
ಬೆಂಗಳೂರು: ರಾಜ್ಯದ ರೈತರಿಗೆ ಕಂದಾಯ ಇಲಾಖೆಯಿಂದ ಸಿಹಿಸುದ್ದಿ. ಈ ವರ್ಷ ಡಿಸೆಂಬರ್ ಅಂತ್ಯದೊಳಗೆ 2 ಲಕ್ಷ ರೈತರಿಗೆ ಪೋಡಿ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಪೋಡಿಗಾಗಿ ಕಾಯುತ್ತಿರುವ ರೈತರಿಗೆ ಶೀಘ್ರವೇ ಪರಿಹಾರ ಸಿಗಲಿದೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಇದ್ದ ಏಕವ್ಯಕ್ತಿ ಪೋಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈಗ ಯಾವುದೇ ರೈತರ ಅರ್ಜಿಗೆ ಕಾಯದೆ, ಮಂಜೂರಾದ ದಾಖಲೆಗಳನ್ನು ಸರ್ಕಾರವೇ ಸಿದ್ಧಪಡಿಸಿ, ಅಭಿಯಾನದ ಮಾದರಿಯಲ್ಲಿ ಪೋಡಿ ಮಾಡಿ ಕೊಡುತ್ತಿದ್ದೇವೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: Blood Pressure: ರಕ್ತದೊತ್ತಡವನ್ನು ಹಗುರವಾಗಿ ಪರಿಗಣಿಸಬೇಡಿ, ನಿಮ್ಮ ಜೀವವೇ ಹೋಗುತ್ತೆ
ಸರ್ಕಾರಿ ಜಮೀನುಗಳ ಸಮೀಕ್ಷೆ
ರಾಜ್ಯದಲ್ಲಿ ಎಷ್ಟು ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ ಎಂಬುದಕ್ಕೆ ನಿಖರವಾದ ದಾಖಲೆಗಳು ಈವರೆಗೆ ಲಭ್ಯವಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರವು ಎಲ್ಲಾ ಸರ್ಕಾರಿ ಜಮೀನುಗಳ ಮಂಜೂರಿದಾರರ ವಿವರಗಳನ್ನು ಆನ್ಲೈನ್ನಲ್ಲಿ 1ಟೂ5 ಪ್ರಕ್ರಿಯೆಯ ಮೂಲಕ ಡಿಜಿಟಲೀಕರಣಗೊಳಿಸುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಖರವಾದ ಅಂಕಿಅಂಶಗಳು ಲಭ್ಯವಾಗಲಿವೆ.
ಈವರೆಗೆ 73,390 ಸರ್ವೆ ನಂಬರ್ಗಳಲ್ಲಿ 2,51,000 ಮಂಜೂರಿದಾರರನ್ನು ಪತ್ತೆ ಹಚ್ಚಲಾಗಿದೆ. ಇನ್ನೂ 67,000 ಸರ್ವೆ ನಂಬರ್ಗಳ 1 To 5 ಪ್ರಕ್ರಿಯೆ ನಡೆಯಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಮಾಯಣದಲ್ಲೊಂದು ವಿಶಿಷ್ಟ ಪ್ರಸಂಗ: ರಾಮನ ವಿರುದ್ಧವೇ ನಿಂತ ಪರಮ ಭಕ್ತ ಹನುಮಂತ
ಕಡತಗಳ ಸ್ಕ್ಯಾನಿಂಗ್ ಮತ್ತು ಸಂರಕ್ಷಣೆ
ಕಂದಾಯ ಕಚೇರಿಗಳಲ್ಲಿ ಕಡತಗಳು ಕಾಣೆಯಾಗುತ್ತಿರುವುದು ಮತ್ತು ನಕಲಿ ದಾಖಲೆಗಳು ಸೃಷ್ಟಿಯಾಗುತ್ತಿರುವ ದೂರುಗಳ ಬಗ್ಗೆಯೂ ಸಚಿವರು ಮಾತನಾಡಿ, ಇದನ್ನು ತಡೆಯಲು 100 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈಗಾಗಲೇ 36 ಕೋಟಿ ಪುಟಗಳ ಸ್ಕ್ಯಾನಿಂಗ್ ಕಾರ್ಯ ಮುಗಿದಿದ್ದು, ಮುಂದಿನ ವರ್ಷ ಫೆಬ್ರವರಿಯೊಳಗೆ ಈ ಕೆಲಸ ಸಂಪೂರ್ಣಗೊಳ್ಳಲಿದೆ. ಈ ಕ್ರಮದಿಂದ ರೈತರಿಗೆ ಆಗುತ್ತಿದ್ದ ಶೋಷಣೆಗೆ ಕಡಿವಾಣ ಹಾಕಬಹುದು ಎಂದು ಸಚಿವರು ಭರವಸೆ ನೀಡಿದ್ದಾರೆ.
