A Voice for The Voiceless: ಮೊನ್ನೆ ಒಬ್ಬರ ಪೋಸ್ಟ್ ನಲ್ಲಿ ನೋಡಿದ್ದೆ.. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಭಾರತದಲ್ಲಿ ನಾಲ್ಕನೇ ಅತಿಸಾಮಾನ್ಯ ಅಪರಾಧವಾಗಿದೆ ಎಂದು ಬರೆದುಕೊಂಡಿದ್ದರು. ಅದನ್ನು ಓದಿದಾಗ ತಕ್ಷಣವೇ ಮೂಕನಾಗಿಬಿಟ್ಟೆ! ಅಲ್ಲ ಸ್ವಾಮಿ, ಅತ್ಯಾಚಾರ ಅನ್ನೋದು ಸಾಮಾನ್ಯದ ವಿಷಯಾನ? ಅದು ಇಷ್ಟು ಕಾಮನ್ ಆಗಿದ್ದು ಯಾವಾಗ?
ಹ್ಯಾಪಿ ವುಮೆನ್ಸ್ ಡೇ, ಹ್ಯಾಪಿ ಮದರ್ಸ್ ಡೇ ಅಂತೆಲ್ಲ ಹೆಣ್ಣು ಮಕ್ಕಳನ್ನು ಗೌರವಿಸುವ ಸೋಗು ಹಾಕಿಕೊಂಡು ಕಾಮುಕ ವ್ಯಾಗ್ರದಂತೆ ಮೇಲೆರಗುತ್ತಾರೆ. ಹಸುಗೂಸಾದರೂ ಸರಿ, ಹಣ್ಣು ಮುದುಕಿಯಾದರೂ ಸರಿ, ಮಗಳಾದರು ಸರಿ, ಸೊಸೆಯಾದರೂ ಸರಿ, ತಾಯಿಯಾದರೂ ಸರಿ, ಕೊನೆಗೆ ಒಂದು ಹೆಣ್ಣು ನಾಯಿಯಾದರೂ ಸರಿ! ತಮ್ಮ ಕಾಮದ ತೀಟೆಯನ್ನು ತೀರಿಸಿಕೊಳ್ಳಲು..
ಅಬ್ಬಬ್ಬಾ ಅಂದ್ರೆ ಏನು ಶಿಕ್ಷೆ ಕೊಡ್ತಾರಪ್ಪಾ.. ಐದರಿಂದ ಹತ್ತು ವರ್ಷ ಜೈಲು ವಾಸದ ಜೊತೆಗೆ ಬಿಸಿ ಊಟ, ಹತ್ತೋ, ಇಪ್ಪತ್ತೋ ಸಾವಿರ ರೂಪಾಯಿ ದಂಡ. ಆದರೆ ಅತ್ಯಾಚಾರಕ್ಕೆ ಒಳಗಾದ ಹೆಣ್ಣು? ಜೀವಮಾನವೆಲ್ಲಾ ಶಿಕ್ಷೆ ಅನುಭವಿಸುತ್ತಾಳೆ. ಮಾಡದ ತಪ್ಪಿಗೆ ದಂಡ ಕಟ್ಟುತ್ತಾಳೆ. ಅಪರಾಧಿಗಳನ್ನು ಮರಣದಂಡನೆ ಕೊಟ್ಟು ಕ್ಷಣಮಾತ್ರದಲ್ಲಿ ಗಲ್ಲಿಗೇರಿಸುತ್ತಾರೆ. ಆದರೆ ಅತ್ಯಾಚಾರಕ್ಕೆ ಒಳಗಾದ ಕೂಸು ಜೀವಿಸುವ ಪ್ರತಿಕ್ಷಣವೂ ನರಕಾಯತನೆಯೇ.
ಪ್ರತಿ ಬಾರಿ ಅತ್ಯಾಚಾರವಾದಾಗಲೂ ಅದೇ ಆಕ್ರೋಶ, ಅದೇ ಉದ್ದುದ್ದ ಪ್ಯಾರಾಗ್ರಾಫ್ಳ ಪೋಸ್ಟಳು, ಕ್ಯಾಂಡಲ್ಗಳು.. ಒಮ್ಮೆ ಅದೇ ಬೆಳಕು ನೀಡುವ ದೀಪ ಜ್ವಾಲಾಮುಖಿಯಾಗಬೇಕು, ಅತ್ಯಾಚಾರಕ್ಕೆ ನೀಡುವ ಶಿಕ್ಷೆಯನ್ನು ಕಂಡು ಕಾಮುಕರಿಗೆ ನಡುಕ ಹುಟ್ಟುವಂತಾಗಬೇಕು, ಎಷ್ಟರಮಟ್ಟಿಗೆ ಎಂದರೆ ಅವರ ಹೆಂಡತಿಯನ್ನು ಮುಟ್ಟಲು ಸಹ ಎರಡೆರಡು ಬಾರಿ ಯೋಚಿಸುವಷ್ಟು!
ಆ ಹೆಣ್ಣು ಜೀವಕ್ಕೂ ಒಂದು ಜೀವನವಿದೆ, ಸುಂದರವಾದ ಬದುಕಿದೆ ಎನ್ನುವುದನ್ನು ಮರೆತುಬಿಡುತ್ತಾರೆ. ಅವರು ಕಟ್ಟುವ ದಂಡ ಆ ಕೂಸಿನ ಮರ್ಯಾದೆಗೋ, ಹಾಳು ಮಾಡಿದ ಕನಸಿಗೋ, ಅವಳ ನಿಲ್ಲದ ಕಣ್ಣೀರಿಗೋ, ಇನ್ನೆಂದೂ ಹಕ್ಕಿಯಂತೆ ಹಾರಲಾಗದೆ ರೆಕ್ಕೆ ಮುರಿದುಕೊಂಡ ನೋವಿಗೋ, ಅಥವಾ ಅವಳು ಕಟ್ಟಿಕೊಂಡ ಸುಂದರ ಬದುಕಿಗೆ ಕೊಳ್ಳಿ ಇಟ್ಟೆನೆಂಬ ಖುಷಿಗೋ..? ಯಾವುದಕ್ಕೆ ದಂಡ??
ಕಣೆಪ್ಪೆಯಂತೆ ಜೋಪಾನ ಮಾಡುತ್ತೇನೆ ಎಂದು ಭರವಸೆ ನೀಡಿದ ತಂದೆ, ಪ್ರತಿಕ್ಷಣದಲ್ಲೂ ಜೊತೆಯಾಗಿರುತ್ತೇನೆ ಎಂದು ಮಾತು ನೀಡಿದ ಗಂಡ, ನಿನ್ನ ರಕ್ಷಣೆಗೆ ನಾನಿರುತ್ತೇನೆ ಎನ್ನುವ ಗೆಳೆಯ, ಹೀಗೆ ಅವಳೊಂದಿಗೆ ಬೆಸೆದುಕೊಂಡಿರುವ ಎಲ್ಲಾ ಸಂಬಂಧಗಳು ಕೊನೆಗೆ ಅವಳಿಗೆ ಮುಳುವಾಗಿವೆ. ನವರಾತ್ರಿ ಎಂದು ನವದುರ್ಗೆಯರನ್ನು ಪೂಜಿಸುವ ಈ ಸಮಾಜ ಮನೆಯಲ್ಲಿರುವ ನವಜಾತ ಹೆಣ್ಣು ಶಿಶುವನ್ನು ಪೂಜಿಸುವುದಿಲ್ಲವೇಕೆ?
ಎಲ್ಲಿಗೆ ತಲುಪುತ್ತಿದೆ ಈ ಸಮಾಜ? ಎಲ್ಲಿ ಅಡಗಿ ಕೂತಿದೆ ನಮ್ಮೆಲ್ಲರ ಆತ್ಮಸಾಕ್ಷಿ? ಒಂದು ತಿಳಿಯದಾಗಿರುವ ನಾವು ಅಸಹಾಯಕರೇ? ಅಥವಾ ಅಸಹಾಯಕರಂತೆ ಸೋಗು ಹಾಕಿ ಕುಳಿತಿದ್ದೇವೆಯೇ? ಇನ್ನಾದರೂ ಇದೆಲ್ಲವೂ ನಿಲ್ಲಬೇಕಿದೆ. ಹೆಣ್ಣು ಸಹ ಮನುಷ್ಯಳು, ಅವಳಿಗೂ ಬದುಕಿದೆ, ಆಸೆ ಕನಸುಗಳಿವೆ, ಅದೂ ಒಂದು ಜೀವ ಎಂಬುದು ಎಲ್ಲರ ಅರಿವಿಗೆ ಬರಬೇಕಿದೆ.. ಅಲ್ಲಿಯವರೆಗೂ ಹೋರಾಟ ನಿರಂತರವಾಗಿ ನಡೆಯಲೇಬೇಕಿದೆ ಆತ್ಮಸಾಕ್ಷಿಯ ಹೋರಾಟ.
~ ಲಿಖಿತ್ ಹೊನ್ನಾಪುರ
