ನವದೆಹಲಿ: ರಾಜ್ಯ ಎದುರಿಸುತ್ತಿರುವ ಭೀಕರ ಜಲಸಂಕಷ್ಟದ ಕುರಿತು ರಾಜ್ಯಸಭೆಯಲ್ಲಿ ದನಿಯೆತ್ತಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು(H D Dvevegowda), ಕರ್ನಾಟಕದ ರೈತರ ಪರವಾಗಿ ಅತ್ಯಂತ ಭಾವುಕ ಮನವಿ ಸಲ್ಲಿಸಿದರು. ಬುಧವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ, ಈ ವ್ಯದ್ಯನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಕರ್ನಾಟಕವನ್ನು ರಕ್ಷಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಕೈಮುಗಿದು ಕೇಳಿಕೊಂಡರು.
ಜೀವನದ ಸಂಧ್ಯಾಕಾಲದ ಭಾವುಕ ಮನವಿ
ತಮ್ಮ ಭಾಷಣದ ಉದ್ದಕ್ಕೂ ಅತ್ಯಂತ ಭಾವುಕರಾಗಿ ಮಾತನಾಡಿದ ದೇವೇಗೌಡರು,(H D Dvevegowda) “ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನಾನು ಈಗ ಜೀವನದ ಕೊನೆಗಾಲದಲ್ಲಿದ್ದೇನೆ” ಎನ್ನುತ್ತಾ ಗದ್ಗದಿತರಾದರು. ಕರ್ನಾಟಕದ ಅನೇಕ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿರುವುದನ್ನು ಸ್ಮರಿಸಿದ ಅವರು, ಆ ಎಲ್ಲಾ ಯೋಜನೆಗಳಿಗೆ ಕೂಡಲೇ ಅನುಮೋದನೆ ನೀಡುವ ಮೂಲಕ ರಾಜ್ಯದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ವಿನಂತಿಸಿದರು.
65 ವರ್ಷಗಳ ಸುದೀರ್ಘ ಜಲ ಹೋರಾಟ
ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ತಾವು ನಡೆಸುತ್ತಾ ಬಂದಿರುವ ಜಲ ಹೋರಾಟವನ್ನು ಮೆಲುಕು ಹಾಕಿದ ಮಾಜಿ ಪ್ರಧಾನಿಗಳು, ಕರ್ನಾಟಕವು ನಿರಂತರವಾಗಿ ನೆರೆ ರಾಜ್ಯಗಳ ಜೊತೆ ನೀರಿನ ಹಕ್ಕಿಗಾಗಿ ಹೋರಾಡುತ್ತಿದೆ ಎಂದು ವಿಷಾದಿಸಿದರು. ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಗಳ ನಡುವಿನ ಜಲ ವಿವಾದಗಳಿಂದಾಗಿ ಕನ್ನಡಿಗರು ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿದ ಅವರು, ಇಲ್ಲಿ ನಾನು ನ್ಯಾಯಮಂಡಳಿಗಳ ತೀರ್ಪಿನ ಬಗ್ಗೆ, ಚರ್ಚಿಸಲು ಬಯಸುವುದಿಲ್ಲ,
ಬದಲಾಗಿ ಕನ್ನಡಿಗರ ಬಾಯಾರಿಕೆಗೆ ಮಾನವೀಯ ಪರಿಹಾರ ಬೇಕಿದೆ ಎಂದು ಪ್ರತಿಪಾದಿಸಿದರು.
ರೈತರ ಹಿತಕ್ಕಾಗಿ ಮಾನವೀಯತೆಯ ಕರೆ
“ಮಳೆ ಬಂದರೆ ನೀರು, ಇಲ್ಲವಾದರೆ ಇಲ್ಲ ಎಂಬಂತಾಗಿರುವ ನಮ್ಮ ರೈತರ ಬದುಕು ಅತ್ಯಂತ ಸಂಕಷ್ಟದಲ್ಲಿದೆ. ನಾವೆಲ್ಲರೂ ಮನುಷ್ಯರು ಎಂಬ ಕರುಣೆಯಿಂದ ಕರ್ನಾಟಕವನ್ನು ಈ ಬಿಕ್ಕಟ್ಟಿನಿಂದ ರಕ್ಷಿಸಬೇಕು ಎಂದು ನಾನು ಸದನದ ಎಲ್ಲಾ ಸದಸ್ಯರಲ್ಲಿ ಕೈಮುಗಿದು ಬೇಡುತ್ತೇನೆ” ಎಂದು ಗೌಡರು ಕಳಕಳಿಯಿಂದ ನುಡಿದರು. ರಾಜ್ಯದ ರೈತರ ಹಿತ ಕಾಯುವುದು ಎಲ್ಲರ ಜವಾಬ್ದಾರಿಯಾಗಿದ್ದು, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
