹೊಣೆಗಾರ ಎಂಬ ಆಘಾತಕಾರಿ ಅಂಶ ಬಯಲಾಗಿದೆ ಎನ್ನಲಾಗಿದೆ. ತನಿಖೆ ವೇಳೆ ಆರ್ಸಿಬಿ (RCB), ಡಿಎನ್ಎ (DNA) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿರುದ್ಧ ಹಲವು ಪ್ರಬಲ ಸಾಕ್ಷ್ಯಗಳು ಸಿಕ್ಕಿವೆ ಎಂದು ವರದಿಯಾಗಿದೆ.
ಹೈಕೋರ್ಟ್ ಅನುಮತಿ, ತನಿಖೆ ಪೂರ್ಣ
ಚಾರ್ಜ್ ಶೀಟ್ ಸಲ್ಲಿಸಲು ಹೈಕೋರ್ಟ್ನಿಂದ ಹಸಿರು ನಿಶಾನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮುಗಿಸಿದ್ದಾರೆ. ನೂರಾರು ಪ್ರತ್ಯಕ್ಷದರ್ಶಿಗಳು, ಸಿಸಿಟಿವಿ ದೃಶ್ಯಗಳು ಮತ್ತು ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ ದುರಂತಕ್ಕೆ RCB ಜೊತೆಗೆ KSCA ಮತ್ತು DNA ಸಂಸ್ಥೆಗಳು ನೇರ ಕಾರಣ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ಹಾಗಾಗಿ, ಚಾರ್ಜ್ ಶೀಟ್ನಲ್ಲಿ ಈ ಮೂರು ಸಂಸ್ಥೆಗಳನ್ನೇ ಸಿಐಡಿ ಹೊಣೆ ಮಾಡಿದೆ.
2 ಅವ್ಯವಸ್ಥೆಯೇ ದುರಂತಕ್ಕೆ ಕಾರಣ: ಸಿಐಡಿ
ಸರಿಯಾದ ಯೋಜನೆಯ ಕೊರತೆ ಮತ್ತು ನಿರ್ಲಕ್ಷ್ಯವೇ ದುರಂತಕ್ಕೆ ಪ್ರಮುಖ ಕಾರಣ ಎಂದು ತನಿಖೆ ವೇಳೆ ಗೊತ್ತಾಗಿದೆ. ಕಾರ್ಯಕ್ರಮ ಆಯೋಜನೆ ಮಾಡುವ ಮುನ್ನ ಯಾವುದೇ ಸರಿಯಾದ ಭದ್ರತಾ ಯೋಜನೆ ಇರಲಿಲ್ಲ. ಅಲ್ಲದೆ, ಹಿರಿಯ ಅಧಿಕಾರಿಗಳ ಸಭೆಯನ್ನು ಸರಿಯಾಗಿ ನಡೆಸಿಲ್ಲ. ಒಂದು ವೇಳೆ ನಡೆಸಿದ್ದರೂ, ಅಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡದೆ ಇರುವುದು ಗೊತ್ತಾಗಿದೆ. ಟಿಕೆಟ್ಗಳ ವಿತರಣೆ ಬಗ್ಗೆ ಆರ್ಸಿಬಿ ತಂಡ ಸೃಷ್ಟಿಸಿದ ಗೊಂದಲವೇ ಕಾಲ್ತುಳಿತಕ್ಕೆ ಮೂಲ ಕಾರಣವಾಗಿದೆ. ಡಿಎನ್ಎ (DNA) ಸಂಸ್ಥೆಯ ಕಡೆಯಿಂದ ಯಾವುದೇ ಸ್ಪಷ್ಟ ಭದ್ರತಾ ಯೋಜನೆ ಇರಲಿಲ್ಲ. ಖಾಸಗಿ ಭದ್ರತಾ ಏಜೆನ್ಸಿಯ ಬಳಕೆಯೂ ವಿಫಲವಾಗಿದೆ. ಪೊಲೀಸರೊಂದಿಗೆ ಸರಿಯಾದ ಸಮನ್ವಯ ಸಾಧಿಸದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ದಾಖಲಾದ ಸಾಕ್ಷ್ಯಗಳು
ಪ್ರತಿ ಗೇಟ್ ಬಳಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಘಟನೆಯ ವಿಡಿಯೋಗಳಲ್ಲಿದ್ದವರ ಹೇಳಿಕೆ, ಪ್ರತಿ ಗೇಟ್ನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ, ಹಾಗೂ ಕರ್ತವ್ಯಕ್ಕೆ ಹಾಜರಾಗಿದ್ದ ಪೊಲೀಸರ ಹೇಳಿಕೆಗಳನ್ನು ತನಿಖಾ ತಂಡ ದಾಖಲಿಸಿಕೊಂಡಿದೆ. ಗಾಯಾಳುಗಳ ಹೇಳಿಕೆಗಳು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಿದವರ ಹೇಳಿಕೆಗಳು ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳ ಮಾಹಿತಿಯನ್ನು ಈ ಚಾರ್ಜ್ ಶೀಟ್ ಒಳಗೊಂಡಿದೆ.
ಏನು ನಡೆದಿತ್ತು?
ಇತ್ತೀಚೆಗೆ ನಡೆದ 18ನೇ ಆವೃತ್ತಿಯ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡ ಗೆದ್ದು ಚಾಂಪಿಯನ್ ಆಗಿತ್ತು. ಈ ಸಂಭ್ರಮವನ್ನು ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಅವರನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stedium) ನಡೆದ ಈ ವಿಜಯೋತ್ಸವವನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದರು. ಈ ಸಂದರ್ಭದಲ್ಲಿ ಉಂಟಾದ ತೀವ್ರ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದಾಗಿ 11 ಮಂದಿ ಆರ್ಸಿಬಿ ಅಭಿಮಾನಿಗಳು ದುರಂತವಾಗಿ ಸಾವನ್ನಪ್ಪಿದ್ದರು.
