ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ(Sydney) ಸಂಭವಿಸಿದ ಒಂದು ಭೀಕರ ರಸ್ತೆ ಅಪಘಾತದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಆ ಗರ್ಭಿಣಿ ಮತ್ತು ಆಕೆಯ ಗರ್ಭದಲ್ಲಿದ್ದ ಮಗು ಇಬ್ಬರೂ ಬಲಿಯಾಗಿದ್ದಾರೆ.
ಮೃತರನ್ನು ಸಮನ್ವಿತಾ ಧಾರೇಶ್ವರ್ ಎಂದು ಗುರುತಿಸಲಾಗಿದೆ. ಎಂಟು ತಿಂಗಳ ಗರ್ಭಿಣಿಯಾಗಿದ್ದ ಸಮನ್ವಿತಾ ಅವರು ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತಮ್ಮ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ಹಾರ್ನ್ಸ್ಬೈಯ ಜಾರ್ಜ್ ಸ್ಟ್ರೀಟ್ನಲ್ಲಿ ಪಾದಚಾರಿ ಮಾರ್ಗವನ್ನು ದಾಟುತ್ತಿದ್ದರು.
ಅಪಘಾತ ನಡೆದಿದ್ದು ಹೀಗೆ
ಪೊಲೀಸರ ಮಾಹಿತಿ ಪ್ರಕಾರ, ಸಮನ್ವಿತಾ ಅವರ ಕುಟುಂಬ ಪಾದಚಾರಿ ಮಾರ್ಗ ದಾಟಲು ಯತ್ನಿಸುತ್ತಿದ್ದಾಗ ಕಿಯಾ ಕಾರ್ನಿವಲ್ ಕಾರು ನಿಧಾನವಾಗಿತ್ತು. ಆದರೆ, ಅಷ್ಟೇ ವೇಗವಾಗಿ ಬಂದ ಒಂದು ಬಿಎಂಡಬ್ಲ್ಯೂ ಐಷಾರಾಮಿ ಕಾರು ಹಿಂದೆ ನಿಂತಿದ್ದ ಕಿಯಾ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಕಿಯಾ ಕಾರು ಮುಂದಕ್ಕೆ ನೂಕಲ್ಪಟ್ಟು, ಪಾರ್ಕ್ನತ್ತ ದಾಟುತ್ತಿದ್ದ ಸಮನ್ವಿತಾ, ಅವರ ಪತಿ ಮತ್ತು ಪುತ್ರನಿಗೆ ಡಿಕ್ಕಿ ಹೊಡೆದಿದೆ.
ದುರದೃಷ್ಟವಶಾತ್, ಸಮನ್ವಿತಾ ಅವರಿಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ತಕ್ಷಣವೇ ವೆಸ್ಟ್ ಮೀಡ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರನ್ನು ಅಥವಾ ಅವರ ಗರ್ಭದಲ್ಲಿರುವ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
19 ವರ್ಷದ ಚಾಲಕನ ಬಂಧನ
ಆ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು 19 ವರ್ಷದ ಆರನ್ ಪಾಪಜೋಗು ಎಂಬ ‘ಪಿ-ಪ್ಲೇಟರ್’ (ತಾತ್ಕಾಲಿಕ ಅಥವಾ ಪ್ರೊಬೇಷನರಿ ಪರವಾನಗಿ ಹೊಂದಿರುವ) ಚಾಲಕ ಚಲಾಯಿಸುತ್ತಿದ್ದರು ಎಂದು ವರದಿಯಾಗಿದೆ.
ಅಚ್ಚರಿಯ ವಿಷಯವೆಂದರೆ, ಬಿಎಂಡಬ್ಲ್ಯೂ ಮತ್ತು ಕಿಯಾ ಕಾರುಗಳ ಚಾಲಕರಿಗೆ ಯಾವುದೇ ಗಾಯಗಳಾಗದೆ ಅವರು ಪಾರಾಗಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಸಮನ್ನಿತಾ ಅವರ ಪತಿ ಮತ್ತು ಮೂರು ವರ್ಷದ ಮಗುವಿಗೆ ಆದ ಗಾಯಗಳ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ನಂತರ ಬಿಎಂಡಬ್ಲ್ಯೂ ಕಾರಿನ ಚಾಲಕನನ್ನು ವಹೂಂಗಾದಲ್ಲಿರುವ ಆತನ ಮನೆಯಲ್ಲಿ ಬಂಧಿಸಲಾಯಿತು. ಆತನ ಮೇಲೆ ಅಪಾಯಕಾರಿ ಚಾಲನೆ, ನಿರ್ಲಕ್ಷ್ಯದ ಚಾಲನೆ, ಸಾವಿಗೆ ಕಾರಣ ಮತ್ತು ಭ್ರೂಣದ ನಷ್ಟಕ್ಕೆ ಕಾರಣವಾದಂತಹ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ವಿಷಯದ ಗಂಭೀರತೆ ಪರಿಗಣಿಸಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ.
2022 ರಲ್ಲಿ ನ್ಯೂ ಸೌತ್ ವೇಲ್ಸ್ (NSW) ನಲ್ಲಿ ಜಾರಿಗೆ ತರಲಾದ ‘ಜೋಯ್ಸ್ ಕಾನೂನು’ (Joyce’s Law) ಅಡಿಯಲ್ಲಿ ಈ ಚಾಲಕನ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಹುಟ್ಟಲಿರುವ ಮಗುವಿನ ಸಾವಿಗೆ ಕಾರಣವಾಗುವ ಅಪರಾಧಗಳಿಗೆ ಕರಿಣ ಶಿಕ್ಷೆಗಳನ್ನು ಈ ಕಾನೂನು ಅನುಮತಿಸುತ್ತದೆ
