ಪ್ರೀತಿಯ ಮಂಜಮ್ಮ, ಜೀವನದಲ್ಲಿ ಮರೆಯಲಾಗದ ಒಡನಾಟ
ಪ್ರೀತಿಯ ಮಂಜಮ್ಮ,
ಆಪತ್ತಿಗಾದವನೆ ನೆಂಟ ಕೆಲಸಕ್ಕಾದವನೇ ಬಂಟ! ವೇದ ಸುಳ್ಳಾದರು ಗಾದೆ ಸುಳ್ಳಾಗದು, ನಿಜ ಬದುಕು ಕಲಿಸಿಕೊಟ್ಟ ಪಾಠವೆ ಗಾದೆಯಾಗಿದೆ. ಏಕೆಂದರೆ, ಬದುಕು ಎನ್ನುವುದು ಹಾಗೆ…. ಎಲ್ಲವನ್ನೂ ಕಲಿಸುತ್ತದೆ. ನನ್ನೆಲ್ಲಾ ಈ ಪೀಠಿಕೆ ನನ್ನ ಮನೆಯ ಕೆಲಸದಮ್ಮ ನನ್ನ ಪ್ರೀತಿಯ ಮಂಜಮ್ಮನ ಕುರಿತಾಗಿ…. ಹೌದು ನನ್ನೆಲ್ಲಾ ಕಷ್ಟದ ದಿನಗಳಲ್ಲಿ ನನಗಾದವಳೇ ಮಂಜಮ್ಮ.
ಅಡಿಗೆಯನ್ನು ಮಾಡಿ ಕಾಲೇಜಿಗೆ ಹೊರಡುವುದಷ್ಟೇ ನನ್ನ ಕೆಲಸ. ಆದರೆ ಮಂಜಮ್ಮ ಸುಮಾರು ಮಧ್ಯಾಹ್ನದ ಹೊತ್ತಿಗೆ ಬಂದು, ಅಡಿಗೆ ಮನೆಯಲ್ಲಿ ಎಲ್ಲವನ್ನು ಸ್ವಚ್ಛಗೊಳಿಸಿ ಬಟ್ಟೆಗಳನ್ನೆಲ್ಲ ಒಗೆದು ಮನೆ ಕೆಲಸವನ್ನು ಪೂರ್ತಿಗೊಳಿಸುತ್ತಾಳೆ. ವಿಶೇಷವೆಂದರೆ ಈಕೆ ನಮ್ಮ ಮನೆ ಕೆಲಸದವಳಿಗಿಂತ ಹೆಚ್ಚಾಗಿ ಮನೆಯ ಸದಸ್ಯಳಂತೆ ಇರುತ್ತಾಳೆ.
ಕೆಲಸ ಎಂದರೆ ಶಿಸ್ತು ಸಂಯಮ ಅಚ್ಚುಕಟ್ಟು ಆಕೆ ಮಾಡಿ ಮುಗಿಸಿದ ಮೇಲೆ ಯಾವುದೊಂದು ಕೆಲಸವೂ ಬಾಕಿ ಇರುವುದಿಲ್ಲ. ಅಷ್ಟು ಅಚ್ಚುಕಟ್ಟಾಗಿ ಮನೆಯ ಕೆಲಸವನ್ನು ಮಾಡಿ ಮುಗಿಸುತ್ತಾಳೆ. ಮರೆಯಲಾಗದ ಘಟನೆ ಎಂದರೆ , 2020 ಕರಾಳ ದಿನಗಳು ಎಲ್ಲೆಡೆ ಭಯದ ವಾತಾವರಣ ಟಿವಿ ನ್ಯೂಸ್ ಚಾನೆಲ್ ಗಳಂತೂ ಭಯದ ಅಬ್ಬರವನ್ನು ಎಬ್ಬಿಸಿದ್ದವು . ಯಾವ ಚಾನೆಲ್ ಹಾಕಿದರೂ ಸಾವು ನೋವುಗಳ ಸುದ್ದಿ.
ನಮ್ಮ ಮನೆಯ ಮಂಜಮ್ಮ ಮಾತ್ರ ಯಾವುದಕ್ಕೂ ಅಂಜುತ್ತಿರಲಿಲ್ಲ ಎಂದಿನಂತೆ ಕೆಲಸಕ್ಕೆ ಬಂದು ಬಿಡುತ್ತಿದ್ದಳು. ನಾವೆಲ್ಲರೂ ಬೇಡ ಮಂಜಮ್ಮ ಬರಬೇಡ ಕರೋನ ಅಬ್ಬರ, ಮನೆಯಲ್ಲಿ ಇದ್ದುಬಿಡು ನಿನ್ನ ಸಂಬಳ ತಾನೇ ಕೊಡುತ್ತೇನೆ. ನೀನು ಮಾತ್ರ ಮನೆ ಕೆಲಸಕ್ಕೆ ಬರಬೇಡ ಎಂದು ಹೇಳಿದರೂ ಕೇಳುತ್ತಿರಲಿಲ್ಲ. ಅಕ್ಕ ನಿಮ್ಮ ಮನೆಯ ಹಿಂಭಾಗದಲ್ಲಿ ಸಣ್ಣದೊಂದು ಗೇಟ್ ಇದೆ ಒಬ್ಬ ತೆಳ್ಳಗಿನ ವ್ಯಕ್ತಿ ಮಾತ್ರ ಅಲ್ಲಿಂದ ಪ್ರವೇಶಿಸಬಹುದು. ಅಕ್ಕ ಅಲ್ಲಿಂದಲೇ ಪ್ರವೇಶಿಸಿ, ಮನೆಯ ಹಿಂಭಾಗದಲ್ಲಿ ಕೆಲಸವನ್ನು ಮುಗಿಸಿ ಕೊಟ್ಟು ಹೋಗ್ತೀನಿ ಎಂದು ಗೋಗರೆಯುತ್ತಿದ್ದಳು.
ಬೇಡವೆಂದರು ಕೇಳುತ್ತಿರಲಿಲ್ಲ, ಆಕೆಯದ್ದು ಹಠದ ಸ್ವಭಾವ ಎಲ್ಲದಕ್ಕಿಂತ ಹೆಚ್ಚಾಗಿ ಸದಾ ತನ್ನ ಕಣ್ಣುಗಳಲ್ಲಿ ಗಂಗೆ ತುಂಗೆ ಕಾವೇರಿ ಗೋದಾವರಿ ಎಲ್ಲಾ ನದಿಗಳನ್ನು ಅಡಗಿಸಿಟ್ಟುಕೊಂಡಿರುತ್ತಿದ್ದಳು. ಏನಾದರೂ ಒಂದು ಮಾತು ಜೋರಾಗಿ ಆಡಿದರೂ ಗಳಗಳನೆ ಅತ್ತು ಬಿಡುತ್ತಿದ್ದಳು. ಕಣ್ಣೀರು ನೋಡಲಾರದೆ ಸರಿ ಎಂದು ಒಪ್ಪಿಗೆ ಕೊಟ್ಟಿದ್ದೆ.
ಆದರೆ ಆತಂಕದ ವಿಷಯವೆಂದರೆ, ಅಕ್ಕ ಪಕ್ಕದ ಮನೆಯವರು, ಹೆದರಿಸತೊಡಗಿದರು ನಿಮಗೆ ಬುದ್ಧಿ ಇದೆಯಾ? ಆಕೆಯೇನೋ ಮನೆಯಲ್ಲಿರುತ್ತಾಳೆ ಆಕೆಯ ಗಂಡ ಊರೆಲ್ಲಾ ತಿರುಗಾಡಿ ಕರೋನ ಅಂಟಿಸಿಕೊಂಡು ಬಂದರೆ? ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದಾರೆ ಎಂಥ ತೊಂದರೆಯನ್ನು ನೀವು ತಗೋತೀರಾ ಅವಳನ್ನ ಕೆಲಸದಿಂದ ಕಳಿಸಿಬಿಡಿ ಎಂದು ಹೇಳುತ್ತಿದ್ದರು.
ನೆರೆಹೊರೆಯವರ ದ್ವೇಷ ಯಾಕೆ ಅಂತ ಯೋಚಿಸಿ ಅವಳನ್ನು ಕರೆದು, ನೋಡು ನೀನು ಒಂದೆರಡು ತಿಂಗಳು ಈ ಕಡೆ ಬರಬೇಡ. ನಿನ್ನ ಸಂಬಳ ಖಂಡಿತ ನಾನು ಕೊಡುತ್ತೇನೆ ಎಂದು ತಿಳಿಸಿ ಮನೆಗಾಗುವಷ್ಟು ರೇಷನ್ ಎರಡು ತಿಂಗಳ ಸಂಬಳ ಅಡ್ವಾನ್ಸ್ ಆಗಿ ಕೊಟ್ಟು ದಯವಿಟ್ಟು ನೀನು ಮನೆಯಲ್ಲಿ ಇದ್ದು ಬಿಡು ಎಂದು ಕಳಿಸಿದೆ.
ವಿಧಿಯ ವಿಚಿತ್ರವೋ ಎಂಬಂತೆ ಎರಡು ಮೂರು ತಿಂಗಳಾದ ನಂತರ ನನಗೆ ಕರೋನ ಅಂಟಿಕೊಂಡಿತ್ತು. ಒಂದು ವಾರ ಭಯದ ವಾತಾವರಣದಲ್ಲಿ ಒಬ್ಬಳೇ ರೂಮಿನಲ್ಲಿ ಸೇರಿಕೊಂಡಿದ್ದೆ, ಅಷ್ಟೊತ್ತಿಗೆ ಎರಡು ತಿಂಗಳಾಗಿತ್ತು, ನಂತರ ಮತ್ತೊಮ್ಮೆ ಮಂಜಮ್ಮ ಬಂದಳು. ಅವಳಿಂದ ನಮಗೆ ಕರೋನ ಬರುತ್ತೆ ಎಂದು ಅವಳನ್ನು ಬರಬೇಡ ಎಂದು ಹೇಳಿದೆ ಆದರೆ ನನಗೇ ಕರೋನ ಬಂದಿತ್ತು.
ನನಗೆ ಕರೋನ ಎಂದು ಗೊತ್ತಿದ್ದರೂ ಹಠ ಮಾಡಿ ಮನೆ ಪ್ರವೇಶಿಸಿ ಗ್ಲೌಸ್ ಮಾಸ್ಕ್ ಸ್ಯಾನಿಟೈಸರ್ ಹಾಕಿಕೊಂಡು ನಮ್ಮ ಅಡಿಗೆ ಮನೆ ಸ್ವಚ್ಚ ಗೊಳಿಸಿದ್ದಳು. ನಾನು ರೂಂನಲ್ಲಿ ಕುಳಿತು ಮಾತನಾಡಿಸಿದರೆ ಅಡಿಗೆ ಮನೆಯಿಂದ ಉತ್ತರ ಕೊಡುತ್ತಿದ್ದಳು. ಅವಳ ಹೃದಯ ವೈಶಾಲ್ಯತೆಗೆ ನಾನೆಂದು ಚಿರಋಣಿ.
ಸ್ವಚ್ಛತೆಗೆ ಇನ್ನೊಂದು ಹೆಸರೇ ಮಂಜಮ್ಮ ಕಾಲೇಜಿನಿಂದ ಮನೆಗೆ ಸಂಜೆ ಬಂದಾಗ ಅಡಿಗೆ ಮನೆ ಶುಭ್ರತೆಯಿಂದ ಮೆರುಗುತ್ತಿರುತ್ತದೆ. ಅದನ್ನೊಮ್ಮೆ ಕಂಡಾಗ ನನ್ನ ಆಯಾಸವೆಲ್ಲ ಕ್ಷಣಾರ್ಧದಲ್ಲಿ ಮಾಯವಾಗಿ ಮನಸ್ಸು ಮಲ್ಲಿಗೆಯಂತೆ ಉತ್ಸಾಹ ಭರಿತವಾಗುತ್ತದೆ.
ಮಂಜಮ್ಮ ಶ್ರಮಜೀವಿ ಎರಡನೇ ಮದುವೆಯಾಗಿ ದೊಡ್ಡ ಹೆಂಡತಿಯ ಮೂವರು ಮಕ್ಕಳನ್ನು ಸ್ವಂತಮಕ್ಕಳಂತೆ ಸಾಕಿದವಳು. ಹಡೆದು ಹಾಲುಣಿಸಿದರೆ ಮಾತ್ರ ತಾಯಿಯಲ್ಲ ಪ್ರೀತಿ ವಾತ್ಸಲ್ಯವುಳ್ಳ ಪ್ರತಿಯೊಬ್ಬ ಮಹಿಳೆಯು ತಾಯಿ ಎಂದು ನಿರೂಪಿಸಿದವಳು. ನನಗಂತೂ ಆಪ್ತ ಗೆಳತಿ. ನನ್ನೆಲ್ಲಾ ಕೆಲಸಗಳನ್ನು ಮೆಚ್ಚಿಕೊಂಡು ಪ್ರೋತ್ಸಾಹ ನೀಡುವಂತಹ ಸ್ಪೂರ್ತಿ ನನ್ನ ಪ್ರೀತಿಯ ಮಂಜಮ್ಮ.
ಅವಳಿಗೆ ಅರ್ಥವಾಗುತ್ತದೋ ಇಲ್ಲವೋ? ನಾನು ಮಾತ್ರ ಹೊಸದೊಂದು ಹಾಡು ಕಲಿತರು ಅವಳ ಮುಂದೆ ಹಾಡುವುದು,ಯಾವುದೇ ಲೇಖನ ಬರೆದರು ಅವಳ ಮುಂದೆ ಓದುವುದು ನನ್ನೆಲ್ಲಾ ಆಗು ಹೋಗುಗಳನ್ನು ಚಾಚು ತಪ್ಪದೇ ಅವಳಿಗೆ ಭಾನುವಾರದಂದು ವರದಿ ಒಪ್ಪಿಸುವುದೇ ನನ್ನ ಸಂಭ್ರಮ.
ಜ್ಞಾನ ಮತ್ತು ಸಂಸ್ಕಾರ ಜೀವನದ ಶಕ್ತಿ ಆಕೆಗೆ ವಿದ್ಯೆ ಇಲ್ಲದಿದ್ದರೂ ಸಂಸ್ಕಾರವಂತಳಾಗಿದ್ದಳು. ಮನೆ ಮದ್ದನ್ನು ಚೆನ್ನಾಗಿ ಬಲ್ಲವಳಾಗಿದ್ದಳು ಸಣ್ಣಪುಟ್ಟ ಕಾಯಿಲೆಗೂ ಮನೆಯಲ್ಲೇ ಮಾಡಿ ಸೇವಿಸಬಹುದಾದಂಹ ಔಷಧಿಯ ವಿವರಗಳನ್ನು ತಿಳಿಸುತ್ತಿದ್ದಳು, ನನಗಂತೂ ಮಾರಲ್ ಸಪೋರ್ಟ್.
ಅತ್ತೆಗೆ ಹುಷಾರಿಲ್ಲದಿರುವಾಗ ನನ್ನ ಜೊತೆ ಬಲಗೈಯಂತೆ ನಿಂತವಳು ಎಷ್ಟೋ ಬಾರಿ ಮನೆ ,ಆಸ್ಪತ್ರೆ, ಕಾಲೇಜು ಈ ಓಡಾಟದ ನಡುವೆ ಎಷ್ಟೋ ಕೆಲಸಗಳು ಮನೆಯಲ್ಲಿ ನಿಂತು ಹೋಗಿದ್ದವು ನಾ ಬರುವಷ್ಟರಲ್ಲಿ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಿದ್ದಳು. ಸುಮಾರು ಏಳು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾಳೆ.
ಪ್ರಾರಂಭದ ದಿನಗಳಲ್ಲಿ ಮನೆಯನ್ನು ಸಂಭಾಳಿಸಲು ಆಗದೆ ಸದಾ ಕಾಯಿಲೆಯಿಂದ ಬಳಲುತ್ತಿರುವ ಅತ್ತೆಯನ್ನು ಬಿಟ್ಟು ಕೆಲಸಕ್ಕೆ ಹೇಗೆ ಹೋಗುವುದು ? ರಿಸೈನ್ ಮಾಡುವುದಾಗಿ ತಿಳಿಸಿದಾಗ ಮಾವನವರು ಬೇಡಮ್ಮ, ನೀನು ಉಪನ್ಯಾಸಕಿ ಮಕ್ಕಳಿಗೆ ವಿದ್ಯೆ ಹೇಳಿಕೊಡುವಂತಹ ಒಳ್ಳೆಯ ಕೆಲಸವನ್ನು ಮಾಡ್ತಾ ಇದ್ದೀಯ ನಮ್ಮಿಂದ ಅದು ಅಡ್ಡಿಯಾಗಬಾರದೆಂದು ಹೇಳುತ್ತಿದ್ದರು. ಆದರೂ ಎಲ್ಲೋ ಒಂದು ಕಡೆ ವಯಸ್ಸಾದವರಿಗೆ ನಾವು ಕೊಡಬೇಕಾದ ಸಮಯವನ್ನು ಕೊಡದಿದ್ದರೆ ಅದೊಂದು ಪಶ್ಚಾತಾಪ ಬದುಕಿನದ್ದಕ್ಕೂ ಕಾಡುತ್ತದೆ ಎಂಬ ಅದೊಂದು ಆತಂಕ.
ಅಂತಹ ದಿನಗಳಲ್ಲಿ ನನಗೆ ಧೈರ್ಯವನ್ನು ಕೊಟ್ಟು ಅಕ್ಕ ಕೆಲಸವನ್ನು ಮಾತ್ರ ಬಿಡಬೇಡಿ ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ. ನೀವು ಹೋಗಿ ಬನ್ನಿ ಕೆಲಸವಿಲ್ಲದ ಮಹಿಳೆಯರು ಮನೆಗಳಲ್ಲಿ ಪಡುವ ಕಷ್ಟವನ್ನು ನಾನು ಕೂಡ ಅನುಭವಿಸಿದ್ದೇನೆ . ಆದರೆ , ನೀವು ಸ್ಥಿತಿವಂತರೇ ಆದರೂ ಕೆಲಸವನ್ನು ಮಾತ್ರ ಬಿಡಬೇಡಿ. ಮನೆಯ ಕೆಲಸವನ್ನು ನಾನು ಮಾಡಿಕೊಡುತ್ತೇನೆ ಎಂದಿದ್ದಳು.
ಆನ್ಲೈನ್ ಕ್ಲಾಸ್ ಮಾಡುವಾಗ ರೂಮಿನ ಬಳಿ ನಿಂತು ಇಂಗ್ಲೀಷ್ ನಲ್ಲಿ ಪಾಠ ಮಾಡುವುದನ್ನು ಕೇಳಿಸಿಕೊಂಡು, ಆಶ್ಚರ್ಯಗೊಂಡು ‘ ಏನಕ್ಕ ನನ್ನ ಜೊತೆ ನನ್ನ ಭಾಷೆಯಲ್ಲಿ ಒರಟಾಗಿ ಮಾತನಾಡುವವರು ನೀವು ,ಇಷ್ಟೊಂದು ಇಂಗ್ಲಿಷ್ ಕಲಿತಿದ್ದೀರಾ? ‘ಎಂದು ಆಶ್ಚರ್ಯ ಚಕಿತಳಾಗಿ ನೋಡುತ್ತಿದ್ದಳು. ಅದರಲ್ಲಿ ರೋಮಿಯೋ ಜೂಲಿಯೆಟ್ ನಾ ಪಿಪಿಟಿಗಳನ್ನು ನೋಡಿ ನಾಚಿಕೊಂಡಿದ್ದಳು.
ನಮ್ಮ ಮನೆ ಮಕ್ಕಳು ಅವಳನ್ನು ಜೂಲಿಯಟ್ ಎಂದು ಸಂಭೋದಿಸಿ ತಮಾಷೆ ಮಾಡಿ ನಗುತ್ತಿದ್ದರು. ಆಕೆ ಕೂಡ ಒಮ್ಮೊಮ್ಮೆ ಗಂಡನನ್ನು ಬೈದುಕೊಳ್ಳುವಾಗ ‘ಅವನಿದ್ದಾನಲ್ಲ ರೋಮಿಯೋ’ ಎಂದು ಶುರು ಮಾಡುತ್ತಿದ್ದಳು. ಇವೆಲ್ಲವೂ ಮರೆಯಲಾಗದ ಕ್ಷಣಗಳು. ಪ್ರತಿ ಭಾನುವಾರದಂದು ನನ್ನೊಡನೆ ಕೂತು ಊಟವನ್ನು ಮಾಡುತ್ತಾ ತನ್ನೆಲ್ಲ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದಳು.
ಕೆಲವೊಮ್ಮೆ ಅವಳು ಓದಿಲ್ಲದಿದ್ದರು ಎಷ್ಟೊಂದು ವಿಷಯಗಳಲ್ಲಿ ನನಗೆ ಬುದ್ಧಿ ಹೇಳಿದವಳು. ಹಾಗಂತ ನಾವು ಸದಾ ಸ್ನೇಹಮಯಿಗಳೇ ಆಗಿರಲಿಲ್ಲ. ಒಮ್ಮೊಮ್ಮೆ ಕೋಪಿಸಿಕೊಂಡು ಜಗಳವಾಡಿದ್ದು ಇದೆ. ಅವೆಲ್ಲವೂ ಕ್ಷಣಾರ್ಧವಷ್ಟೇ. ಮುಂದೆ ನಮ್ಮ ಈ ಜೀವನದ ಪಯಣದಲ್ಲಿ ಅವಳು ನಮ್ಮೊಂದಿಗೆ ಬರಲಾರಳು ಎಂಬ ಕಹಿ ಸತ್ಯ ನೆನೆದಾಗಲೆಲ್ಲ ಜೀವ ಮರುಗುತ್ತದೆ.
ವಿಷಾದವೆಂದರೆ ಕನಸಿನ ಮನೆ ಕೈಗೂಡುತ್ತಿದೆ ಆದರೆ ದೂರದಲ್ಲಿರುವ ಆ ಹೊಸಮನೆ ಕೆಲಸಕ್ಕೆ ಮಂಜಮ್ಮ ಬರಲಾರಳು ಎಂದು ನೆನೆದಾಗಲೆಲ್ಲ ಜೀವ ಹಪಹಪಿಸುತ್ತದೆ. ಅನಿರೀಕ್ಷಿತವಾಗಿಯೋ ಅಥವಾ ನಿರೀಕ್ಷಿತವಾಗಿಯೋ, ಕೆಲವೊಮ್ಮೆ ನಮ್ಮ ಜೀವನದಲ್ಲಿ ಮರೆಯಲಾಗದಂತಹ ವ್ಯಕ್ತಿಗಳು ನಮ್ಮನ್ನು ಸಂಧಿಸುತ್ತಾರೆ. ಕೆಲವರು ಸಿಹಿ ನೆನಪುಗಳಾಗಿ ಉಳಿಯುತ್ತಾರೆ. ಅವರಲ್ಲಿ ನನ್ನ ಪ್ರೀತಿಯ ಮಂಜಮ್ಮ ಕೂಡ ಒಬ್ಬಳು.
ಮಂಜಮ್ಮನ ಜೊತೆ ಕಳೆಯುವ ದಿನಗಳು ನೆನಪಿನ ಬುತ್ತಿಯಲ್ಲಿ ಸಿಹಿ ನೆನಪುಗಳಾಗಿ ಸದಾ ಇರುತ್ತದೆ. ಈ ವರ್ಷದ ಯುಗಾದಿ ಹಬ್ಬದಂದು ಅಕ್ಕ ಈ ಮನೆಯಲ್ಲಿ ಬಹುಶಃ ಈ ಹಬ್ಬ ನಾವಿಬ್ಬರು ಜೊತೆಯಲ್ಲಿ ಕಳೆಯುವಂತಹ ಕಡೆಯ ಹಬ್ಬವಾಗಿದೆ ಎಂದಳು.
ಹೌದು ಮಂಜಮ್ಮ ತಗೋ ಬೇವುಬೆಲ್ಲ, ನಿನ್ನೊಂದಿಗೆ ಕಳೆದ ಕ್ಷಣಗಳೆಲ್ಲವೂ ಬೆಲ್ಲದಂತೆ ಬಿಟ್ಟು ಹೋಗುವುದೇ ಬೇವಿನಂತೆ ಎಂದು ಹೇಳಿ ಕೊಟ್ಟಿದ್ದೆ. ಅಷ್ಟಕ್ಕೆ ಹೇಮಾವತಿ ನದಿಯನ್ನೇ ಕಣ್ಣುಗಳಲ್ಲಿ ಹರಿಸಿಬಿಟ್ಟಳು. ಹಾಗೆ ಮೌನವಾಗಿ ಅವಳನ್ನು ನೋಡಿ ಸಮಾಧಾನಗೊಳಿಸಿದೆ. ಪ್ರಸ್ತುತ ವಾಸವಾಗಿರುವ ಹನುಮಂತಪುರ ಹಾಗೂ ರಾಜ ಬೀದಿಯಂತೆ ಕಂಗೊಳಿಸುವ ಬಯಲಾಂಜನೇಯ ದೇವಸ್ಥಾನದ ಆವರಣ ಇವೆಲ್ಲವೂ ಹೃದಯದಲ್ಲಿ ಹಚ್ಚ ಹಸಿರಾಗಿ ಉಳಿದುಬಿಟ್ಟಿದೆ. ಮಂಜಮ್ಮ ಹೇಗಾದರೂ ಮನಸ್ಸು ಬದಲಾಯಿಸಿ ನಮ್ಮ ಹೊಸ ಮನೆಗೂ ಬರುವಂತಾಗಲಿ ಎಂಬುದೇ ನನ್ನ ಆಶಯ.
