ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಮತ್ತೆ ಅನ್ನದಾತರ ಪಾಲಿಗೆ ಕಂಟಕ ತಂದೊಡ್ಡಿದೆ. ಕರ್ನಾಟಕ ಗೃಹ ಮಂಡಳಿಗೆ (KHB) ಎಂದು ಬೆಂಗಳೂರು ಹೊರವಲಯದ ಐದು ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತಿದ್ದಂತೆ ರೈತರು ಬೀದಿಗಿಳಿದಿದ್ದಾರೆ. ಕೃಷಿ ಭೂಮಿ ಉಳಿಸಿಕೊಳ್ಳಲು ಪಾದಯಾತ್ರೆ ನಡೆಸಿ, ಭೂಸ್ವಾಧೀನದ ನೋಟಿಸ್ಗಳಿಗೆ ಬೆಂಕಿ ಇಟ್ಟು ಪ್ರತಿಭಟಿಸಿರುವ ರೈತರು ತಮ್ಮ ಈ ಹೋರಾಟದ ಮೂಲಕ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.(Karnataka Farmers Protest)
ಕರ್ನಾಟಕ ಗೃಹ ಮಂಡಳಿ (KHB) ಗಾಗಿ ಬೆಂಗಳೂರು ಹೊರವಲಯದ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಹಾಕಿಕೊಂಡಿರುವ ಯೋಜನೆಗೆ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.(Karnataka Farmers Protest) ಹೌದು, ಒಟ್ಟು 2,670 ಎಕರೆ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿದೆ.
ದೊಡ್ಡಹೆಜ್ಞಾಜಿ, ವೆಂಕಟೇಶಪುರ, ಕಾರೇಪುರ, ಕಸಾಘಟ್ಟ ಹಾಗೂ ಅಯ್ಯನಹಳ್ಳಿ ಗ್ರಾಮಗಳ ಬರೋಬ್ಬರಿ 2,760 ಎಕರೆ ಭೂಮಿಯನ್ನ ಸರ್ಕಾರ ಸ್ವಾಧೀನಕ್ಕೆ ಮುಂದಾಗಿದ್ದು ರೈತ ಸಮುದಾಯ ಇದನ್ನು ತೀವ್ರವಾಗಿ ವಿರೋಧಿಸಿದೆ. ತಮ್ಮ ಜೀವನಾಡಿಯಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದನ್ನು ಖಂಡಿಸಿ ಈ ಐದು ಗ್ರಾಮಗಳ ರೈತರು ಬೃಹತ್ ಸಮಾವೇಶ ನಡೆಸಿದರು. ಚಿಕ್ಕಬೆಳವಂಗಲದಿಂದ ದೊಡ್ಡಬೆಳವಂಗಲದವರೆಗೆ ಪಾದಯಾತ್ರೆ ನಡೆಸಿದ ರೈತರು, ಗೃಹ ಮಂಡಳಿಯಿಂದ ಬಂದಿದ್ದ ಭೂಸ್ವಾಧೀನದ ನೋಟಿಸ್ಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.(Karnataka Farmers Protest)
ಈ ಹಿಂದೆಯೇ ಟೌನ್ಶಿಪ್, ಕ್ವಿನ್ ಸಿಟಿ, ಕೆಐಎಡಿಬಿ ಯೋಜನೆಗಳಿಗಾಗಿ ಸುಮಾರು 10 ಸಾವಿರ ಎಕರೆ ಕೃಷಿ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಈಗ ಮತ್ತೊಮ್ಮೆ ಗೃಹ ಮಂಡಳಿಗೆಂದು ಭೂಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತರು ರೊಚ್ಚಿಗೆದ್ದಿದ್ದಾರೆ ‘ಪ್ರಾಣ ಬೇಕಾದರೂ ಬಿಡುತ್ತೇವೆ. ಆದರೆ ನಮ್ಮ ಭೂಮಿ ಬಿಡುವುದಿಲ್ಲ” ಎಂದು ಅನ್ನದಾತರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.(Karnataka Farmers Protest)
ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೂ ಆರಂಭದಲ್ಲೇ ವಿರೋಧ!
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DCM D K Shivkumar) ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಗೂ ಪ್ರಾರಂಭದಲ್ಲಿ ವಿರೋಧ ಎದುರಾಗಿದೆ. ರಾಮನಗರ ತಾಲ್ಲೂಕಿನ ಬಿಡದಿ ಬಳಿ ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ ₹20 ಸಾವಿರ ಕೋಟಿ ವೆಚ್ಚದಲ್ಲಿ ಈ ಬೃಹತ್ ಯೋಜನೆಗೆ ಸರ್ಕಾರ ಸಜ್ಜಾಗಿದೆ.
ಆದರೆ, ಬಿಡದಿ ಭಾಗದ ರೈತರು ತಮ್ಮ ಭೂಮಿಯನ್ನು ಯೋಜನೆಯ ಸಲುವಾಗಿ ನೀಡಲು ಖಂಡಿತಾ ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಯೋಜನೆಯ ಅಗತ್ಯಕ್ಕಾಗಿ 7,000 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು 2025ರ ಮಾರ್ಚ್ನಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿತ್ತು. ರಾಮನಗರ ಮತ್ತು ಹಾರೋಹಳ್ಳಿ, ತಾಲ್ಲೂಕುಗಳ ಒಂಬತ್ತು ಹಳ್ಳಿಗಳಲ್ಲಿ 7,293.44 ಎಕರೆ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆಸಿದರೆ ರಾಜ್ಯದಲ್ಲಿ ರೈತ ಸಮುದಾಯದ ಪ್ರತಿರೋಧ ಮತ್ತು ಹೆಚ್ಚುವ ಸಾಧ್ಯತೆ ಇದೆ.
