ನವದೆಹಲಿ: ಕೇಂದ್ರ ಚುನಾವಣಾ ಆಯೋಗದ (Election Commission of India) ಸಾಂವಿಧಾನಿಕ ಘನತೆಯನ್ನು ಬೆಂಬಲಿಸಿ ದೇಶದ ಪ್ರಮುಖ ನಿವೃತ್ತ ಗಣ್ಯರು, ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳು ಬಹಿರಂಗ ಪತ್ರ ಬರೆದಿದ್ದಾರೆ, ಚುನಾವಣಾ ಆಯೋಗದಂತಹ ಪವಿತ್ರ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಪಕ್ಷವು ಕಳಂಕ ಹೂರಿಸಲು ಪ್ರಯತ್ನಿಸುತ್ತಿದೆ ಎಂದು ಪತ್ರದಲ್ಲಿ ತೀವ್ರವಾಗಿ ಖಂಡಿಸಲಾಗಿದೆ.
ಈ ಬಹಿರಂಗ ಪತ್ರಕ್ಕೆ 16 ನಿವೃತ್ತ ನ್ಯಾಯಮೂರ್ತಿಗಳು, 123 ನಿವೃತ್ತ ಅಧಿಕಾರಿಗಳು (ಐಎಎಸ್, ಐಪಿಎಸ್ ಇತ್ಯಾದಿ), ಹಾಗೂ 133 ಸಶಸ್ತ್ರ ಪಡೆಗಳ ನಿವೃತ್ತ ಅಧಿಕಾರಿಗಳು ಸೇರಿದಂತೆ ಒಟ್ಟು 272 ಗಣ್ಯ ನಾಗರಿಕರು ಸಹಿ ಮಾಡಿದ್ದಾರೆ. ಈ ಮೂಲಕ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಡೆಯನ್ನು ತೀವ್ರವಾಗಿ ಖಂಡಿಸಲಾಗಿದೆ.
ಪತ್ರಕ್ಕೆ ಸಹಿ ಮಾಡಿದ ಪ್ರಮುಖರು
ಪತ್ರಕ್ಕೆ ಸಹಿ ಮಾಡಿದವರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್.ಪಿ. ವೈದ್, ಮಾಜಿ ‘ರಾ’ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಾಜಿ ಐಎಫ್ಎಸ್ ಅಧಿಕಾರಿ ಲಕ್ಷ್ಮಿ ಪುರಿ ಸೇರಿದಂತೆ ಹಲವು ಮಾಜಿ ಹಿರಿಯ ಅಧಿಕಾರಿಗಳು ಸೇರಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಸ್.ಐ.ಆರ್. (SIR) ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ(Election Commission) ಕುರಿತು ನಿರಂತರವಾಗಿ ಟೀಕೆ ಮಾಡುತ್ತಿರುವ ನಡುವೆಯೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ರಾಹುಲ್ ಗಾಂಧಿ ಗಂಭೀರ ಆರೋಪ
ರಾಹುಲ್ ಗಾಂಧಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮತಗಳ್ಳತನಕ್ಕೆ ಚುನಾವಣಾ ಆಯೋಗವೇ ಅನುಕೂಲ ಮಾಡಿಕೊಡುತ್ತಿದೆ” ಎಂದು ನೇರವಾಗಿ ಆರೋಪಿಸಿದ್ದರು. ಅಲ್ಲದೆ, “ಎಸ್.ಐ.ಆರ್. ಪ್ರಕ್ರಿಯೆಯ ಸಮಯದಲ್ಲಿ ಚುನಾವಣಾ ಆಯೋಗದ ನಡವಳಿಕೆ ತೀವ್ರ ನಿರಾಶಾದಾಯಕವಾಗಿದೆ” ಎಂದು ಕಾಂಗ್ರೆಸ್ ಹೇಳಿತ್ತು. ಈ ಚುನಾವಣಾ ಸಂಸ್ಥೆಯು ಬಿಜೆಪಿ ಪ್ರಭಾವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.
ಎಂದು ತಕ್ಷಣವೇ ಪುದರ್ಶಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು.
‘ಸಾಂವಿಧಾನಿಕ ಅಧಿಕಾರಿಗಳ ಮೇಲಿನ ಹಲ್ಲೆ’
‘ರಾಷ್ಟ್ರೀಯ ಸಾಂವಿಧಾನಿಕ ಅಧಿಕಾರಿಗಳ ಮೇಲಿನ ಹಲ್ಲೆ’ ಎಂಬ ಶೀರ್ಷಿಕೆಯಡಿ ಈ ಬಹಿರಂಗ ಪತ್ರ ಬರೆಯಲಾಗಿದೆ. ಪತ್ರದಲ್ಲಿ, ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ(Election Commission ) ಮೇಲೆ ಪದೇ ಪದೇ ವಾಗ್ದಾಳಿ ನಡೆಸುತ್ತಾ, ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ತನ್ನ ಬಳಿ ಮುಕ್ತ ಮತ್ತು ಮುಚ್ಚಿದ (open and closed) ಪುರಾವೆಗಳಿವೆ ಎಂದು ಘೋಷಿಸಿರುವುದು ಖಂಡನೀಯ ಎಂದು ಮಾಜಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
