ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಹೈಕೋರ್ಟ್ನ ತೀರ್ಪಿನಲ್ಲಿ ದೋಷವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ಆದೇಶವನ್ನು ಒಂದು ‘ಲ್ಯಾಂಡ್ಮಾರ್ಕ್ ತೀರ್ಪು’ ಎಂದು ಬಣ್ಣಿಸಿದೆ.
ಇದನ್ನೂ ಓದಿ: ರಕ್ತದೊತ್ತಡವನ್ನು ಹಗುರವಾಗಿ ಪರಿಗಣಿಸಬೇಡಿ, ನಿಮ್ಮ ಜೀವಕ್ಕೆ ಕುತ್ತು
ಪ್ರಕರಣದ ಹಿನ್ನೆಲೆ:
ಜೂನ್ 11ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಪವಿತ್ರಾ ಗೌಡ ಹಾಗೂ ಇತರ ಸಹ ಆರೋಪಿಗಳ ಜೊತೆ, ದರ್ಶನ್ ವಿರುದ್ಧ ಹತ್ಯೆ, ಅಪಹರಣ, ಸಾಕ್ಷ್ಯ ನಾಶದ ಆರೋಪಗಳು ಕೇಳಿಬಂದಿದ್ದವು. ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದ ದರ್ಶನ್, ಬೆನ್ನುನೋವಿನ ಕಾರಣ ನೀಡಿ ಹೊರಬಂದಿದ್ದರು. ನಂತರ, ಡಿಸೆಂಬರ್ನಲ್ಲಿ ಅವರಿಗೆ ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್ ಸಂಪೂರ್ಣ ಜಾಮೀನು ನೀಡಿತ್ತು.
ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ಮಾಂಸ ನಿಷೇಧಕ್ಕೆ ದೇಶದಾದ್ಯಂತ ಭಾರಿ ವಿರೋಧ
ಸುಪ್ರೀಂ ಕೋರ್ಟ್ ತೀರ್ಪು:
ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠವು ಈ ಅರ್ಜಿ ವಿಚಾರಣೆ ನಡೆಸಿ, ಜಾಮೀನನ್ನು ರದ್ದುಪಡಿಸಿದೆ.ತೀರ್ಪಿನಲ್ಲಿ ಪ್ರಮುಖ ಅಂಶಗಳು:
- ಹೈಕೋರ್ಟ್ ಆದೇಶದಲ್ಲಿ ತಾಂತ್ರಿಕ ದೋಷಗಳಿವೆ.
- ಆರೋಪಿಗಳು ಎಷ್ಟೇ ದೊಡ್ಡವರಿದ್ದರೂ, ಕಾನೂನಿಗಿಂತ ದೊಡ್ಡವರಲ್ಲ.
- ಕಾನೂನಿನ ಆಡಳಿತ ಎತ್ತಿಹಿಡಿಯಲಾಗಿದೆ.
- ಆರೋಪಿಗಳಿಗೆ ಜೈಲಿನಲ್ಲಿ ‘5 ಸ್ಟಾರ್ ಟ್ರೀಟ್ಮೆಂಟ್’ ನೀಡಲಾಗಿದೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಜೈಲು ಅಧೀಕ್ಷಕರನ್ನು ಅಮಾನತುಗೊಳಿಸಬೇಕಿತ್ತು ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಈ ತೀರ್ಪಿನಿಂದಾಗಿ, ದರ್ಶನ್ ಸೇರಿದಂತೆ ಎಲ್ಲ 7 ಆರೋಪಿಗಳು ಮತ್ತೆ ಜೈಲಿಗೆ ಹಿಂತಿರುಗಬೇಕಾಗಿದೆ. ಇದು ಪ್ರಕರಣದ ಮುಂದಿನ ಬೆಳವಣಿಗೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.
