ಬೆಂಗಳೂರು: ನಗರದ ಬಸವನಗುಡಿಯಲ್ಲಿ ಈಗ ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ! ಕಾರಣ, ಇಂದಿನಿಂದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. (Kadalekayi Parise)ಈ ಬಾರಿ, ಈ ಜಾತ್ರೆಯ ಖುಷಿ ಕೇವಲ ಎರಡಲ್ಲ, ಬರೋಬ್ಬರಿ ಐದು ದಿನಗಳ ಕಾಲ ಇರಲಿದೆ! ರಾಮಲಿಂಗಾರೆಡ್ಡಿ ಚಾಲನೆ ಪರಿಷೆಗೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಬಸವನಗುಡಿಯ ದೊಡ್ಡ ಬಸವಣ್ಣನ ದೇವಸ್ಥಾನದ ಆವರಣದಲ್ಲಿ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಿದ್ದು, ಈಗಾಗಲೇ ಇಡೀ ಪ್ರದೇಶವು ಜಾತ್ರಾ ವಾತಾವರಣದಿಂದ ತುಂಬಿ ಹೋಗಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿರುವ ಪ್ರಕಾರ, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು, 21 ಬಸವಣ್ಣನ ವಿಗ್ರಹಗಳನ್ನು ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳ ರೈತರು ಕೂಡ ತಮ್ಮ ಮೊದಲ ಕಡಲೆಕಾಯಿ ಸುಗ್ಗಿಯೊಂದಿಗೆ ದೇವಸ್ಥಾನಕ್ಕೆ ಬಂದು ಕಡಲೆಕಾಯಿ ಅರ್ಪಿಸಿದ್ದಾರೆ. ಈ ಬಾರಿ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ನಿರ್ಧರಿಸಲಾಗಿದೆ.
ವ್ಯಾಪಾರಿಗಳ ಲೆಕ್ಕಾಚಾರ: ಕೆಲವು ಅಂಗಡಿಗಳಿಗೆ ಹಿನ್ನಡೆ, ಇನ್ನೂ ಕೆಲವರಿಗೆ ಭರ್ಜರಿ ವ್ಯಾಪಾರ!
ಈ ಐದು ದಿನಗಳ ಉತ್ಸವ ಸ್ಥಳೀಯ ವ್ಯಾಪಾರಿಗಳ ಮೇಲೆ ಮಿಶ್ರ ಪರಿಣಾಮ ಬೀರಲಿದೆ. ಹೊರಗಿನಿಂದ ಬರುವ ಮಾರಾಟಗಾರರಿಂದಾಗಿ ಸುಮಾರು 10-12 ದಿನಗಳ ಕಾಲ ಸ್ಥಳೀಯ ವ್ಯಾಪಾರಿಗಳ ದೈನಂದಿನ ವ್ಯಾಪಾರದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಹೊರಗಿನಿಂದ ಮೇಳಕ್ಕೆ ಬಂದ ವ್ಯಾಪಾರಿಗಳು ಎಲ್ಲರಂತೆ ವಸ್ತುಗಳನ್ನು ಮಾರುವುದರಿಂದ ಸ್ಥಳೀಯ ಮಾರಾಟಗಾರರಿಗೆ ಮಾರಾಟ ಕಡಿಮೆಯಾಗುತ್ತದೆ.
ಇದರ ಇನ್ನೊಂದು ಮುಖವೂ ಇದೆ, ಜಾತ್ರೆ ನಡೆಯುವಾಗ ಸ್ಥಳೀಯ ಅಂಗಡಿಗಳಲ್ಲಿ ಮಾರಾಟ ಕಡಿಮೆಯಾದರೂ, ಜನಸಂದಣಿಯಿಂದಾಗಿ ತಿನಿಸುಗಳು, ಜ್ಯೂಸ್ ಅಂಗಡಿಗಳು, ಬೇಕರಿಗಳು, ರೆಸ್ಟೋರೆಂಟ್ಗಳು ಮತ್ತು ಬೀದಿ-ಆಹಾರ ಮಾರಾಟಗಾರರ ವ್ಯಾಪಾರ ಮಾತ್ರ ಭರ್ಜರಿಯಾಗಿ ಹೆಚ್ಚಾಗುತ್ತದೆ. ಜನಸಂದಣಿ ಜಾಸ್ತಿಯಾದಾಗ ಸಹಜವಾಗಿಯೇ ಒಂದಿಬ್ಬರು ಹೆಚ್ಚಿಗೆ ವ್ಯಾಪಾರ ಮಾಡುತ್ತಾರೆ. ಜಾತ್ರೆಗೆ ಬಂದವರು ಮತ್ತೊಮ್ಮೆ ಬಸವನಗುಡಿಗೆ ಬಂದು ಶಾಪಿಂಗ್ ಮಾಡುತ್ತಾರೆ ಎಂಬ ಆಶಯವೂ ಇದೆ. ಒಟ್ಟಿನಲ್ಲಿ, ಬಸವನಗುಡಿಯ ತುಂಬಾ ಕಡಲೆಕಾಯಿ ಪರಿಷೆಯ(Kadalekayi Parise) ಸಂಭ್ರಮ ಮನೆ ಮಾಡಿದೆ.
