Hormuz Crisis
Hormuz Crisis: ಉಕ್ರೇನ್ ಸಂಘರ್ಷದ ಆರಂಭದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತದ ವಿರುದ್ಧ ಕೆಂಗಣ್ಣು ಬೀರಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು, ಇಂದು ಅದೇ ಭಾರತದ ‘ಇಂಧನ ರಾಜತಾಂತ್ರಿಕತೆ’ಯ ಮುಂದೆ ತಲೆಬಾಗಿವೆ. ಹೋರ್ಮುಜ್ ಜಲಸಂಧಿಯ (Strait of Hormuz) ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಪೂರೈಕೆ ಕಡಿತಗೊಳ್ಳುವ ಭೀತಿ ಎದುರಾಗಿರುವ ಈ ಸಮಯದಲ್ಲಿ, ಭಾರತವು ಕೇವಲ ಒಂದು ರಾಷ್ಟ್ರವಾಗಿ ಉಳಿಯದೆ, ವಿಶ್ವದ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸುವ ‘ಬ್ಯಾಲೆನ್ಸಿಂಗ್ ಪೋರ್ಸ್ ಆಗಿ ಹೊರಹೊಮ್ಮಿದೆ.
ಅಂದು ಟೀಕೆ, ಇಂದು ಅನಿವಾರ್ಯತೆ (Shift in Western Stance)
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಾಗಿ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸಲು ಮುಂದಾದಾಗ ಅಮೆರಿಕ ಸೇರಿದಂತೆ ಹಲವು ದೇಶಗಳು ನೈತಿಕತೆಯ ಪಾಠ ಮಾಡಿದ್ದವು. ಆದರೆ ಇಂದು ಕಾಲಚಕ್ರ ಉರುಳಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹೋರ್ಮುಜ್ ಜಲಸಂಧಿ ಬಂದ್ ಆಗುವ ಭೀತಿ ಎದುರಾಗಿದೆ. ಒಂದು ವೇಳೆ ಭಾರತವು ರಷ್ಯಾದ ತೈಲವನ್ನು ಮಾರುಕಟ್ಟೆಯಿಂದ ಹೊರಗಿಟ್ಟರೆ, ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿ ಅಮೆರಿಕದಂತಹ ದೊಡ್ಡ ಆರ್ಥಿಕತೆಗಳೇ ಕುಸಿಯಬಹುದು. ಹಾಗಾಗಿಯೇ, ಇಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಮಾಟ್ ಬೆಸೆಂಟ್ ಅವರು ರಷ್ಯಾ ತೈಲ ಪೂರೈಕೆಗೆ ‘ವಿನಾಯಿತಿ’ ನೀಡುವ ಮಾತನಾಡುತ್ತಿರುವುದು ಭಾರತದ ಜಾಣ ನಡೆಗೆ ಸಂದ ಜಯವಾಗಿದೆ.
ಜಾಗತಿಕ ಇಂಧನದ ನರನಾಡಿ(Hormuz Bottleneck)
ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು 20% ಭಾಗ ಹೋರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿರುವುದು ಮತ್ತು ರಷ್ಯಾ ಇದಕ್ಕೆ ಬೆಂಬಲ ಸೂಚಿಸಿರುವುದು ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಇಂತಹ ಸಮಯದಲ್ಲಿ ಭಾರತವು ತನ್ನ ಕಾರ್ಯತಂತ್ರದ ತೈಲ ಸಂಗ್ರಹ (Strategic Petroleum Reserves) ಮತ್ತು ರಷ್ಯಾದೊಂದಿಗೆ ಹೊಂದಿರುವ ದ್ವಿಪಕ್ಷೀಯ ಸಂಬಂಧಗಳ ಮೂಲಕ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರುವುದು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ.
ಸಂಕಷ್ಟ ಕಾಲದ ಭದ್ರಕೋಟೆ (India’s Strategic Reserves)
ಭಾರತವು ಇಂದು ಬಲಿಷ್ಠವಾದ ಇಂಧನ ಸುರಕ್ಷಾ ಚಕ್ರವನ್ನು ಹೊಂದಿದೆ..
ತುರ್ತು ಸಂಗ್ರಹ: ಭಾರತವು ಸುಮಾರು 5.33 ಮಿಲಿಯನ್ ಮೆಟ್ರಿಕ್ ಟನ್ ತೈಲವನ್ನು ಭೂಗತ
ಸಂಗ್ರಹಾಗಾರಗಳಲ್ಲಿ ಇರಿಸಿದೆ.
ಬ್ಯಾಕಪ್ ಸಾಮರ್ಥ್ಯ: ವಾಣಿಜ್ಯ ಮತ್ತು ಕಾರ್ಯತಂತ್ರದ ಸಂಗ್ರಹಗಳನ್ನು ಒಟ್ಟುಗೂಡಿಸಿದರೆ
ಭಾರತವು ಸುಮಾರು 70 ದಿನಗಳವರೆಗೆ ತೈಲ ಕೊರತೆಯನ್ನು ನೀಗಿಸಬಲ್ಲದು. ಇದೇ ಕಾರಣಕ್ಕೆ ‘ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ’ (IEA) ಕೂಡ ಭಾರತದ ಸನ್ನದ್ಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ.
ಜೈಶಂಕರ್ ಅವರ ‘ಇಂಧನ ರಾಜತಾಂತ್ರಿಕತೆ’ (Diplomatic Tightrope Walk)
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾದ ಸೆರ್ಗೆಯ್ ಲಾವೊವ್ ಅವರ ಇತ್ತೀಚಿನ ಮಾತುಕತೆ ಕೇವಲ ಇರಾನ್ ಬಿಕ್ಕಟ್ಟಿನ ಬಗ್ಗೆ, ಮಾತ್ರವಲ್ಲ, ಅದು ಭಾರತದ ಇಂಧನ ಭದ್ರತೆಯ ಭರವಸೆಯೂ ಆಗಿದೆ. ಅತ್ತ ರಷ್ಯಾದ ಜೊತೆ ಸ್ನೇಹ, ಇತ್ತ ಅಮೆರಿಕದ ಜೊತೆ ವ್ಯವಹಾರ ಮತ್ತು ಮಧ್ಯಪ್ರಾಚ್ಯದ ಜೊತೆ ಸಮತೋಲನ ಕಾಯ್ದುಕೊಳ್ಳುವ ಭಾರತದ ಈ ನೀತಿಯನ್ನು “Strategic Autonomy” ಎನ್ನಬಹುದು.
ಭಾರತ ಎಂಬ ಜಾಗತಿಕ ರಿಫೈನರಿ(‘The Refined oil’ Factor)
ಈ ಕಥೆಯ ಹಿಂದೆ ಅನೇಕರಿಗೆ ತಿಳಿಯದ ಮತ್ತೊಂದು ರೋಚಕ ಆಯಾಮವಿದೆ. ಭಾರತವು ಕೇವಲ ಕಚ್ಚಾ ತೈಲವನ್ನು ಖರೀದಿಸುತ್ತಿಲ್ಲ, ಬದಲಿಗೆ ಆ ರಷ್ಯಾ ತೈಲವನ್ನು ತನ್ನ ಬೃಹತ್ ರಿಫೈನರಿಗಳಲ್ಲಿ ಸಂಸ್ಕರಿಸಿ, ಡೀಸೆಲ್ ಮತ್ತು ಪೆಟ್ರೋಲ್ ರೂಪದಲ್ಲಿ ಪುನಃ ಯುರೋಪ್ ಮತ್ತು ಅಮೆರಿಕಕ್ಕೆ ರಫ್ತು ಮಾಡುತ್ತಿದೆ. ಅಂದರೆ, ಯಾವ ಪಾಶ್ಚಿಮಾತ್ಯ ದೇಶಗಳು ರಷ್ಯಾ ತೈಲಕ್ಕೆ ನಿಷೇಧ ಹೇರಿದ್ರವೋ, ಅದೇ ದೇಶಗಳು ಇಂದು ಭಾರತದ ಮೂಲಕ ಪರೋಕ್ಷವಾಗಿ ರಷ್ಯಾ ತೈಲವನ್ನೇ ಅವಲಂಬಿಸಿವೆ! ಈ ಮೂಲಕ ಭಾರತವು ಜಾಗತಿಕ ಇಂಧನ ಬೆಲೆಗಳು ಏರಿಕೆಯಾಗದಂತೆ ತಡೆಯುವ “ಅದೃಶ್ಯ ಗೋಡೆಯಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಭಾರತ ಈ ಪ್ರಕ್ರಿಯೆಯನ್ನು ನಿಲ್ಲಿಸಿದರೆ, ಯುರೋಪ್ನಲ್ಲಿ ಇಂಧನ ಹಾಹಾಕಾರ ಶುರುವಾಗಲಿದೆ. ಹೀಗಾಗಿ, ಅಂದು ಮೂಗು ಮುರಿದವರಿಗೆ ಇಂದು ಭಾರತವೇ ಏಕೈಕ ಆಶಾಕಿರಣವಾಗಿದೆ
