
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ರದ್ದುಪಡಿಸಿದ್ದು, “ತಕ್ಷಣವೇ ಆರೋಪಿಗಳನ್ನು ವಶಕ್ಕೆ ಪಡೆಯಿರಿ” ಎಂದು ಪೊಲೀಸರಿಗೆ ಆದೇಶ ನೀಡಿದೆ. ಇದರಿಂದಾಗಿ ದರ್ಶನ್ ಮತ್ತೆ ಜೈಲಿನತ್ತ ಹೊರಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿಯಿಂದ ದರ್ಶನ್ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಆದರೆ ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಕಾನೂನು ಎಲ್ಲರಿಗೂ ಸಮಾನವಾದದ್ದು ಎಂದು ನೆನಪಿಸಿದ್ದಾರೆ.
“ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಪಡಿಸಿದ ತೀರ್ಪು ಬಲವಾದ ಸಂದೇಶವನ್ನು ಕೊಡುತ್ತದೆ – ಕಾನೂನಿನ ಮುಂದೆ ಎಲ್ಲರೂ ಸಮಾನರು. ಸರಿಯಾದ ರೀತಿಯಲ್ಲಿ ನಡೆಯಿರಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ನ್ಯಾಯ ತಡವಾಗಬಹುದು, ಕಠಿಣವಾಗಬಹುದು, ಆದರೆ ಕೊನೆಯಲ್ಲಿ ನ್ಯಾಯವೇ ಗೆಲ್ಲುತ್ತದೆ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ,” ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಹಳೆಯ ಗಲಾಟೆಯ ನೆನಪು
ಇತ್ತೀಚೆಗಷ್ಟೇ ದರ್ಶನ್ ಅಭಿಮಾನಿಗಳೊಂದಿಗೆ ರಮ್ಯಾ ಭಾರೀ ಸೋಷಲ್ ಮೀಡಿಯಾ ವಾರ್ನಲ್ಲಿ ಸಿಲುಕಿದ್ದರು. ದರ್ಶನ್ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ರಮ್ಯಾ, ತಮ್ಮ ಅಭಿಮಾನಿಗಳಿಗೆ ‘ಬುದ್ಧಿ ಹೇಳಿ’ ಎಂದು ಸಂದೇಶ ಕೊಟ್ಟಿದ್ದರು. ಇದರಿಂದ ಕೋಪಗೊಂಡ ಕೆಲವು ಫ್ಯಾನ್ಸ್ ಆಕೆಗೆ ನಿಂದನಾತ್ಮಕ ಮೆಸೇಜ್ಗಳನ್ನು ಕಳುಹಿಸಿದ್ದರು.
ರಮ್ಯಾ ಆ ಮೆಸೇಜ್ಗಳ ಸ್ಕ್ರೀನ್ಶಾಟ್ ಹಂಚಿಕೊಂಡು, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. 43 ಇನ್ಸ್ಟಾಗ್ರಾಮ್ ಖಾತೆಗಳ ಲಿಂಕ್ಗಳನ್ನು ಕೂಡ ಹಂಚಿ ಕ್ರಮಕ್ಕೆ ಆಗ್ರಹಿಸಿದ್ದರು. ನಂತರ ಕೆಲವರು ಕ್ಷಮೆ ಕೇಳಿದ್ದರೂ, ರಮ್ಯಾ ತಮ್ಮ ನಿಲುವನ್ನು ಬದಲಿಸಿರಲಿಲ್ಲ.
ದರ್ಶನ್ ಜೊತೆಗಿನ ಹಳೆಯ ಪರಿಚಯ‘ದತ್ತ’ ಸಿನಿಮಾದಲ್ಲಿ ದರ್ಶನ್ ಜೊತೆ ಜೋಡಿಯಾಗಿ ನಟಿಸಿದ್ದ ರಮ್ಯಾ, ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ತಮ್ಮ ಸ್ನೇಹಿತೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದರೂ, ಈ ಪ್ರಕರಣದಲ್ಲಿ ದರ್ಶನ್ ತಪ್ಪು ಮಾಡಿದ್ದಾರೆ ಎಂಬ ನಿಲುವಿನಿಂದ ರಮ್ಯಾ ಹಿಂದೆ ಸರಿಯಲಿಲ್ಲ.
ಮುಂದೇನಾಗಬಹುದು?
ಸುಪ್ರೀಂ ಕೋರ್ಟ್ ಆದೇಶದ ನಂತರ, ಇಂದು ದರ್ಶನ್ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲವಾದರೆ ಅವರು ಸ್ವಯಂ ಕೋರ್ಟ್ ಮುಂದೆ ಶರಣಾಗಬಹುದು. ಈಗಾಗಲೇ ಪೊಲೀಸರು ಆರ್ಆರ್ ನಗರದಲ್ಲಿನ ಅವರ ಮನೆ ಹಾಗೂ ಮೈಸೂರಿನ ಫಾರ್ಮ್ಹೌಸ್ ಅನ್ನು ಶೋಧ ನಡೆಸುತ್ತಿದ್ದಾರೆ.ರೇಣುಕಾಸ್ವಾಮಿ ಪ್ರಕರಣದಲ್ಲಿ ತೀರ್ಪು ಯಾವ ದಿಕ್ಕಿಗೆ ತಿರುಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
