ನವದೆಹಲಿ: ಮುಸ್ಲಿಂ ಪುರುಷರು ತಮ್ಮ ಹೆಂಡತಿಗೆ ತಿಂಗಳಿಗೊಮ್ಮೆ ಮೂರು ತಿಂಗಳ ಅವಧಿಗೆ “ತಲಾಖ್” ಎಂದು ಹೇಳುವ ಮೂಲಕ ವಿಚ್ಚೇದನ ನೀಡುವ ತಲಾಖ್-ಎ-ಹಸನ್(Talaq-e-Hasan) ಪದ್ಧತಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಸೂಚನೆ ನೀಡಿದೆ. (ಬೆನಜೀರ್ ಹೀನಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣದಲ್ಲಿ)
ಸಮಾಜದ ಮೇಲೆ ಪರಿಣಾಮ: ಪೀಠದಿಂದ ಮಧ್ಯಪ್ರವೇಶದ ಮಾತು
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ವಲ್ ಭುಯಾನ್ ಮತ್ತು ಎನ್. ಕೋಟೇಶ್ವರ್ ಸಿಂಗ್ ಅವರಿದ್ದ ಪೀಠವು ಈ ಪ್ರಕರಣವನ್ನು ಐವರು ಸದಸ್ಯರ ವಿಸ್ತ್ರತ ಪೀಠಕ್ಕೆ ವರ್ಗಾಯಿಸುವುದಾಗಿ ಸೂಚಿಸಿತು. ಈ ಪದ್ಧತಿಯು ಒಟ್ಟಾರೆಯಾಗಿ ಸಮಾಜದ ಮೇಲೆ ತೀವ್ರ ಪರಿಣಾಮ ಬೀರುವುದರಿಂದ ‘ತಾನು ಪರಿಹಾರ’ಕ್ರಮ ಕೈಗೊಳ್ಳಬೇಕಾಗಬಹುದು. ತೀವ್ರ ತಾರತಮ್ಯ ಇದ್ದರೆ ನ್ಯಾಯಾಲಯ ಮಧ್ಯಪ್ರವೇಶಿಸಬೇಕಾಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿಗಳಿಂದ ಪ್ರಶ್ನೆ: 2025ರಲ್ಲೂ ಇದು ಮುಂದುವರೆಯಬೇಕೇ?’
ಮಹಿಳೆಯರ ಘನತೆಯ ಮೇಲೆ ಪರಿಣಾಮ ಬೀರುವ ಇಂತಹ ಪದ್ಧತಿಯನ್ನು ನಾಗರಿಕ ಸಮಾಜ ಹೇಗೆ ಮುಂದುವರೆಸಲು ಸಾಧ್ಯ ಎಂದು ನ್ಯಾಯಮೂರ್ತಿಗಳು ತೀವ್ರ ಪ್ರಶ್ನೆ ಎತ್ತಿದರು. ನ್ಯಾ. ಸೂರ್ಯ ಕಾಂತ್ ಅವರು ನೇರವಾಗಿ, ‘ಇಂತಹ ಪದ್ಧತಿಯನ್ನು 2025ರಲ್ಲೂ ಮುಂದುವರೆಸಬಹುದೇ? ಇದು ನಾಗರಿಕ ಸಮಾಜ ಒಪ್ಪುವಂತಹದ್ರೆ?’ ಎಂದು ಪ್ರಶ್ನಿಸಿದರು.
ಪತ್ರಕರ್ತೆಯಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ
ಪತ್ರಕರ್ತೆ ಬೆನಜೀರ್ ಹೀನಾ ಅವರು 2022ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಿದ್ದರು.ಜಲಾಬ್-ಎ-ಹಸನ್(Talaq-e-Hasan) ಪದ್ಧತಿಯು ಅತಾರ್ಕಿಕ, ಅವಾಸ್ತವಿಕ ಮತ್ತು ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಉಲ್ಲಂಘನೆಯಾಗಿದ್ದು, ಇದನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅವರು ಕೋರಿದ್ದರು. ವಿಚ್ಚೇದನ ನೀಡುವಾಗ ಲಿಂಗ ಮತ್ತು ಧರ್ಮದ ತಟಸ್ಥ ಕಾರ್ಯವಿಧಾನ ಅನುಸರಿಸಬೇಕು ಮತ್ತು ವಿಚ್ಚೇದನಕ್ಕೆ ಇರುವ ಆಧಾರ ಕುರಿತು ಮಾರ್ಗಸೂಚಿಗಳನ್ನು ನೀಡಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ವಾದದದಲ್ಲಿ, ನ್ಯಾಯಾಲಯವು ಅರ್ಜಿದಾರರಾದ ಬೆನಜೀರ್ ಹೀನಾ ಅವರ ಬಳಿ, “ನೀವು ಪತ್ರಕರ್ತೆ, ಅದಕ್ಕಾಗಿ ನಿಮ್ಮ ಧ್ವನಿ ನಮಗೆ ಕೇಳಿಸುತ್ತದೆ. ಆದರೆ, ದೂರದ ಪ್ರದೇಶಗಳಲ್ಲಿ ಉಳಿದಿರುವ ಮಹಿಳೆಯರ ಧ್ವನಿ ಯಾರು ಕೇಳುತ್ತಾರೆ?” ಎಂದು ಕೇಳಿತು.
ಹಿಂದಿನ ಪೀಠದ ಅಭಿಪ್ರಾಯ: ‘ಮೇಲ್ನೋಟಕ್ಕೆ ಅನುಚಿತವಲ್ಲ’
ಇಲ್ಲಿ ಕುತೂಹಲದ ಸಂಗತಿ ಎಂದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರಿದ್ದ ಪೀಠವು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ‘ತಲಾಖ್-ಎ-ಹಸನ್’ ಮೇಲ್ನೋಟಕ್ಕೆ ಅನುಚಿತವಲ್ಲ ಮತ್ತು ಪ್ರಕರಣವನ್ನು ಬೇರೆ ಕಾರ್ಯಸೂಚಿಗೆ ಬಳಸಿಕೊಳ್ಳಬಾರದು ಎಂದು ಅವರು ಹೇಳಿದ್ದನ್ನು ಇಲ್ಲಿ ನೆನೆಯಬಹುದು.
