ಬಾಗ್ ಪತ್ : ಈ ಒಂದು ಘಟನೆ ಮಾನವೀಯತೆಯೇ ಮರುಗುವಂತೆ ಮಾಡಿವೆ. ಮಹಾಭಾರತದಲ್ಲಿ ಪಾಂಡವರು ದ್ರೌಪದಿಯನ್ನು ಪಣಕಿಟ್ಟ ಹಾಗೆ ಉತ್ತರ ಪ್ರದೇಶದ ಬಾಗ್ ಪತ್ ನಲ್ಲಿ ಜೂಜಿನ ಚಟಕ್ಕೆ ಬಿದ್ದ ಪಾಪಿ ಗಂಡನೊಬ್ಬ, ಹಣ ಸಾಲದೆ ಇದ್ದಾಗ ತನ್ನ ಹೆಂಡತಿಯನ್ನೇ ಪಣಕ್ಕಿಟ್ಟು, ಆಕೆಯ ಇಡೀ ಜೀವನವನ್ನೇ ಹಾಳು ಮಾಡಿರುವ ಪೈಶಾಚಿಕ ಕೃತ್ಯ ಇದೀಗ ಬೆಳಕಿಗೆ ಬಂದಿದೆ.(Baghpat Gang Rape Case)
ಕಳೆದ ವರ್ಷ ಅಕ್ಟೋಬರ್ನಲ್ಲಿ ಮೀರತ್ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬಾತನನ್ನು ಈ ಸಂತ್ರಸ್ತ ಮಹಿಳೆ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮತ್ತು ಆತನ ತಂದೆ-ತಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲು ಶುರು ಮಾಡಿದ್ದರು. ದೈಹಿಕ ಹಿಂಸೆ ನೀಡುವುದು ನಿತ್ಯದ ಕಥೆಯಾಗಿತ್ತು.
ಡ್ಯಾನಿಶ್ಗೆ ಕುಡಿತ ಮತ್ತು ಜೂಜಿನ ಹುಚ್ಚು ಇತ್ತು. ಕುಡಿದು ಬಂದು ನಿತ್ಯ ಪತ್ನಿಗೆ ಹೊಡೆಯುತ್ತಿದ್ದ. ಆದರೆ, ಆತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಪತ್ನಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟಾಗ ಪರಿಸ್ಥಿತಿ ಸಂಪೂರ್ಣ ಕೈಮೀರಿತು. ಜೂಜಿನಲ್ಲಿ ಸೋತ ನಂತರ, ಆತ ಇತರ ಪುರುಷರೊಂದಿಗೆ ಮಲಗುವಂತೆ ಪತ್ನಿಯನ್ನು ಒತ್ತಾಯಿಸಿದ್ದಾನೆ!
ಮಹಿಳೆಯ ದೂರಿನ ಪ್ರಕಾರ, ಪತಿಯ ಈ ಹೇಯ ಕೃತ್ಯದ ಬಳಿಕ ಉಮೇಶ್ ಗುಪ್ತಾ, ಮೋನು ಮತ್ತು ಅನ್ಸುಲ್ ಸೇರಿದಂತೆ ಒಟ್ಟು ಎಂಟು ಮಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇದೇ ವೇಳೆ, ಮನೆಯವರೂ ಆಕೆಗೆ ನೆರವಾಗಲಿಲ್ಲ. ಬದಲಿಗೆ, ಆಕೆಯ ಮೇಲೆ ಅತ್ಯಾಚಾರ ಎಸಗಿದವರ ಪಟ್ಟಿಯಲ್ಲಿ ಗಂಡನ ಅಣ್ಣ ಶಾಹಿದ್ ಹಾಗೂ ಅತ್ತಿಗೆಯ ಪತಿ ಶೌಕೀನ್ ಕೂಡ ಸೇರಿದ್ದಾರೆ. ಮಹಿಳೆಯ ಮಾವ ಯಾಮಿನ್ ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿ, “ನೀನು ವರದಕ್ಷಿಣೆ ತರಲಿಲ್ಲ, ಹಾಗಾಗಿ ನಾವು ಹೇಳಿದಂತೆ ಕೇಳಬೇಕು, ನಮ್ಮೆಲ್ಲರನ್ನೂ ಸಂತೋಷ ಪಡಿಸಬೇಕು” ಎಂದು ಬೆದರಿಕೆ ಹಾಕಿದ್ದಾನೆ.
ಒಟ್ಟಿನಲ್ಲಿ, ಗಂಡನ ಕೆಟ್ಟ ಚಟ ಮತ್ತು ಮನೆಯವರ ಕ್ರೌರ್ಯದಿಂದಾಗಿ ಆ ಮಹಿಳೆಯ ಬದುಕು ನರಕವಾಗಿದೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.(Baghpat Gang Rape Case)
