
Heavy rain in Karnataka: ರಾಜ್ಯದ ಜನರೇ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನವರೇ, ಮುಂದಿನ ಕೆಲವು ದಿನಗಳು ಸ್ವಲ್ಪ ಜಾಗ್ರತೆಯಿಂದಿರಿ! ರಾಜ್ಯದ ಹಲವು ಭಾಗಗಳಲ್ಲಿ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಆಗಸ್ಟ್ 18 ಮತ್ತು 19 ರಂದು “ಅತಿ ಭಾರೀ ಮಳೆ”ಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಎಲ್ಲೆಲ್ಲಿ ರೆಡ್ ಅಲರ್ಟ್?
ಕರಾವಳಿ ಮತ್ತು ಮಲೆನಾಡಿನ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇರುವುದರಿಂದ ಇಲ್ಲಿಗೆ ಅತ್ಯಧಿಕ ಎಚ್ಚರಿಕೆಯಾದ ‘ರೆಡ್ ಅಲರ್ಟ್’ ನೀಡಲಾಗಿದೆ. ಇದರ ಜೊತೆಗೆ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಿಗೂ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಇದನ್ನೂ ಓದಿ: The Queen of Flowers: ಹೂವೂ ಚೆಲುವೆಲ್ಲ ನಂದೆಂದಿತು,’ಜೇರ್ಬರ ಆ ಹೂವೇ ತಾನೆಂದಿತು’
ಸಿಲಿಕಾನ್ ಸಿಟಿ ಬೆಂಗಳೂರಿನ ಕಥೆಯೇನು?
ನಮ್ಮ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ, ಅಂದರೆ ಆಗಸ್ಟ್ 23ರವರೆಗೂ ಮಳೆರಾಯ ಬಿಡುವು ಕೊಡುವ ಲಕ್ಷಣ ಕಾಣುತ್ತಿಲ್ಲ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆ ನಿರಂತರವಾಗಿ ಸುರಿಯುವ ನಿರೀಕ್ಷೆಯಿದೆ. ಈಗಾಗಲೇ ನಗರದ ಹಲವು ಬಡಾವಣೆಗಳು ಜಲಾವೃತಗೊಂಡು ಜನರು ಕಷ್ಟಪಡುತ್ತಿದ್ದು, ಈ ಮಳೆ ಹೀಗೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ. ಟ್ರಾಫಿಕ್ ಜಾಮ್ ಮತ್ತು ದೈನಂದಿನ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆ ದಟ್ಟವಾಗಿದೆ.
ಯಾಕೆ ಇಷ್ಟೊಂದು ಮಳೆ?
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವೇ ಈ ಭಾರೀ ಮಳೆಗೆ ಪ್ರಮುಖ ಕಾರಣ. ಇದು ಇನ್ನಷ್ಟು ತೀವ್ರಗೊಂಡು ಒಳನಾಡಿನತ್ತ ಚಲಿಸುತ್ತಿರುವುದರಿಂದ, ರಾಜ್ಯದಾದ್ಯಂತ ಮಳೆಯ ಮೋಡಗಳನ್ನು ಹೊತ್ತು ತರುತ್ತಿದೆ. ಇದರೊಂದಿಗೆ ಅರಬ್ಬಿ ಸಮುದ್ರದಲ್ಲಿನ ಚಂಡಮಾರುತದ ಪ್ರಭಾವವೂ ಸೇರಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ಮುಂದಿನ 24-48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಬೀಳಲಿದೆ. ತಾಪಮಾನವೂ ಕೂಡ ತಂಪಾಗಿ, ಹಗಲಿನಲ್ಲಿ 25°C ಮತ್ತು ರಾತ್ರಿ 20°C ಆಸುಪಾಸಿನಲ್ಲಿರಲಿದೆ.
ಇದನ್ನೂ ಓದಿ; KSCA ಗೆ ಮಾಜಿ ಕ್ರಿಕೆಟಿಗನ ಎಂಟ್ರಿ: ಚುನಾವಣೆಗೆ ಸ್ಪರ್ಧಿಸಲು ರೆಡಿಯಾದ ಭಾರತದ ಮಾಜಿ ವೇಗಿ
ಅಧಿಕಾರಿಗಳು ಸನ್ನದ್ಧ
ಯಾವುದೇ ಅನಾಹುತವನ್ನು ಎದುರಿಸಲು ರಾಜ್ಯದಾದ್ಯಂತ ತುರ್ತು ಸೇವಾ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ. ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ, ಮರ ಬೀಳುವುದು ಮುಂತಾದ ಸಮಸ್ಯೆಗಳನ್ನು ನಿಭಾಯಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಮಳೆ ಯಾವಾಗ ಕಡಿಮೆಯಾಗಬಹುದು?
ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರಿಗೆ ಆಗಸ್ಟ್ 20ರ ನಂತರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಬಹುದು. ಆದರೆ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 23ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಮಳೆ ಸಂಪೂರ್ಣವಾಗಿ ಕಡಿಮೆಯಾಗಲು ಆಗಸ್ಟ್ 24 ರಿಂದ 26ರವರೆಗೂ ಕಾಯಬೇಕಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
