ಬೆಂಗಳೂರು: ನೀವು ಮೈಸೂರು ಸಿಲ್ಕ್ ಸೀರೆಯನ್ನು(Mysore Silk) ಆನ್ಲೈನ್ನಲ್ಲಿ ಖರೀದಿಸಲು ಪ್ಲಾನ್ ಮಾಡಿದ್ದರೆ ನಿಮಗೊಂದು ಪ್ರಮುಖ ಸುದ್ದಿ ಮೈಸೂರು ಸಿಲ್ಕ್ ಸೀರೆಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಸದ್ಯಕ್ಕೆ ಆನ್ಲೈನ್ ಮಾರಾಟವನ್ನು ಸ್ಥಗಿತಗೊಳಿಸಿದೆ. ಶುದ್ಧ ರೇಷ್ಮೆ ಮತ್ತು ಚಿನ್ನದ ಜರಿಯಿಂದ ತಯಾರಾಗುವ ಈ ಜಿಐ (GI) ಟ್ಯಾಗ್ ಹೊಂದಿರುವ ಸೀರೆಗಳಿಗೆ ಆರ್ಡರ್ ಗಳು ಹೆಚ್ಚಾಗಿದ್ದು, ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನೇರ ಗ್ರಾಹಕರಿಗೆ ಆದ್ಯತೆ:
ಸದ್ಯಕ್ಕೆ ದಾಸ್ತಾನು ಕಡಿಮೆ ಇರುವುದರಿಂದ, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (KSIC) ಅಧಿಕೃತ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ಸೋಮವಾರ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಸೀರೆಗಳ ಗುಣಮಟ್ಟ ಅತ್ಯುತ್ತಮವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದು, ಉತ್ಪಾದನೆ ಸ್ಥಿರಗೊಂಡ ನಂತರ ಆನ್ಲೈನ್ ಮಾರಾಟವನ್ನು ಮತ್ತೆ ಆರಂಭಿಸಲಾಗುವುದು ಎಂದಿದ್ದಾರೆ.
ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ!
ರಾಜ್ಯದ ಹೊರಗಿನ ಗ್ರಾಹಕರಿಗೂ ಸೀರೆಗಳು ಸುಲಭವಾಗಿ ಸಿಗಲಿ ಎಂಬ ಉದ್ದೇಶದಿಂದ KSIC ಆನ್ಲೈನ್ ಮಾರಾಟ ಶುರು ಮಾಡಿತ್ತು. 1912 ರಿಂದಲೂ ಈ ಸೀರೆಗಳು ಜನಪ್ರಿಯವಾಗಿದ್ದು, ಸದ್ಯ ದಿನಕ್ಕೆ 300 ರಿಂದ 400 ಸೀರೆಗಳನ್ನು ತಯಾರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 31 ಲಕ್ಷ ಸೀರೆಗಳನ್ನು ಉತ್ಪಾದಿಸಲಾಗಿದೆ.
ಸಚಿವ ವೆಂಕಟೇಶ್ ಅವರು ಸೀರೆಗಳ ಕ್ರೇಜ್ ಬಗ್ಗೆ ವಿವರಿಸುತ್ತಾ, “ಸಣ್ಣಪುಟ್ಟ ದೋಷವಿರುವ ಸೀರೆಗಳ ವಿಲೇವಾರಿಗಾಗಿ ನಾವು 25% ರಿಂದ 50% ರಿಯಾಯಿತಿ ನೀಡುತ್ತೇವೆ. ಆ ಸಮಯದಲ್ಲಿ ರಿಯಾಯಿತಿ ದರದ ಸೀರೆಗಳಿಗಾಗಿ ಜನರು ಬೆಳಗಿನ ಜಾವ 3 ಗಂಟೆಯಿಂದಲೇ ಸಾಲಿನಲ್ಲಿ ನಿಲ್ಲುತ್ತಾರೆ” ಎಂದು ಮೈಸೂರು ಸಿಲ್ಕ್ ಸೀರೆಯ(Mysore Silk) ಜನಪ್ರಿಯತೆಯನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ: Deviyani Sharma: ಪ್ರಕೃತಿಯ ಮಡಿಲಲ್ಲಿ ಬೋಲ್ಡ್ ಅವತಾರ ತಾಳಿದ ದೇವಿಯಾನಿ ಶರ್ಮಾ..!
