ಬೆಂಗಳೂರು: ರಾಜ್ಯದಲ್ಲಿರುವ ಆರು ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಇನ್ನು ಮುಂದೆ ಪೊಲೀಸ್ ಮತ್ತು ಸೇನಾ ಕ್ಯಾಂಟೀನ್ಗಳ ಮಾದರಿಯಲ್ಲೇ, ರಾಜ್ಯದ ಸರ್ಕಾರಿ ನೌಕರರಿಗೂ ದೈನಂದಿನ ಜೀವನಕ್ಕೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL Supermarket) ಮೂಲಕ ಬೃಹತ್ ಸೂಪರ್ ಮಾರ್ಕೆಟ್ಗಳನ್ನು ಆರಂಭಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ.
ಸಚಿವ ಎಂ.ಬಿ. ಪಾಟೀಲ್ ಅವರಿಂದ ಸೂಚನೆ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಬುಧವಾರ ಈ ಸಂಬಂಧ ಖನಿಜ ಭವನದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸುತ್ತಿನ ಸಭೆ ನಡೆಸಿ, ಈ ಮಹತ್ವಾಕಾಂಕ್ಷಿ ಯೋಜನೆಗೆ(MSIL Supermarket) ರೂಪುರೇಷೆ ಸಿದ್ಧಪಡಿಸುವಂತೆ ಸೂಚಿಸಿದರು.
ಇದನ್ನೂ ಓದಿ: Job fair in Mysore: ಮೈಸೂರಿನಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ: 45,000 ಹುದ್ದೆಗಳಿಗೆ ನೇಮಕಾತಿ
ಸಭೆಯ ನಂತರ ಮಾತನಾಡಿದ ಸಚಿವರು, “ಪ್ರಸ್ತುತ ರಾಜ್ಯದ ಪೊಲೀಸ್, ಅರೆಸೇನಾ ಪಡೆಗಳ ಸಿಬ್ಬಂದಿಗೆ ಇಂತಹ ಕ್ಯಾಂಟೀನ್ ಸೌಲಭ್ಯ ಲಭ್ಯವಿದೆ. ಅದೇ ರೀತಿ ರಾಜ್ಯದ ಆರು ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಈ ಉಪಕ್ರಮವನ್ನು ಆರಂಭಿಸುವ ಯೋಚನೆ ಇದೆ” ಎಂದು ತಿಳಿಸಿದರು.
ಒಂದು ತಿಂಗಳಲ್ಲಿ ವರದಿ ಸಲ್ಲಿಕೆಗೆ ಗಡುವು
ಉದ್ದೇಶಿತ ಎಂಎಸ್ಐಎಲ್ ಸೂಪರ್ ಮಾರ್ಕೆಟ್ಗಳಲ್ಲಿ ನೌಕರರಿಗೆ ಬೇಕಾದ ದವಸ-ಧಾನ್ಯಗಳಿಂದ ಹಿಡಿದು, ಎಫ್ಎಂಸಿಜಿ (FMCG) ವಲಯದ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತಾಗಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯ ಸಾಧ್ಯಾಸಾಧ್ಯತೆಗಳು, ಅನುಷ್ಠಾನದ ವಿಧಾನ ಮತ್ತು ಹಣಕಾಸು ಇಲಾಖೆಯಿಂದ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿಗಳನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಒಂದು ತಿಂಗಳಲ್ಲಿ ವಿಸ್ತ್ರತ ವರದಿ ಸಲ್ಲಿಸುವಂತೆ ಸಚಿವರು ಎಂಎಸ್ಐಎಲ್ಗೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ: Love Story: ಹಠಕ್ಕೆ ಬಿದ್ದ ಹೃದಯ ಕೈಹಿಡಿದ ಪ್ರೀತಿ; ಸೋತು ಗೆದ್ದ ಆದಿತ್ಯ-ಆರಾಧನಾ
ಹಂತ ಹಂತವಾಗಿ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿ
ಯೋಜನೆಯ ಮೊದಲ ಹಂತದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ 4-5 ಸೂಪರ್ ಮಾರ್ಕೆಟ್ ಮಳಿಗೆಗಳನ್ನು ತೆರೆಯಲು ಚಿಂತನೆ ನಡೆದಿದೆ. ನಂತರದ ದಿನಗಳಲ್ಲಿ ಇದನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಆಲೋಚನೆ ಇದೆ. ಅಂತಿಮ ತೀರ್ಮಾನವು ಎಂಎಸ್ಐಎಲ್ನ ವಿಸ್ತ್ರತ ಅಧ್ಯಯನ ವರದಿ ಬಂದ ನಂತರ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಯೋಜನೆಯಿಂದ ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ನ(MSIL Supermarket) ವಹಿವಾಟು ಮತ್ತಷ್ಟು ವಿಸ್ತಾರಗೊಂಡು, ಹೊಸ ಆದಾಯ ಮೂಲ ಸಿಗಲಿದೆ. ಜೊತೆಗೆ, ಲಕ್ಷಾಂತರ ನೌಕರರ ಕುಟುಂಬಗಳಿಗೆ ಆರ್ಥಿಕ ನೆರವು ಸಿಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವಂತೆಯೂ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
‘ಸದ್ಯ ಸೀಮಿತ ಪ್ರಮಾಣದಲ್ಲಿರುವ ಎಂಎಸ್ಐಎಲ್ನ.(MSIL Supermarket) ಚಟುವಟಿಕೆಗಳಿಗೆ ಮತ್ತಷ್ಟು ಕಸುವು ತುಂಬಿ, ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ನಮ್ಮ ಆಶಯ. ಈ ಕ್ರಮದಿಂದಾಗಿ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದು ಸಚಿವ ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.(MSIL Supermarket)
