ಬೆಂಗಳೂರು: ಹಿರಿಯ ಉದ್ಯಮಿ, ಇನ್ಫೋಸಿಸ್ನ ರೂವಾರಿ ಎನ್.ಆರ್.ನಾರಾಯಣ ಮೂರ್ತಿ(N. R. Narayana Murthy) ಅವರು ಮತ್ತೊಮ್ಮೆ ಯುವಜನರ ‘ಕೆಲಸದ ಅವಧಿ’ ಬಗ್ಗೆ ತೀವು ಚರ್ಚೆಗೆ ನಾಂದಿ ಹಾಡಿದ್ದಾರೆ. ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವಗುರು ಆಗಬೇಕೆಂದರೆ, ಮೊದಲು ನಮ್ಮ ಮನಸ್ಥಿತಿ ಬದಲಾಗಬೇಕು ಮತ್ತು ಕಠಿಣ ಪರಿಶ್ರಮಕ್ಕೆ ಮಣೆ ಹಾಕಬೇಕು ಎಂಬುದು ಅವರ ವಾದ. ಈ ಬಾರಿ ಅವರು ಚೀನಾದಿಂದ ಸ್ಪೂರ್ತಿ ಪಡೆದ ‘9, 9, 6’ ಎಂಬ ಹೊಸ ಮಂತ್ರವನ್ನು ಮುಂದಿಟ್ಟಿದ್ದಾರೆ.
ವಾರಕ್ಕೆ 72 ಗಂಟೆ: ಚೀನಾದಿಂದ ಪಾಠ ಕಲಿತ ನಾರಾಯಣ ಮೂರ್ತಿ
ನಾರಾಯಣ ಮೂರ್ತಿ(N. R. Narayana Murthy) ಅವರು ಒಂದು ಖಾಸಗಿ ಸಂದರ್ಶನದಲ್ಲಿ, ದೇಶದ ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಉದಾಹರಣೆ ನೀಡಿದ್ದು ಚೀನಾದ ಕೆಲಸದ ಸಂಸ್ಕೃತಿಯ ಬಗ್ಗೆ. “ನನ್ನ ಸಂಸ್ಥೆಯ ಕೆಲವರು ಚೀನಾಗೆ ಹೋಗಿ ಬಂದರು. ಅಲ್ಲಿ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಉಳಿದಿದ್ದರು. ಅಲ್ಲಿ ಒಂದು ಮಾತಿದೆ: ‘9, 9, 6’. ಇದರರ್ಥ ಏನು ಗೊತ್ತೇ? ಬೆಳಿಗ್ಗೆ 9ಕ್ಕೆ ಕೆಲಸ ಶುರು ಮಾಡಿ ರಾತ್ರಿ 9ರವರೆಗೆ ಮಾಡಿ, ಅದು ವಾರದಲ್ಲಿ 6 ದಿನ! ಅಂದರೆ, ಅಲ್ಲಿನ ಜನರು ವಾರಕ್ಕೆ 72 ಗಂಟೆಗಳ ಕಾಲ ದುಡಿಯುತ್ತಾರೆ. ಪ್ರಯತ್ನ ಇಲ್ಲದೆ ಯಾವ ದೇಶವೂ ಅಭಿವೃದ್ಧಿ ಹೊಂದಿಲ್ಲ.”
ಪ್ರಧಾನಿ ಮೋದಿ ಯುವಕರಿಗೆ ಪ್ರೇರಣೆ: ಮೂರ್ತಿಗಳ ಮೆಚ್ಚುಗೆ
ಇದೇ ವೇಳೆ, ದೇಶದ ಯುವಜನರಿಗೆ ಆದರ್ಶ ವ್ಯಕ್ತಿ ಯಾರು ಎಂಬುದನ್ನು ಅವರು ಹೆಸರಿಸಿದ್ದಾರೆ.
“ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಆದರ್ಶ ಎಂದು ಹೇಳುತ್ತೇನೆ. ಏಕೆಂದರೆ ಅವರು ವಾರಕ್ಕೆ ಬಹುತೇಕ 100 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದು ಕೇವಲ ದೀರ್ಘಾವಧಿಯ ಕೆಲಸವಲ್ಲ, ಇದು ಶಿಸ್ತು, ಸ್ಪಷ್ಟ ಗುರಿ ಮತ್ತು ದೇಶದ ಬಗ್ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ. ಪ್ರಧಾನಿಯವರ ಈ ಪರಿಶ್ರಮ ಇಂದಿನ ಯುವಕರಿಗೆ ದೊಡ್ಡ ಪ್ರೇರಣೆ ಎಂದಿದ್ದಾರೆ.’ ಭಾರತವು ಬುದ್ಧಿವಂತಿಕೆಯಲ್ಲಿ ಮುಂದಿದೆ, ಆದರೆ ಆ ಐಡಿಯಾಗಳನ್ನು ಕಾರ್ಯ ರೂಪಕ್ಕೆ ತರಲು ಕಠಿಣ ಶ್ರಮ ಬೇಕು ಎಂಬುದು ಮೂರ್ತಿಗಳ(N. R. Narayana Murthy) ಸ್ಪಷ್ಟ ಅಭಿಪ್ರಾಯವಾಗಿದೆ.
ನಮ್ಮ ಮನಸ್ಥಿತಿ ಬದಲಾದಾಗಲೇ ಚೀನಾವನ್ನು ಹಿಂದಿಕ್ಕಲು ಸಾಧ್ಯ
“ನಾವು ಏನಾದರೂ ಬದಲಾವಣೆ ತರಬೇಕೆಂದರೆ, ಅದು ನಮ್ಮಿಂದಲೇ ಶುರುವಾಗಬೇಕು,” ಎನ್ನುತ್ತಾರೆ ನಾರಾಯಣ ಮೂರ್ತಿ,(N. R. Narayana Murthy) “ನಮ್ಮಲ್ಲಿ ಉತ್ತಮ ವಿಚಾರಗಳಿದ್ದರೆ ಸಾಲದು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅಸಾಧಾರಣ ಶ್ರಮವನ್ನು ಹಾಕಬೇಕು. ಪ್ರತಿಯೊಬ್ಬ ನಾಗರಿಕ, ಅಧಿಕಾರಿ, ರಾಜಕಾರಣಿ, ಜನಪ್ರತಿನಿಧಿ… ಎಲ್ಲರೂ ಮನಸ್ಸು ಮಾಡಬೇಕು. ಆಗ ಮಾತ್ರ ನಾವು ಚೀನಾವನ್ನು ಹಿಂದಿಕ್ಕುವತ್ತ ಹೆಜ್ಜೆ ಹಾಕಬಹುದು. ಆದರೆ, ಈ ಕೆಲಸ ಅಷ್ಟು ಸುಲಭವಲ್ಲ ಎಂದು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು, ನಮ್ಮ ಕೆಲಸದಲ್ಲಿ ಅತ್ಯುನ್ನತ ಶಿಸ್ತಿನ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು. ಎಂದಿದ್ದಾರೆ”
ಗೆಲ್ಲಬೇಕಾದ ಮೂರು ಯುದ್ಧಗಳು!
ಭಾರತವು ಯಶಸ್ಸಿನ ಪತಾಕೆ ಹಾರಿಸಬೇಕೆಂದರೆ, ಮೂರು ಕ್ಷೇತ್ರಗಳಲ್ಲಿನ ಯುದ್ಧಗಳನ್ನು ಗೆಲ್ಲಬೇಕು ಎಂದು ನಾರಾಯಣ ಮೂರ್ತಿ(N. R. Narayana Murthy) ವಿಶ್ಲೇಷಿಸಿದ್ದಾರೆ. ಅಧಿಕಾರಶಾಹಿ ಮತ್ತು ಆಡಳಿತ, ಉದ್ಯಮಿಗಳು (ಕಾರ್ಪೊರೇಟ್ಗಳು), ಶಿಕ್ಷಣ ವ್ಯವಸ್ಥೆ ಈ ಮೂರು ಕಡೆಯಿಂದಲೂ ವ್ಯವಸ್ಥೆ ಬದಲಾದಾಗಲೇ, ನಮ್ಮ ಜನರ ಮನಸ್ಥಿತಿ ಬದಲಾಗುತ್ತದೆ ಮತ್ತು ನಾವು ಸಮೃದ್ಧ ಜೀವನದ ಕಡೆಗೆ ಸಾಗಬಹುದು ಎಂದು ಅವರು ಹೇಳಿದ್ದಾರೆ. ಕಠಿಣ ಶ್ರಮವಿಲ್ಲದೆ ಯಾವ ದೇಶವೂ ಮೇಲೆ ಬಂದಿಲ್ಲ ಎಂಬ ಸತ್ಯವನ್ನು ಅವರು ಮತ್ತೆ ನೆನಪಿಸಿದ್ದಾರೆ.
