
ಈ ಹೆಸರು ಕೇಳಿದ ತಕ್ಷಣ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಮೂಡುವುದು ಹಳದಿ ಜೆರ್ಸಿ, ಸಿಕ್ಸರ್ಗಳು ಮತ್ತು ವಿಶಿಷ್ಟ ನಾಯಕತ್ವ. ಐಪಿಎಲ್ 2025ರ ಆವೃತ್ತಿಯಲ್ಲಿ ಧೋನಿ(Dhoni) ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಧೋನಿ ತಮ್ಮ ಭವಿಷ್ಯದ ಬಗ್ಗೆ ಕೊನೆಗೂ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಅಭಿಮಾನಿಗಳ ಪ್ರಶ್ನೆಗೆ ಧೋನಿ(Dhoni) ಕೊಟ್ಟ ಉತ್ತರ ಎಲ್ಲರಿಗೂ ಸಂತೋಷ ತಂದಿದೆ.
ಸಿಎಸ್ಕೆ ಭವಿಷ್ಯದ ಕುರಿತು ಪ್ರಶ್ನೆ ಕೇಳಿದಾಗ ಧೋನಿ, “ನಾನು ಯಾವಾಗಲೂ ಹೇಳುವುದು ಒಂದೇ, ನಿರ್ಧಾರ ತೆಗೆದುಕೊಳ್ಳಲು ನನಗೆ ಸಾಕಷ್ಟು ಸಮಯವಿದೆ. ಆದರೆ, ಹಳದಿ ಜೆರ್ಸಿಯಲ್ಲಿ ನಾನು ಕಾಣಿಸಿಕೊಳ್ಳುತ್ತೇನಾ ಎಂದು ಕೇಳಿದರೆ, ನಾನು ಯಾವಾಗಲೂ ಹಳದಿ ಜೆರ್ಸಿಯಲ್ಲಿಯೇ ಇರುತ್ತೇನೆ. ನಾನು ಆಡುತ್ತೇನೋ ಇಲ್ಲವೋ ಎಂಬುದು ಬೇರೆ ವಿಷಯ” ಎಂದು ಹೇಳಿದರು. ಈ ಮಾತುಗಳು, ಅವರು ಗ್ರೌಂಡ್ ನಲ್ಲಿ ಆಡದಿದ್ದರೂ ಸಿಎಸ್ಕೆ ಜೊತೆ ಸದಾ ಇರುತ್ತಾರೆ ಎಂಬ ಸುಳಿವು ಕೊಟ್ಟಿದೆ.
ಇದನ್ನೂ ಓದಿ: ಮಾಣೆಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಇ-ಪಾಸ್ ಕಡ್ಡಾಯ, ಇ-ಪಾಸ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮುಂದುವರಿದು ಮಾತನಾಡಿದ ಅವರು, “ನಾನು ಮತ್ತು ಸಿಎಸ್ಕೆ (csk), ಒಟ್ಟಿಗೆ ಇದ್ದೇವೆ. ನಿಮಗೆ ಗೊತ್ತಾ, ಮುಂದಿನ 15-20 ವರ್ಷಗಳ ಕಾಲವೂ ನಾವು ಜೊತೆಗೆ ಇರುತ್ತೇವೆ. ನಾನಿನ್ನೂ 15-20 ವರ್ಷಗಳ ಕಾಲ ಆಡುತ್ತೇನೆ ಎಂದು ಅವರು ಭಾವಿಸುವುದಿಲ್ಲ ಎಂದು ನಾನು ಅಂದುಕೊಳ್ಳುತ್ತೇನೆ” ಎಂದು ನಗುತ್ತಾ ಹೇಳಿದರು. ಈ ಮಾತುಗಳು ಅಭಿಮಾನಿಗಳಿಗೆ ಖಂಡಿತವಾಗಿಯೂ ದೊಡ್ಡ ರಿಲೀಫ್ ನೀಡಿದೆ.
2008 ರಿಂದಲೂ ಸಿಎಸ್ಕೆ ತಂಡದ ಭಾಗವಾಗಿರುವ ಧೋನಿ(Dhoni) , ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಐದು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಸಿಎಸ್ಕೆ(csk) ಮತ್ತು ಚೆನ್ನೈ ನಗರದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿ, “ವರ್ಷಗಳಿಂದ ನಮ್ಮ ಬಾಂಧವ್ಯ ಬೆಳೆದಿದೆ. ಇದರಿಂದ ವ್ಯಕ್ತಿಯಾಗಿ ಮತ್ತು ಕ್ರಿಕೆಟಿಗನಾಗಿ ನಾನು ಸುಧಾರಣೆ ಕಂಡೆ. ಸಿಎಸ್ಕೆ ಇರುವುದರಿಂದ ಚೆನ್ನೈಗೆ ಒಳ್ಳೆಯದಾಗಿದೆ. ಹಾಗಾಗಿ, ಇಂದು ಇದು ನನಗೂ ಒಳ್ಳೆಯದಾಗಿದೆ” ಎಂದರು.
2025ರ ಐಪಿಎಲ್ನಲ್ಲಿ(ipl) ಸಿಎಸ್ಕೆ ಕೊನೆಯ ಸ್ಥಾನ ಪಡೆದ ಬಗ್ಗೆಯೂ ಧೋನಿ(Dhoni) ಮಾತನಾಡಿದರು. “ಹೌದು, ಕಳೆದ ಎರಡು ವರ್ಷಗಳು ನಮಗೆ ಅಷ್ಟು ಉತ್ತಮವಾಗಿರಲಿಲ್ಲ. ನಾವು ಅಂದುಕೊಂಡ ಗುರಿ ತಲುಪಲಿಲ್ಲ. ಆದರೆ, ನಾವು ತಪ್ಪುಗಳಿಂದ ಕಲಿಯುವುದು ಮುಖ್ಯ. ಕಳೆದ ವರ್ಷವೂ ಇದೇ ಪ್ರಶ್ನೆ ನಮ್ಮ ಮುಂದೆ ಇತ್ತು” ಎಂದು ಹೇಳಿದರು.
ಧೋನಿಯವರ ಈ ಮಾತುಗಳು ಮುಂದಿನ ಆವೃತ್ತಿಗೆ ತಂಡ ಇನ್ನಷ್ಟು ಬಲವಾಗಿ ಹಿಂದಿರುಗಲಿದೆ ಎಂಬ ಭರವಸೆಯನ್ನು ಹುಟ್ಟುಹಾಕಿವೆ.
