Fertilizer Misuse: ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಎಲ್ಲಾದರು ನೋಡಿ ಯಾರಾದರೂ ಒಬ್ಬರು ನಿಮಗೆ ಸಲಹೆಗಳನ್ನು ಕೊಡುತ್ತಿರುತ್ತಾರೆ. ರಸಗೊಬ್ಬರ ಬಳಸಿದರೆ ಮಣ್ಣು ಹಾಳಾಗುತ್ತದೆಯ ಹೌದೋ? ಹೌದು ಹಾಗಾದ್ರೆ ನಿಜವಾಗಿಯೂ ರಸಗೊಬ್ಬರ ಬಳಸಿದರೆ ಮಣ್ಣು ಹಾಳಾಗುತ್ತ? ಇದನ್ನು ತಿಳಿಯುವ ಮೊದಲು, ಒಂದು ಸಸ್ಯ ಬೆಳೆಯಲು ಮುಖ್ಯವಾಗಿ ಏನೇನು ಬೇಕಾಗುತ್ತದೆ ಎಂದು ನೋಡೋಣ.
ಬೆಳೆಗಳ ಸಂಪೂರ್ಣ ಬೆಳವಣಿಗೆಗೆ ಮುಖ್ಯವಾಗಿ 17 ಪೋಷಕಾಂಶಗಳು ಅವಶ್ಯಕ ಅವುಗಳಲ್ಲಿ ಮುಖ್ಯವಾಗಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಈ ಮೂರು ಸಹ ವಾತಾವರಣದಲ್ಲಿ ಇರುವುದರಿಂದ ಇವುಗಳ ಕೊರತೆ ಕಾಣದು, ಇನ್ನು ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಪ್ರಧಾನ ಪೋಷಕಾಂಶಗಳಾದರೆ, ಕ್ಯಾಲ್ಸಿಯಂ, ಮ್ಯಾಗ್ನಿಷಿಯಾಂ ಮತ್ತು ಗಂಧಕ ಉಪ ಪ್ರಧಾನ ಪೋಷಕಾಂಶಗಳು ಹಾಗೆಯೇ ಬೋರಾನ್, ಜಿಂಕ್, ಮ್ಯಾಂಗನೀಸ್, ಕಬ್ಬಿಣ, ತಾಮ್ರ, ಮಾಲುಬ್ಡಿನಂ, ಕ್ಲೋರಿನ್ ಮತ್ತು ನಿಕ್ಕಲ್ ಗಳು ಸೂಕ್ಷ್ಮ ಪೋಷಕಾಂಶಗಳು.
ರಸಗೊಬ್ಬರದ ಮೇಲಿನ ಆಪಾದನೆಗಳು
1. ರಸಗೊಬ್ಬರ ಬಳಕೆಯಿಂದ ಮಣ್ಣಿನ ರಚನೆ ಹಾಳಾಗಿ ಭೂಮಿ ಗಟ್ಟಿಯಾಗುತ್ತದೆ
2. ಎರೆಹುಳು ಮತ್ತು ಇನ್ನಿತರ ಉಪಯುಕ್ತ ಜೀವಿಗಳು ಸಾಯುತ್ತವೆ
3. ರಸಗೊಬ್ಬರ ಕೊಟ್ಟು ಭೂಮಿ ಬರಡಾಗಿ ಮುಂದೆ ಎಸ್ಟು ರಸಗೊಬ್ಬರ ಸುರಿದರು ಭೂಮಿಯಲ್ಲಿ ಬೆಳೆ ಬರುವುದಿಲ್ಲ .
4. ದುಬಾರಿ ಗೊಬ್ಬರ ಹಾಕಿಯೂ ಸಹಿತ ಬೆಳೆ ಕೈ ಹಿಡಿಯಲಿಲ್ಲ
ಈ ಎಲ್ಲಾ ಆರೋಪಗಳು ಸಹ ಸತ್ಯವೇ ಸರಿ ಆದರೆ ಮಣ್ಣಿಗೆ ಇವುಗಳನ್ನು(ರಸಗೊಬ್ಬರ) ಕೊಡುವ ಮೊದಲು ಎಷ್ಟು ಸಾವಯುವ ಗೊಬ್ಬರ (ಕುರಿ,ಹಸು,ಕೋಳಿ ಇತ್ಯಾದಿ) ಕೊಟ್ಟಿದ್ರಿ ಎಂಬುದು ಮೊದಲ ಅಂಶವಾಗಬೇಕು. ಇನ್ನು ತುಂಬಾ ಜನ ಕೃಷಿಕರು ಕೃಷಿ ವಿಜ್ಞಾನಿಗಳನ್ನು ಬೈಯುತ್ತಾ ಇರುತ್ತಾರೆ, ಕೃಷಿ ವಿಜ್ಞಾನಿ ಮೊದಲು ಹೇಳುತ್ತಾರೆ/ಬರೆಯುತ್ತಾರೆ ಇಂತಿಷ್ಟು ಜಾಗಕ್ಕೆ ಇಷ್ಟು ಪ್ರಮಾಣದ ಸಾವಯವ ಗೊಬ್ಬರ ಕೊಡಿ ಅಂದು ನಂತರದ ಎರಡನೇ ವಾಕ್ಯದಲ್ಲಿ ಇರುತ್ತದೆ ಇಂತಿಷ್ಟು ರಸಗೊಬ್ಬರ ಕೊಡಿ ಎಂದು ಆದರೆ ಕೃಷಿಕನಿಗೆ ಜಾಣ ಕುರುಡು ಅವನು ಎರಡನೇ ವಾಕ್ಯವನ್ನಸ್ಟೇ ಓದುತ್ತಾನೆ ಮತ್ತು ಅದನ್ನೇ ಪಾಲಿಸುತ್ತಾನೆ.
ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ೦.5ಕ್ಕೂ ಹೆಚ್ಚಿಗೆ ಇರಬೇಕು ಕಡಿಮೆಯಿದ್ದಲ್ಲಿ ಹೆಚ್ಚುಮಾಡಲು ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ ಇತ್ಯಾದಿ ಸಾವಯವ ಬಳಸಿ ಹೆಚ್ಚಿಸಬೇಕು ಇದರಿಂದ ಸೂಕ್ಷ್ಮ ಜೀವಿಗಳು ಸಹ ಹೆಚ್ಚುತ್ತದೆ ಮಣ್ಣಿನಲ್ಲಿ ಸಾವಯವ ಇಂಗಾಲ ಕಡಿಮೆಯಾದರೆ ಸೂಕ್ಷ್ಮ ಜೀವಿಗಳು ಸಾಯುತ್ತವೆ, ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ ಹಾಗೂ ಕಾಂಗ್ ಮಣ್ಣಿನ ರಚನೆಗೂ ಹಾನಿಯಾಗುತ್ತದೆ.
(Fertilizer misuse)ರಸಗೊಬ್ಬರ ಮಣ್ಣನ್ನು ಹಾಳುಮಾಡುತ್ತದೆಯೇ?
ಎಲ್ಲಾದರು ಒಂದು ಕಡೆ ಉಪ್ಪಿನ ಮೂಟೆಯನ್ನು ಇಟ್ಟು ನೋಡಿ ಅಲ್ಲಿ ಖಂಡಿತ ನೆಲ ಹಾಳಾದಂತೆ ಕಾಣುತ್ತದೆ, ರಸಗೊಬ್ಬರಕ್ಕೆ ಹಳ್ಳಿ ಕಡೆ ಉಪ್ಪು ಎಂತಲೇ ಹೆಸರು ಹಾಗಾದರೆ ಒಂದು ಎಕರೆಗೆ ನೀವು ಎಷ್ಟು ರಸಗೊಬ್ಬರ ಕೊಡುತ್ತೀರಾ?, 3- 4 ಚೀಲದಷ್ಟು ಕೊಡುತ್ತೀರಾ, ಅಂದರೆ ಸುಮಾರು 150- 200ಕೆಜಿ. ನೀವು ಕೊಡುತ್ತಿರುವ ಮೇಲ್ಮೈ ಮಣ್ಣಿನ ತೂಕ ಎಷ್ಟು ಗೊತ್ತಾ ಬರೋಬ್ಬರಿ10 ಲಕ್ಷ ಕೆಜಿ!. ಇಲ್ಲಿ ಅರಿತುಕೊಳ್ಳಬಹುದಾದ ಅಂಶ ಎಂದರೆ 10ಲಕ್ಷ ಕೆಜಿ ಮಣ್ಣಿಗೆ 150- 200ಕೆಜಿ ಎಂದರೆ ಸಮುದ್ರಕ್ಕೆ ಸಕ್ಕರೆ ಸೇರಿಸಿದಂತೆ. ಆದರೆ ಇಲ್ಲಿ ಮಾಡಿದ ತಪ್ಪು ಏನೆಂದರೆ ಸಾವಯವ ಗೊಬ್ಬರವನ್ನು ಸೇರಿಸದೇ ಕೇವಲ ರಸಗೊಬ್ಬರವನ್ನು ಕೊಟ್ಟಿದ್ದು, ಹಾಗಾಗಿ ಮಣ್ಣು ಹಾಳಾದದ್ದು, ಸಾವಯವ ಸೇರಿಸದೇ ಇಲ್ಲದಿರುವುದೇ ವಿನಃ ರಾಸಾಯನಿಕ ಗೊಬ್ಬರದಿಂದಲ್ಲ.
ಎರೆಹುಳು ಸಾಯುತ್ತವೆ?!
ಹೌದು ನಿಮ್ಮ ಕೈಯಲ್ಲಿ ಯೂರಿಯಾವನ್ನು ಹಿಡಿದು ಎರೆಹುಳು ತಲೆಮೇಲೆ ಹಾಕಿದರೆ ಖಂಡಿತ ಎರೆಹುಳು ಸಾಯುತ್ತದೆ. ಆದರೆ ರಾಸಾಯನಿಕ ಗೊಬ್ಬರ ಭೂಮಿಗೆ ಬಿದ್ದಾಗ ಎರೆಹುಳು ಮಣ್ಣಿನ ಆಳಕ್ಕೆ ಹೋಗಿ ರಕ್ಷಣೆ ಪಡೆಯುತ್ತವೆ ಅದೂ ಸಾವಯವ ಹೆಚ್ಚಿದ್ದಾಗ ಹಾಗೆಯೇ ಸೂಕ್ಷ್ಮ ಜೀವಿಗಳು ಸಹಿತ ಸಾಯುತ್ತವೆ.
ಗೊಬ್ಬರ ಹಾಕಿದ ಜಾಗದಲ್ಲಿ ಅವು ಸಾಯುವುದುಂಟು ಆದರೆ ಹಾಕಿರುವ ಗೊಬ್ಬರವನ್ನು ಗಿಡಕ್ಕೆ ದೊರಕುವಂತೆ ಮಾಡುವವು ಇವೇ ಸೂಕ್ಷ್ಮ ಜೀವಿಗಳು. ಅಮೈಡ್ ರೂಪದಲ್ಲಿರುವ ಯೂರಿಯಾವನ್ನು ಅಮೋನಿಯಾ ರೂಪಕ್ಕೆ ಮುಂದೆ ನೈಟ್ರೇಟ್ ರೂಪಕ್ಕೆ ಪರಿವರ್ತಿಸಿ ಗಿಡಕ್ಕೆ ಒದಗಿಸಲು ನೈಟ್ರಾಸೊಮೊನಸ್, ನೈಟ್ರೋಬ್ಯಾಕ್ಟರ್ ನಂತಹ ಸೂಕ್ಷ್ಮ ಜೀವಿಗಳು ಬೇಕು.
ಹಾಗೆಯೇ ಸ್ಥಿರೀಕರಣ ಗೊಂಡ ರಂಜಕವನ್ನು P.S.B.ಕರಗಿಸುತ್ತದೆ, ನಿಶ್ಚಲವಾಗಿ ಇರುವ ಪೊಟ್ಯಾಷ್ ಅನ್ನು K.M.B. ಗಿಡಕ್ಕೆ ತಲುಪಿಸುತ್ತದೆ ಹಾಗಾಗಿ ರಸಗೊಬ್ಬರಗಳು ಗಿಡಗಳಿಗೆ ದೊರೆಯಬೇಕಾದರೆ ಸೂಕ್ಷ್ಮ ಜೀವಿಗಳು ಅತ್ಯವಶ್ಯಕ.ಮಣ್ಣು – ನೀರು ಪರೀಕ್ಷೆ ವೈಜ್ಞಾನಿಕ ವಾಗಿ ಮಣ್ಣು/ನೀರನ್ನು ಪರೀಕ್ಷಿಸಿ ಅದರಲ್ಲಿರುವ ರಸಸಾರ, ಸಾವಯವ ಇಂಗಾಲ, ಉಪ್ಪಿನಂಶ ಇ ಸಿ ಹಾಗೂ ಇತರೆ ಎಲ್ಲ ಪೋಷಕಾಂಶಗಳು ಮಟ್ಟ ಎಷ್ಟಿದೆ ಎಂದು ತಿಳಿದುಕೊಳ್ಳುವುದು, ನಮಗೆ ಬಿಪಿ ಹಾಗೂ ಇನ್ನಿತರೆ ಪರೀಕ್ಷೆ ಮಾಡಿದಂತೆ.
ಮಣ್ಣಿನ ರಸಸಾರ (Soil pH) 6.5 ರಿಂದ 7.5 ಇದ್ದರೆ ಅದು ಸೂಕ್ತವಾದ ಮಣ್ಣು. 6.5ಕ್ಕಿಂತಲೂ ಕಡಿಮೆ ಇದ್ದಲ್ಲಿ ಅಂತಹ ಮಣ್ಣನ್ನು ಆಮ್ಲಯುಕ್ತ ಮಣ್ಣೆಂದು, 7.5ಕ್ಕಿಂತಲೂ ಹೆಚ್ಚಿದ್ದರೆ ಕ್ಷಾರ ಮಣ್ಣು ಎನ್ನಲಾಗುತ್ತದೆ. ಸುಣ್ಣ ಮತ್ತು ಜಿಪ್ಸಮ್ ಅನ್ನು ಮಣ್ಣು ಪರೀಕ್ಷೆಯ ವರದಿಗೆ ತಕ್ಕಂತೆ ಸೇರಿಸಿ ಸರಿಪಡಿಸಬಹುದು. ಉಪ್ಪಿನಂಶ ಇ ಸಿ 1 ಕ್ಕಿಂತ ಕಡಿಮೆ ಇದ್ದರೆ, ಹಾಗೆಯೇ ಉತ್ತಮ ಹಾಗೂ ಸಾವಯವ ಇಂಗಾಲ 0.5ಕ್ಕಿಂತ ಹೆಚ್ಚಿದ್ದರೆ, ಮಣ್ಣು ಯೋಗ್ಯವಾಗಿರುತ್ತದೆ ಹಾಗೂ ಇತರೆ ಪೋಷಕಾಂಶಗಳ ಪರಿಮಿತಿಯನ್ನು ಮಣ್ಣು ಪರಿಕ್ಷಾ ವರದಿಯಲ್ಲಿ ಇರುತ್ತದೆ.
ಬೈಸಿಕೊಳ್ಳುವ ರಸಗೊಬ್ಬರ (Fertilizer misuse)ಭಾರತದಲ್ಲಿ ಹಸಿರು ಕ್ರಾಂತಿಯ (Green revolution) ನಂತರವಷ್ಟೇ (1960- 65 ) ರಸಗೊಬ್ಬರ ಬಳಕೆ ಹೆಚ್ಚಿತು. ಹೈಬ್ರಿಡ್ ಬೀಜಗಳು, ಹೆಚ್ಚು ಇಳುವರಿ ಹೀಗೆ ಹೋದಂತೆಲ್ಲ ರೈತರು ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಮನಬಂದಂತೆ ಬಳಸಿ ಎಷ್ಟೋ ಭೂಮಿಯನ್ನು ಬರಡು ಮಾಡಿದ್ದು ಹೌದು. ಏಕೆಂದರೆ ಎಲ್ಲವೂ ರಾಸಾಯನಿಕ ಆದಾಗ ಮಣ್ಣಿನ ಸಾವಯವ ಇಂಗಾಲ ಮಟ್ಟ ಕುಸಿಯಿತು.
ಸೂಕ್ಷ್ಮ ಜೀವಿಗಳು ಸತ್ತವು, ಮಣ್ಣಿನ ರಚನೆಯೂ ಹಾಳಾಯಿತು. ಹಾಗಾಗಿ ಊಟಕ್ಕೆ ಉಪ್ಪಿನಕಾಯಿಯಂತೆ ರಸ್ಗೊಬ್ಬರವಾಗ ಬೇಕೇ ವಿನಃ ಉಪ್ಪಿನಕಾಯಿ ಊಟವಾಗಬಾರದು.ಇತ್ತೀಚಿನ ದಿನಗಳಲ್ಲಿ ಖಾಸಗಿ ಕಂಪನಿಗಳು ತಮ್ಮ ಉತ್ಪನ್ನ ಮಾರುವ ಉಮೇದಿನಲ್ಲಿ ತುಂಬಾ ಜನ ಕೃಷಿಕರ ಹಾದಿ ತಪ್ಪಿಸುತ್ತಿದ್ದಾರೆ. ಅವಶ್ಯವೇ ಇಲ್ಲದ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ ಕೃಷಿಕರು ನಿಗಾವಹಿಸಿ ಹಣ ದುಂದು ವೆಚ್ಚಮಾಡದೆ ಎಚ್ಚರಿಕೆಯಿಂದ ಈ ಖಾಸಗಿಯವರ ಜೊತೆ ವ್ಯವಹರಿಸುವುದು ಉತ್ತಮ.
