ಯುವತಿಯ ಬಟ್ಟೆ ಬದಲಾಯಿಸುವ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿರುವ ಆರೋಪದಲ್ಲಿ ಯುವತಿಯೊಬ್ಬಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತೆ ಯನ್ನು ಚಿಕ್ಕಮಗಳೂರು ಮೂಲದ, ಮಂಗಳೂರಿನ ಕಂಕನಾಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ನಿರೀಕ್ಷಾ ಎಂದು ಗುರುತಿಸಲಾಗಿದೆ.
ಈಕೆಯ ವಿರುದ್ಧ ಇತ್ತೀಚಿಗೆ ಸಾವಿಗೆ ಶರಣಾದ ಕಾಲೇಜು ವಿದ್ಯಾರ್ಥಿ ಅಭಿಷೇಕ್ ಆಚಾರ್ಯ ಪ್ರಕರಣದಲ್ಲೂ ಹನಿ ಟ್ರ್ಯಾಪ್ ಆರೋಪ ಕೇಳಿಬಂದಿತ್ತು.
ತನ್ನ ಜೊತೆಗಿದ್ದ ಯುವತಿಯೊಬ್ಬಳ ಬಟ್ಟೆ ಬದಲಾಯಿಸುವ ವಿಡಿಯೋ ವನ್ನು ಸೆರೆ ಹಿಡಿದು ಹಣಕ್ಕಾಗಿ ಪೀಡಿಸಿದ ಬಗ್ಗೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಯುವತಿಯೊಬ್ಬಳು ನೀಡಿದ್ದ ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ನಿರೀಕ್ಷಾ ಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೆಲ ದಿನಗಳ ಹಿಂದೆ ಕಾರ್ಕಳ ತಾಲೂಕಿನ ಬೆಲ್ಮಣ್ ನಿವಾಸಿ ಯುವಕ ಅಭಿಷೇಕ್ ಆಚಾರ್ಯ ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ನಲ್ಲಿ ನಿರೀಕ್ಷಾ ಹಾಗೂ ಇತರ ಮೂವರು ಹನಿ ಟ್ರ್ಯಾಪ್ ಮಾಡಿದ್ದಲ್ಲದೇ ಹಲ್ಲೆ ನಡೆಸಿದ್ದಾರೆ, ಹಣಕ್ಕಾಗಿ ಪೀಡಿಸಿ ಹಲವು ಬಾರಿ ಹಣ ಪಡೆದುಕೊಂಡಿದ್ದಾರೆ ಎಂದು ದೂರಲಾಗಿತ್ತು. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನಿರೀಕ್ಷಾ ಹಾಗೂ ಇತರರ ವಿರುದ್ಧ ಆಕ್ರೋಶ ಹಾಗೂ ಬಂಧನಕ್ಕೆ ಆಗ್ರಹ ವ್ಯಕ್ತವಾಗಿತ್ತು.
