Love Story- ಅವನು : ಅವಳನ್ನು ಮೊದಲು ಸೀರೆಯಲಿ ಕಂಡ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ಹೌದು, ಪ್ರತಿದಿನ ಅವಳನ್ನು ನೋಡುತ್ತಿದ್ದೇ ಇದ್ದೆ, ಆದರೆ ಆ ದಿನ ಅವಳು ಸೀರೆ ಹೊದಿದಾಗ… ಏನೋ ಮಾಯೆಯೇ ಇಳಿದಂತಿತ್ತು. ಕಣ್ಣಿಗೆ ತಾವರೆಯೊಂದು ಬೆಳಗಿನ ಹೊತ್ತಿನಲ್ಲಿ ನೀರಿನಿಂದ ತಲೆ ಎತ್ತಿದಂತೆ ಕಾಣಿಸಿತು. ಬಾಯಿಂದ ತಪ್ಪಿಸಿಕೊಂಡಿತು –
“ಸೀರೇಲಿ ತುಂಬ ಚೆನ್ನಾಗ ಕಾಂತಿದಿಯಾ…”
ಅವಳು:
ಅವನ ಮಾತು ನನ್ನ ಕಿವಿಗೆ ತಲುಪಿದಾಗ ನಾನೇನು ನಕ್ಕುಬಿಟ್ಟೆ. ಒಳಗೆ ಹೃದಯ ಬಡಿದುಕೊಳ್ಳುತ್ತಿತ್ತು, ಆದರೆ ಬಾಯಲ್ಲಿ ಹೊರಟ ಮಾತು:
“ಓ ಅಷ್ಟೇನಾ?” ಅವನ ಕಣ್ಣುಗಳನ್ನು ತಪ್ಪಿಸಿಕೊಂಡೆ. ಏಕೆಂದರೆ ನನ್ನ ಕಣ್ಣಲ್ಲಿ ನಿಜವಾದ ಖುಷಿ ಮಿನುಗುತ್ತಿತ್ತು. ನಾನು ಅದನ್ನು ಮರೆಮಾಡಬೇಕು ಅನ್ನಿಸಿತು.
ಅವನು:
ಅವಳು ಹೀಗೆ ಹೇಳಿದಾಗ ನನಗೆ ತಡೆಯಲಾಗಲಿಲ್ಲ. ನನ್ನೊಳಗಿನ ಕವಿ ಮಾತಾಡಿದ.
“ಭಾವನೆಗಳು ಅಲ್ಲೋಲಾ ಕಲ್ಲೋಲಾ ಆಗೋವಷ್ಟು ಅಂದವಾಗಿ ಕಾಂತಿದಿಯಾ…”
ಆ ಮಾತುಗಳು ನನ್ನ ಹೃದಯದಿಂದ ನೇರವಾಗಿ ಹೊರಬಂದವು. ಅವಳ ಕಣ್ಣು ನೆಲಕ್ಕೆ ತಾಗಿದವು. ಆ ನಾಚಿಕೆಯೇ ನನಗೆ ಸಾಕ್ಷಿ.
ಇದನ್ನೂ ಓದಿ: Remove Stretch Marks Naturally: ಡೆಲಿವರಿ ನಂತರ ಬರುವ ಸ್ಟ್ರೆಚ್ ಮಾರ್ಕ್ಸ್ ಅನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್
ಅವಳು:
ಅವನ ಧ್ವನಿಯಲ್ಲಿ ಆಟ ಇರಲಿಲ್ಲ. ಅದು ತುಂಬಾ ಗಂಭೀರವಾಗಿ ಕೇಳಿಸಿತು. ನನ್ನೊಳಗೆ ಏನೋ ಅರಳಿದಂತೆ ಭಾಸವಾಯಿತು. ಒಂದು ಹೊತ್ತಿಗೆ ಅವನನ್ನು ನೇರವಾಗಿ ನೋಡಲು ಹೆದರಿದೆ. ನೋಟ ನೀಡಿದರೆ ನನ್ನೊಳಗಿನ ಗುಟ್ಟು ಬಹಿರಂಗವಾಗಿಬಿಡುತ್ತಿತೆನ್ನಿಸಿತು.
ಅವನು:
ಅವಳ ಮೌನವೇ ನನ್ನಲ್ಲಿ ಮಾತಿನ ಹೊಳೆ ಹರಿಸಿದೆ. ತಮಾಷೆಯಲ್ಲೇ ಮತ್ತೊಂದು ಸಾಲು ಹೊರಬಂತು:
“ಸೀರೆಯುಟ್ಟ ತಾವರೆಯೊಂದು ನಲಿದಂತಿದೆ ನಿನ್ನಂದ ಆಮೇಲೆ…!” ಅವಳು ನಗುತ್ತಲೇ, “ಅದೆಲ್ಲಾ ಮಾಡ್ಬೇಕಾ? ನನಗೋಸ್ಕರ ಅಷ್ಟು ಮಾಡಲ್ವಾ?” ಎಂದು ಕೇಳಿದಾಗ, ಆ ಮೃದುವಾದ ಧ್ವನಿಯ ಹಿಂದೆ ನಾಚಿಕೆ ಕಣ್ಣಿಗೆ ಕಟ್ಟಿಬಿದ್ದಿತು.
ಅವಳು:
ಅವನ ಮಾತುಗಳಿಗೆ ನಾನು ನಗುತ್ತಿದ್ದರೂ, ಮನದಾಳದಲ್ಲಿ ಒಂದು ಮಿಡಿತ ಹೆಚ್ಚುತ್ತಿತ್ತು. ಅವನು ತಮಾಷೆ ಮಾಡುತ್ತಿದ್ದಾನೋ? ಇಲ್ಲ ನಿಜವಾಗಿಯೇ ಹೃದಯದಿಂದ ಹೇಳುತ್ತಿದ್ದಾನೋ? ಎಂಬ ಪ್ರಶ್ನೆ ನನ್ನೊಳಗೆ ಎದ್ದಿತ್ತು.
ಇದನ್ನೂ ಓದಿ: Letters to Daughter: ಮಗಳೇ, ಒಳ್ಳೆಯ ಗೆಳೆಯರ ಸಾಂಗತ್ಯವಿದ್ದಷ್ಟೂ ನಮ್ಮೊಳಗಿನ ಒತ್ತಡ ಕಡಿಮೆಯಾದಂತೆಯೇ
ಅವನು:
ಅಲ್ಲಿ ನಿಂತುಕೊಳ್ಳಲಾಗಲಿಲ್ಲ. ನಾನು ಪ್ರೀತಿಯ ಕೋರ್ಟ್ ಕಟ್ಟಿದೆ.
“ಹೃದಯ ಕದ್ದ ಆರೋಪದಲ್ಲಿ ಕೋರ್ಟ್ ಅಲ್ಲಿ ಕೇಸ್ ಹಾಕ್ತಿನಿ…”
ಅವಳ ನಗುವು ಆ ಮಾತಿಗೆ ಮಂಜಿನಂತೆ ಹರಿಯಿತು.
“ಓಹ್, ಸಾಕ್ಷಿ ಏನು?” ಎಂದು ಕೇಳಿದಳು.
ಅವಳು: ನನ್ನ ಧ್ವನಿಯಲ್ಲಿ ನಗು ಇದ್ದರೂ, ಹೃದಯ ಗಂಭೀರವಾಗಿತ್ತು. ನಿಜವಾಗಿ, ನಾನು ಅವನ ಹೃದಯ ಕದ್ದಿದ್ದೇನೋ? ಎಂಬ ಭಯವೇ ಆಗಿತ್ತು.
ಅವನು: ನನ್ನ ಬಾಯಲ್ಲಿ ಮತ್ತೊಂದು ನಗು ಮಿಂಚಿತು.
“ನಿನ್ನ ಸೌಂದರ್ಯ ಕಂಡು ಖಾಯಂ ಕೆಲಸಕ್ಕೆ ಅರ್ಜಿ ಹಾಕಿರುವೆ – ನಿನಗೆ ಸೀರೆ ಉಡಿಸಲು.”
ಅವಳ ಕಣ್ಣುಗಳಲ್ಲಿ ಏನೋ ಮೃದುವಾದ ಸ್ಪಂದನೆ ಹೊಳೆಯಿತು. ಆ ಕ್ಷಣ ನನ್ನ ಜೀವವೇ ಅವಳ ಕಣ್ಣಲ್ಲಿ ಸೆರೆ ಹಿಡಿಯಲ್ಪಟ್ಟಿತು.
ಅವಳು: ಅವನ ಮಾತು ನನ್ನೊಳಗೆ ಸಿಡಿಲಿನಂತೆ ಬಡಿದರೂ, ಅದು ನೋವಿನ ಸಿಡಿಲಲ್ಲ – ಸಂತೋಷದದು. ನನ್ನ ಮುಖದಲ್ಲಿ ನಗು ತೋರಿಸಿದರೂ, ಹೃದಯದಲ್ಲಿ ಚಳಿ ಹರಿಯಿತು. “ಅರ್ಜಿ ತಿರಸ್ಕಾರ ಮಾಡಿದ್ರೆ?” ಎಂದೆ. ಆದರೆ ಮನದಾಳದಲ್ಲಿ, “ಅರ್ಜಿ ಅಂಗೀಕರಿಸಬೇಕು” ಎಂಬ ಬಯಕೆ ಕೂಗುತ್ತಿತ್ತು.
ಅವನು:“ನಿನ್ನ ತುಟಿ ಅಂಚಿನ ನಾಚಿಕೆಯೇ ಸಾಕ್ಷಿ.” ಈ ಮಾತು ಹೇಳಿದಾಗ, ನನಗೆ ಅವಳು ಏನೂ ಉತ್ತರಿಸಬೇಕಾಗಿರಲಿಲ್ಲ. ಅವಳ ಮುಖದ ಬಣ್ಣವೇ ಉತ್ತರವಾಗಿತ್ತು.
ಅವಳು: ನನ್ನ ಗಲ್ಲ ಕೆಂಪಾಯಿತು. ನಾನು ತಲೆ ತಗ್ಗಿಸಿದೆ. ಹೃದಯವು ಏನು ಹೇಳುತ್ತಿತ್ತೋ ಅದನ್ನ ಮರೆಮಾಡಲು ಶಕ್ತಿಯೇ ಇರಲಿಲ್ಲ. ಆದರೆ ಮಾತುಗಳಿಂದ ತಮಾಷೆ ಮಾಡಲೇಬೇಕಾಯಿತು. “ಹಾಗಾದ್ರೆ ನನಗೆ ಶಿಕ್ಷೆ ಕೊಡ್ತಿಯಾ?” ಎಂದೆ.
ಅವನು: ನನ್ನ ಬಾಯಿ ಗಂಭೀರವಾಯಿತು.
“ಜೀವಾವಧಿ ಶಿಕ್ಷೆ – ಜೀವನಪೂರ್ತಿ ನನ್ನವಳಾಗಿ ಇರೋ ಶಿಕ್ಷೆ.”
ಈ ಮಾತು ಹೇಳುವಾಗ ನನ್ನ ಹೃದಯ ಉಸಿರೇ ನಿಂತಂತೆ ಆಯಿತು.
ಅವಳು: ಅವನ ಧ್ವನಿಯಲ್ಲಿ ಆಟ ಇರಲಿಲ್ಲ. ಅದು ನಿಜವಾಗಿತ್ತು. ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಹೌದು, ನಾನು ಒಪ್ಪಿಕೊಂಡಿದ್ದೆ. ನಾಚಿಕೆಯ ಮೌನವೇ ನನ್ನ ಉತ್ತರ.
ಅವನು: ನಾನು ಕೊನೆಯ ಆಸೆಯನ್ನು ಹೇಳಿದೆ.
“ಮನದ ಗುಡಿಯೊಳಗೆ ಕಾಲಿಟ್ಟಂಗೆ, ಒಂದ್ಸಾರಿ ನಮ್ಮ ಮನೆಯ ಅಂಗಳಕ್ಕೆ ಕಾಲಿಡು. ನನ್ನ ತಾಯಿ ಪ್ರೀತಿ ಎಷ್ಟಿದೆ ಅಂದ್ರೆ – ನೀ ನನ್ನೇ ಮರೆಯುವಷ್ಟು.”
ಅವಳು: ಈ ಮಾತು ನನ್ನ ಹೃದಯ ಮುರಿದಂತೆ, ಮತ್ತೆ ಸೇರಿಸಿದಂತೆ ಆಯಿತು. ತಾಯಿ ಪ್ರೀತಿಯ ಪ್ರಸ್ತಾಪ ಕೇಳಿದಾಗ ನನ್ನ ಕಣ್ಣು ಮಿಂಚಿತು. ಹೃದಯದಿಂದಲೇ ಬಾಯಿಗೆ ಬಂದಿತು:
“ನಿನ್ನ ತಾಯಿಗೋಸ್ಕರ ಖಂಡಿತಾ ನಿನ್ನ ಹೃದಯ ಸೇರ್ತೇನೆ.”
ಅವನು: ಆ ಕ್ಷಣದಲ್ಲಿ ನಾನು ನಗು-ಅಳುವ ನಡುವೆ ನಿಂತೆ. ನನ್ನ ಕಣ್ಣು ನೀರಿನಿಂದ ತುಂಬಿದರೂ, ಹೃದಯದಲ್ಲಿ ಹೂವು ಅರಳಿತ್ತು.
ಅವಳು:ಅವನ ಬಯಕೆ ಇನ್ನೂ ಬಾಕಿ ಇತ್ತು. “ಒಮ್ಮೆ ಬಾಚಿ ಆಲಂಗಿಸಲು ಆಸೆ ಆಗಿದೆ…” ಎಂದಾಗ, ನನ್ನ ಹೃದಯವೇ ಕಂಪಿಸಿತು. ನನ್ನ ತುಟಿಯಿಂದ ಒಂದೇ ಮಾತು ಬಂತು:
“ತಥಾಸ್ತು.”(Love Story)
ಲಿಖಿತ್, ಹೊನ್ನಾಪುರ.
