ಬೆಂಗಳೂರು: ರಾಜ್ಯದಾದ್ಯಂತ ಸದ್ದು ಮಾಡಿದ್ದ ವಾಲ್ಮೀಕಿ ನಿಗಮದ ಹಗರಣದ(Valmiki Nigama Scam) ವಿಚಾರದಲ್ಲಿ ಹೊಸ ಬೆಳವಣಿಗೆಯಾಗಿದೆ. ನಿಗಮದ ಹಣವನ್ನು ಲಪಟಾಯಿಸಿದ ಆರೋಪಿಗಳಿಗೆ ಜಾರಿ ನಿರ್ದೇಶಾಲಯ(ED) ಶಾಕ್ ನೀಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ED ಈ ಹಗರಣದಲ್ಲಿ ಭಾಗಿಯಾದವರ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಘೋಷಿಸಿದೆ.
ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಮಾಹಿತಿ ನೀಡಿರುವ ಇಡಿ(ED) 2002ರ ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ ಈ ಕ್ರಮ ಕೈಗೊಂಡಿರುವಾಗಿ ತಿಳಿಸಿದ ಈಡಿ ಅಧಿಕಾರಿಗಳು ಕಬಳಿಕೆಯಾದ ಹಣದ ಜಾಡು ಹಿಡಿದು, ಬೆಂಗಳೂರಿನಲ್ಲಿ ಆರೋಪಿಗಳ ಆಸ್ತಿಪಾಸ್ತಿ ಮತ್ತು ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಿದ್ದಾರೆ.
ಯಾರ ಯಾರ ಆಸ್ತಿ ಜಪ್ತಿ?
ಹಗರಣದ ಪ್ರಮುಖ ಆರೋಪಿಗಳಾದ ನೆಕ್ಕುಂಟಿ ನಾಗರಾಜ್, ಎಟಕೇರಿ ಸತ್ಯನಾರಾಯಣ ಮತ್ತು ಗೋಲಪಲ್ಲಿ ಕಿಶೋರ್ ರೆಡ್ಡಿ ಎಂಬುವವರಿಗೆ ಸೇರಿದ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಸುಮಾರು 4.45 ಕೋಟಿ ರೂಪಾಯಿ ಮೌಲ್ಯದ ಭೂಮಿ ಮತ್ತು ಫ್ಲಾಟ್ ಗಳು ಸೇರಿವೆ ಇದರ ಜೊತೆಗೆ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಇದ್ದ 50 ಲಕ್ಷ ರೂ. ನಗದನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ: Mangalore Cooker Blast: ಉಗ್ರ ಶಾರಿಕ್ ಗೆ ಹಣ ಎಲ್ಲಿಂದ ಬಂತು? ತನಿಖೆ ತೀವ್ರಗೊಳಿಸಿದ ಇಡಿ
ಅಕ್ರಮ ಹೇಗೆ ಬಯಲಾಯಿತು?
ಕಳೆದ ವರ್ಷ ಶಿವಮೊಗ್ಗದ ತಮ್ಮ ನಿವಾಸದಲ್ಲಿ ವಾಲ್ಮೀಕಿ ನಿಗಮದ(Valmiki Nigama) ನೌಕರ ಚಂದ್ರಶೇಖರನ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಾಗ, ಈ ಹಗರಣದ ಕರಾಳ ಮುಖ ಬಯಲಾಯಿತು. ತಮ್ಮ ಡೆತ್ ನೋಟ್ ನಲ್ಲಿ(Death Note) ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಮೇಲಿನವರ ಆದೇಶದಂತೆ ನಿಗಮದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ಚಂದ್ರಶೇಖರನ್ ತಮ್ಮ ಮರಣ ಪತ್ರದಲ್ಲಿ(Death Note) ಉಲ್ಲೇಖಿಸಿದ್ದರು. ಈ ಆತ್ಮಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ನಂತರ ನಿಗಮವು ನಡೆಸಿದ ಆಂತರಿಕ ತನಿಖೆಯಲ್ಲಿ ಸುಮಾರು 89.62 ಕೋಟಿ ಅಕ್ರಮ ವರ್ಗಾವಣೆ ಆಗಿರುವುದು ದೃಢಪಟ್ಟಿತ್ತು. ನಂತರ ತನಿಖೆ ಮುಂದುವರಿದಂತೆ ಅಕ್ರಮದ ಮೊತ್ತ 187 ಕೋಟಿ ದಾಟಿತ್ತು ಎಂದು ತಿಳಿದು ಬಂದಿದೆ.
ಇಡೀ ರಾಜ್ಯದ ಕಣ್ಣಿಗೆ ಮಣ್ಣೆರೆಚಿ, ದೀನ ದಲಿತರ ಏಳಿಗೆಗಾಗಿ ಮೀಸಲಿದ್ದ ವಾಲ್ಮೀಕಿ ನಿಗಮದ(Valmiki Nigama) ಹಣವನ್ನು ಕಬಳಿಸಿದವರ ವಿರುದ್ಧ ಜಾರಿ ನಿರ್ದೇಶನಾಲಯ(ED) ತನಿಖೆ ಮುಂದುವರಿಸಿದೆ. ಈ ಪ್ರಕರಣದ ಹಿಂದೆ ಇನ್ನೂ ಹಲವಾರು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಶಾಂತಿಸಲಾಗಿದ್ದು ಮುಂದಿನ ದಿನಗಳಲ್ಲಿ ಈಡಿ ತನಿಖೆಯಿಂದ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ. ಇದು ಬಡವರ ಹಣಕ್ಕೆ ದ್ರೋಹ ಬಗೆದವರಿಗೆ ತಕ್ಕ ಪಾಠವಾಗಲಿದೆ ಎಂಬ ನಿರೀಕ್ಷೆ ಇದೆ.
