ಮೈಸೂರು: ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ”ಮುಂದಿನ ಸಿಎಂ ಮಹದೇವಪ್ಪ” ಎಂಬ ಅಭಿಮಾನಿಗಳ ಜೈಕಾರ ಮೊಳಗಿತು. ಈ ಪ್ರೀತಿಯ ಕೂಗಿಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ(H C Mahadevappa) ಅವರು ಮುಗುಳ್ಳಗುತ್ತಲೇ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.
ಇದನ್ನೂ ಓದಿ: Soudi Defence Agreement: ಪಾಕಿಗೆ ಸೌದಿ ಬೆಂಬಲ, ಭಾರತಕ್ಕೆ ಸವಾಲಾಗಲಿದೆಯಾ ಸೌದಿ-ಪಾಕ್ ಹೊಸ ರಕ್ಷಣಾ ಒಪ್ಪಂದ?
”ಅಭಿಮಾನಿಗಳು ಪ್ರೀತಿಯಿಂದ ಹಾಗೆ ಕೂಗುವುದು ಸಹಜ. ಆದರೆ ಮುಖ್ಯಮಂತ್ರಿ ಕುರ್ಚಿ ಇರುವುದು ಒಂದೇ. ಆ ಕುರ್ಚಿಯಲ್ಲಿ ನಮ್ಮ ನಾಯಕರಾದ ಸಿದ್ದರಾಮಯ್ಯನವರು 2028ರವರೆಗೂ ಭದ್ರವಾಗಿ ಕುಳಿತಿರುತ್ತಾರೆ, ಇದರಲ್ಲಿ ಯಾವುದೇ ಅನುಮಾನ ಬೇಡ,” ಎಂದು ಸ್ಪಷ್ಟಪಡಿಸಿದರು. ಅಭಿಮಾನಿಗಳ ಘೋಷಣೆ ಕೇವಲ ಅವರ ಪ್ರೀತಿಯ ಪ್ರತೀಕವಷ್ಟೇ ಎಂದು ಹೇಳುವ ಮೂಲಕ ಚರ್ಚೆಗೆ ಪೂರ್ಣವಿರಾಮ ಇಟ್ಟರು.
ಜಾತಿಗಣತಿ: ಜಾತಿಗಣತಿಯಿಂದ ಹಿಂದೂ ಧರ್ಮವನ್ನು ಒಡೆಯಲಾಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಸಚಿವರು, “ಇದು ಶುದ್ಧ ಸುಳ್ಳು. ಸಿದ್ದರಾಮಯ್ಯನವರು ಯಾಕೆ ಹಿಂದೂ ಧರ್ಮವನ್ನು ಒಡೆಯುತ್ತಾರೆ? ಜಾತಿಗಣತಿ ಮಾಡುತ್ತಿರುವುದು ಧರ್ಮ ಒಡೆಯಲಿಕ್ಕಲ್ಲ, ಬದಲಾಗಿ ವಿವಿಧ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು. ಧರ್ಮ ಒಡೆಯುವ ಕೆಲಸ ನಮ್ಮದಲ್ಲ, ಅದು ಬಿಜೆಪಿಯವರದ್ದು,” ಎಂದು ಮಹದೇವಪ್ಪ (H C Mahadevappa) ನೇರವಾಗಿ ಹೇಳಿದರು.
ಇದನ್ನೂ ಓದಿ: Love Story: “ನಿನ್ನ ರೀತಿ ಪ್ರೀತಿ”- ಭಾವನೆಗಳು ಅಳಿಸುವುದಿಲ್ಲ, ಅವು ಬದುಕಿನ ಭಾಗವಾಗುತ್ತವೆ
ಮತಾಂತರದ ಕುರಿತು ಮಾತನಾಡಿದ ಅವರು, “ಯಾರಾದರೂ ಮತಾಂತರ ಹೊಂದಲು ಬಯಸಿದರೆ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ’ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಅದನ್ನು ತಡೆಯಲು ನಾವ್ಯಾರು? ನಾವು ಕೇವಲ ಮತಾಂತರಗೊಂಡವರ ಮೂಲ ಜಾತಿಯನ್ನು ನಮೂದಿಸಿದ್ದೇವೆ ಅಷ್ಟೇ, ಇದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು. ನಮ್ಮ ಒಳ್ಳೆಯ ಕೆಲಸಗಳಿಗೆ ವಿವಾದ ಸೃಷ್ಟಿಸುವುದೇ ಬಿಜೆಪಿಯ ಮನಸ್ಥಿತಿ ಎಂದು ಅವರು ಕಿಡಿಕಾರಿದರು.
ಸಂಪುಟದಲ್ಲಿ ಯಾವುದೇ ಗೊಂದಲವಿಲ್ಲ ಜಾತಿಗಣತಿ ವರದಿಗೆ ಸಚಿವ ಸಂಪುಟದಲ್ಲಿ ವಿರೋಧವಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಅವರು, “ಯಾವ ಸಚಿವರೂ ಇದನ್ನು ವಿರೋಧಿಸಿಲ್ಲ. ಹೊರಗಡೆ ನಡೆಯುತ್ತಿರುವ ಜಾತಿ ಸಭೆಗಳು ಜಾತಿಗಣತಿಯನ್ನು ವಿರೋಧಿಸಲು ಅಲ್ಲ, ಬದಲಾಗಿ ತಮ್ಮ ಜಾತಿಯನ್ನು ಯಾವ ನಿರ್ದಿಷ್ಟ ಹೆಸರಿನಲ್ಲಿ ದಾಖಲಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು. ಇದರಲ್ಲಿ ಯಾವುದೇ ತಪ್ಪಿಲ್ಲ,” ಎಂದು ಸ್ಪಷ್ಟನೆ ನೀಡಿದರು.
ಬಾನು ಮುಸ್ತಾಕ್ ಹೆಸರು ವಿರೋಧಿಸುವವರಿಗೆ ನ್ಯಾಯಾಲಯವೇ ಉತ್ತರ ನೀಡಿದೆ. ಮೈಸೂರಿನಲ್ಲಿ ಬಾನು ಮುಸ್ತಾಕ್ ಅವರ ಹೆಸರು ಇಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ಬಗ್ಗೆ ಮಾತನಾಡಿದ ಅವರು, “ಸಂವಿಧಾನದ ಮೂಲಕ ನ್ಯಾಯಾಲಯವೇ ವಿರೋಧಿಗಳ ಬಾಯಿಗೆ ಬೀಗ ಹಾಕಿದೆ. ಇನ್ನಾದರೂ ಈ ವಿರೋಧವನ್ನು ನಿಲ್ಲಿಸಿ, ಎಲ್ಲರೂ ಒಟ್ಟಾಗಿ ನಾಡಹಬ್ಬ ದಸರಾವನ್ನು ಸಂಭ್ರಮದಿಂದ ಆಚರಿಸೋಣ. ಬನ್ನಿ, ಇದು ಎಲ್ಲ ಧರ್ಮದವರ ಹಬ್ಬ,” ಎಂದು ಎಚ್ ಸಿ ಮಹದೇವಪ್ಪ (H C Mahadevappa) ಎಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸಿದರು..
