
ಡಾಲ್ಫಿನ್ಗಳನ್ನು ನೋಡುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲು ವಿಶೇಷವಾಗಿ ಅವುಗಳು ನೀರ ಮೇಲೆ ಜಿಗಿದು ಕಡಲಲ್ಲಿ ಮುಳುಗಿ ಏಳುವುದನ್ನು ನೋಡುವುದೇ ಒಂದು ಸಂಭ್ರಮ. ಡಾಲ್ಫಿನ್ಗಳು ಭೂಮಿಯ ಮೇಲಿನ ಅತ್ಯಂತ ಮುದ್ದಾದ ಹಾಗೆಯೇ ಬುದ್ದಿವಂತ ಜೀವಿಗಳು. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಗಳಲ್ಲಿ ಒಂದೆನಿಸಿರುವ, ಅಳಿವಿನಂಚಿನಂಚಿಗೆ ತಳಲ್ಪಟ್ಟಿರುವ ಡಾಲ್ಫಿನ್ನಂತಹ ಸಿಹಿನೀರಿನ ಪ್ರಭೇದಗಳು ಗಂಗಾ ನದಿಯಲ್ಲಿ ವಾಸಿಸುತ್ತವೆ ಎಂಬುದು ಭಾರತದ ವಿಶಿಷ್ಟತೆಯಾಗಿದೆ. ಇಂತಹ ಅತ್ಯಪರೂಪದ ಡಾಲ್ಫಿನ್ಗಳ ವಿಶೇಷ ಏನು, ಅವು ಭಾರತದಲ್ಲಿ ಎಲ್ಲಿ ಕಂಡುಬರುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.
- ಗೋವಾದ ಕಡಲತೀರ
ಗೋವಾ ಅಂದರೆ ಮೊದಲು ನೆನೆಪಿಗೆ ಬರುವುದು ಬೀಚಿನ ಮೋಜು, ಮಸ್ತಿ, ಪಾರ್ಟಿ. ಇಲ್ಲಿ ಮೊರ್ಜಿಮ್ ಮತ್ತು ಚಪೋರಾ ನದಿಯ ಸುತ್ತಲೂ ಹಂಪ್ಬ್ಯಾಕ್ ಡಾಲ್ಫಿನ್ಗಳು ಮುಂಜಾನೆ ಸಮಯದಲ್ಲಿ ಕಾಣಸಿಗುತ್ತವೆ. ಮಕ್ಕಳ ವಿದ್ಯಾಭ್ಯಾಸದ ಆಚೆಗೆ ಅವರು ಬದುಕನ್ನು ಸಂಭ್ರಮಿಸಲು ಈ ಜಾಗವನ್ನು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಡಾಲ್ಫಿನ್ ತೋರಿಸುವುದಕ್ಕಾಗಿ ನಿಮ್ಮ ಬ್ಯುಸಿ ಸಮಯದಲ್ಲಿ ಸ್ವಲ್ಪ ಸಮಯ ಕೊಡಿ. ಇಲ್ಲಿನ ವಿಶಿಷ್ಟ ಹಂಪ್ಬ್ಯಾಕ್ ಡಾಲ್ಫಿನ್ಗಳನ್ನು ಆನಂದಿಸಲು ಅಕ್ಟೋಬರ್ ನಿಂದ ಮೇವರೆಗೆ ಸೂಕ್ತ ಸಮಯವಾಗಿದೆ.
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಸುಂದರವಾದ ಕಡಲ ತೀರಗಳು, ಅತ್ಯಂತ ಸಮೃದ್ದವಾದ ಪರಿಸರ. ಈ ಸುಂದರ ತೀರಗಳಲ್ಲಿ ಚಮತ್ಕಾರಿ ಸ್ಪಿನ್ನರ್ ಡಾಲ್ಫಿನ್ ಗಳಿವೆ. ಇವುಗಳನ್ನು ಹ್ಯಾವ್ಲಕ್ ಮತ್ತು ನೀಲ್ ದ್ವೀಪದ ನಡುವೆ ದೋಣಿ ವಿಹಾರದಲ್ಲಿ ನೋಡುವುದು ಮೈಮನವನ್ನು ಸೋರೆಗೊಳಿಸುವ ಅನುಭವದಂತೆ. ಇಲ್ಲಿ ಪ್ರಮುಖವಾಗಿ ಬಾಟಲ್ನೋಸ್ ಡಾಲ್ಫಿನ್ಗಳು, ರಿಸ್ಸೋ ಡಾಲ್ಫಿನ್ಗಳು,ಮಚ್ಚೆಯುಳ್ಳ ಡಾಲ್ಫಿನ್ಗಳು ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಸಾಮಾನ್ಯವಾಗಿ ನವೆಂಬರ್ ನಿಂದ ಏಪ್ರಿಲ್ ವರೆಗೂ ಪ್ರವಾಸಿಗರಿಗೆ ಮುದ ನೀಡುತ್ತವೆ.
- ಸುಂದರ್ಬನ್ಸ್, ಪಶ್ಚಿಮ ಬಂಗಾಳ
ಸುಂದರ್ಬನ್ಸ್ ಎಂದಾಕ್ಷಣ ಥಟ್ಟನೆ ನೆನಪಾಗೋದು ಮ್ಯಾoಗ್ರೋವ್ ತೊರೆಗಳ ಮಡಿಲು. ಮ್ಯಾoಗ್ರೋವ್ ತೊರೆಗಳ ನಡುವೆ ದೋಣಿ ವಿಹಾರದಲ್ಲಿ ಸಾಗುವಾಗ ಇರಾವಡ್ಡಿ ಡಾಲ್ಫಿನ್ಗಳು ನವೆಂಬರ್ ನಿಂದ ಮಾರ್ಚ್ ವರೆಗೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.
- ನೆತ್ರಾಣಿ ದ್ವೀಪ:
ಸಾಮಾನ್ಯವಾಗಿ ನೇತ್ರಾಣಿ ದ್ವಿಪವನ್ನು ಪಿಜನ್ ಐಲ್ಯಾಂಡ್ ಎಂದು ಕರೆಯಲಾಗುತ್ತದೆ. ಈ ದ್ವೀಪವು ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರದ ಕರಾವಳಿ ಭಾಗದಲ್ಲಿ ಕಂಡುಬರುತ್ತದೆ. ನೇತ್ರಾಣಿಯು ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯವೆನಿಸಿರುವ ಸ್ಕೂಬಾ ಡೈವಿಂಗ್ ಮಾಡುವ ತಾಣವಾಗಿದೆ. ನೇತ್ರಾಣಿ ದ್ವೀಪದಲ್ಲಿ ಹೆಚ್ಚಿನದಾಗಿ ಬಾಟಲ್ ನೋಸ್ ಡಾಲ್ಫಿನ್ಗಳು ಕಂಡು ಬರುತ್ತವೆ.
- ವಿಕ್ರಮಶಿಲಾ ಗಂಗಾನದಿ ಡಾಲ್ಫಿನ್ – ಅಭಯಾರಣ್ಯ, ಬಿಹಾರ
ಅಳಿವಿನಂಚಿನಲ್ಲಿರುವ ಗಂಗಾನದಿ ಡಾಲ್ಫಿನ್ಗಳು, ಬಿಹಾರದ ಭಾಗಲ್ಪುರ ಬಳಿಯ ವಿಕ್ರಮಶಿಲಾ ಅಭಯಾರಣ್ಯ ಮಧ್ಯೆಯ ಸರೋವರಗಳಲ್ಲಿ ಕಾಣಬಹುದು. ಇದು ಭಾರತದ ಮೊದಲ ಮತ್ತು ಏಕೈಕ ಡಾಲ್ಫಿನ್ ಸಂರಕ್ಷಿತ ಪ್ರದೇಶವಾಗಿದೆ ಎಂಬುದೇ ವಿಶೇಷ. ಇವು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಮಾತ್ರ ಕಾಣಿಸಿಕೊಳ್ಳುತ್ತವೆ.
- ಚಿಲಿಕಾ ಸರೋವರ, ಒಡಿಶಾ
ಒಡಿಶಾದ ಚಿಲಿಕಾ ಏಷ್ಯಾದ ಅತಿದೊಡ್ಡ ಉಪ್ಪುನೀರಿನ ಲಗೂನ್ ಮತ್ತು ಜೀವ ವೈವಿಧ್ಯತೆಯ ತಾಣ. ಇಲ್ಲಿ ಇರಾವಡ್ಡಿ ಡಾಲ್ಫಿನ್ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ವೀಕ್ಷಿಸಲು ನವಂಬರ್ – ಫೆಬ್ರವರಿ ನಡುವಿನ ಸಮಯದಲ್ಲಿ ತೆರಳಿದರೆ ಉತ್ತಮ.
