ಬೆಂಗಳೂರು: ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ಬಹುನಿರೀಕ್ಷಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಸಮೀಕ್ಷೆ(Karnataka Caste Survey) ಕಡ್ಡಾಯವಲ್ಲ, ಬದಲಾಗಿ ಜನರು ತಮ್ಮ ಇಚ್ಛೆಯಂತೆ ಭಾಗವಹಿಸಬಹುದಾದ ಒಂದು ಪ್ರಕ್ರಿಯೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ. ಈ ಸಮೀಕ್ಷೆಯು ಕಲ್ಯಾಣ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಸಮೀಕ್ಷೆಯನ್ನು ಪ್ರಶ್ನಿಸಿ ರಾಜ್ಯ ಒಕ್ಕಲಿಗರಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಮಾಜಿ ಶಾಸಕ ಕೆ.ಎನ್. ಸುಬ್ಬಾರೆಡ್ಡಿ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ವಾದ:
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಫ್ಟಿ, ಅರ್ಜಿದಾರರು ಇದನ್ನು ಜಾತಿ ಸಮೀಕ್ಷೆ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಹೇಳಿದರು. ಯಾವುದೇ ಸರ್ಕಾರಕ್ಕೆ ಸರಿಯಾದ ಡೇಟಾ ಇಲ್ಲದೆ ಉತ್ತಮ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ.
ಇದು ಕೇವಲ ಅಂಕಿ-ಅಂಶಗಳನ್ನು ಸಂಗ್ರಹಿಸುವಪ್ರಯತ್ನವಷ್ಟೇ ಎಂದು ಅವರು ವಾದಿಸಿದರು. ಇದೇ ರೀತಿ, ಹಿಂದುಳಿದ ವರ್ಗಗಳ ಆಯೋಗದ ಪರ ವಾದಿಸಿದ ವಕೀಲ ಪ್ರೊ. ರವಿವರ್ಮ ಕುಮಾರ್, ಈ ಸಮೀಕ್ಷೆಯಲ್ಲಿ ಮಾಹಿತಿ ನೀಡುವುದು ಸಂಪೂರ್ಣವಾಗಿ ಜನರ ಸ್ವಯಂಪ್ರೇರಿತ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
ಅರ್ಜಿದಾರರ ಆಕ್ಷೇಪಣೆಗಳು:
ಸಮೀಕ್ಷೆಯು ಸ್ವಯಂಪ್ರೇರಿತ ಎಂಬ ಸರ್ಕಾರದ ವಾದವನ್ನು ಅರ್ಜಿದಾರರು ತೀವ್ರವಾಗಿ ವಿರೋಧಿಸಿದರು. ವಕೀಲ ಪ್ರಭುಲಿಂಗ ನಾವದಗಿ, ಜಾತಿ ಸಮೀಕ್ಷೆಯ(Karnataka Caste Survey) ಕೈಪಿಡಿಯಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಕೇಳುತ್ತಿರುವುದು ಸರ್ಕಾರದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಬ್ಬ ವಕೀಲ ಜಯಕುಮಾರ್ ಪಾಟೀಲ್, ಇದು ಸಮೀಕ್ಷೆಯಲ್ಲ, ಬದಲಾಗಿ ಇಡೀ ರಾಜ್ಯದ ಜನರನ್ನು ಒಳಗೊಳ್ಳುವುದರಿಂದ ಇದು ಒಂದು ರೀತಿಯ ಗಣತಿ ಎಂದು ಹೇಳಿದರು. ಜೊತೆಗೆ ಇದು ಚುನಾವಣೆಗಾಗಿ ಜಾತಿಗಳ ಸಂಖ್ಯೆ ತಿಳಿಯಲು ಮಾಡುವ ಒಂದು ರಾಜಕೀಯ ತಂತ್ರ ಎಂದು ಆರೋಪಿಸಿದರು.
ಖಾಸಗಿತನದ ಬಗ್ಗೆ ಕಳವಳ ವ್ಯಕ್ತಪಡಿಸಿದ ವಕೀಲ ಅಶೋಕ್ ಹಾರನಹಳ್ಳಿ, ಈ ಸಮೀಕ್ಷೆಯಲ್ಲಿ ಜನರು ತಪ್ಪು ಮಾಹಿತಿ ನೀಡುವ ಸಾಧ್ಯತೆ ಇದೆ ಮತ್ತು ಡಿಜಿಟಲ್ ಡೇಟಾ ಸೋರಿಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಇನ್ನೊಬ್ಬ ವಕೀಲ ವಿವೇಕ್ ರೆಡ್ಡಿ, ಈ ಸಮೀಕ್ಷೆಯು ಅವೈಜ್ಞಾನಿಕವಾಗಿ ಹೊಸ ಜಾತಿಗಳನ್ನು ಸೃಷ್ಟಿಸಿ ಗೊಂದಲ ಉಂಟುಮಾಡುತ್ತಿದೆ ಎಂದು ವಾದಿಸಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ಒಟ್ಟಿನಲ್ಲಿ, ಈ ಸಮೀಕ್ಷೆ(Karnataka Caste Survey) ನಿಜಕ್ಕೂ ಸ್ವಯಂಪ್ರೇರಿತವೇ ಅಥವಾ ಪರೋಕ್ಷವಾಗಿ ಕಡ್ಡಾಯವೇ ಎಂಬ ಕುರಿತ ಕಾನೂನು ಹೋರಾಟ ಮುಂದುವರಿದಿದೆ.
